`ಲೀಲಾ‘ಜಾಲವಾಗಿ ಪಕ್ಷಿಗಳ ಫೋಟೋ ಕ್ಲಿಕ್ಕಿಸುವ ಇವರು ಇಳಿವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳಲಿಲ್ಲ!
ಪಕ್ಷಿಗಳು ಅತ್ಯಂತ ಸೂಕ್ಷ್ಮಜೀವಿಗಳು. ಒಂದು ಕಡೆ ಹೆಚ್ಚು ಕಾಲ ಕೂರದೆ ಹಾರಾಡುತ್ತಿರುತ್ತವೆ. ಆದ್ದರಿಂದ ಅವುಗಳನ್ನು ಕಣ್ತುಂಬ ನೋಡಲು ಕಷ್ಟಸಾಧ್ಯ. ಆದರೆ ಪಕ್ಷಿಗಳ ಫೋಟೋ ತೆಗೆಯುವವರು ಅಪಾರ ತಾಳ್ಮೆಯಿಂದ ಕಾದಿದ್ದು, ಅದರ ಚಟುವಟಿಕೆಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಜನರಿಗೆ ಮನಸ್ಛೂರ್ತಿ ನೋಡುವಂತೆ ಮಾಡುತ್ತಾರೆ. ನಾಡಿನಲ್ಲಿ ಅನೇಕ ಜನ ಪಕ್ಷಿ ಛಾಯಾಚಿತ್ರಗಳನ್ನು ತೆಗೆಯುವವರು ಇದ್ದಾರೆ. ಈ ನಿಟ್ಟಿನಲ್ಲಿ ಪಕ್ಷಿತಜ್ಞ ಡಾ. ಸಲೀಂ ಮಲಿಕ್, ಪ್ರಾತಃಸ್ಮರಣೀಯರಾಗಿ ಕನ್ನಡಿಗರಿಗೆ ಚಿರಪರಿಚಿತರು. ಅವರು ಪಕ್ಷಿ ಫೋಟೋಗಳನ್ನು ಕ್ಲಿಕ್ಕಿಸುವುದರ ಮೂಲಕ ಪಕ್ಷಿ ಪ್ರಪಂಚದ ಆಗುಹೋಗುಗಳನ್ನು ದಾಖಲಿಸುತ್ತಿದ್ದಾರೆ. ಇದರಂತೆ ಡಾ. ಲೀಲಾ ಅಪ್ಪಾಜಿ ಪಕ್ಷಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ನಾಡಿಗೆ, ದೇಶಕ್ಕೆ ಪರಿಚಯಿಸುತ್ತಿದ್ದಾರೆ.
ಸಕ್ಕರೆ ನಗರಿ ಮಂಡ್ಯದ ಡಾ. ಲೀಲಾ ಅಪ್ಪಾಜಿ 72ನೇ ವಯಸ್ಸಿನ ಹಿರಿಯ ನಾಗರಿಕರಾಗಿದ್ದು, ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತಿಯ ನಂತರ ಅರಳಿದ ಹವ್ಯಾಸ ಇದಾಗಿದ್ದು, ವಯಸ್ಸು ಇಳಿಮುಖವಾಗುತ್ತಿದ್ದಾಗ ಒಳಗಿಳಿದ ಈ ಪ್ರವೃತ್ತಿಗೆ ಪಕ್ಷಿಗಳ ಬಣ್ಣ, ವಿನ್ಯಾಸ, ಅವು ಬದುಕುವ ಪರಿಗಳೇ ಇವರ ಹಕ್ಕಿ ಫೋಟೋಗಳನ್ನು ತೆಗೆಯುವ ಸೆಳೆತಕ್ಕೆ ಕಾರಣವಾಗಿದೆ.

ವೈವಿಧ್ಯಮಯ ಪಕ್ಷಿಗಳ ಫೋಟೋ
ಇದುವರೆಗೆ 900ಕ್ಕೂ ಅಧಿಕ ಪಕ್ಷಿ ಪ್ರಬೇಧಗಳ ಫೋಟೋ ತೆಗೆದಿದ್ದು, ಇದಕ್ಕಾಗಿ ಭಾರತದ ಹದಿನಾರು ರಾಜ್ಯಗಳಿಗೆ ಹಾಗೂ ಭೂತಾನಿಗೆ ಪ್ರವಾಸ ಮಾಡಿದ್ದಾರೆ. ಪಕ್ಷಿಗಳ ಫೋಟೋ ತೆಗೆಯಲು ಹೋದಾಗ ಅವುಗಳ ಬದುಕಿಗೆ ತೊಂದರೆ ಆಗದಂತೆ ಎಚ್ಚರವಹಿಸುವರು, ತಮ್ಮ ಚಲನವಲನ ನಿಯಂತ್ರಿಸುವರು.
