ಇಮೇಲ್ನಿಂದ ಕೃತಕ ಬುದ್ಧಿಮತ್ತೆಯವರೆಗೆ ಹಲವು ಸೇವೆಗಳು ಸ್ಥಗಿತ. ಒಂದೇ ತಾಂತ್ರಿಕ ವ್ಯವಸ್ಥೆಯ ಮೇಲಿನ ಅವಲಂಬನೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಮತ್ತೊಂದು ಎಚ್ಚರಿಕೆ
ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಜನರ ದಿನ ಆರಂಭವಾಗುವುದೇ ಮೊಬೈಲ್ನಲ್ಲಿ ವಾಟ್ಸಾಪ್ ಸಂದೇಶಗಳು, ಇಮೇಲ್ಗಳು ಮತ್ತು ಕಚೇರಿಯ ಆನ್ಲೈನ್ ಸೂಚನೆಗಳನ್ನು ಪರಿಶೀಲಿಸುವ ಮೂಲಕ. ಕಚೇರಿಗಳ ಕೆಲಸ, ಶಿಕ್ಷಣ ಸಂಸ್ಥೆಗಳ ಆಡಳಿತ, ಬ್ಯಾಂಕಿಂಗ್, ವ್ಯಾಪಾರ, ಸರ್ಕಾರಿ ಸೇವೆಗಳು ಹೀಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಇಂಟರ್ನೆಟ್ ಮತ್ತು ಕ್ಲೌಡ್ ತಂತ್ರಜ್ಞಾನವನ್ನು ಅವಲಂಬಿಸಿವೆ. ಆದರೆ ಇದೇ ತಂತ್ರಜ್ಞಾನದಲ್ಲಿ ಸಣ್ಣ ವ್ಯತ್ಯಯ ಉಂಟಾದರೂ ಸಾವಿರಾರು ಸಂಸ್ಥೆಗಳ ದೈನಂದಿನ ಚಟುವಟಿಕೆಗಳು ಏಕಕಾಲದಲ್ಲಿ ಅಸ್ತವ್ಯಸ್ತವಾಗಬಹುದು ಎಂಬುದಕ್ಕೆ ಮೈಕ್ರೋಸಾಫ್ಟ್ನ ಇತ್ತೀಚಿನ ಜಾಗತಿಕ ತಾಂತ್ರಿಕ ವ್ಯತ್ಯಯ ಮತ್ತೊಂದು ಉದಾಹರಣೆಯಾಗಿದೆ.
2026ರ ನವೆಂಬರ್ 12ರ ಗುರುವಾರ ಅಮೆರಿಕದ ಮಧ್ಯಾಹ್ನದ (ಭಾರತೀಯರಿಗೆ ಶುಕ್ರವಾರ ಬೆಳ್ಳಂಬೆಳಿಗ್ಗೆ) ವೇಳೆಗೆ ಮೈಕ್ರೋಸಾಫ್ಟ್ನ ಹಲವು ಪ್ರಮುಖ ಆನ್ಲೈನ್ ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ಮಧ್ಯಾಹ್ನದವರೆಗೂ ಇದರ ಪರಿಣಾಮ ಮುಂದುವರೆದಿದ್ದು, ಜಗತ್ತಿನಾದ್ಯಂತ ಬಳಕೆದಾರರು ಮೈಕ್ರೋಸಾಫ್ಟ್ನ ಜನಪ್ರಿಯ ಇಮೇಲ್ ಸೇವೆ ಔಟ್ಲುಕ್, ಕಚೇರಿ ಸಂವಹನ ವೇದಿಕೆ ಟೀಮ್ಸ್, ಕೃತಕ ಬುದ್ಧಿಮತ್ತೆ ಆಧಾರಿತ ಕೋಪೈಲಟ್ ಮತ್ತು ಮೈಕ್ರೋಸಾಫ್ಟ್ 365ರ ಹಲವು ಸೇವೆಗಳನ್ನು