ಬಾಲಿಕಾ ವಧು ಈಗ ಭಾರತೀಯ ಪೊಲೀಸ್ `ಲೇಡಿ ಸಿಂಗಂ' ಐಪಿಎಸ್ ಅಧಿಕಾರಿ
ಅಂಬಿಕಾ ಎನ್. 14ನೇ ವಯಸ್ಸಿಗೆ ಮದುವೆ, 18ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳ ತಾಯಿ. ಆಕೆಯಲ್ಲಿ ಮೊಳಕೊಡೆದಿದ್ದ ಐಪಿಎಸ್ ಅಧಿಕಾರಿ ಆಗಬೇಕು ಎಂಬ ಕನಸನ್ನು ಕೇಳಿ ಸಮಾಜ ನಗುತ್ತಿದ್ದರೆ, ತಾನು ಐಪಿಎಸ್ ಅಧಿಕಾರಿಯಾಗಬೇಕು ಎಂಬ ನಿರ್ಧಾರ, ದೃಢಸಂಕಲ್ಪ, ಇಚ್ಛಾಶಕ್ತಿ ಆಕೆಯನ್ನು ಹಠಕ್ಕೆ ಬೀಳುವಂತೆ ಮಾಡುತ್ತದೆ.....!
ಜೀವನದ ಹೋರಾಟಗಳು ಕೆಲವರಿಗೆ ಕೆಲವು ರೂಪಗಳಲ್ಲಿ ಬರುತ್ತವೆ. ಕೌಟುಂಬಿಕ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ಸಂಬಂಧದ ಸಮಸ್ಯೆ, ವೃತ್ತಿ ಜೀವನದ ಉದ್ವಿಗ್ನತೆಗಳು ಹೀಗೆ ಒಂದೆರಡಲ್ಲ.... ನಮ್ಮಲ್ಲಿ ಹೆಚ್ಚಿನವರು ಈ ಹಿನ್ನೆಡೆಗಳನ್ನು ತಮ್ಮ ವೈಫಲ್ಯಗಳೆಂದು ದೂಷಿಸುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ಬೂದಿಯಿಂದ ಎದ್ದು ವಜ್ರದಂತೆ ಪ್ರಕಾಶಮಾನವಾಗಿ ಕಂಗೊಳಿಸುವ ಧೈರ್ಯ ತೋರಿಸುತ್ತಾರೆ.
ಅಂತಹವರ ಸಾಲಿನಲ್ಲಿರುವವರು ಐಪಿಎಸ್ ಅಧಿಕಾರಿ ಎನ್. ಅಂಬಿಕಾ. ಬಾಲ್ಯ ವಿವಾಹಕ್ಕೆ ತಳ್ಳಲ್ಪಟ್ಟ ನಂತರ ಅವರು ತಮ್ಮ ಜೀವನ ಮತ್ತು ಕುಟುಂಬವನ್ನು ಎಂದಿಗೂ ದೂಷಿಸಲಿಲ್ಲ. ಜೀವನ ತನ್ನ ಮೇಲೆ ಎಸೆದ ಸವಾಲುಗಳನ್ನು ಮೆಟ್ಟಿನಿಂತು ನಾಗರಿಕ ಸೇವೆಗೆ ಪ್ರವೇಶಿಸಲು, ಘನತೆಯ ಜೀವನ ನಡೆಸಲು ಸತತ ಪ್ರಯತ್ನ ನಡೆಸಿದರು.
ತಮಿಳುನಾಡಿನ ದಿಂಡಿಗಲ್ ಎಂಬ ಪುಟ್ಟ ಪಟ್ಟಣದ ಬಾಲಕಿ ಅಂಬಿಕಾ. 12-14 ವರ್ಷ ವಯಸ್ಸಿನಲ್ಲೇ ಬಾಲಕಿಯರಿಗೆ ಮದುವೆ ಮಾಡಿಸುವ ಸಮಾಜದಲ್ಲಿ ಬೆಳೆಯುತ್ತಾರೆ. ಸ್ವಾಭಾವಿಕವಾಗಿಯೇ, ಸಮಾಜದ ಒತ್ತಡದಿಂದಾಗಿ, ಅವರ ಕುಟುಂಬ ಈಕೆಯ 14ನೇ ವಯಸ್ಸಿನಲ್ಲಿ, ತಮಿಳುನಾಡು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಜೊತೆ ಅವರ ಮದುವೆ ಮಾಡಿಸುತ್ತದೆ. ಏನೂ ತೋಚದ ವಯಸ್ಸಿನಲ್ಲಿ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ಮದುವೆಯಾಗುವ ಅಂಬಿಕಾಗೆ ಅದೊಂದು ದಿನ ತನ್ನ ಜೀವನದ ಧ್ಯೇಯದ ಅರಿವಾಗುತ್ತದೆ.

