ಕಥೆ – ಡಾ. ದೀಪಾ ಹಿರೇಮಠ
ಎಲ್ಲರ ಪಾಲಿಗೂ ವೈವಾಹಿಕ ಜೀವನ ನೇರ ಸರಳರೇಖೆಯಾಗಿರಲು ಸಾಧ್ಯವಿಲ್ಲ. ಕಾಲ ಎಷ್ಟೇ ಆಧುನಿಕವಾಗಿದ್ದರೂ, ಸಂಸಾರಕ್ಕೆ ಹೆಣ್ಣೇ ಸಾರಥಿ. ಸಹನೆಯೇ ಅವಳ ಮೂಲಗುಣ. ಇದನ್ನು ರೇವತಿ ಅನಿತಾಳಿಗೆ ಅರಿವಾಗುವಂತೆ ವಿವರಿಸಿದಾಗ, ಕ್ಷಮಯಾ ಧರಿತ್ರಿಯಾದ ಅನಿತಾ ತನ್ನ ಸಂಸಾರ ಉಳಿಸಿಕೊಂಡಿದ್ದು ಹೇಗೆ……?
ದೊಡ್ಡ ಕಿಟಕಿಯ ಹಿಂದೆ ಕುಳಿತಿದ್ದ ಅಮಿತ್, ಕೆಳಗಡೆ ರೋಡಿನಲ್ಲಿ ಕಾರುಗಳು ತಾ ಮುಂದು ನಾ ಮುಂದು ಎನ್ನುತ್ತಾ ಸಾಗುತ್ತಿದ್ದ ಕಡೆ ದೃಷ್ಟಿ ನೆಟ್ಟಿತ್ತು. ಆದರೆ ಮನದಲ್ಲಿ ಆಂದೋಲನವೇ ನಡೆದಿತ್ತು. ಕೆಲಸದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ನಿಭಾಯಿಸುತ್ತೇನೆ ಎಂದು ಧೈರ್ಯದಿಂದ ಮುನ್ನುಗ್ಗುವ ಅಮಿತ್ ಗೆ ಸಂಬಂಧಗಳ ನಡುವಿನ ಸಂಘರ್ಷವನ್ನು ಹೇಗೆ ಸರಿಪಡಿಸುವುದು ಎನ್ನುವುದೇ ಒಂದು ದೊಡ್ಡ ಚಿಂತೆಯಾಗಿ ಕಾಡುತ್ತಿತ್ತು.
ಯೋಚಿಸುತ್ತಿದ್ದವನ ಭುಜದ ಮೇಲೆ ಬಿದ್ದ ಮೃದುವಾದ ಸ್ಪರ್ಶವನ್ನು ಅನುಭವಿಸಲಾರದೆ ಕುಳಿತಿದ್ದ ಅಮಿತ್ ನ ಪಕ್ಕದಲ್ಲಿ ಕುಳಿತ ರೇವತಿ, ಗಂಡನ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು, “ನೀವು ಈ ರೀತಿಯಾಗಿ ಕುಳಿತರೆ ನನಗೆ ನೋಡಲಾಗದು. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇದೆ. ಆ ಪರಿಹಾರವನ್ನು ಕಂಡುಹಿಡಿಯಬೇಕು, ಅಷ್ಟಾಗಿಯೂ ನಮ್ಮ ಹತ್ತಿರ ಸಮಸ್ಯೆಗೆ ಪರಿಹಾರ ಇಲ್ಲವೆಂದರೆ ಸಮಯಕ್ಕೆ ಬಿಟ್ಟುಬಿಡೋಣ. ತಾಳ್ಮೆ ಎಲ್ಲವನ್ನೂ ಕಲಿಸುತ್ತದೆ,” ಎಂದು ಮೃದುವಾಗಿ ಹೇಳಿದಳು.

“ರೇವತಿ, ಸಮಸ್ಯೆಗಳಿಗೆ ತಾಳ್ಮೆಯೇ ಪರಿಹಾರ. ಆ ತಾಳ್ಮೆಯೇ ಅವಳಲ್ಲಿ ಇಲ್ಲ ಎಂದರೆ ನಾನೇನು ಮಾಡಲಿ? ಸಮಸ್ಯೆಗೆ ಪರಿಹಾರವಿದೆ. ಆದರೆ ಆ ಪರಿಹಾರವನ್ನು ಅವಳು ಉಪಯೋಗಿಸುತ್ತಿಲ್ಲ. ಅವಳಿಗೆ ತಿಳಿಸಿ ಹೇಳುವವರು ಯಾರು….? ನನ್ನ ಮಾತನ್ನಂತೂ ಕೇಳುತ್ತಿಲ್ಲ. ತನ್ನ ಜೀವನವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾಳೆ. ನಾನೇನು ಮಾಡಲಿ?