ಬಳಸಲು ತೊಂದರೆ ಅನುಭವಿಸಿದರು. ಇದು ಕೇವಲ ಒಂದು ಇಮೇಲ್ ಅಪ್ಲಿಕೇಶನ್ನ ಸಮಸ್ಯೆಯಾಗಿರಲಿಲ್ಲ. ಕಚೇರಿಗಳಲ್ಲಿ ಸಭೆ ನಡೆಸುವುದು, ಸಂದೇಶ ಕಳುಹಿಸುವುದು, ದಾಖಲೆಗಳನ್ನು ಹಂಚಿಕೊಳ್ಳುವುದು, ಇಮೇಲ್ಗಳನ್ನು ಪರಿಶೀಲಿಸುವುದು ಮತ್ತು ಕೃತಕ ಬುದ್ಧಿಮತ್ತೆಯ ನೆರವಿನಿಂದ ಕೆಲಸ ನಿರ್ವಹಿಸುವುದು ಸೇರಿದಂತೆ ಹಲವು ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ
ಲಕ್ಷಕ್ಕೂ ಹೆಚ್ಚು ದೂರುಗಳು. ಔಟ್ಲುಕ್ ಬಳಕೆದಾರರ ಪರದಾಟ
ಆನ್ಲೈನ್ ಸೇವೆಗಳ ಕಾರ್ಯನಿರ್ವಹಣೆಯ ಸ್ಥಿತಿಗತಿಯನ್ನು ಗಮನಿಸುವ Downdetector ವೆಬ್ಸೈಟ್ನಲ್ಲಿ ಗುರುವಾರ ಅಮೆರಿಕದ ಪೂರ್ವ ಕರಾವಳಿ ಸಮಯ ಮಧ್ಯಾಹ್ನ 1 ಗಂಟೆಯ ನಂತರ ಔಟ್ಲುಕ್ ಸಮಸ್ಯೆಗಳ ಕುರಿತು ದೂರುಗಳು ದಿಢೀರನೆ ಹೆಚ್ಚಾದವು. ಕೆಲವೇ ಸಮಯದಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರ ಸಮಸ್ಯೆ ವರದಿಗಳು ದಾಖಲಾಗಿದ್ದವು. ಈ ಸಂಖ್ಯೆ ದೂರುಗಳ ಸಂಖ್ಯೆಯಾಗಿದ್ದು, ನಿಖರವಾಗಿ ಅಷ್ಟೇ ಜನರು ಮಾತ್ರ ಬಾಧಿತರಾಗಿದ್ದಾರೆ ಎಂದರ್ಥವಲ್ಲ. ಆದರೂ ಸಮಸ್ಯೆಯ ವ್ಯಾಪಕತೆಯನ್ನು ಇದು ಸ್ಪಷ್ಟಪಡಿಸುತ್ತದೆ.
ಕೆಲವರಿಗೆ ಇಮೇಲ್ ಕಳುಹಿಸಲು ಸಾಧ್ಯವಾಗಲಿಲ್ಲ. ಇನ್ನು ಕೆಲವರಿಗೆ ಬಂದ ಸಂದೇಶಗಳನ್ನು ಸ್ವೀಕರಿಸಲು ತೊಂದರೆಯಾಯಿತು. ಹಲವರ ಇನ್ಬಾಕ್ಸ್ ತೆರೆಯಲೇ ಇಲ್ಲ. ಇನ್ನೂ ಕೆಲವರಿಗೆ ಖಾತೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹೊಸ ಸಂದೇಶಗಳನ್ನು ಕಳುಹಿಸುವುದು, ಹಳೆಯ ಇಮೇಲ್ಗಳನ್ನು ಹುಡುಕುವುದು, ಕಚೇರಿಯ ಪ್ರಮುಖ ಸಂವಹನಗಳನ್ನು ಪರಿಶೀಲಿಸುವುದು ಎಲ್ಲವೂ ಅಡಚಣೆಗೆ ಒಳಗಾದವು.
