Sj*

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಕನ್ನಡ ಚಿತ್ರರಂಗಕ್ಕೆ ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸದಭಿರುಚಿಯ ಹಾಗೂ ವಿಭಿನ್ನ ಕಥಾಹಂದರದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ರಮೇಶ್ ರೆಡ್ಡಿ ಅವರು ಮತ್ತೊಂದು ಹೊಸ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಸೂರಜ್ ಪ್ರೊಡಕ್ಷನ್ಸ್‌ನ ನೂತನ ಚಿತ್ರ ‘ಪ್ರೊಡಕ್ಷನ್ ನಂಬರ್ 9’ 2027ರ ಜನವರಿಯಲ್ಲಿ ಆರಂಭವಾಗಲಿದೆ.

ನಿರ್ಮಾಪಕ ರಮೇಶ್ ರೆಡ್ಡಿ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಹಾಗೂ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಈ ಸಂತಸದ ಸುದ್ದಿಯನ್ನು ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ರಮೇಶ್ ರೆಡ್ಡಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸೂರಜ್ ಪ್ರೊಡಕ್ಷನ್ಸ್‌ನ ಮುಂದಿನ ಚಿತ್ರ ‘ಪ್ರೊಡಕ್ಷನ್ ನಂಬರ್ 9’ ಕುರಿತಾದ ವಿಶೇಷ ಟೀಸರ್‌ವೊಂದನ್ನೂ ಬಿಡುಗಡೆ ಮಾಡಲಾಗಿದೆ. ಚಿತ್ರದ ಘೋಷಣೆಯ ಜೊತೆಗೆ ಹೊರಬಂದಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಮುಂದಿನ ಸಿನಿಮಾ ಹೇಗಿರಬಹುದು ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ. ಟೀಸರ್‌ನಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದೆ, ಹೊಸ ಪ್ರಯತ್ನದ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸುವ ರೀತಿಯಲ್ಲಿ ರೂಪಿಸಿರುವುದು ವಿಶೇಷ.

 ramesh

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳ ನಿರ್ಮಾಪಕರೆಂದೇ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ಸ್ ಮೂಲಕ ಈಗಾಗಲೇ ಹಲವು ವಿಭಿನ್ನ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ‘ನಾತಿಚರಾಮಿ’, ಜನಪ್ರಿಯ ಚಿತ್ರ ‘ಗಾಳಿಪಟ 2’ ಸೇರಿದಂತೆ ಇತ್ತೀಚೆಗೆ ತೆರೆಕಂಡ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ‘45’ ಚಿತ್ರವನ್ನು ನಿರ್ಮಿಸಿರುವ ಹೆಗ್ಗಳಿಕೆ ಇವರದ್ದು.

ಕೇವಲ ಚಿತ್ರಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಹೊಸತನದ ಕಥೆಗಳಿಗೆ ಪ್ರೋತ್ಸಾಹ ನೀಡುತ್ತಾ, ವಿಭಿನ್ನ ಪ್ರಯತ್ನಗಳಿಗೆ ಕೈಹಾಕುವ ಮೂಲಕ ರಮೇಶ್ ರೆಡ್ಡಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಸದಾ ಹೊಸ ಆಲೋಚನೆ ಹಾಗೂ ಉತ್ತಮ ಕಥೆಗಳ ಹುಡುಕಾಟದಲ್ಲಿರುವ ಅವರು ಇದೀಗ ಮತ್ತೊಂದು ಕುತೂಹಲಕಾರಿ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸೂರಜ್ ಪ್ರೊಡಕ್ಷನ್ಸ್‌ನ ಒಂಬತ್ತನೇ ಚಿತ್ರವಾಗಿರುವ ‘ಪ್ರೊಡಕ್ಷನ್ ನಂಬರ್ 9’ 2027ರ ಜನವರಿಯಲ್ಲಿ ಸೆಟ್ಟೇರಲಿದೆ. ಈ ಚಿತ್ರದ ನಿರ್ದೇಶಕರು ಯಾರು? ನಾಯಕ-ನಾಯಕಿ ಸೇರಿದಂತೆ ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ? ಚಿತ್ರದ ಕಥಾಹಂದರವೇನು? ಎಂಬ ಕುತೂಹಲಕಾರಿ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

“ನಮ್ಮ ಸಂಸ್ಥೆಗೆ ಹಾಗೂ ನನಗೆ ಸದಾ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾ ಬಂದಿರುವ ನಿಮ್ಮೆಲ್ಲರ ಹಾರೈಕೆ ಹೊಸ ಪ್ರಯತ್ನಕ್ಕೂ ಇರಲಿ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮತ್ತೊಂದು ಉತ್ತಮ ಚಿತ್ರವನ್ನು ನಿಮ್ಮ ಮುಂದೆ ತರುವ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಹೊಸ ಸಿನಿಮಾ, ಹೊಸ ಕನಸು, ಹೊಸ ನಿರೀಕ್ಷೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಘೋಷಣೆಯ ಜೊತೆಗೆ ಬಿಡುಗಡೆಯಾಗಿರುವ ವಿಶೇಷ ಟೀಸರ್ ಈಗಾಗಲೇ ಕುತೂಹಲದ ಕಿಡಿ ಹೊತ್ತಿಸಿದೆ. ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಮೇಶ್ ರೆಡ್ಡಿ ಅವರ ಮುಂದಿನ ಈ ಪ್ರಯತ್ನದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