“ನನ್ನ ತಂಗಿಯ ಜೀವನ ಈ ರೀತಿ ಹಾಳಾಗುವುದನ್ನು ನನ್ನಿಂದ ನೋಡಲಾಗದು. ಮದುವೆಯಾಗಿ ಎರಡು ವರ್ಷವಾಗಿದೆ ಅಷ್ಟೇ. ಅಮ್ಮ ಇವಳ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾಳಂತೆ. ನಾನೇನು ಮಾಡಲಿ ನೀನೇ ಹೇಳು,” ಎಂದು ಹತಾಶನಾಗಿ ಮಡದಿಯನ್ನೇ ದಿಟ್ಟಿಸುತ್ತಾ ಹೇಳಿದ.
“ಅಮಿತ್, ಮುಂದಿನ ವಾರ ನಾನೇ ಇಂಡಿಯಾಗೆ ಹೋಗಿಬರುವೆ. ಅವಳು ನನ್ನ ನಾದಿನಿ ಮಾತ್ರವಲ್ಲ, ನನ್ನ ಗೆಳತಿ ಕೂಡ. ಅದು ನಿಮಗೂ ಗೊತ್ತು. ಅದಕ್ಕೆ ನಾನವಳ ಜೊತೆ ಮಾತಾಡುವೆ, ಅವಳಿಗೆ ತಿಳಿಸಿ ಹೇಳುವೆ,” ಎಂದು ರೇತಿ ಗಂಡನಿಗೆ ಆಶ್ವಾಸನೆ ಕೊಟ್ಟಳು.
ಹೆಂಡತಿಯ ಮಾತಿನಿಂದ ಅಮಿತ್ ಗೆ ಆ ಕ್ಷಣಕ್ಕೆ ಸಮಾಧಾನವಾಯಿತು. ಆದರೆ ಮೊಂಡು ಹುಡುಗಿ, ಸದಾ ತನ್ನದೇ ಹಠ ಆಗಬೇಕೆನ್ನುವ ತಂಗಿ ಅಷ್ಟು ಸುಲಭವಾಗಿ ಒಪ್ಪುತ್ತಾಳೆ ಎಂಬ ನಂಬಿಕೆ ಅವನಿಗಿರಲಿಲ್ಲ. ಆದರೂ ಪ್ರಯತ್ನ ಮಾಡಿ ನೋಡೋಣ ಎಂದುಕೊಂಡು, “ನಾನು ಟಿಕೆಟ್ ವ್ಯವಸ್ಥೆ ಮಾಡ್ತೀನಿ. ನೀನು ಹೋಗಿ ಬಾ,” ಎಂದ.
ರೇವತಿಯ ಎಂಜಿನಿಯರಿಂಗ್ ಫ್ರೆಂಡ್ ಅನಿತಾ. `ನಾನು ಅಮಿತ್ ನನ್ನು ಪ್ರೀತಿಸುತ್ತಿದ್ದೇನೆ,’ ಎಂದು ರೇವತಿ ಹೇಳಿದಾಗ ಅನಿತಾ ತುಂಬಾ ಖುಷಿಪಟ್ಟಿದ್ದಳು. ಎರಡು ಕುಟುಂಬಗಳ ಮಧ್ಯೆ ನಿಂತು ಇವರ ಮದುವೆ ಮಾಡಿಸಿದ್ದಳು. ಇಂದು ತಾನು ಅವಳ ಮದುವೆ ಮುರಿಯದ ಹಾಗೆ ಕಾಪಾಡಲು ಅವಳಿಗೆ ಸಹಾಯ ಮಾಡಲೇಬೇಕು ಎಂದು ತೀರ್ಮಾನಿಸಿ, ಆಫೀಸಿಗೆ ಒಂದು ವಾರ ರಜೆಗಾಗಿ ಮೇಲ್ ಹಾಕಿ ಬ್ಯಾಗ್ ಪ್ಯಾಕ್ ಮಾಡಲು ಅಣಿಯಾದಳು.