ಈ ವ್ಯತ್ಯಯ ಅಮೆರಿಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. Downdetector ವರದಿಗಳ ಪ್ರಕಾರ, ಸುಮಾರು ಒಂದು ಗಂಟೆಯ ಅವಧಿಯಲ್ಲಿ 74 ದೇಶಗಳು ಮತ್ತು ಪ್ರದೇಶಗಳಿಂದ ಸಮಸ್ಯೆಗಳ ವರದಿಗಳು ಬಂದಿದ್ದವು. ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಬಳಕೆದಾರರೂ ತೊಂದರೆ ಅನುಭವಿಸಿವೆ. ಭಾರತದಲ್ಲಿ ನವೆಂಬರ್ 13ರ ಬೆಳಿಗ್ಗೆ 8.42ರ ವೇಳೆಗೆ ಔಟ್ಲುಕ್ ಸಮಸ್ಯೆಗಳ ಕುರಿತು ಸುಮಾರು 1,960 ವರದಿಗಳು ದಾಖಲಾಗಿದ್ದವು ಎಂದು ವರದಿಯಾಗಿದೆ. ಜಾಗತಿಕ ಮಟ್ಟದಲ್ಲಿ ಔಟ್ಲುಕ್ ಸಮಸ್ಯೆಗಳ ವರದಿಗಳು ಗರಿಷ್ಠ ಮಟ್ಟದಲ್ಲಿ ಸುಮಾರು 1.30 ಲಕ್ಷದಿಂದ 1.40 ಲಕ್ಷದವರೆಗೆ ತಲುಪಿದ್ದವು ಎಂದು ವಿವಿಧ ವರದಿಗಳು ತಿಳಿಸಿವೆ.
ಟೀಮ್ಸ್, ಕೋಪೈಲಟ್ ಮತ್ತು ಮೈಕ್ರೋಸಾಫ್ಟ್ 365ಕ್ಕೂ ಹೊಡೆತ
ಮೈಕ್ರೋಸಾಫ್ಟ್ ಟೀಮ್ಸ್ ಇಂದು ಅನೇಕ ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆನ್ಲೈನ್ ಸಭೆ, ಸಂದೇಶ ವಿನಿಮಯ ಹಾಗೂ ಉದ್ಯೋಗಿಗಳ ನಡುವಿನ ಸಂವಹನಕ್ಕೆ ಪ್ರಮುಖ ವೇದಿಕೆಯಾಗಿದೆ. ಇದರಲ್ಲಿಯೂ ಸಾವಿರಾರು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದರು. ಉತ್ತರ ಅಮೆರಿಕಾದಲ್ಲಿ ಟೀಮ್ಸ್ಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದರೂ, ಕೆಲವು ಬಳಕೆದಾರರಿಗೆ ಸಂಪರ್ಕದ ತೊಂದರೆ ಮುಂದುವರಿದಿತ್ತು.
ಮೈಕ್ರೋಸಾಫ್ಟ್ನ ಕೃತಕ ಬುದ್ಧಿಮತ್ತೆ ಸಹಾಯಕ ಕೋಪೈಲಟ್ನ ಬಳಕೆಯಲ್ಲಿಯೂ ವ್ಯತ್ಯಯ ಉಂಟಾಯಿತು. ಕಚೇರಿ ದಾಖಲೆಗಳನ್ನು ವಿಶ್ಲೇಷಿಸುವುದು, ಇಮೇಲ್ಗಳ ಸಾರಾಂಶ ಪಡೆಯುವುದು, ವರದಿಗಳನ್ನು ಸಿದ್ಧಪಡಿಸುವುದು ಮತ್ತು ಕೆಲಸದ ಮಾಹಿತಿಯನ್ನು ಹುಡುಕುವುದು ಮುಂತಾದ ಕಾರ್ಯಗಳಿಗೆ ಕೋಪೈಲಟ್ ಬಳಸುವವರಿಗೆ ಸಮಸ್ಯೆಯಾಯಿತು.
ಇದರ ಜೊತೆಗೆ SharePoint Online, Planner, To Do, Microsoft Defender XDR ಸೇರಿದಂತೆ ಮೈಕ್ರೋಸಾಫ್ಟ್ 365 ಪರಿಸರದ ಇತರ ಸೇವೆಗಳ ಮೇಲೆಯೂ ಪರಿಣಾಮ ಬೀರಿರುವುದಾಗಿ ವರದಿಯಾಗಿದೆ. ಆದರೆ ಎಲ್ಲ ಸೇವೆಗಳಲ್ಲಿನ ಎಲ್ಲ ಕಾರ್ಯಗಳೂ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು ಎಂದು ಹೇಳಲಾಗದು. ಕೆಲವು ಸೇವೆಗಳಲ್ಲಿ ನಿರ್ದಿಷ್ಟ ಸೌಲಭ್ಯಗಳು ಮಾತ್ರ ಅಡಚಣೆಗೆ ಒಳಗಾಗಿದ್ದವು.
