ಸಾಧಾರಣ ಮಧ್ಯಮ ವರ್ಗದಲ್ಲಿ ಹುಟ್ಟಿದ ಅಪಾರ ಪ್ರತಿಭಾವಂತೆ ಮಂಜುಳಾವತಿ, ತಮ್ಮ ಸ್ವಂತ ಪರಿಶ್ರಮದಿಂದ ಯಾವ ರೀತಿ ಆಟೋಟಗಳಲ್ಲಿ ಅದ್ವಿತೀಯ ಸಾಧನೆ ಮಾಡಿ, ಮಲೆನಾಡಿನಿಂದ ಮಲೇಶಿಯಾವರೆಗೂ ಹೇಗೆ ತಲುಪಿದರು ಎಂದು ವಿವರವಾಗಿ ತಿಳಿಯೋಣವೇ…..?

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದು ಒಂದು ದೊಡ್ಡ ಸವಾಗಿದೆ. ಕಾರಣ….. ಬದಲಾಗುತ್ತಿರುವ ತಂತ್ರಜ್ಞಾನ, ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು, ಎಲ್ಲೋ ಒಂದು ಕಡೆ ನಮ್ಮ ಮಕ್ಕಳಲ್ಲಿ ಸೋಮಾರಿತನ, ನಿರ್ಲಕ್ಷ್ಯತನ, ಮೊಡುತನ, ಸ್ವಂತಿಕೆ ಇಲ್ಲದಿರುವಂತೆ ಮಾಡಿದೆ. ಎಲ್ಲದಕ್ಕೂ ತಂತ್ರಜ್ಞಾನದ ಮೊರೆಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಹಿಂದೆ ಮಕ್ಕಳು ಅಜ್ಜಿ ತಾತಂದಿರೊಂದಿಗೆ ಬೆಟ್ಟ, ಗುಡ್ಡ, ಗದ್ದೆ, ಹೊಲ, ತೋಟ, ಹಳ್ಳಕೊಳ್ಳ, ಮಣ್ಣಲ್ಲೇ ಕುಣಿದು ಕುಪ್ಪಳಿಸುತ್ತಿದ್ದರು. ಹಾಗೆಯೇ ಗೆಡ್ಡೆಗೆಣಸು, ಹಣ್ಣುಹಂಪಲು, ಸೊಪ್ಪುಸದೆ ಇತ್ಯಾದಿಗಳನ್ನು ತಿಂದುಂಡು ಆಟೋಟಗಳಲ್ಲಿಯೂ ಇತರೆ ಚಟುವಟಿಕೆಗಳಲ್ಲಿಯೂ ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಇವೆಲ್ಲವನ್ನು ಹೇಳುತ್ತಿರುವುದಕ್ಕೆ ಕಾರಣವೇನೆಂದರೆ…. 30 ವರ್ಷ ಆದರೆ ನಮ್ಮ ಕೈಲಿ ಏನೂ ಆಗಲ್ಲ ಎಂದು ಕೈಚೆಲ್ಲಿ ಅಸಹಾಯಕರಾಗಿ ಕೂರುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ.

ಅಂತಹದ್ದರಲ್ಲಿ ಕೊಡಗಿನ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಒಂದು ಪುಟ್ಟ ಹುಡುಗಿ. ಇಂದು ಆಕೆಗೆ 50 ವರ್ಷ. ಇವರು ಹಿರಿಯರ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಕಂಚಿನ ಪದಕವನ್ನು ಪಡೆದು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರು ಬೇರಾರೂ ಅಲ್ಲ, ಸಕಲೇಶಪುರ ತಾಲ್ಲೂಕಿವ ಜಾನೆಕೆರೆ ಗ್ರಾಮದ ದುಶ್ಯಂತ್‌ ಕುಮಾರ್‌ ಪತ್ನಿ ಮಂಜುಳಾವತಿ.