ಇಂಡಿಯಾಗೆ ಬಂದ ರೇವತಿ ನೇರ ಬೆಂಗಳೂರಿಗೆ ಹೋಗಿ ಅತ್ತೆಮಾವನನ್ನು ಭೇಟಿಯಾಗಿ ಅವರಿಗೂ ಆಶ್ವಾಸನೆ ಕೊಟ್ಟು ನಾದಿನಿಯ ಮನೆಗೆ ಹೊರಟಳು. ಆ ದಿನ ಅನಿತಾ ರಜೆಯಲ್ಲಿರುವುದು ರೇವತಿಗೆ ಗೊತ್ತಿತ್ತು. ಮನೆಯಲ್ಲಿ ಯಾರೂ ಇಲ್ಲವೆಂದು ಅರಿತು ಡೋರ್ ಬೆಲ್ ಒತ್ತಿದಳು. ಬಾಗಿಲು ತೆರೆದ ಅನಿತಾಳಿಗೆ ರೇವತಿಯನ್ನು ಕಂಡೊಡನೆ ಅತ್ಯಾಶ್ಚರ್ಯ! ಅಣ್ಣ ಅತ್ತಿಗೆ ಇಬ್ಬರೂ ವರ್ಷಕ್ಕೊ ಅಥವಾ ಎರಡು ವರ್ಷಕ್ಕೆ ಒಮ್ಮೆಯೇ ಬರುತ್ತಿದ್ದುದು. ಒಮ್ಮೆಲೇ ಅತ್ತಿಗೆ ಯಾ ಗೆಳತಿ ರೇವತಿ ಹೇಗೆ…. ಆಶ್ಚರ್ಯ ಹಾಗೂ ಸಂತೋಷದಿಂದ ಅಪ್ಪಿಕೊಂಡಳು. ಏಕೋ ಅನಿತಾಳಿಗೆ ಸಂಕಟವಾಗಿ ಕಣ್ಣಲ್ಲಿ ನೀರು ಜಿನುಗಿತು.
“ಏನಿದೂ ಕನಸಾ…. ನನಸಾ… ಅರ್ಥವಾಗುತ್ತಿಲ್ಲ. ಸಡನ್ ಆಗಿ ಹೇಗೆ….” ಎಂದು ಅನಿತಾ ಕಣ್ಣರಳಿಸಿ ಕೇಳಿದಳು.
“ಮೊದಲು ಒಂದು ಕಪ್ ಕಾಫಿ ಮಾಡಿಕೊಡು. ಜೆಟ್ ಲಾಗ್ ನಿಂದ ತಲೆ ಸಿಡಿತಾ ಇದೆ,” ಎಂದಳು ರೇವತಿ.
“ಆಯ್ತು ಬಾ ಕುಳಿತುಕೋ… ನಾನು ಮಾಡಿಕೊಡ್ತೀನಿ,” ಎಂದು ಅಡುಗೆಮನೆಗೆ ಹೋದಳು.
ಇಬ್ಬರ ಕೈಯಲ್ಲೂ ಕಾಫಿ ಕಪ್. ಆದರೆ ಮಾತಿಲ್ಲದ ಮೌನ ಆವರಿಸಿತು. ರೇವತಿಯೇ ಮಾತಿಗೆ ಚಾಲ್ತಿ ಕೊಟ್ಟು ಮೌನ ಮುರಿದಳು.
“ಅನಿತಾ, ನಾನು ನಿನಗೆ ಒಂದು ಕಥೆ ಹೇಳುವೆ ಕೇಳ್ತೀಯಾ…..?” ಎಂದಳು ರೇವತಿ.
“ಅಮೆರಿಕಾದಿಂದ ನನಗೆ ಕಥೆ ಹೇಳಲು ಬಂದಿದ್ದೀಯಾ….?” ಎಂದು ಅನಿತಾ ಕಿಚಾಯಿಸಿದಳು.
“ಹಾಗೆ ತಿಳಿದುಕೋ…..” ಎನ್ನುತ್ತಾ ಕಥೆ ಆರಂಭಿಸಿದಳು.
