ಬಾಲ್ಯದ ನೆನಪುಗಳು ಎಂದಿಗೂ ನಿತ್ಯನೂತನ, ಹಚ್ಚ ಹಸಿರಾಗಿಯೇ ಹೃದಯದಲ್ಲಿ ಅಚ್ಚಳಿಯದೇ ಉಳಿದಿರುತ್ತವೆ. ಅದರಲ್ಲೂ ಪ್ರಾಥಮಿಕ ಶಾಲೆಯ ತರಗತಿಗಳು ನೆನಪುಗಳ ಮೆರವಣಿಗೆಯನ್ನೇ ನಮ್ಮ ಕಣ್ಣ ಹಾದು ಹೋಗುವಂತೆ ಮಾಡುತ್ತದೆ. ಅದರಲ್ಲೂ ಮಕ್ಕಳ ದಿನಾಚರಣೆಯಂದೇ ಈ ರೀತಿಯ ಭೇಟಿಯಾದರೆ ಅದೊಂದು ದಿವ್ಯಾನುಭವ. ಇಂಥ ವಿಶೇಷ ಅನುಭವವನ್ನು ಮಕ್ಕಳ ದಿನಾಚರಣೆಯಂದು ಪಡೆದು ಸಂತಸಪಟ್ಟವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ.
ಚಿತ್ರದುರ್ಗ ಮತ್ತು ಚಳ್ಳಕೆರೆಗೆ ಅಧಿಕೃತ ಕಾರ್ಯದ ನಿಮಿತ್ತ ತೆರಳುತ್ತಿದ್ದ ಸಚಿವರು, ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದ್ದ ಮಕ್ಕಳಿಗೆ ಅಚ್ಚರಿ ಕಾದಿತ್ತು. ತಮ್ಮ ಶಾಲೆಯಲ್ಲಿಯೇ ಓದಿ ಈಗ ಸಚಿವರಾಗಿ ಮೊದಲ ಬಾರಿಗೆ ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಚಿವ ಟಿ. ರಘುಮೂರ್ತಿ ಅವರನ್ನು ಕಂಡು ಚಿಣ್ಣರು, ಶಾಲಾ ಸಿಬ್ಬಂದಿ ಸಂತಸಪಟ್ಟರು.
ಮಕ್ಕಳೊಂದಿಗೆ ಕುಶಲೋಪರಿ ನಡೆಸಿದ ಸಚಿವರು, 1967-68ರಲ್ಲಿ ನಾನು ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಇಲ್ಲಿಯೇ ಓದಿದ್ದೆ ಎಂದ ಸಚಿವರು, ಚಿಣ್ಣರಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ, ಸಿಹಿ ಹಂಚಿದರು.
ಈ ಶಾಲೆ ನನಗೆ ಅಕ್ಷರ ಕೃಷಿ ಮಾಡಿಸಿದೆ. ಇಲ್ಲಿ ಕಲಿತ ನಾನು ಮುಂದೆ ಎಂಜಿನಿಯರ್ ಆಗುವ ಮಟ್ಟಕ್ಕೆ ತಲುಪಿದೆ. ಈಗ ಸಚಿವನಾಗಿ ನನ್ನ ಶಾಲೆಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು, ಶಾಲೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿವರ ಪಡೆದುಕೊಂಡರು.
ನಂತರ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಸುದರ್ಶನ ಹಾಗೂ ಶಿಕ್ಷಕರೊಂದಿಗೆ ಹಾಗೂ ಶಾಲಾ ಸಿಬ್ಬಂದಿಯೊಂದಿಗೂ ಸಮಾಲೋಚನೆ ನಡೆಸಿ, ಶಾಲೆ ಹಾಗೂ ಸುತ್ತಮುತ್ತಲ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೊಂದು ಅಪರೂಪದ ಭೇಟಿಯಾಗಿದೆ. ಮಕ್ಕಳ ದಿನಾಚರಣೆಯಂದೇ ನನ್ನ ಶಾಲೆಗೆ ಭೇಟಿ ನೀಡಿರುವುದು ಮನತುಂಬಿ ಬಂದಿದೆ. ಇದು ನನ್ನ ಜೀವನದ ಮರೆಯಲಾಗದ ಮತ್ತು ಸ್ಮರಣೀಯ ದಿನವಾಗಲಿದೆ ಎಂದು ರಘುಮೂರ್ತಿ ತಿಳಿಸಿದರು.