ಸಮಸ್ಯೆಗೆ ಕಾರಣವೇನು? ಸರ್ವರ್ಗಳು ಏಕಾಏಕಿ ನಿಷ್ಕ್ರಿಯಗೊಂಡಿದ್ದೇಕೆ?
ಮೈಕ್ರೋಸಾಫ್ಟ್ ತನ್ನ ಸಾಮಾಜಿಕ ಜಾಲತಾಣ ‘ಎಕ್ಸ್’ ಮತ್ತು ಸೇವಾ ಸ್ಥಿತಿಗತಿ ಪ್ರಕಟಣೆಗಳ ಮೂಲಕ ಸಮಸ್ಯೆಯ ಕುರಿತು ಮಾಹಿತಿ ನೀಡಿತು. ಆರಂಭದಲ್ಲಿ ಕಂಪನಿಯ ಮೂಲಸೌಕರ್ಯದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡ (Elevated Load) ಕಂಡುಬಂದಿದ್ದು, ಇದರಿಂದ ಸಂಪರ್ಕ ದೋಷಗಳು ಉಂಟಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿತು.
ನಂತರ ನಡೆಸಿದ ತನಿಖೆಯಲ್ಲಿ ಸಮಸ್ಯೆಗೆ ಒಟ್ಟಾರೆ ಬಳಕೆದಾರರ ಸಂಖ್ಯೆ ಏಕಾಏಕಿ ಹೆಚ್ಚಾಗಿರುವುದೇ ಕಾರಣವಲ್ಲ ಎಂಬುದು ತಿಳಿದುಬಂದಿತು. ಬದಲಿಗೆ, ಹಲವು ಸರ್ವರ್ಗಳು ಅನಿರೀಕ್ಷಿತವಾಗಿ ಲಭ್ಯವಿಲ್ಲದಂತಾಗಿದ್ದರಿಂದ ಕಾರ್ಯನಿರ್ವಹಿಸುತ್ತಿದ್ದ ಉಳಿದ ಸರ್ವರ್ಗಳ ಮೇಲೆ ಹೆಚ್ಚುವರಿ ಹೊರೆ ಬಿದ್ದಿತ್ತು. ಇದರಿಂದ ಸಂಪರ್ಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗಿ ಬಳಕೆದಾರರಿಗೆ ಸೇವೆ ತಲುಪಿಸುವಲ್ಲಿ ತೊಂದರೆ ಎದುರಾಯಿತು.
ಮೈಕ್ರೋಸಾಫ್ಟ್ನ ಪ್ರಾಥಮಿಕ ತನಿಖೆಯ ಪ್ರಕಾರ, ಕೆಲವು ಸರ್ವರ್ಗಳು ಸ್ವಯಂಚಾಲಿತ ಆರೋಗ್ಯ ಪರಿಶೀಲನೆಗಳಲ್ಲಿ (Automated Health Checks) ವಿಫಲವಾಗಿದ್ದವು. ಪರಿಣಾಮವಾಗಿ ಅವುಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು. ಈ ಸಮಸ್ಯೆ ಇತ್ತೀಚಿನ ಬದಲಾವಣೆಯೊಂದಕ್ಕೆ ಸಂಬಂಧಿಸಿದಿರಬಹುದೇ ಎಂಬುದನ್ನೂ ಕಂಪನಿ ಪರಿಶೀಲಿಸಿತು. ಸರ್ವರ್ಗಳನ್ನು ಮರುಪ್ರಾರಂಭಿಸುವುದು, ಸಂಪರ್ಕದ ದಟ್ಟಣೆಯನ್ನು ಇತರ ಮೂಲಸೌಕರ್ಯಗಳಿಗೆ ವರ್ಗಾಯಿಸುವುದು ಮತ್ತು ಹೊಸ ಸಂರಚನಾ ಬದಲಾವಣೆಗಳನ್ನು ಪರೀಕ್ಷಿಸುವ ಕ್ರಮಗಳನ್ನು ಕೈಗೊಳ್ಳಲಾಯಿತು.
