ಕಥೆ - ಪದ್ಮಾ ಮೂರ್ತಿ
ಗಾಯತ್ರಿ ತಾನಾಗಿ ಮಾಡಿಕೊಂಡ ಆಕಸ್ಮಿಕ ಅಚಾತುರ್ಯದಿಂದ ದೊಡ್ಡದೊಂದು ಕಂಟಕಕ್ಕೆ ಸಿಲುಕುವಂತಾಯಿತು. ಆ ಅಪಘಾತದಿಂದ ಅವಳು ಪಾರಾದಳೇ......?
``ಗಾಯತ್ರಿ ನೀನು ಬೇಗ ಹೊರಟರೆ, ಸಂಜೆಯೊಳಗೆ ಊರು ಸೇರಿಕೊಳ್ಳಬಹುದು,'' ಎಂದು ಪ್ರಭಾಕರ್ ಹೆಂಡತಿಗೆ ಹೇಳುತ್ತಿದ್ದ.
ಗಾಯತ್ರಿ ಮತ್ತು ಪ್ರಭಾಕರನ ಸಂಸಾರ ಮಾದರಿ ಸಂಸಾರ. ಅವರ ಒಬ್ಬಳೇ ಮಗಳಾದ ಮಾಧುರಿಯ ಮದುವೆ ಸದ್ಯದಲ್ಲೇ ಆಗಲಿತ್ತು. ಹಾಸನದವರಾದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ತಿಂಗಳಿಗೊಮ್ಮೆ ಅರಸೀಕೆರೆ ಹತ್ತಿರ ಇರುವ ಬಾಣಾವರಕ್ಕೆ ಹೋಗಿ, ತಮ್ಮ ತೋಟ, ಮನೆ, ಆಸ್ತಿಪಾಸ್ತಿಗಳನ್ನು ನೋಡಿಕೊಂಡು ಬರುತ್ತಿದ್ದರು.
ಪ್ರಭಾಕರ್ ಸಿವಿಲ್ ಎಂಜಿನಿಯರ್ ಆಗಿದ್ದ ಕಾರಣ, 3-4 ವರ್ಷಗಳಿಗೊಮ್ಮೆ ವರ್ಗವಾಗುತ್ತಲೇ ಇರುತ್ತಿತ್ತು. ಈ ಕಾರಣ ವ್ಯವಹಾರನ್ನೆಲ್ಲಾ ಸ್ವಂತ ಊರಾದ ಬಾಣಾವರದಲ್ಲಿಯೇ ಇಟ್ಟುಕೊಂಡಿದ್ದರು. ಪ್ರಭಾಕರ್ ಬೆಂಗಳೂರಿಗೆ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಬಂದು ಒಂದು ವರ್ಷವಾಗಿತ್ತು. ಒಬ್ಬ ಮಗ ಮತ್ತು ಒಬ್ಬಳು ಮಗಳ ಸುಂದರ ಸಂಸಾರ. ಮಗಳು ಮಾಧುರಿ ಎಂಜಿನಿಯರ್, ಮಗ ಮೆಡಿಕಲ್ ಓದುತ್ತಿದ್ದ. ಗಾಯತ್ರಿ ಮತ್ತು ಪ್ರಭಾಕರ್ ಹೆಚ್ಚಿನ ವ್ಯವಹಾರಗಳನ್ನು ತಮ್ಮ ಸ್ವಂತ ಊರಿನಲ್ಲೇ ಇಟ್ಟುಕೊಂಡಿದ್ದರು. ಆ ವ್ಯವಹಾರವನ್ನೆಲ್ಲಾ ಗಾಯತ್ರಿಯೇ ನೋಡಿಕೊಳ್ಳುತ್ತಿದ್ದುದು. ಮಾಧುರಿಯ ಮದುವೆ ಇನ್ನೆರಡು ತಿಂಗಳಲ್ಲಿ ನಡೆಯುವುದಾಗಿ ನಿಶ್ಚಯವಾಗಿತ್ತು. ಅದಕ್ಕಾಗಿ ದುಡ್ಡುಕಾಸಿನ ವ್ಯವಸ್ಥೆಗಾಗಿ ತಮ್ಮ ಬಾಣಾವರದಲ್ಲಿದ್ದ ತೋಟದ ಆದಾಯದ ಹಣ, ಬ್ಯಾಂಕಿನಲ್ಲಿ ಇಟ್ಟಿದ್ದ ಆದಾಯ ಮತ್ತು ಚಿನ್ನಾಭರಣಗಳನ್ನು ತರಬೇಕಿತ್ತು.