IMG-20251124-WA0034

ಬಾಲ್ಯ, ಶಿಕ್ಷಣ, ಕ್ರೀಡಾ ಜೀವನ

ಮಂಜುಳಾವತಿ ತಮ್ಮ ಬಾಲ್ಯ, ಶಿಕ್ಷಣ, ಕ್ರೀಡಾ ಜೀವನದ ಯಶಸ್ಸಿನ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈಕೆ ಚಿಕ್ಕಂದಿನಿಂದಲೇ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಅಭಿರುಚಿ ಹೊಂದಿದ್ದರು.

ಇವರು ಮೂಲತಃ ಕೊಡಗಿನವರು. 1966ರಲ್ಲಿ ಕೊಡಗು ಜಿಲ್ಲೆ ಶನಿವಾರಸಂತೆಯಲ್ಲಿ ಜನಿಸಿದವರು. ತಂದೆ ಎ.ಬಿ. ವೆಂಕಟೇಗೌಡ, ತಾಯಿ ಪುಟ್ಟಮ್ಮರವರ ನಾಲ್ಕನೇ ಮಗಳು.

ಇವರ ಪ್ರಾಥಮಿಕ ಶಿಕ್ಷಣ ಅರೆದಾಳು ಶಾಲೆ, ಶನಿವಾರಸಂತೆ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 57ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಈ ಅವಧಿಯಲ್ಲಿ ಇವರಿಗೆ ಖೋಖೋ ಮತ್ತು ಥ್ರೋಬಾಲ್ ‌ನಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಹಲವು ವಿಭಾಗಗಳಲ್ಲಿ ಭಾಗವಹಿಸಿ/ಸ್ಪರ್ಧಿಸಿ ಬಹುಮಾನಗಳನ್ನು ಪಡೆದುಕೊಂಡರು.

ಆಟದೊಂದಿಗೆ ಪಾಠ

ಪ್ರೌಢಶಾಲೆಯಲ್ಲಿಯೂ ಓದಿನ ಜೊತೆಗೆ ಖೋಖೋ, ಥ್ರೋಬಾಲ್ ‌ಜೊತೆಗೆ ಮಹಿಳಾ ಹಾಕಿ, ಜಾವೆಲಿನ್‌ ಥ್ರೋ, ಬಾಸ್ಕೆಟ್‌ ಬಾಲ್ ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಆ ಅವಧಿಯಲ್ಲಿ ವಿರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ, ಮೈಸೂರು, ಮಂಗಳೂರು, ಬೆಂಗಳೂರು, ಬಳ್ಳಾರಿ ಮೊದಲಾದ ಕಡೆ ರಾಜ್ಯ ಮಟ್ಟದಲ್ಲಿ ಹಾಗೂ ಮೀರತ್‌ ನಲ್ಲಿ ಅಂತಾರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ.

ಪಿಯುಸಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೂ ಜಾವೆಲಿನ್‌ ಥ್ರೋ, ಹಾಕಿ ಹಾಗೂ ಬಾಸ್ಕೆಟ್‌ ಬಾಲ್ ‌ಪಂದ್ಯಾವಳಿಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ವಿದ್ಯಾಭ್ಯಾಸದ ಅವಧಿಯಲ್ಲಿ ನೂರಾರು ಬಹುಮಾನಗಳನ್ನು ಪಡೆದಿರುವುದರ ಜೊತೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪರವರಿಂದ `ಅತ್ಯುತ್ತಮ ಆಟಗಾರ್ತಿ’ ಪ್ರಶಸ್ತಿ ಸಹ ಪಡೆದಿದ್ದಾರೆ.