ಆದರೆ ಮರುಪ್ರಾರಂಭಿಸಿದ ಕೆಲವು ಸರ್ವರ್ಗಳು ಮತ್ತೆ ಹೆಚ್ಚಿನ ಪ್ರಮಾಣದ ಸಂಪರ್ಕ ದಟ್ಟಣೆಯನ್ನು ಸ್ವೀಕರಿಸಿದಾಗ ಪ್ರತಿಕ್ರಿಯೆ ನೀಡದೆ ನಿಷ್ಕ್ರಿಯವಾಗುವ ಸಾಧ್ಯತೆ ಕಂಡುಬಂದಿತು. ಹೀಗಾಗಿ ಎಲ್ಲ ಸರ್ವರ್ಗಳನ್ನು ಏಕಕಾಲದಲ್ಲಿ ಸಾಮಾನ್ಯ ಸ್ಥಿತಿಗೆ ತರುವ ಬದಲು, ಹಂತ ಹಂತವಾಗಿ ಅವುಗಳನ್ನು ಸೇವೆಗೆ ಮರಳಿಸುವ ಮತ್ತು ಸಂಪರ್ಕದ ದಟ್ಟಣೆಯನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕಾಯಿತು.
ಮೈಕ್ರೋಸಾಫ್ಟ್ ಕೈಗೊಂಡ ಪರಿಹಾರ ಕ್ರಮಗಳು
ಸಮಸ್ಯೆ ಕಾಣಿಸಿಕೊಂಡ ನಂತರ ಮೈಕ್ರೋಸಾಫ್ಟ್ ತಾಂತ್ರಿಕ ತಂಡಗಳು ಹಲವು ಕ್ರಮಗಳನ್ನು ಕೈಗೊಂಡವು. ಜಾಗತಿಕ ಮೂಲಸೌಕರ್ಯದ ವಿವಿಧ ಭಾಗಗಳ ನಡುವೆ ಸಂಪರ್ಕದ ದಟ್ಟಣೆಯನ್ನು ಮರುಹಂಚಿಕೆ ಮಾಡಲಾಯಿತು. ಪರಿಣಾಮಿತ ಸರ್ವರ್ಗಳನ್ನು ಮರುಪ್ರಾರಂಭಿಸಲಾಯಿತು. ಹೊಸ ಬದಲಾವಣೆಗಳನ್ನು ಪರೀಕ್ಷಿಸುವ ಸಂದರ್ಭದಲ್ಲಿ ಸಮಸ್ಯೆಯೊಂದಿಗೆ ಸಂಬಂಧವಿದೆಯೇ ಎಂದು ಪರಿಶೀಲಿಸಲು ಕೆಲವು ನಿಯೋಜನೆಗಳು ಮತ್ತು ಸಂರಚನಾ ಬದಲಾವಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಆದರೆ ಆರಂಭಿಕ ಪರಿಹಾರ ಕ್ರಮಗಳು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿರಲಿಲ್ಲ ಎಂದು ಕಂಪನಿಯ ಮುಂದಿನ ಪ್ರಕಟಣೆಗಳು ಸೂಚಿಸಿದವು. ಹೀಗಾಗಿ ಪರ್ಯಾಯ ಕ್ರಮಗಳ ಮೂಲಕ ಸಾಮರ್ಥ್ಯ ಹೆಚ್ಚಿಸುವ ಮತ್ತು ಉಳಿದಿರುವ ಸರ್ವರ್ಗಳ ಮೇಲಿನ ಒತ್ತಡ ಕಡಿಮೆ ಮಾಡುವ ಪ್ರಯತ್ನ ಮುಂದುವರಿಯಿತು. ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲು ನಿಗದಿತ ಸಮಯವನ್ನು ಕಂಪನಿ ತಕ್ಷಣ ಪ್ರಕಟಿಸಿರಲಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ನ ಸೇವಾ ನಿರ್ವಹಣಾ ವ್ಯವಸ್ಥೆಯಲ್ಲಿ Exchange Online ಸಮಸ್ಯೆಯನ್ನು EX1550543 ಮತ್ತು ವ್ಯಾಪಕ ಮೈಕ್ರೋಸಾಫ್ಟ್ 365 ವ್ಯತ್ಯಯವನ್ನು MO1550821 ಎಂಬ ಗುರುತುಗಳಡಿ ದಾಖಲಿಸಲಾಗಿತ್ತು. ಸಂಸ್ಥೆಗಳ ಐಟಿ ನಿರ್ವಾಹಕರು Microsoft 365 Admin Centerನ Service Health ವಿಭಾಗದಲ್ಲಿ ಇಂತಹ ಸಮಸ್ಯೆಗಳ ಕುರಿತು ಅಧಿಕೃತ ಮಾಹಿತಿ ಪರಿಶೀಲಿಸಬಹುದು.