“ಇಬ್ಬರು ನವ ಜೋಡಿಗಳು. ವಧು ನೂರಾರು ಕನಸು ಹೊತ್ತ ಭಾವನಾ ಜೀವಿ, ಗಂಡನ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದಳು. ಆದರೆ ತುಂಬಾ ಪ್ರಾಕ್ಟಿಕಲ್ ಆದ ಗಂಡ, ಹೆಂಡತಿಯನ್ನು ಆದರದಿಂದಲೇ ಬರಮಾಡಿಕೊಂಡ. ಆದರೆ ಅವನದು ಕ್ಯಾಲ್ಕಲೇಶನ್ ಮೈಂಡ್. ಯಾರಿಂದ ತನಗೆ ಏನು ದೊರೆಯುತ್ತದೆ, ಯಾವ ಉಪಯೋಗವಿದೆ ಎಂದು ಸದಾ ಯೋಚಿಸುತ್ತಿದ್ದ. ಈ ಗುಣ ದಿನ ಕಳೆಯುತ್ತಾ ಅವಳಿಗೆ ಅರ್ಥವಾಯಿತು.
“ಒಂದು ಸಣ್ಣ ತಪ್ಪಾದರೂ ಎಲ್ಲರ ಎದುರು ಹೆಂಡತಿಯನ್ನು ಬಯ್ಯುತ್ತಿದ್ದ. ಏನಾದರೂ ಮಾಡುವೆ ಎಂದು ಹೇಳಿದರೆ, ಅದು ಬೇಡ…. ಇದು ಮಾಡು…. ಹೀಗೆ ಮಾಡು….. ಹಾಗೆ ಮಾಡು…. ಏನಾದರೂ ಹೊಸದನ್ನು ಮಾಡಿದರೆ ಏಕೆ ಹೀಗೆ ಮಾಡಿದೆ….? ಮಾಡಲಿಲ್ಲವೆಂದರೆ…. ಹೀಗೇಕೆ ಮಾಡಲಿಲ್ಲ…. ಕುಳಿತರೆ ಏಕೆ ಕುಳಿತೆ…. ಎದ್ದರೆ ಏಕೆ ಎದ್ದೆ…. ಹೀಗೆ ಪ್ರತಿಯೊಂದರಲ್ಲೂ ತಪ್ಪು ಕಂಡುಹಿಡಿಯುವುದು ಅವನ ಸ್ವಭಾವ.
“ಹೆಂಡತಿಯ ಜೀವನ ನರಕ ಸದೃಶವಾಯಿತು. ಅವಳು ಅಂದುಕೊಂಡಿದ್ದೇ ಬೇರೆ. ಇಲ್ಲಿ ಆಗುತ್ತಿರುವುದೇ ಬೇರೆ. ಅವಳಿಗೆ ಶಾರೀರಿಕ ಹಿಂಸೆಯೇನೂ ಇಲ್ಲದಿದ್ದರೂ ಮಾನಸಿಕ ಹಿಂಸೆ ಅಧಿಕವಾಗಿತ್ತು. ಏನಾದರೂ ಕೇಳಿದರೆ ಜೋರಾಗಿ ಕಿರುಚುವುದು, ಪ್ರತಿಯೊಂದು ಎಲ್ಲೋ ತಿರುಗಿ ಎಲ್ಲಿಗೋ ಹೋಗಿ ಜಗಳದಲ್ಲಿ ಕೊನೆಗೊಳ್ಳುತ್ತಿತ್ತು. ಅವಳ ಪ್ರತಿ ಮಾತಿಗೂ ಸ್ಪಂದನವೇ ಇರಲಿಲ್ಲ.
“ತನ್ನ ಜೀವನವನ್ನೇ ಗಂಡ, ಮನೆ ಎಂದು ಮುಡಿಪಾಗಿಟ್ಟು, ಹೀಗೆ ಬದುಕಬೇಕು ಹಾಗೆ ಬದುಕಬೇಕು ಎಂದು ಕನಸು ಕಂಡ ಆಕೆಗೆ ಜೀವನದಲ್ಲಿ ನಿರಾಶೆ, ಹತಾಶೆ ಬಿಟ್ಟು ಬೇರೇನೂ ಸಿಗಲಿಲ್ಲ.
