`ಲೀಲಾ'ಜಾಲವಾಗಿ ಪಕ್ಷಿಗಳ ಫೋಟೋ ಕ್ಲಿಕ್ಕಿಸುವ ಇವರು ಇಳಿವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳಲಿಲ್ಲ!
ಪಕ್ಷಿಗಳು ಅತ್ಯಂತ ಸೂಕ್ಷ್ಮಜೀವಿಗಳು. ಒಂದು ಕಡೆ ಹೆಚ್ಚು ಕಾಲ ಕೂರದೆ ಹಾರಾಡುತ್ತಿರುತ್ತವೆ. ಆದ್ದರಿಂದ ಅವುಗಳನ್ನು ಕಣ್ತುಂಬ ನೋಡಲು ಕಷ್ಟಸಾಧ್ಯ. ಆದರೆ ಪಕ್ಷಿಗಳ ಫೋಟೋ ತೆಗೆಯುವವರು ಅಪಾರ ತಾಳ್ಮೆಯಿಂದ ಕಾದಿದ್ದು, ಅದರ ಚಟುವಟಿಕೆಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಜನರಿಗೆ ಮನಸ್ಛೂರ್ತಿ ನೋಡುವಂತೆ ಮಾಡುತ್ತಾರೆ. ನಾಡಿನಲ್ಲಿ ಅನೇಕ ಜನ ಪಕ್ಷಿ ಛಾಯಾಚಿತ್ರಗಳನ್ನು ತೆಗೆಯುವವರು ಇದ್ದಾರೆ. ಈ ನಿಟ್ಟಿನಲ್ಲಿ ಪಕ್ಷಿತಜ್ಞ ಡಾ. ಸಲೀಂ ಮಲಿಕ್, ಪ್ರಾತಃಸ್ಮರಣೀಯರಾಗಿ ಕನ್ನಡಿಗರಿಗೆ ಚಿರಪರಿಚಿತರು. ಅವರು ಪಕ್ಷಿ ಫೋಟೋಗಳನ್ನು ಕ್ಲಿಕ್ಕಿಸುವುದರ ಮೂಲಕ ಪಕ್ಷಿ ಪ್ರಪಂಚದ ಆಗುಹೋಗುಗಳನ್ನು ದಾಖಲಿಸುತ್ತಿದ್ದಾರೆ. ಇದರಂತೆ ಡಾ. ಲೀಲಾ ಅಪ್ಪಾಜಿ ಪಕ್ಷಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ನಾಡಿಗೆ, ದೇಶಕ್ಕೆ ಪರಿಚಯಿಸುತ್ತಿದ್ದಾರೆ.
ಸಕ್ಕರೆ ನಗರಿ ಮಂಡ್ಯದ ಡಾ. ಲೀಲಾ ಅಪ್ಪಾಜಿ 72ನೇ ವಯಸ್ಸಿನ ಹಿರಿಯ ನಾಗರಿಕರಾಗಿದ್ದು, ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತಿಯ ನಂತರ ಅರಳಿದ ಹವ್ಯಾಸ ಇದಾಗಿದ್ದು, ವಯಸ್ಸು ಇಳಿಮುಖವಾಗುತ್ತಿದ್ದಾಗ ಒಳಗಿಳಿದ ಈ ಪ್ರವೃತ್ತಿಗೆ ಪಕ್ಷಿಗಳ ಬಣ್ಣ, ವಿನ್ಯಾಸ, ಅವು ಬದುಕುವ ಪರಿಗಳೇ ಇವರ ಹಕ್ಕಿ ಫೋಟೋಗಳನ್ನು ತೆಗೆಯುವ ಸೆಳೆತಕ್ಕೆ ಕಾರಣವಾಗಿದೆ.

ವೈವಿಧ್ಯಮಯ ಪಕ್ಷಿಗಳ ಫೋಟೋ
ಇದುವರೆಗೆ 900ಕ್ಕೂ ಅಧಿಕ ಪಕ್ಷಿ ಪ್ರಬೇಧಗಳ ಫೋಟೋ ತೆಗೆದಿದ್ದು, ಇದಕ್ಕಾಗಿ ಭಾರತದ ಹದಿನಾರು ರಾಜ್ಯಗಳಿಗೆ ಹಾಗೂ ಭೂತಾನಿಗೆ ಪ್ರವಾಸ ಮಾಡಿದ್ದಾರೆ. ಪಕ್ಷಿಗಳ ಫೋಟೋ ತೆಗೆಯಲು ಹೋದಾಗ ಅವುಗಳ ಬದುಕಿಗೆ ತೊಂದರೆ ಆಗದಂತೆ ಎಚ್ಚರವಹಿಸುವರು, ತಮ್ಮ ಚಲನವಲನ ನಿಯಂತ್ರಿಸುವರು.