ಒಂದೇ ಕ್ಲೌಡ್ ವ್ಯವಸ್ಥೆಯ ಮೇಲಿನ ಅವಲಂಬನೆ ಎಷ್ಟು ಅಪಾಯಕಾರಿ?
ಈ ಘಟನೆಯಿಂದ ಜಗತ್ತಿನಾದ್ಯಂತ ಸಂಸ್ಥೆಗಳು ಒಂದು ಪ್ರಮುಖ ಪಾಠ ಕಲಿಯಬೇಕಾಗಿದೆ. ಇಂದು ಅನೇಕ ಕಂಪನಿಗಳು ತಮ್ಮ ಇಮೇಲ್, ದಾಖಲೆಗಳು, ಸಭೆಗಳು, ಯೋಜನಾ ನಿರ್ವಹಣೆ ಮತ್ತು ಬಳಕೆದಾರರ ಮಾಹಿತಿಯನ್ನು ಒಂದೇ ಕ್ಲೌಡ್ ಸೇವಾ ಪೂರೈಕೆದಾರರ ವ್ಯವಸ್ಥೆಯಲ್ಲಿ ನಿರ್ವಹಿಸುತ್ತಿವೆ. ಇದರಿಂದ ನಿರ್ವಹಣೆ ಸುಲಭವಾಗುತ್ತದೆ, ವೆಚ್ಚ ಕಡಿಮೆಯಾಗಬಹುದು ಮತ್ತು ಎಲ್ಲಿಂದಲಾದರೂ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಆದರೆ ಆ ಸೇವಾ ಪೂರೈಕೆದಾರರ ಮೂಲಸೌಕರ್ಯದಲ್ಲಿ ವ್ಯತ್ಯಯ ಉಂಟಾದರೆ, ಒಂದಕ್ಕಿಂತ ಹೆಚ್ಚು ವಿಭಾಗಗಳ ಕೆಲಸ ಏಕಕಾಲದಲ್ಲಿ ಸ್ಥಗಿತಗೊಳ್ಳುವ ಅಪಾಯವೂ ಇದೆ.
ಉದಾಹರಣೆಗೆ, ಒಂದು ಶಿಕ್ಷಣ ಸಂಸ್ಥೆಯಲ್ಲಿ ಇಮೇಲ್ ಸೇವೆ ಸ್ಥಗಿತಗೊಂಡರೆ ಆಡಳಿತ ವಿಭಾಗದ ಪತ್ರವ್ಯವಹಾರ ಮಾತ್ರವಲ್ಲದೆ ಪರೀಕ್ಷಾ ವಿಭಾಗದ ಸೂಚನೆಗಳು, ವಿದ್ಯಾರ್ಥಿಗಳ ಸಂವಹನ, ಸಿಬ್ಬಂದಿಯ ಸಭೆಗಳು ಮತ್ತು ಅನುಮೋದನೆ ಪ್ರಕ್ರಿಯೆಗಳೂ ವಿಳಂಬವಾಗಬಹುದು. ಆಸ್ಪತ್ರೆ, ಬ್ಯಾಂಕ್, ವಿಮಾ ಸಂಸ್ಥೆ ಅಥವಾ ಸರ್ಕಾರಿ ಕಚೇರಿಗಳಲ್ಲಿ ಇಂತಹ ವ್ಯತ್ಯಯದ ಪರಿಣಾಮ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ.
ಇದಕ್ಕೆ ಪರಿಹಾರವೆಂದರೆ ತಂತ್ರಜ್ಞಾನವನ್ನು ತ್ಯಜಿಸುವುದಲ್ಲ. ಅದರ ಮೇಲಿನ ಅವಲಂಬನೆಯನ್ನು ಸಮರ್ಪಕವಾಗಿ ನಿರ್ವಹಿಸುವುದು. ಸಂಸ್ಥೆಗಳು ಪರ್ಯಾಯ ಇಮೇಲ್ ಅಥವಾ ಸಂವಹನ ವ್ಯವಸ್ಥೆ, ತುರ್ತು ಸಂಪರ್ಕ ವಿಧಾನ, ಆಫ್ಲೈನ್ನಲ್ಲಿ ಲಭ್ಯವಿರುವ ಪ್ರಮುಖ ದಾಖಲೆಗಳು, ನಿಯಮಿತ ಡೇಟಾ ಬ್ಯಾಕಪ್ ಮತ್ತು Disaster Recovery ಯೋಜನೆಗಳನ್ನು ಹೊಂದಿರಬೇಕು. ಒಂದೇ ಸೇವೆ ಲಭ್ಯವಿಲ್ಲದಿದ್ದರೂ ಕನಿಷ್ಠ ಅಗತ್ಯ ಕಾರ್ಯಾಚರಣೆಗಳು ಮುಂದುವರಿಯುವಂತೆ Business Continuity Plan ರೂಪಿಸಬೇಕು.