“ಆದರೆ ಅವಳ ಊಟ ತಿಂಡಿಗೆ ಕೊರತೆ ಇರಲಿಲ್ಲ. ಜೀವನದ ಎಲ್ಲಾ ಸೌಕರ್ಯಗಳು ಅವಳಿಗಿದ್ದ. ಆದರೆ ಗಂಡನ ವರ್ತನೆ ಅವಳಿಗೆ ತುಂಬಾ ಹಿಂಸೆ ಆಗುತ್ತಿತ್ತು. ಯಾರಲ್ಲಿ ಹೇಳಿಕೊಳ್ಳಲೂ ಆಗದು. ಹೇಳಿಕೊಂಡರೆ ದೊಡ್ಡ ವಿಚಾರವೇನಲ್ಲ….. ಏನು ಮಾಡಲಿ ಎಂದು ಯೋಚಿಸಿದ ಅವಳು ತಾಳ್ಮೆಯಿಂದ ನಡೆದುಕೊಂಡರೆ ತನ್ನ ನಡುವಳಿಕೆಯನ್ನು ನೋಡಿ ಗಂಡ ಬದಲಾಗಬಹುದೆಂಬ ನಂಬಿಕೆಯಿಂದ ತನ್ನಲ್ಲಿ ತಾನೇ ಚಿಕ್ಕ ಚಿಕ್ಕ ಬದಲಾವಣೆಗಳನ್ನು ತಂದುಕೊಂಡಳು.
“ಗಂಡನಿಗೆ ಗೊತ್ತಾಗದ ಹಾಗೆ ಅವನಿಗೆ ಹೇಗೆ ಬೇಕೋ ಹಾಗೆ ಇರುತ್ತಾ, ಅವನನ್ನು ಒಂದಿಷ್ಟು ಬದಲಾಯಿಸಲು ಪ್ರಯತ್ನಪಟ್ಟಳು. ಅವಳ ತಾಳ್ಮೆಯ ಫಲವಾಗಿ ಇಂದು ಅವಳ ಸಂಸಾರ ಸುಖದಲ್ಲಿ ತೇಲುತ್ತಿದೆ. ಅಂದುಕೊಂಡ ಕನಸು ನನಸಾಗಿದೆ. ಇಬ್ಬರು ಮಕ್ಕಳು, ಪ್ರೀತಿ, ಕಾಳಜಿ, ಗೌರವದಿಂದ ನೋಡಿಕೊಳ್ಳುವ ಗಂಡ. ಮದುವೆಯಾದ ಹೊಸದರಲ್ಲಿದ್ದ ಗಂಡ ಇವನೇನಾ ಎನ್ನುವ ಹಾಗೆ ಬದಲಾಗಿದ್ದ. ಬದಲಾಯಿಸಿದ್ದು ಅವಳ ತಾಳ್ಮೆ!”
ಎಲ್ಲವನ್ನೂ ಕೇಳುತ್ತಾ ಕುಳಿತಿದ್ದ ಅನಿತಾ, ಉಸಿರನ್ನು ಹೊರಗೆ ದಬ್ಬಿ, “ನೀನು ಯಾವುದೋ ಕಾಲದ ಕಥೆಯನ್ನು ಈಗ ಹೇಳ್ತಿದ್ದಿಯಾ….. ಆದರೆ ಈಗ ಕಾಲ ಬದಲಾಗಿದೆ. ಅವಳು ಹೊರಗಡೆ ಹೋಗಿ ದುಡಿಯಲು ಅಶಕ್ತಳಿದ್ದಿರಬಹುದು. ಇಲ್ಲೀ ಒಬ್ಬಳೇ ಸ್ವತಂತ್ರವಾಗಿ ಬದುಕಲು ಭಯವಿದ್ದಿರಬಹುದು. ಅದಕ್ಕಾಗಿಯೇ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ ಅಷ್ಟೇ…..” ಎಂದಳು ನಿರ್ಲಿಪ್ತವಾಗಿ.