ಫೋಟೋಗ್ರಫಿ ಟ್ರಯಲ್ ಮತ್ತು ಎರರ್ ಮೂಲಕ ಕಲಿಯುತ್ತಿರುವ ಡಾ. ಲೀಲಾ, ಪಕ್ಷಿಗಳು ಇರುವ ತಾಣದ ಬಗ್ಗೆ ಮಾಹಿತಿ ಕೊಟ್ಟು, ಹಕ್ಕಿ ಟೂರುಗಳನ್ನು ವ್ಯವಸ್ಥೆ ಮಾಡುವ ಅನೇಕರು ಇವರ ಹಕ್ಕಿ ಪಯಣದಲ್ಲಿ ನೆರವಾಗಿದ್ದಾರೆ. ಪ್ರತಿ ಪಕ್ಷಿ ಛಾಯಾಗ್ರಹಣದ ಅನುಭವ ಮುಂದಿನ ಸಲಕ್ಕೆ ಇವರ ಗುರುವಾಗಿ ಕೆಲಸ ಮಾಡಿದೆ. ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ `ಪಕ್ಷಿ ಫೋಟೋಗ್ರಫಿಯಲ್ಲಿ ಯಾವುದೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ತಾಳ್ಮೆ ಧ್ಯಾನ ಮೌನಗಳೇ ಗುರು, ಗುರಿ,' ಎಂಬುದನ್ನು ಅನುಸರಿಸುತ್ತಾರೆ.

ಹೊಸ ಹಕ್ಕಿಗಳ ಹುಡುಕಾಟ
ಪಕ್ಷಿ ಫೋಟೋಗಳನ್ನು ತೆಗೆಯುವವರಿಗೆ ಸದಾ ಹೊಸ ಹಕ್ಕಿಗಳ ಹುಡುಕಾಟವೇ ರೋಮಾಂಚನಕಾರಿ ಹುಡುಕಾಟವಾಗಿರುತ್ತದೆ. ಇದರಂತೆ ಹೊತ್ತುಗೊತ್ತುಗಳ ಪರಿವೇ ಇಲ್ಲದೆ, ದೂರ ದಾರಿಗಳಲ್ಲಿ ಪಯಣಿಸಿ ಫೋಟೋ ತೆಗೆಯುವ ಡಾ. ಲೀಲಾ, ಕೆಲವು ಸಲ ಹಕ್ಕಿಗಳು ಇರುವ ಜಾಗ ಇಕ್ಕಟ್ಟಾಗಿದ್ದು, ಅಲ್ಲಿಗೆ ಹೋಗಲು ಬಹಳ ಕಷ್ಟಪಟ್ಟಿದ್ದುಂಟು. ಕಡಲು, ಕಾನನ, ಕಾಂತಾರ, ಬೆಟ್ಟ ಗುಡ್ಡಗಳಲ್ಲಿ ಅಲೆದಿದ್ದಾರೆ. ಇವರಿಗೆ ಲಡಾಖ್ ನಂತಹ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆಯೂ ಕಾಡಿದೆ. ಒಮ್ಮೆ ಆಮ್ಲಜನಕದ ಕೊರತೆಯಿಂದ ಇವರು ನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಉಸಿರು ಉಳಿಸಿಕೊಂಡಿದ್ದರು!
ಸ್ಕ್ಲೇಟರ್ ಮೋನಾಲ್ ಎಂಬ ಹಕ್ಕಿ ಚಿತ್ರ ತೆಗೆಯಲು ಅರುಣಾಚಲ ಪ್ರದೇಶದ ಕಡಿದಾದ ಮಿಶ್ಮಿಯಲ್ಲಿ ಮುಂಜಾನೆಯೇ ಹೋಗಿ ಮೂರು ದಿನ ಕಾದಿದ್ದು ಫೋಟೋ ತೆಗೆದಾಗ ಇವರಿಗಾದ ಖುಷಿಗೆ ಪಾರವೇ ಇರಲಿಲ್ಲ.