ಮದುವೆಯ ನಂತರ ನಂತರ ಕೆಲವು ವರ್ಷಗಳಲ್ಲಿ ದುಶ್ಯಂತ್‌ ರೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಮದುವೆಯ ನಂತರ ಪತಿಯ ಸಹಾಯದಿಂದ ತಮ್ಮ 30ನೇ ಪ್ರಾಯದಲ್ಲಿ ಮತ್ತೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು. ಬೆಂಗಳೂರು, ಮಂಗಳೂರು, ಕೇರಳ, ಮಹಾರಾಷ್ಟ್ರ, ಲಕ್ನೋ ಮೊದಲಾದ ಕಡೆ ಹಿರಿಯರ ವಿಭಾಗದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಒಟ್ಟು 6 ಚಿನ್ನ, 7 ಬೆಳ್ಳಿ, 3 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಮಹಾರಾಷ್ಟ್ರ ನಂತರ ಮಲೇಶಿಯಾ, ಮಹಾರಾಷ್ಟ್ರದಲ್ಲಿ ನಡೆದ 37ನೇ ರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಸ್ಥಾನಗಳಿಸಿ, ಮಲೇಶಿಯಾದ ಕೌಲಾಲಂಪುರ್‌ ನಲ್ಲಿ ನಡೆದ 32ನೇ ಅಂತಾರಾಷ್ಟ್ರೀಯ ಮಹಿಳೆಯರ ಹಿರಿಯರ ವಿಭಾಗದಲ್ಲಿ ಡಿಸ್ಕಸ್‌ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದು ಭಾರತಕ್ಕೆ ಚಿನ್ನದ ಪದಕ ಹಾಗೂ ಜಾವೆಲಿನ್‌ ಥ್ರೋನಲ್ಲಿ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಈ ಹಿಂದೆ `ಇಂಡಿಯಾ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌’ ಬೆಂಗಳೂರು, ಮಂಗಳೂರು, ಕೇರಳ, ಮಹಾರಾಷ್ಟ್ರಗಳಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು 6 ಚಿನ್ನ, 7 ಬೆಳ್ಳಿ, 3 ಕಂಚಿನ ಪದಕಗಳನ್ನು ಗಳಿಸಿದ್ದರು. ಅವಕಾಶಗಳು ಸಿಕ್ಕರೆ ಇನ್ನೂ ಹೆಚ್ಚಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಭಾರತದ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಉತ್ಸುಕರಾಗಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ ಪತಿ ದುಶ್ಯಂತ್‌ ಕುಮಾರ್‌ ರ  ಸಂಪೂರ್ಣ ಸಹಕಾರವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಂಜುಳಾತಿ.

ಕ್ರೀಡೆಗಾಗಿ ಸತತ ಸಂಘರ್ಷ

ದ್ವಿತೀಯ ಪಿಯುಸಿ ಓದುತ್ತಿರುವಾಗ ತಂದೆಯವರ ಅನಾರೋಗ್ಯದ ನಿಮಿತ್ತ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ದೈಹಿಕ ಶಿಕ್ಷಕರಾಗಿ ಕೆಲಸ ಮಾಡುವ ಎಲ್ಲಾ ತರಬೇತಿ ಇವರಿಗೆ ತಿಳಿದಿದ್ದರೂ ನೌಕರಿ ಮಾಡುವ ಅವಕಾಶ ಇವರಿಗಿರಲಿಲ್ಲ. ಏಕೆಂದರೆ ದೈಹಿಕ ಶಿಕ್ಷಕರಾಗಿ ಕೆಲಸ ಮಾಡಲು ಕೆಲವು ಕೋರ್ಸ್‌ ಅಗತ್ಯ. ಸಂಸಾರಸ್ಥರಾದ ಮೇಲೆ ಅವರಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಲು ಆಗಲಿಲ್ಲ. ಕೆಲಸವಿಲ್ಲದೆ ಬದುಕು ಕಷ್ಟ ಎಂದು ಹತಾಶೆಯಿಂದ ಮಾತನಾಡುತ್ತಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಇಂತಹ ಕ್ರೀಡಾಪಟುವಿಗೆ ಸರ್ಕಾರದಿಂದ ಯಾವುದೇ ಸಹಾಯಧನ ದೊರೆತಿಲ್ಲ. 5 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿನಿಧಿಯಾಗಿ ಆಡಲು ಅವಕಾಶ ಸಿಕ್ಕಿದ್ದರೂ ಅವಕಾಶ ವಂಚಿತರಾಗಿದ್ದರು. ಆದರೆ ಕಳೆದ 2018ರ ಅಕ್ಟೋಬರ್‌ ನಲ್ಲಿ ಮಲೇಶಿಯನ್‌ ಇಂಟರ್‌ ನ್ಯಾಶನಲ್ ಓಪನ್‌ ಮಾಸ್ಟರ್‌ ಅಥ್ಲೆಟಿಕ್ಸ್ ನಲ್ಲಿ ಆಡಲು ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದರು.

