ಕಥೆ - ಶೇಖರಗೌಡ ವೀ.ಸ
ಆಧುನಿಕ ತರುಣ, ವಿದ್ಯಾವಂತ, ಅನುಕೂಲಸ್ಥ ವರನಾದ ಸುಹಾಸ್ ನನ್ನು ಯಾವುದೋ ಕಾರಣಕ್ಕೆ ಮದುವೆ ಆಗುದಿಲ್ಲವೆಂದು ಮುಕ್ತಾ ತಿರಸ್ಕರಿಸಿದಾಗ, ಅವನು ಬಹಳ ತಳಮಳಗೊಂಡಿದ್ದ. ಮುಂದೆ ಅವನು ವಿವಾಹಿತನಾಗಿ ಅದೇ ಮುಕ್ತಾಳ ಮದುವೆಗೆ ಹೋದಾಗ ಅಲ್ಲಿ ನಡೆದದ್ದೇನು.....?
ಸುಹಾಸ್ ತನ್ನ ಧರ್ಮಪತ್ನಿ ವಿಂಧ್ಯಾಳ ಜೊತೆ ತನ್ನದೇ ಫ್ಯಾಕ್ಟರಿಯಲ್ಲಿ ಫಿಟ್ಟರ್ ಕೆಲಸ ಮಾಡುತ್ತಿರುವ ಅಕ್ಷಯನ ಮದುವೆಗೆ ಬಂದಿದ್ದ. ಅಕ್ಷಯನ ಮದುವೆ ಮುಕ್ತಾಳ ಜೊತೆಗೆ ನಿಶ್ಚಯವಾಗಿತ್ತು. ಕಲ್ಯಾಣ ಮಂಟಪದ ಹೊರಗಡೆ ಹಾಕಲಾಗಿದ್ದ ಬ್ಯಾನರ್ ಗಳಲ್ಲಿ ನೂತನ ವಧುವರರ ಭಾವಚಿತ್ರಗಳನ್ನು ಗಮನಿಸಿದಾಗ ಸುಹಾಸ್ ಅಚ್ಚರಿಗೊಂಡವನಾದರೂ, ಹಾವಭಾವದಲ್ಲಿ ವ್ಯಕ್ತಪಡಿಸಲು ಮುಂದಾಗಲಿಲ್ಲ.
ಮುಕ್ತಾ ಎಂಬ ಹೆಸರು ಕೇಳುತ್ತಲೇ, `ಇವಳು ಅದೇ ಮುಕ್ತಾ ಇರಬಹುದೇ....?' ಎಂದು ಅನುಮಾನಿಸಿದನಾದರೂ ಹೆಚ್ಚಿನ ವಿಚಾರಣೆಗೆ ಅವನ ಮನಸ್ಸು ಆಸಕ್ತಿ ತೋರಿಸಿರಲಿಲ್ಲ. ಮಂಟಪದ ಬಳಿ ಇದ್ದ ವಿವಿಧ ಭಂಗಿಗಳ ಭಾವಚಿತ್ರಗಳನ್ನು ನೋಡುತ್ತಲೇ, `ಓ.... ಇವಳು ಅದೇ ಮುಕ್ತಾ.....' ಎಂದು ತನ್ನೊಳಗೇ ಉದ್ಗರಿಸಿಕೊಂಡ.
ವಧುವರರ ತಲೆಯ ಮೇಲೆ ಅಕ್ಷತೆ ಹಾಕಿ ಆಶೀರ್ವದಿಸಿ, ಶುಭ ಹಾರೈಸುವವರ ಕ್ಯೂ ದೊಡ್ಡದಿದ್ದರೂ, ಮದುವೆಯ ಉಸ್ತುವಾರಿ ವಹಿಸಿಕೊಂಡಿದ್ದ ಕಾರ್ಯಕರ್ತರು ಸುಹಾಸ್ ಮತ್ತು ವಿಂಧ್ಯಾರನ್ನು ವಿಐಪಿ ಸರದಿ ಸಾಲಿನಲ್ಲಿ ವೇದಿಕೆಯ ಮೇಲೆ ಕರೆದುಕೊಂಡು ಹೋಗಿದ್ದರು. ಸುಹಾಸ್ ಮುಕ್ತಾಳನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದರೆ, ಮುಕ್ತಾ ಕೂಡ ಸುಹಾಸನನ್ನು ತೆರೆದ ಕಣ್ಣುಗಳಿಂದ ದಿಟ್ಟಿಸುತ್ತಿದ್ದಳು. ಸುಹಾಸ್ ಮನದೊಳಗೇ ಮುಸಿ ಮುಸಿ ನಗುತ್ತಿದ್ದ. ಮುಕ್ತಾಳ ಮುಖ ವಿವರ್ಣವಾಗಿತ್ತು. ಸುಹಾಸ್ ಮತ್ತು ವಿಂಧ್ಯಾ ಇಬ್ಬರೂ ವಧುವರರಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.