“ನೀನಂದುಕೊಂಡಂತೆ ಆಗಿದ್ದರೆ ಅವಳು ಆ ದಿನ ಗಂಡನ ವರ್ತನೆಯಿಂದ ಹೊರಗಡೆ ಬಂದಿದ್ದರೆ ಇಂದು ಅವಳು ಸುಖವಾಗಿ ಇರುತ್ತಿದ್ದಳಾ……? ನೀನೇ ಯೋಚನೆ ಮಾಡು. ನಮ್ಮ ದೇಶ ಎಷ್ಟೇ ಮುಂದುವರಿದರೂ ಈ ಸಮಾಜ ಒಂದು ಹೆಣ್ಣಿಗೆ ಅದರಲ್ಲೂ ಗಂಡಬಿಟ್ಟ ಹೆಣ್ಣಿಗೆ ಅವಳು ಎಷ್ಟೇ ದೊಡ್ಡ ಸ್ತರದಲ್ಲಿ ಕೆಲಸ ಮಾಡುತ್ತಿದ್ದರೂ ನೋಡುವ ದೃಷ್ಟಿಯೇ ಬೇರೆ. ಅದು ಬಿಡು… ಅವಳು ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಸುಖವಾಗಿ ಬದುಕುತ್ತಿದ್ದಳಾ….? ಯೋಚಿಸಿ ನೋಡು ಅನಿತಾ….”
“ರೇವತಿ…. ನಿನಗೆ ನಿನ್ನನ್ನು ಪ್ರೀತಿಸಿ, ಗೌರವಿಸುವಂತಹ ಗಂಡ ನನ್ನ ಅಣ್ಣ ಸಿಕ್ಕಿದ್ದಾನೆ. ಅದೇ ರೀತಿ ನಿನ್ನ ತಾಯಿ ತಂದೆಗೂ ಅವರಂದುಕೊಂಡ ಹಾಗೆ ಅನುಸರಣೆಯ ಸಂಗಾತಿಗಳು ಸಿಕ್ಕಿದ್ದಾರೆ. ನಿಮ್ಮ ಮನೆಗೆ ಬಂದಾಗ ಆಂಟಿ ಆಂಕಲ್ ರದು ಎಷ್ಟು ಅನ್ಯೋನ್ಯ ದಾಂಪತ್ಯವೆಂದು ನಾನೇ ಕಣ್ಣಾರೆ ನೋಡಿದ್ದೇನೆ. ಅದಕ್ಕೆ ನಿನಗೆ ಇದೆಲ್ಲ ಸುಲಭ ಅನಿಸ್ತಿದೆ. ಆದರೆ ಅನುಭವಿಸಿದವರಿಗೇ ಗೊತ್ತು….”
ರೇವತಿ ಅವಳನ್ನು ನೋಡಿ ನಗುತ್ತಾ, “ನಾನು ಇಷ್ಟು ಹೊತ್ತು ಹೇಳಿದ ಕಥೆ ಯಾರದ್ದು ಅಂದ್ಕೊಂಡೆ? ನನ್ನ ತಾಯಿ ತಂದೆಯರದು. ನನ್ನ ತಾಯಿ ಎಂ.ಟೆಕ್ ಮಾಡಿದ್ದಾರೆ. ಅವರಿಗೆ ಹೊರಗಡೆ ಹೋಗಿ ದುಡಿಯುವ ಹಾಗೂ ಧೈರ್ಯದಿಂದ ಒಬ್ಬಳೇ ಇರುವ ಎಲ್ಲ ದಾರಿಗಳೂ ಇದ್ದವು. ನನ್ನ ತಾಯಿ ಆ ದಿನ ತಾಳ್ಮೆ ತೆಗೆದುಕೊಳ್ಳದೇ ಇದ್ದಿದ್ದರೆ ಇಂದು ನಾನು ನಿನ್ನ ಮುಂದೆ ಈ ರೀತಿ ಕುಳಿತುಕೊಳ್ಳುತ್ತಿರಲಿಲ್ಲ.
“ನೀನೇ ಹೇಳಿದ ಹಾಗೆ ನಮ್ಮ ಮನೆ ನಂದಗೋಕುಲವಾಗಿದೆ. ಭೀಷ್ಮ ಪಿತಾಮಹಾ ಹೇಳಿದ ಹಾಗೆ 12 ವರ್ಷ ಸತತ ತಾಳ್ಮೆಯಿಂದ ಯಾವುದೇ ಒಂದು ಮಾಡಿದರೂ ಅದರ ಫಲ ಸಿಕ್ಕೇ ಸಿಗುತ್ತದೆ ಎಂದು. ನಾವು ಅಷ್ಟು ವರ್ಷ ತಾಳ್ಮೆಯಿಂದ ನಿಲ್ಲುವುದು ಬೇಡ. ಒಂದಷ್ಟು ವರ್ಷ ಅವರಿಗೂ ಸಮಯ ಕೊಡು, ನಿನ್ನ ಬಗ್ಗೆ ಅರಿತುಕೊಳ್ಳಲಿ.
