–  ರಾಘವೇಂದ್ರ ಅಡಿಗ ಎಚ್ಚೆನ್.

ಒಂದು ಕಡೆ ‘ರಾಮಾಯಣ’ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಮಗನ ಈ ಸಾಧನೆ ಕಂಡು ತಾಯಿ ಪುಷ್ಪಾ ಭಾವುಕರಾಗಿದ್ದಾರೆ. ಮಗನ ಯಶಸ್ಸು, ಜನರ ಪ್ರೀತಿ ಮತ್ತು ಅಭಿಮಾನ ಕಂಡು ತಾಯಿಯಾಗಿ ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಪುಷ್ಪಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಿರುವ ‘ರಾಮಾಯಣ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದ ಅದ್ಧೂರಿ ದೃಶ್ಯಗಳು ಮತ್ತು ಕಥೆಯ ನಿರೂಪಣೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ರಾವಣನ ಪಾತ್ರದಲ್ಲಿ ಯಶ್ ನೀಡಿರುವ ಅಭಿನಯದ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದೆ. ಸಿನಿಮಾ ನೋಡಿದ ಹಲವರು ಯಶ್ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ.

ಈ ಸಂತಸದ ನಡುವೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ತಾಯಿ ಪುಷ್ಪಾ, ಮಗನ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಒಬ್ಬ ತಾಯಿಗೆ ತನ್ನ ಮಗ ಕಂಡ ಕನಸುಗಳನ್ನೆಲ್ಲ ನನಸಾಗಿಸಿಕೊಂಡು, ಸಾಧನೆಯ ಶಿಖರಕ್ಕೇರಿ, ಜನರ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಗಳಿಸುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

‘ರಾಮಾಯಣ’ ಬಿಡುಗಡೆಯಾಗಿರುವ ಈ ಸಂದರ್ಭದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅವರ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಅಭಿಮಾನ ಕಂಡು ತಮ್ಮ ಸಂತೋಷಕ್ಕೆ ಪಾರವೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಗನ ಪರಿಶ್ರಮ, ಸಾಧನೆ ಮತ್ತು ಅಭಿನಯಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ಯಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಮಗ ಇನ್ನಷ್ಟು ಎತ್ತರಕ್ಕೆ ಬೆಳೆದು ಸದಾ ಕುಟುಂಬದ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಲಿ ಎಂದು ತಾಯಿ ಹಾರೈಸಿದ್ದಾರೆ.

ಒಟ್ಟಿನಲ್ಲಿ, ತೆರೆಯ ಮೇಲೆ ರಾವಣನಾಗಿ ಯಶ್ ಪ್ರೇಕ್ಷಕರ ಮನ ಗೆಲ್ಲುತ್ತಿದ್ದರೆ, ಮಗನ ಸಾಧನೆ ಕಂಡು ತಾಯಿ ಪುಷ್ಪಾ ಹೆಮ್ಮೆಯಿಂದ ಸಂಭ್ರಮಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