ಅದಕ್ಕಾಗಿಯೇ ಗಾಯತ್ರಿ ಮೂರು ದಿಸದ ಮಟ್ಟಿಗೆ ಬಾಣಾವರಕ್ಕೆ ಹೊರಟಿದ್ದಳು. ಅಲ್ಲಿ ಅವರದೇ ಆದ ಹಿರೀಕರ ಮನೆಯೂ ಇತ್ತು. ಉಳಿದುಕೊಳ್ಳಲು ಸಮಸ್ಯೆಯೇನೂ ಇರಲಿಲ್ಲ. ಮನೆಯನ್ನು ಸ್ವಲ್ಪ ರಿಪೇರಿ ಮಾಡಿಸಿ, ಕ್ಲೀನ್ ಸಹ ಮಾಡಿಸಬೇಕಿತ್ತು. ಮದುವೆ ಎಂದ ಮೇಲೆ ಊರಿಗೂ, ಬೆಂಗಳೂರಿಗೂ ಓಡಾಟ ಇದ್ದೇ ಇರುತ್ತಿತ್ತು. ಪ್ರಭಾಕರನಿಗೆ ರಜಾ ಸಿಗದ ಕಾರಣ, ಪತ್ನಿ ಗಾಯತ್ರಿಯೇ ಈ ವ್ಯವಹಾರಗಳಿಗೆ ಓಡಾಡುತ್ತಿದ್ದಳು.
ಗಾಯತ್ರಿ ಮಧ್ಯಾಹ್ನವೇ ಬಾಣಾವರಕ್ಕೆ ಹೊರಟುಬಿಟ್ಟಳು. ಅವಳು ಊರು ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಊರಿಂದ ಬರುವಾಗಲೇ ರಾತ್ರಿ ಊಟವನ್ನು ತಂದಿದ್ದ ಕಾರಣ ಸಮಸ್ಯೆಯಾಗಲಿಲ್ಲ. ಊರು ಈಗ ಚೆನ್ನಾಗಿ ಬೆಳೆದಿತ್ತು. ಹಾಗೆಯೇ ಇವರ ಆಸ್ತಿಪಾಸ್ತಿಗಳ ಆದಾಯ ಹೆಚ್ಚಿತ್ತು. ಗಾಯತ್ರಿ ಬೆಳಗಾದ ಕೂಡಲೇ ಮನೆಯನ್ನೆಲ್ಲಾ ಒಂದು ರೌಂಡ್ ಶುದ್ಧ ಮಾಡಿಕೊಂಡಳು. ನಂತರ ತಿಂಡಿ ತಿಂದು ತೋಟದ ಕಡೆ ಹೊರಟಳು.
ಸುಂದರ ತೋಟವನ್ನು ಸುತ್ತಾಡುತ್ತಿದ್ದಂತೆ ರೋಮಾಂಚನ ಎನಿಸಿತು. ಆ ಪ್ರಕೃತಿ ಸೌಂದರ್ಯ, ಹಸಿರಿನ ಹಾಸು, ಆಹ್ಲಾದಕರ ಗಾಳಿ, ತೆಂಗು, ಕಂಗು, ಬಾಳೆ, ದಾಳಿಂಬೆ, ಸೀಬೆ, ಏಲಕ್ಕಿ ಇತ್ಯಾದಿಗಳ ವಿಶಿಷ್ಟ ಪರಿಮಳಗಳೆಲ್ಲಾ ಪಟ್ಟಣದಲ್ಲಿ ಎಲ್ಲಿ ಸಿಗಬೇಕು....? ಎಂದುಕೊಳ್ಳುತ್ತಾ ಕೆಲಸ ಮಾಡುತ್ತಿದ್ದ ಕೂಲಿಯಾಳುಗಳನ್ನು ಕರೆಸಿ, ತೆಂಗಿನಕಾಯಿಗಳನ್ನು ಕೀಳಿಸಿದಳು. ಸುಮಾರು ಸಾಯಂಕಾಲ 4 ಗಂಟೆಯವರೆಗೂ ತೋಟದ ಕೆಲಸದಲ್ಲಿಯೇ ಸಮಯ ಹೋಯಿತು. ಕಾಯಿಗಳನ್ನೆಲ್ಲಾ ಅಲ್ಲೇ ಇದ್ದೆ ತೋಟದ ಮನೆಗೆ ಹಾಕಿಸಿ, ವಾಪಸ್ಸು ಮನೆಗೆ ಬಂದಳು.
ನಾಳೆ ತೋಟಕ್ಕೆ ಗೊಬ್ಬರ ಹಾಕಿಸಬೇಕು ಎಂದುಕೊಳ್ಳುತ್ತಾ, ಗಂಡ, ಮಕ್ಕಳಿಗೆ ಫೋನ್ ಮಾಡಿ ತನ್ನ ಕಾರ್ಯಕ್ರಮದ ವರದಿಗಳನ್ನು ಹೇಳಿದಳು.