ಆರ್ಥಿಕ ಸಂಕಷ್ಟ

ಆ ಸಮಯದಲ್ಲಿ ಆರ್ಥಿಕ ಸಂಕಷ್ಟದಿಂದ ಬಹಳಷ್ಟು ಹೋರಾಡಿದರೂ ಯಾವುದೇ ಧನಸಹಾಯ ದೊರೆತಿರಲಿಲ್ಲ. ಆಗ ಧನಸಹಾಯಕ್ಕೆ ಬಂದಿದ್ದು ಬೇರಾರೂ ಅಲ್ಲ, ಅವರ ಪತಿ ದುಶ್ಯಂತ್‌ ಕುಮಾರ್‌. ಅವರು ಸಾಲದ ಹಣದಿಂದ ಹೆಂಡತಿಯ ಬಹುದಿನದ ಕನಸನ್ನು ಈಡೇರಿಸಿದರು. ಅಂದರೆ ಮಲೇಶಿಯಾಕ್ಕೆ ಕರೆದುಕೊಂಡು ಹೋಗಿ ಬರಲು ಅವರಿಗೆ ತಗುಲಿದ ವೆಚ್ಚ 1,50,000/.

ಮಂಜುಳಾತಿಗೆ ಈಗ 50 ವರ್ಷ. ಈ ವಯಸ್ಸಿನಲ್ಲಿಯೂ ಅವಗಿರುವ ಹುಮ್ಮಸ್ಸು, ಕ್ರೀಡಾಸಕ್ತಿ ನೋಡಿದರೆ ಮೈಪುಳಕಗೊಳ್ಳುತ್ತದೆ. ಅಂತಹ ಅದ್ಭುತ ಪ್ರತಿಭೆ ಇವರದ್ದು. ಹಾಗೆಯೇ ಸಕಲೇಶಪುರದ ತಹಶೀಲ್ದಾರ್ ರಿಗೂ ಧನ ಸಹಾಯಕ್ಕಾಗಿ ಅರ್ಜಿ ಹಾಕಿದ್ದಾರೆ. ಪ್ರತಿಕ್ರಿಯೆ ಮೂತ್ರ ಶೂನ್ಯ. ಯುವಜನ ಸೇನೆ ಮತ್ತು ಕ್ರೀಡಾ ಇಲಾಖೆ, ಹಾಸನ ಜಿಲ್ಲೆ ಇವರಲ್ಲಿಯೂ ಸಹ ಧನಸಹಾಯ ಕೋರಿದ್ದಾರೆ.

ಮಂಜುಳಾತಿ ಕುಟುಂಬಕ್ಕೆ ಇರುವುದು ನಾಲ್ಕು ಎಕರೆ ತೋಟ. ತೋಟದಲ್ಲಿ ಮೆಣಸಿನ ಬೀಳುಗಳೆಲ್ಲಾ ಅತಿಯಾದ ಮಳೆಯಿಂದ ಹಾಳಾಗಿಬಿಟ್ಟಿವೆ. ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ತೂಗಿಸುವುದೇ ಇವರಿಗೆ ಕಷ್ಟವಾಗಿದೆ. ಅಂತಹದ್ದರಲ್ಲಿ ಲಕ್ಷಗಟ್ಟಲೆ ಹಣ ಹೊಂದಿಸಿಕೊಂಡು ವಿದೇಶಕ್ಕೆ ಹೋಗಿ ಕ್ರೀಡೆಯಲ್ಲಿ ಭಾಗಹಿಸುವುದು ಕಷ್ಟಕರವಾಗಿದೆ.

