ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ
‘ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ’ ಎಂಬುದು ಕನ್ನಡದ ಒಂದು ಜನಪ್ರಿಯ ಗಾದೆ ಮಾತಾಗಿದೆ. ಇದನ್ನು ಕೆಲವೊಮ್ಮೆ ‘ಬೆರಳಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರಂತೆ’ ಎಂದೂ ಬಳಸುತ್ತಾರೆ. ಅತ್ಯಂತ ಸುಲಭವಾಗಿ ಮತ್ತು ಶಾಂತಿಯುತವಾಗಿ ಬಗೆಹರಿಯುವ ಸಣ್ಣ ಸಮಸ್ಯೆಗೆ ಅನಗತ್ಯವಾಗಿ ದೊಡ್ಡ ಮಟ್ಟದ ಪ್ರಯತ್ನ ಅಥವಾ ಕಠಿಣ ಕ್ರಮ ಕೈಗೊಳ್ಳುವುದನ್ನು ಈ ಗಾದೆ ಸೂಚಿಸುತ್ತದೆ. ಉಗುರಿನಿಂದ ಸುಲಭವಾಗಿ ಚಿವುಟಿ ತೆಗೆಯಬಹುದಾದ ಸಣ್ಣ ಕಡ್ಡಿ ಅಥವಾ ಚಿಗುರನ್ನು ಕಡಿಯಲು ದೊಡ್ಡ ಕೊಡಲಿಯನ್ನು ಬಳಸಿದರೆ ಅದು ಮೂರ್ಖತನವಾಗುತ್ತದೆ. ಅದೇ ರೀತಿ, ಮಾತುಕತೆಯಿಂದ ಬಗೆಹರಿಯುವ ಸಣ್ಣ ಜಗಳಕ್ಕೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವುದು ಈ ಗಾದೆಗೆ ನಿದರ್ಶನವಾಗಿದೆ.
ಈ ಗಾದೆಗೆ ಸರಿಯಾದ ಉದಾಹರಣೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ನಲ್ಲಿ ನಡೆದಿರುವ ಘಟನೆಯೊಂದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆ.ಆರ್. ಪೇಟೆಗೆ ತೆರಳಬೇಕಿದ್ದ ಮುಸ್ಲಿಂ ದಂಪತಿ ತಪ್ಪಾಗಿ ಶಿವಮೊಗ್ಗ ಮಾರ್ಗದ ಬಸ್ ಹತ್ತಿದಾಗ, ನಿರ್ವಾಹಕ ಅವರೊಂದಿಗೆ ವಾಗ್ವಾದ ನಡೆಸಿ, ‘ಇದು ಅಫ್ಘಾನಿಸ್ತಾನನಾ? ಪಾಕಿಸ್ತಾನನಾ?’ ಎಂಬ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಹೇಳಿಕೆ ನೀಡಿದ್ದಾರೆ. ಈ ಮಾತು ಪ್ರಯಾಣಿಕರ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಅವಹೇಳನಕಾರಿ ಹೇಳಿಕೆಯೆಂದು ಆರೋಪಿಸಿ, ಸಕಲ ಮುಸಲ್ಮಾನರ ಸ್ವಘೋಷಿತ ರಕ್ಷಕ ಅಬ್ದುಲ್ ರಜಾಕ್ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಬಂದು, ಕಾಂಗ್ರೆಸ್ ಸರ್ಕಾರದೊಂದಿಗಿರುವ ತನ್ನ ಧರ್ಮದ ದರ್ಪವನ್ನು ಪ್ರಯೋಗಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಆ ದೂರಿನ ಪ್ರತಿಯನ್ನು ಕಂಡಕ್ಟರ್ ಅವರ ಡಿಪೋ ಮ್ಯಾನೇಜರ್ ಅವರಿಗೂ ನೀಡಿ ಅವರನ್ನು ಅಮಾನತುಗೊಳಿಸುವಂತೆ ಮಾಡಿಸಿ, ತಾನೊಬ್ಬ ಜಾತ್ಯತೀತವಾದಿ ಎಂದು ಹಾರಾಡುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, KA-42-F-2253 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತಿತ್ತು. ಮೌಲಾನಾ ಸಾಹೇಬ್ ಮತ್ತು ಅವರ ಪತ್ನಿ ಕೆ.ಆರ್. ಪೇಟೆಗೆ ತೆರಳಬೇಕಾಗಿದ್ದು, ತಿಳಿದೋ ಅಥವಾ ತಿಳಿಯದೆಯೋ ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ಹತ್ತಿ ಮಧ್ಯಭಾಗದ ಆಸನದಲ್ಲಿ ಕುಳಿತಿದ್ದರು. ಆಗಲೇ ತಡವಾಗಿದ್ದ ಕಾರಣ ಚಾಲಕರೂ ತುಸು ವೇಗವಾಗಿ ಬಸ್ ಚಲಾಯಿಸುತ್ತಿದ್ದರು. ನಿರ್ವಾಹಕರು ಟಿಕೆಟ್ ನೀಡುವ ಸಮಯದಲ್ಲಿ ಮೌಲಾನಾ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕೂಡಲೇ ಬಸ್ ನಿಲ್ಲಿಸುವಂತೆ ಮನವಿ ಮಾಡಿದಾಗ, ವಿಪರೀತ ಜನಸಂದಣಿಯ ನಡುವೆಯೂ ಚಾಲಕರು ಮತ್ತು ನಿರ್ವಾಹಕರು ಬಸ್ ನಿಲ್ಲಿಸಿ, ಗಂಡ ಮತ್ತು ಹೆಂಡತಿಗೆ ಬಸ್ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಮಧ್ಯೆ, ಅವರು ಇಳಿಯುವುದು ಸ್ವಲ್ಪ ತಡವಾದಾಗ ತುಸು ಬೇಸರಗೊಂಡ ನಿರ್ವಾಹಕರು, ಕೇಳದೇ-ಕೇಳಿಸದೇ ಬಸ್ ಹತ್ತಿಬಿಡುತ್ತಾರೆ ಮತ್ತು ಇಳಿಯುವಾಗ ನಿಧಾನ ಮಾಡುತ್ತಾರೆ. ಈಗಾಗಲೇ ತಡವಾಗಿದ್ದು, ಮತ್ತಷ್ಟು ತಡ ಮಾಡಿದರೆ ಡಿಪೋ ಮ್ಯಾನೇಜರ್ ನಮ್ಮನ್ನು ಬೈಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮದೇ ತಪ್ಪಿದ್ದರೂ ಅಷ್ಟಕ್ಕೇ ಸುಮ್ಮನಾಗದ ಮೌಲಾನಾ ದಂಪತಿಗಳು, ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ, “ಕೆ.ಆರ್. ಪೇಟೆಗೆ ಬಾ, ನೋಡಿಕೊಳ್ಳುತ್ತೇವೆ” ಎಂದು ಕರ್ತವ್ಯ ನಿರತನಾಗಿದ್ದ ಸರ್ಕಾರಿ ನೌಕರನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ಬಸ್ ನಿರ್ವಾಹಕರೂ ಬಸ್ನ ಗಮ್ಯಸ್ಥಾನದ ಫಲಕವನ್ನು ನೋಡದೆ ಏಕೆ ಹತ್ತಿದ್ದೀರಿ ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನಂತರ ಕೋಪದಲ್ಲಿ, “ಕೆ.ಆರ್. ಪೇಟೆ ಇರೋದೋ ಅಫ್ಘಾನಿಸ್ತಾನದಲ್ಲಾ, ಇಲ್ಲಾ ಪಾಕಿಸ್ತಾನದಲ್ಲಾ?” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.