``ಮುಕ್ತಾ.... ಇವರು ನನ್ನ ಬಾಸ್ ಸುಹಾಸ್ ಸರ್, ಇವರು ಅವರ ಧರ್ಮಪತ್ನಿ ವಿಂಧ್ಯಾ ಮೇಡಂ. ಇವರೇ ನಾನು ಕೆಲಸ ಮಾಡುತ್ತಿರುವ ಫ್ಯಾಕ್ಟರಿ ಓನರ್. ಸರ್..... ಇವಳು ನನ್ನ ಶ್ರೀಮತಿ ಮುಕ್ತಾ....'' ಎಂದು ಅಕ್ಷಯ್ ತನ್ನೊಲವಿನ ಜೀವನ ಸಂಗಾತಿ ಮುಕ್ತಾಳನ್ನು ಸುಹಾಸ್ ವಿಂಧ್ಯಾರಿಗೆ ಪರಿಚಯಿಸಿದ.
ಸುಹಾಸ್ ಮಾಮೂಲಿನಂತೆ, ``ಹಾಯ್....'' ಎಂದ.
``ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ,'' ಎಂದು ಮತ್ತೊಮ್ಮೆ ಹಾರೈಸಿದ.
ಮುಕ್ತಾ ಮೌನಕ್ಕೆ ಶರಣಾಗಿದ್ದಳು. ಮಗಳ ಸಮೀಪದಲ್ಲಿದ್ದ ಮುಕ್ತಾಳ ಹೆತ್ತವರ ಯೋಗಕ್ಷೇಮವನ್ನೂ ಸುಹಾಸ್ ವಿಚಾರಿಸಿದ. ಆ ದಂಪತಿಗಳ ಮನದಲ್ಲಿದ್ದ ಚಡಪಡಿಕೆಯನ್ನು ಗಮನಿಸಿದ ಸುಹಾಸ್ ಅಲ್ಲಿ ಹೆಚ್ಚಿಗೆ ಮಾತು ಬೆಳೆಸಲಿಲ್ಲ. ಕೈಯಲ್ಲಿದ್ದ ಗಿಫ್ಟ್ ಪ್ಯಾಕೆಟ್ ನ್ನು ಅಕ್ಷಯನ ಕೈಗಿರಿಸಿ ಸುಮ್ಮನೇ ವೇದಿಕೆಯಿಂದ ಕೆಳಗಿಳಿಯಲು ಮುಂದಾಗಿದ್ದ.
``ಸುಹೂ..... ಇದೇ ಮುಕ್ತಾ ತಾನೇ ನಿನ್ನ ಮನಸ್ಸನ್ನು ಮುತ್ತಿಕ್ಕಿ ಕಾಡಿದವಳು, ನಿನ್ನ ಪ್ರಪೋಸ್ ನ್ನು ರಿಜೆಕ್ಟ್ ಮಾಡಿದವಳು.....?'' ವಿಂಧ್ಯಾ ಮೆಲ್ಲಗೆ ಸುಹಾಸನ ಕಿವಿಯಲ್ಲಿ ಪಿಸುಗುಟ್ಟಿದಳು.
``ಹೌದು ಕಣೇ.....'' ಎಂದು ಅವಳಿಗಷ್ಟೇ ಕೇಳಿಸುವಂತೆ ಹೇಳುತ್ತಾ ಗೋಣಾಡಿಸಿದ ಸುಹಾಸ್.
``ಅಂತೂ, ನಿನ್ನ ಮನವನ್ನು ಕಾಡಿದ ಬೆಡಗಿ ಇನ್ನೇನು ನಿನ್ನ ಫ್ಯಾಕ್ಟರಿಯಲ್ಲಿ ಆಫ್ಟ್ರಾಲ್ ಫಿಟ್ಟರ್ ಎಂದು ಕೆಲಸ ಮಾಡು ಹುಡುಗನ ತೆಕ್ಕೆಯೊಳಗೆ ಸೇರಿಕೊಂಡು ಸುಖಿಸಿ, ಮುಲುಗುಡುವ ಸಮಯ ಶಾಸ್ತ್ರೋಕ್ತವಾಗಿ ಸನ್ನಿಹಿತವಾಗಿಬಿಟ್ಟಿಯಲ್ಲೋ ಜಾಣ.....? ನಿನ್ನ ಮನದ ಚಡಪಡಿಕೆ ಏನೆಂದು ನಾನು ಬಲ್ಲೆ. ಹೇಗೆಂದು ವರ್ಣಿಸಲಿ....? ಬಿ ಕಾಮ್ ಐ ಸೇ....'' ವಿಂಧ್ಯಾ ಸುಹಾಸನನ್ನು ಛೇಡಿಸಲು ಮುಂದಾಗಿದ್ದಳು.