ಸಾಧನೆಗೆ ಸಂದ ಪ್ರಶಸ್ತಿ

ಮಂಜುಳಾವತಿಯವರ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘಸಂಸ್ಥೆ, ಕ್ಲಬ್‌, ಶಾಲೆಗಳಲ್ಲಿ ಸನ್ಮಾನಿಸಲಾಗಿದೆ. ಸನ್ಮಾನ ಮಾಡಿಸಿಕೊಂಡಂತೆಯೇ ನನಗೆ ಜವಾಬ್ದಾರಿಯೂ ಹೆಚ್ಚುತ್ತಿದೆ, ಉತ್ಸಾಹ ದುಪ್ಪಟ್ಟಾಗಿದೆ ಎನ್ನುತ್ತಾರೆ ಮಂಜುಳಾವತಿ. ಇವರು ಕೇವಲ ಆಟಗಾರ್ತಿ ಅಷ್ಟೇ ಅಲ್ಲ, ಒಳ್ಳೆಯ ನೃತ್ಯಗಾರ್ತಿ ಕೂಡ. ಹಾಗೆಯೇ ಬಿಡುವಿನ ವೇಳೆಯಲ್ಲಿ ತಮ್ಮ ಊರಿನ ಮಕ್ಕಳಿಗೆ ಥ್ರೋಬಾಲ್, ವಾಲಿಬಾಲ್‌, ರನ್ನಿಂಗ್‌, ಖೋಖೋ ಆಟಗಳಿಗೆ ತರಬೇತಿ ನೀಡುತ್ತಿದ್ದಾರೆ.

ಹಾಗೆಯೇ ಹೆಣ್ಣುಮಕ್ಕಳಿಗೆ ಟೈಲರಿಂಗ್‌ ತರಬೇತಿಯನ್ನು ನೀಡುತ್ತಿದ್ದಾರೆ (ತಮ್ಮ ಊರಿನಲ್ಲೇ). ಅವಕಾಶ ಸಿಕ್ಕರೆ ಶಾಲೆಗಳಿಗೆ ಹೋಗಿ ವಾರದಲ್ಲಿ 2 ದಿನದಂತೆ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಉತ್ಸುಕರಾಗಿದ್ದಾರೆ. ಬಟ್ಟೆ ಮೇಲೆ ಎಂಬ್ರಾಯಿಡಿಂಗ್ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರು ಸಕಲಕಲಾವಲ್ಲಭೆ!

ಸಾಧನೆಗೆ ಕೊನೆ ಇಲ್ಲ

50 ವರ್ಷ ಆದ ಮೇಲೆ ಎಷ್ಟೋ ಜನ ನಮ್ಮ ಕೈಲಿ ಏನು ಸಾಧಿಸಲು ಆಗುವುದಿಲ್ಲ ಎಂದು ಕೈಕಟ್ಟಿ ಕೂರುವವರೇ ಹೆಚ್ಚು. ಅಂತಹದ್ದರಲ್ಲಿ ತಮ್ಮ ಮನೆಕೆಲಸಗಳನ್ನೆಲ್ಲ ಮಾಡಿಕೊಂಡು, ಯಾವುದೇ ತರಬೇತುದಾರರ ಸಹಾಯವಿಲ್ಲದೆ, ಅಂತಾರಾಷ್ಟ್ರಿಯ ಮಟ್ಟದಲ್ಲಿ 30 ದೇಶಗಳನ್ನು ಮಣಿಸಿ, ಚಿನ್ನದ ಪದಕ ಗೆದ್ದು ತಂದಿದ್ದಾರೆ ಎಂದರೆ ಅವರ ಛಲಕ್ಕೆ ನಾವು ತಲೆದೂಗಲೇಬೇಕು. ಮನೆಯ ಮುಂದಿನ ಅಂಗಳವೇ ಇವರಿಗೆ ಕ್ರೀಡಾಂಗಣ. ಅವರಿಗೆ ಅವರೇ ಕೋಚ್‌! ಈ ಲೇಖನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಸ್ಛೂರ್ತಿಯಾಗಲಿ. ಮಂಜುಳಾವತಿಯಂಥವರು ನಮ್ಮ ಮಲೆನಾಡಿನಲ್ಲಿ ಇನ್ನಷ್ಟು ಜನರು ಹುಟ್ಟಿಬರಲಿ ಎಂಬುದೇ ನಮ್ಮೆಲ್ಲರ ಆಶಯ!

– ಕೀರ್ತಿ ಕಿರಣ್‌ ಕುಮಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