ಚಿಗುರೊಡೆದ ಕನಸು
ಗಂಡನೊಂದಿಗೆ ಗಣರಾಜ್ಯೋತ್ಸ ಪೆರೇಡ್ ವೀಕ್ಷಿಸಲು ಹೋದಾಗ, ಅಲ್ಲಿ ಐಪಿಎಸ್ ಅಧಿಕಾರಿಗಳಿಗೆ ಕೊಡುತ್ತಿದ್ದ ಗೌರವ ಕಂಡು ಆಕೆಗೆ ಅಚ್ಚರಿಯಾಗುತ್ತದೆ. ಕಾರ್ಯಕ್ರಮದ ಅತಿಥಿಗಳಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಗಣ್ಯರು ಇರುತ್ತಾರೆ. ಆ ಅಧಿಕಾರಿಗಳಿಗೆ ತನ್ನ ಪತಿ ಸೆಲ್ಯೂಟ್ ಹೊಡೆಯುವುದನ್ನು ಗಮನಿಸುತ್ತಾರೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಆಕೆಯಲ್ಲಿ ಮೂಡುತ್ತದೆ.
ಆಕೆಯ ಪತಿ ಮನೆಗೆ ಬಂದಾಗ, ಆ ಬಗ್ಗೆ ವಿಚಾರಿಸುತ್ತಾರೆ. ನೀವ್ಯಾಕೆ ಅವರಿಗೆ ಸೆಲ್ಯೂಟ್ ಮಾಡಿದಿರಿ? ಅವರು ಯಾರು ಎಂದು ತಿಳಿಯಲು ಆಕೆಯ ಮನಸ್ಸು ಹಾತೊರೆಯುತ್ತದೆ. ಅದೇ ರೀತಿಯ ಗೌರವ ಪಡೆಯಬೇಕೆಂಬ ತನ್ನ ಬಯಕೆಯನ್ನು ಪತಿಯ ಮುಂದೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಆಕೆಯ ಪತಿ, `ಅವರು ಐಪಿಎಸ್ ಅಧಿಕಾರಿಗಳು,' ಎಂದು ಉತ್ತರಿಸುತ್ತಾರೆ.
ನಾಲ್ಕು ಗೋಡೆಯ ಮಧ್ಯೆ ಬದುಕುತ್ತಿದ್ದ ಆಕೆಗೆ ಅವರಂತೆ ತಾನೂ ಈ ಗೌರವಕ್ಕೆ ಅರ್ಹತೆ ಪಡೆಯಬೇಕು ಎಂದೆನಿಸುತ್ತದೆ. ತನ್ನ ಕನಸನ್ನು ಗಂಡನ ಮುಂದೆ ಹೇಳಿಕೊಳ್ಳುತ್ತಾರೆ. ತಾನೂ ಐಪಿಎಸ್ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.
ತನ್ನ ಹೆಂಡತಿಯ ಮಾತುಗಳನ್ನು ಕೇಳಿದ ಕಾನ್ ಸ್ಟೇಬಲ್, `ಅವರು ನಂ. ಒನ್ ರಾಂಕ್ ಅಧಿಕಾರಿಗಳು. ಅವರ ಮಟ್ಟಕ್ಕೆ ತಲುಪಲು ಮತ್ತು ಆ ರೀತಿಯ ಗೌರವ ಪಡೆಯಲು, ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಕಠಿಣವಾದ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಆಗ ಮಾತ್ರ ನಾಗರಿಕ ಸೇವೆಗೆ ಪ್ರವೇಶಿಸಲು ಮತ್ತು ಐಸಿಎಸ್ ಅಧಿಕಾರಿಯಾಗಲು ಸಾಧ್ಯವಾಗುತ್ತದೆ. ನಂತರ ಡಿಜಿಪಿ ಅಥವಾ ಐಜಿಪಿ ಆಗಲು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ,' ಎಂದು ವಿವರಿಸುತ್ತಾರೆ.