ಅತಿಯಾದ ತಂತ್ರಜ್ಞಾನವೂ ಮಾರಕವಾಗಬಹುದು!
ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಆನ್ಲೈನ್ ಸಭೆಗಳು ಮತ್ತು ಡಿಜಿಟಲ್ ಸಂವಹನದಿಂದ ಕೆಲಸದ ವೇಗ ಮತ್ತು ಉತ್ಪಾದಕತೆ ಹೆಚ್ಚಿವೆ. ಆದರೆ ತಂತ್ರಜ್ಞಾನವೇ ಎಲ್ಲದಕ್ಕೂ ಏಕೈಕ ಆಧಾರವಾದಾಗ ಅದರ ವೈಫಲ್ಯವೂ ದೊಡ್ಡ ಸಂಕಷ್ಟಕ್ಕೆ ಕಾರಣವಾಗುತ್ತದೆ.
ಒಂದು ಕಾಲದಲ್ಲಿ ಇಮೇಲ್ ಬರದಿದ್ದರೆ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೆವು. ಆನ್ಲೈನ್ ದಾಖಲೆ ಲಭ್ಯವಿಲ್ಲದಿದ್ದರೆ ಸ್ಥಳೀಯವಾಗಿ ಉಳಿಸಿದ ಪ್ರತಿಯನ್ನು ಬಳಸುತ್ತಿದ್ದೆವು. ಇಂದು ಅನೇಕರು ತಮ್ಮ ಕೆಲಸದ ಸಂಪೂರ್ಣ ಮಾಹಿತಿಯನ್ನು ಕ್ಲೌಡ್ನಲ್ಲಿಯೇ ಇಟ್ಟುಕೊಂಡಿದ್ದಾರೆ. ಇಂಟರ್ನೆಟ್ ಅಥವಾ ಸೇವೆಯಲ್ಲಿ ವ್ಯತ್ಯಯ ಉಂಟಾದರೆ ತಮ್ಮದೇ ಮಾಹಿತಿಯನ್ನು ತಕ್ಷಣ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ.
ಮೈಕ್ರೋಸಾಫ್ಟ್ನಂತಹ ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಲ್ಲಿಯೂ ಇಂತಹ ವ್ಯತ್ಯಯ ಸಂಭವಿಸಿರುವುದು, ಯಾವುದೇ ತಂತ್ರಜ್ಞಾನ ವ್ಯವಸ್ಥೆ ನೂರು ಪ್ರತಿಶತ ದೋಷರಹಿತವಲ್ಲ ಎಂಬುದನ್ನು ನೆನಪಿಸುತ್ತದೆ. ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸುವುದರ ಜೊತೆಗೆ ಅದರ ಅಪಾಯಗಳನ್ನೂ ಅರ್ಥಮಾಡಿಕೊಂಡು ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಇಂದಿನ ಅನಿವಾರ್ಯತೆ.
ತಂತ್ರಜ್ಞಾನ ಮನುಷ್ಯನ ಕೆಲಸವನ್ನು ಸುಲಭಗೊಳಿಸಬೇಕೇ ಹೊರತು, ತಂತ್ರಜ್ಞಾನವೇ ಕೈಕೊಟ್ಟಾಗ ಮನುಷ್ಯನ ಕೆಲಸವೇ ನಿಂತುಹೋಗುವ ಸ್ಥಿತಿ ನಿರ್ಮಾಣವಾಗಬಾರದು. ಮೈಕ್ರೋಸಾಫ್ಟ್ನ ಈ ಜಾಗತಿಕ ವ್ಯತ್ಯಯ ನೀಡುತ್ತಿರುವ ಅತ್ಯಂತ ಮಹತ್ವದ ಪಾಠ ಇದೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ





