– ರಾಘವೇಂದ್ರ ಅಡಿಗ ಎಚ್ಚೆನ್.
ಚಯನ್ ಶೆಟ್ಟಿ ನಿರ್ದೇಶನದ, ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ ಚಿತ್ರ ಮ್ಯಾರೇಜ್ ಪಾರ್ಟಿ. ಕಡಲ ತಡಿಯ ಮಜವಾದ ಕಥೆಯನ್ನೊಳಗೊಂಡಿರೋ ಈ ಚಿತ್ರ, ಗಲಾಟೆ ಸಾಂಗ್ ಮೂಲಕ ಇದೀಗ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದೆ. ಆ ಪಾರ್ಟಿ ಹಾಡು ಹಬೆಯಾಡುತ್ತಿರುವಾಗಲೇ, ಚಿತ್ರತಂಡ `ಅಂದಗಾತಿಯೇ’ ಎಂಬ ಲಿರಿಕಲ್ ಸಾಂಗನ್ನು ಬಿಡುಗಡೆಗೊಳಿಸಿದೆ.
ಪ್ರೀತಿಯ ನವಿರು ಭಾವಗಳಿಂದ ಮೈದುಂಬಿಕೊಂಡಂತಿರೋ ಈ ಹಾಡಿನ ಮೂಲಕ ಮ್ಯಾರೇಜ್ ಪಾರ್ಟಿಯ ಮತ್ತೊಂದು ಮಜಲು ಅನಾವರಣಗೊಂಡಿದೆ.
ಮೊದಲಾ ಮಳೆಹನಿ ಎದೆಯೊಳಗಡೆ ಇಳಿದು… ಅಂತ ಶುರುವಾಗೋ ಅಂದಗಾತಿಯೇ ಲಿರಿಕಲ್ ಹಾಡು ರೊತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ.
ಕಪಿಲ್ ಕಪಿಲನ್ ಮತ್ತು ಸುಮನ್ ನಾರಾಯಣ್ ಧ್ವನಿಯಲ್ಲಿ ಮೂಡಿ ಬಂದಿರೋ ಸದರಿ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ನಿರ್ದೇಶಕರು ಮ್ಯಾರೇಜ್ ಪಾರ್ಟಿಯ ಕಥಾ ಹಂದರದಲ್ಲಿ ಎಂತೆಂಥಾ ಅಂಶಗಳಿದ್ದಾವೆಂಬ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು.
ವಾರಗಳ ಹಿಂದೆ ಬಿಡುಗಡೆಗೊಂಡಿದ್ದ ಗಲಾಟೆ ಸಾಂಗ್ ಅದರಲ್ಲೊಂದು ಭಾವವನ್ನು ಹಿಡಿದಿಟ್ಟುಕೊಂಡಿದ್ದು, ಅಂದಗಾತಿಯೇ ಹಾಡಿನ ಮೂಲಕ ಪ್ರೇಮಕಥನದ ಛಾಯೆ ಜಾಹೀರಾಗಿದೆ.
ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ ಮ್ಯಾರೇಜ್ ಪಾರ್ಟಿ ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.





