ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ) ಏಕಾಏಕಿ ಸ್ಫೋಟಗೊಂಡಿದ್ದು, ಪಕ್ಕದಲ್ಲಿದ್ದ ಗುಜರಿ ಅಂಗಡಿ, ಟಾಟಾ ಏಸ್ ವಾಹನ ಹಾಗೂ ದ್ವಿಚಕ್ರ ವಾಹನವೊಂದು ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿವೆ. ಈ ದೃಶ್ಯ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟ್ರಾನ್ಸ್ಫಾರ್ಮರ್ನಲ್ಲಿ ಭಾರಿ ಶಬ್ದದೊಂದಿಗೆ ಬೆಂಕಿ ಚೆಂಡಿನಂತೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬೆಂಕಿಯ ಕಿಡಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಅಲ್ಲಿದ್ದ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡ ರಭಸಕ್ಕೆ ಬೆಂಕಿ ಪಕ್ಕದಲ್ಲೇ ಇದ್ದ ಗುಜರಿ ಅಂಗಡಿಗೆ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಅಂಗಡಿಯ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನ ಹಾಗೂ ಬೈಕ್ ಸುಟ್ಟು ಕರಕಲಾಗಿವೆ. ಅಂಗಡಿಗೆ ಹಳೆ ಪೇಪರ್ ಹಾಕಲು ಬಂದಿದ್ದ ಹನುಮಂತ ಎಂಬುವವರ ಬೈಕ್ ಕೂಡ ಬೆಂಕಿಗೆ ಆಹುತಿಯಾಗಿದೆ. ಕಷ್ಟಪಟ್ಟು ದುಡಿದು ಖರೀದಿಸಿದ್ದ ಬೈಕ್ ಕಣ್ಣೆದುರೇ ಸುಟ್ಟು ಬೂದಿಯಾಗಿದ್ದನ್ನು ಕಂಡು ಬೈಕ್ ಮಾಲೀಕ ಹನುಮಂತ ಸ್ಥಳದಲ್ಲೇ ಕಣ್ಣೀರಿಟ್ಟ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿತ್ತು.
ಬೆಂಕಿಯ ಜ್ವಾಲೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಲು ಆರಂಭಿಸಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಎರಡು ಗಂಟೆಗಳ ಕಾಲ ಬೆಂಕ ನಂದಿಸಿದರು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟವಾಗಿದೆ.
ಈ ದುರಂತಕ್ಕೆ ವಿದ್ಯುತ್ ಇಲಾಖೆ (ಬೆಸ್ಕಾಂ) ಸಿಬ್ಬಂದಿಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೆಳಗ್ಗೆಯಿಂದಲೇ ಈ ಟ್ರಾನ್ಸ್ಫಾರ್ಮರ್ನಲ್ಲಿ ಕಿಡಿಗಳು ಬರುತ್ತಿದ್ದವು. ಈ ಬಗ್ಗೆ ವಿದ್ಯುತ್ ಇಲಾಖೆಗೆ ಕರೆ ಮಾಡಿ ಎಚ್ಚರಿಸಿದ್ದರೂ ಯಾವುದೇ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಲಿಲ್ಲ. ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂದು ಇಷ್ಟೊಂದು ದೊಡ್ಡ ಅವಘಡ ಸಂಭವಿಸಿದೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.