“ನನ್ನ ಹೆಂಡತಿ ಎನ್ನುವ ಗೌರವ ಬರಲು ಅವರಿಗೂ ಸ್ವಲ್ಪ ಸಮಯ ಬೇಕು. ನಿನ್ನ ಗಂಡನೇನು ಅಂಥ ಕಠೋರ ಮನಸ್ಥಿತಿ ಇರುವ ಮನುಷ್ಯನಲ್ಲ. ನಿನ್ನ ಮುಂದೆ ಇಡೀ ಜೀವನವಿದೆ. ಇನ್ನೊಮ್ಮೆ ಯೋಚಿಸು,” ಎಂದು ಹೊರಟಳು.
“ರೇವತಿ ನಿಂತುಕೋ. ಎಲ್ಲಿ ಹೊರಟೆ….?”
“ಇಲ್ಲಮ್ಮಾ….. ನನಗೆ ನಿದ್ದೆ ಬರ್ತಾ ಇದೆ. ನಾನು ಇನ್ನೂ ಅಮ್ಮನ ಮನೆಗೆ ಹೋಗಿಲ್ಲ. ಮೊದಲು ಮನೆಗೆ ಹೋಗಿ ಚೆನ್ನಾಗಿ ನಿದ್ದೆ ಮಾಡಬೇಕು. ನಾಳೆ ಎದ್ದು ಅಮ್ಮನ ಮನೆಗೆ ಹೋಗಿ ಮತ್ತೆ ನಾಡಿದ್ದು ನಿನ್ನ ಮನೆಗೆ ಬಂದು ನಿನ್ನ ನಗು ಮುಖ ನೋಡಿ ವಿಮಾನ ಹತ್ತುವೆ,” ಎಂದು ಗೆಳತಿ ನಾದಿನಿಯನ್ನು ಅಪ್ಪಿಕೊಂಡು ಸಂತೈಸಿ ಹೊರಟಳು.
ಐದು ವರ್ಷದ ನಂತರ ಅನಿತಾ ಪುಟ್ಟ ಮಗು ಸೂರ್ಯನನ್ನು ಎತ್ತಿಕೊಂಡು ಮೊದಲ ಬಾರಿ ಅಣ್ಣನ ಮನೆಗೆ ಬಂದಿದ್ದಳು. ಆ ದಿನ ಸಾಯಂಕಾಲ ರೇವತಿ, ಅನಿತಾ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಮಿತ್ ಮತ್ತು ವಿವೇಕ್ ಗ್ಯಾಲರಿಯಲ್ಲಿ ಕುಳಿತು ಮಾತನಾಡುತ್ತಿದ್ದರು.
“ನಿಮ್ಮ ತಂಗಿ ತುಂಬಾ ಒಳ್ಳೆಯವಳು…. ಮಗು, ಮನೆ, ಕಾಯಿಲೆ ಬಿದ್ದ ನನ್ನ ತಂದೆ ಎಲ್ಲರನ್ನೂ ತುಂಬಾ ನೋಡಿಕೊಂಡು, ತನ್ನ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಥ್ಯಾಂಕ್ಸ್ ಅಮಿತ್, ಇಂಥ ಒಳ್ಳೆಯ ನಿಮ್ಮ ತಂಗಿಯನ್ನು ನನಗೆ ಹೆಂಡತಿಯಾಗಿ ಕೊಟ್ಟಿದ್ದಕ್ಕೆ,” ಎಂದು ವಿವೇಕ್ ಸಂತೋಷದಿಂದ ಹೇಳಿದ.
ಅಡುಗೆ ಮನೆಯಲ್ಲಿದ್ದ ಅನಿತಾ, ರೇವತಿಯ ಮುಖ ನೋಡಿ ಕಣ್ಣಲ್ಲೇ ಧನ್ಯವಾದ ಹೇಳಿದಳು. ತೊಟ್ಟಿಲಲ್ಲಿದ್ದ ಪುಟ್ಟ ಸೂರ್ಯ ಕಾಲುಗಳನ್ನು ಬಡಿಯುತ್ತಾ ಕಿರು ನಗು ಸೂಸುತ್ತಾ ಎಲ್ಲರನ್ನೂ ನೋಡುತ್ತಿದ್ದ.





