– ರಾಘವೇಂದ್ರ ಅಡಿಗ ಎಚ್ಚೆನ್
.ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರಿಗೆ ಇಂದು( ನವೆಂಬರ್ 2)61ನೇ ಜನ್ಮದಿನದ ಸಂಭ್ರಮ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಮುಂಬೈನ ಮನ್ನತ್ ನಿವಾಸದ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ದರ್ಶನ ನೀಡುವುದು ಶಾರುಖ್ ಅವರ ಸಂಪ್ರದಾಯ. ಆದರೆ ಈ ಬಾರಿ ಅಭಿಮಾನಿಗಳಿಗೆ ಕಿಂಗ್ ಖಾನ್ ಅವರ ನೇರ ದರ್ಶನ ಸಿಗಲಿಲ್ಲ. ಆದರೂ ಮನ್ನತ್ ಮುಂದೆ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆಯಾಗದಂತೆ ವಿಶೇಷ ಸರ್ಪ್ರೈಸ್ ಕಾದಿತ್ತು.
ಸದ್ಯ ಶಾರುಖ್ ಖಾನ್ ತಾತ್ಕಾಲಿಕವಾಗಿ ಬೇರೆಡೆ ವಾಸ್ತವ್ಯ ಹೂಡಿರುವುದರಿಂದ ಈ ಬಾರಿ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮನ್ನತ್ ಕಟ್ಟಡದ ಮೇಲಿನ ಬೃಹತ್ ಬಿಲ್ಬೋರ್ಡ್ನಲ್ಲಿ ಅಭಿಮಾನಿಗಳಿಗಾಗಿ ತಮ್ಮ ಕೈಬರಹದ ವಿಶೇಷ ಪತ್ರವನ್ನು ಪ್ರಕಟಿಸಿದ್ದಾರೆ.
‘ನಿಮ್ಮೆಲ್ಲರ ಶುಭಾಶಯಗಳು ಮತ್ತು ಅಪಾರ ಪ್ರೀತಿಗೆ ಧನ್ಯವಾದಗಳು. ನನ್ನ ಕಡೆಯಿಂದಲೂ ನಿಮಗಾಗಿ ಪ್ರೀತಿಯನ್ನು ರವಾನಿಸುತ್ತಿದ್ದೇನೆ’ ಎಂಬ ಸಂದೇಶದ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸಿದ್ದಾರೆ.
ಇನ್ನು ಶಾರುಖ್ ಅವರ ಹೋಮ್ ಪ್ರೊಡಕ್ಷನ್ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಈ ಜನ್ಮದಿನವನ್ನು ಮುಂಬರುವ ‘ಕಿಂಗ್’ ಸಿನಿಮಾದ ಪ್ರಚಾರಕ್ಕೂ ಬಳಸಿಕೊಂಡಿದೆ. ಮನ್ನತ್ ಕಟ್ಟಡದ ಮೇಲೆ ಚಿತ್ರದ ಬೃಹತ್ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ. ಅದರಲ್ಲಿ ‘ಕಿಂಗ್ ಅಕೇಲಾ ಕಾಫಿ ಹೈ’ ಎಂಬ ಡೈಲಾಗ್ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯನ್ನೂ ಶಾರುಖ್ ಅವರ ಫೋಟೋಗಳು ಮತ್ತು ಹುಟ್ಟುಹಬ್ಬದ ಶುಭಾಶಯಗಳ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.
ಜನ್ಮದಿನದ ವಿಶೇಷವಾಗಿ ಶಾರುಖ್ ‘ಕಿಂಗ್’ ಸಿನಿಮಾದ ಹೊಸ ಆ್ಯಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಉರಿಯುತ್ತಿರುವ ಸುರಂಗದಿಂದ ಕೈಯಲ್ಲಿ ಗನ್ ಹಿಡಿದು ಹೊರಬರುವ ಶಾರುಖ್ ಖಾನ್ ಅವರ ರಗಡ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಪೋಸ್ಟರ್ ಹಂಚಿಕೊಂಡಿರುವ ಶಾರುಖ್, ‘ಇಂದು ಮತ್ತೆ ನೆನಪಾಯಿತು… ಕೊಲೆಗಾರನಲ್ಲ, ಪ್ರೇಮಿ ನಾನು’ ಎಂದು ಬರೆದುಕೊಂಡಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 24, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ‘ಪಠಾನ್’ ಬಳಿಕ ಶಾರುಖ್ ಮತ್ತು ಸಿದ್ಧಾರ್ಥ್ ಆನಂದ್ ಒಂದಾಗಿರುವ ಎರಡನೇ ಸಿನಿಮಾ ಇದಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಮೊದಲ ಬಾರಿಗೆ ಮಗಳು ಸುಹಾನಾ ಖಾನ್ ಜೊತೆ ಶಾರುಖ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ ಮತ್ತು ಅಭಿಷೇಕ್ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಿನಲ್ಲಿ, 61ನೇ ಜನ್ಮದಿನದಂದು ಅಭಿಮಾನಿಗಳಿಗೆ ಪತ್ರದ ಮೂಲಕ ಪ್ರೀತಿ ಹಂಚಿಕೊಂಡಿರುವ ಶಾರುಖ್, ‘ಕಿಂಗ್’ ಸಿನಿಮಾದ ಆ್ಯಕ್ಷನ್ ಪೋಸ್ಟರ್ ಮೂಲಕ ಸಿನಿಪ್ರಿಯರ ನಿರೀಕ್ಷೆಯನ್ನೂ ಹೆಚ್ಚಿಸಿದ್ದಾರೆ





