ಜಯಣ್ಣ ಫಿಲ್ಮ್ಸ್ ಮೂಲಕ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆ….

Saraswati jagirdar *

ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ, ಕಿರಣ್ ರಾಜ್ ನಾಯಕನಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಜಾಕಿ-42’ ಇದೇ ಡಿಸೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಜಯಣ್ಣ ಫಿಲ್ಮ್ಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಭಾರತಿ ಸತ್ಯನಾರಾಯಣ ನಿರ್ಮಾಣದಲ್ಲಿ ಗೋಲ್ಡನ್ ಗೇಟ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕುದುರೆ ರೇಸ್‌ನ ರೋಚಕತೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆ ಹೆಣೆಯಲಾಗಿದ್ದು, ಅದರೊಂದಿಗೆ ಕೌಟುಂಬಿಕ ಭಾವನೆಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಮನರಂಜನೆಯ ಜೊತೆಗೆ ಭಾವನಾತ್ಮಕ ಅಂಶಗಳನ್ನೂ ಒಳಗೊಂಡಿರುವ ವಿಭಿನ್ನ ಕಥಾಹಂದರ ಚಿತ್ರದಲ್ಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.

1000464751

ಚಿತ್ರದಲ್ಲಿ ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ಅಭಿನಯಿಸಿದ್ದಾರೆ. ಇವರೊಂದಿಗೆ ಯುಕ್ತ, ದೀಪಕ್ ರೈ, ಬಾಲರಾಜ್ ವಾಡಿ, ಶಾಂತಲಾ ಕಾಮತ್, ರಾಜೇಂದ್ರ ಕಾರಂತ್, ಮಧುಸೂಧನ್, ಗಿರೀಶ್ ಹೆಗ್ಡೆ, ಅರುಣ್ ಆಚಾರ, ಚೇತನ್ ರೈ ಮಣಿ, ಹರ್ಷಿತ್ ಗೌಡ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ವಿನೋದ್ ಯಜಮಾನ್ಯ ಸಂಗೀತ ಸಂಯೋಜನೆ ಮಾಡಿದ್ದು, ಒಟ್ಟು ಮೂರು ಹಾಡುಗಳಿವೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿದ್ದು, ಮೂರನೇ ಹಾಡು ಇದೇ ನವೆಂಬರ್ 17ರಂದು ಬಿಡುಗಡೆಯಾಗಲಿದೆ.

ರಾಘವೇಂದ್ರ ಬಿ. ಕೋಲಾರ್ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ. ಅವರ ಸಂಕಲನ ಹಾಗೂ ಭೂಷಣ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

ಕುದುರೆ ರೇಸ್‌ನ ರೋಚಕ ಸನ್ನಿವೇಶಗಳು, ಪ್ರೀತಿ, ಸಂಬಂಧಗಳು ಮತ್ತು ಕೌಟುಂಬಿಕ ಭಾವನೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ‘ಜಾಕಿ-42’ ಡಿಸೆಂಬರ್ 18ರಂದು ಜಯಣ್ಣ ಫಿಲ್ಮ್ಸ್ ಮೂಲಕ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