ಫೋಟೋಗ್ರಫಿ ಟ್ರಯಲ್ ಮತ್ತು ಎರರ್ ಮೂಲಕ ಕಲಿಯುತ್ತಿರುವ ಡಾ. ಲೀಲಾ, ಪಕ್ಷಿಗಳು ಇರುವ ತಾಣದ ಬಗ್ಗೆ ಮಾಹಿತಿ ಕೊಟ್ಟು, ಹಕ್ಕಿ ಟೂರುಗಳನ್ನು ವ್ಯವಸ್ಥೆ ಮಾಡುವ ಅನೇಕರು ಇವರ ಹಕ್ಕಿ ಪಯಣದಲ್ಲಿ ನೆರವಾಗಿದ್ದಾರೆ. ಪ್ರತಿ ಪಕ್ಷಿ ಛಾಯಾಗ್ರಹಣದ ಅನುಭವ ಮುಂದಿನ ಸಲಕ್ಕೆ ಇವರ ಗುರುವಾಗಿ ಕೆಲಸ ಮಾಡಿದೆ. ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ `ಪಕ್ಷಿ ಫೋಟೋಗ್ರಫಿಯಲ್ಲಿ ಯಾವುದೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ತಾಳ್ಮೆ ಧ್ಯಾನ ಮೌನಗಳೇ ಗುರು, ಗುರಿ,’ ಎಂಬುದನ್ನು ಅನುಸರಿಸುತ್ತಾರೆ.

ಹೊಸ ಹಕ್ಕಿಗಳ ಹುಡುಕಾಟ
ಪಕ್ಷಿ ಫೋಟೋಗಳನ್ನು ತೆಗೆಯುವವರಿಗೆ ಸದಾ ಹೊಸ ಹಕ್ಕಿಗಳ ಹುಡುಕಾಟವೇ ರೋಮಾಂಚನಕಾರಿ ಹುಡುಕಾಟವಾಗಿರುತ್ತದೆ. ಇದರಂತೆ ಹೊತ್ತುಗೊತ್ತುಗಳ ಪರಿವೇ ಇಲ್ಲದೆ, ದೂರ ದಾರಿಗಳಲ್ಲಿ ಪಯಣಿಸಿ ಫೋಟೋ ತೆಗೆಯುವ ಡಾ. ಲೀಲಾ, ಕೆಲವು ಸಲ ಹಕ್ಕಿಗಳು ಇರುವ ಜಾಗ ಇಕ್ಕಟ್ಟಾಗಿದ್ದು, ಅಲ್ಲಿಗೆ ಹೋಗಲು ಬಹಳ ಕಷ್ಟಪಟ್ಟಿದ್ದುಂಟು. ಕಡಲು, ಕಾನನ, ಕಾಂತಾರ, ಬೆಟ್ಟ ಗುಡ್ಡಗಳಲ್ಲಿ ಅಲೆದಿದ್ದಾರೆ. ಇವರಿಗೆ ಲಡಾಖ್ ನಂತಹ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆಯೂ ಕಾಡಿದೆ. ಒಮ್ಮೆ ಆಮ್ಲಜನಕದ ಕೊರತೆಯಿಂದ ಇವರು ನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಉಸಿರು ಉಳಿಸಿಕೊಂಡಿದ್ದರು!
ಸ್ಕ್ಲೇಟರ್ ಮೋನಾಲ್ ಎಂಬ ಹಕ್ಕಿ ಚಿತ್ರ ತೆಗೆಯಲು ಅರುಣಾಚಲ ಪ್ರದೇಶದ ಕಡಿದಾದ ಮಿಶ್ಮಿಯಲ್ಲಿ ಮುಂಜಾನೆಯೇ ಹೋಗಿ ಮೂರು ದಿನ ಕಾದಿದ್ದು ಫೋಟೋ ತೆಗೆದಾಗ ಇವರಿಗಾದ ಖುಷಿಗೆ ಪಾರವೇ ಇರಲಿಲ್ಲ.

ಕ್ಷೀಣಿಸುತ್ತಿರುವ ಪಕ್ಷಿ ಸಂಕುಲ
`ಪಕ್ಷಿಗಳ ವಾಸಸ್ಥಳದ ಅಭಾವ, ಆಧುನಿಕ ಸೌಕರ್ಯಗಳಿಂದ ಆಗುತ್ತಿರುವ ಒತ್ತಡ, ಆಹಾರದ ಕೊರತೆ ಮುಂತಾದ ಪಕ್ಷಿ ಸಂಖ್ಯೆ ಕ್ಷೀಣಿಸಲು ಕಾರಣ. ಎಲ್ಲಿಯವರೆಗೆ ನನ್ನಂತೆ ಈ ಪ್ರಕೃತಿಯಲ್ಲಿ ಉಳಿದ ಜೀವಿಗಳೂ ಸಹಜೀವಿಗಳು, ಅವುಗಳ ಬದುಕಿಗೆ ತಾವು ಮಾರಕ ಆಗಬಾರದೆನ್ನುವ ಅರಿವು ಮನುಷ್ಯರಿಗೆ ಬಂದಾಗ ಈ ಸಮತೋಲನ ಸಾಧಿಸಲು ಸಾಧ್ಯ. ಪಕ್ಷಿ ಜಗತ್ತಿಲ್ಲದೆ ಈ ಪ್ರಕೃತಿ ಇರಲು ಸಾಧ್ಯವಿಲ್ಲ,’ ಎಂದು ಪಕ್ಷಿಗಳ ಕುರಿತು ಕಾಳಜಿಯ ಮಾತುಗಳನ್ನಾಡುತ್ತಾರೆ.
ಡಾ. ಲೀಲಾ ಅಪ್ಪಾಜಿ, ತಮ್ಮ ಕ್ಯಾಮೆರಾ ಕಂಡ ಪಕ್ಷಿ ಪ್ರಪಂಚದ ನೋಟವನ್ನು ಉಳಿದವರೂ ನೋಡಲೆಂಬ ಆಸೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವರು. ಹಕ್ಕಿ, ಹಕ್ಕಿಚಿತ್ರ ಕೊಡುವ ಖುಷಿಯೇ ಇವರಿಗೆ ದೊಡ್ಡದಾಗಿದೆ. ಹಕ್ಕಿ ಛಾಯಾಗ್ರಹಕರಿಗೆ ಎಲ್ಲ ಹಕ್ಕಿಯೂ ಪ್ರಿಯವೇ ಆಗಿರುತ್ತವೆ. ರಾಜ್ಯ ಬಿಟ್ಟು ರಾಜ್ಯದಿಂದ ಹೊರಗೆ ತೆಗೆದ ಎಲ್ಲ ಹಕ್ಕಿಗಳೂ ಇವರಿಗೆ ವಿಶೇಷವೇ! ಅದರಲ್ಲೂ ಮೋನಾಲ್ ಪೆಶೆಂಟ್, ಸ್ಕ್ಲೇಟರ್ಸ್ ಮೋನಾಲ್, ಬಸ್ಡರ್ಡ್, ಬ್ರಾಡ್ ಬಿಲ್ ಮುಂತಾದ ಹಕ್ಕಿಗಳ ಫೋಟೋ ಕ್ಲಿಕ್ಕಿಸಿದ್ದು ಇವರಿಗೆ ಹೆಚ್ಚಿನ ಸಂತಸ ನೀಡಿದೆ. `ಹಕ್ಕಿ ಅಟೆಂಡೆನ್ಸ್’ ಪಕ್ಷಿಪ್ರೇಮಿ ಡಾ. ಲೀಲಾರ `ಹಕ್ಕಿ ಅಟೆಂಡೆನ್ಸ್’ ಎನ್ನುವ ವರ್ಣಪುಟಗಳ ಪುಸ್ತಕ ಪ್ರಕಟವಾಗಿದೆ. 35 ವರ್ಷ ಕನ್ನಡ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದರಿಂದ ಹಕ್ಕಿಗಳನ್ನು ವಿದ್ಯಾರ್ಥಿಗಳಾಗಿಸಿಕೊಂಡು ಮಾತನಾಡಿಸಿದ ರೀತಿಯಲ್ಲಿ, ಚಿತ್ರ ಸಂಭಾಷಣೆಯ ರೂಪದಲ್ಲಿ ಪುಸ್ತಕ ವಿಭಿನ್ನವಾಗಿ ಮೂಡಿಬಂದಿದೆ. ಕ್ಯಾಮೆರಾ ಲೆನ್ಸ್ ಛಾಯಾಗ್ರಹಣದ ಹವ್ಯಾಸಕ್ಕೆ ಉಸಿರು ಇದ್ದಂತೆ.
ಮಕ್ಕಳನ್ನು ಹೇಗೋ ಹಾಗೆ ಇವರು ಕ್ಯಾಮೆರಾವನ್ನು ಜೋಪಾನ ಮಾಡುತ್ತಾರೆ. ಮುಂದಿನ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳ, ಉತ್ತರಾಖಂಡಕ್ಕೆ ಹೋಗುವ ಆಲೋಚನೆ ಹೊಂದಿದ್ದಾರೆ. ಕೆಲವು ಹಕ್ಕಿಗಳ ಚಿತ್ರ ತೆಗೆಯುವ ಗುರಿಯನ್ನು ಮುಂದಿಟ್ಟುಕೊಂಡು ಪ್ರಯತ್ನಶೀಲರಾಗಿದ್ದಾರೆ.

ಏರುಗತಿಯ ಉತ್ಸಾಹ
ಡಾ. ಲೀಲಾ ಅಪ್ಪಾಜಿ ತಮ್ಮ ಇಳಿವಯಸ್ಸಿನಲ್ಲೂ ಏರುಗತಿಯ ಉತ್ಸಾಹ ಹೊಂದಿ ಬಣ್ಣ ಬಣ್ಣದ ಪಕ್ಷಿಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಿರುವುದು, ಪಕ್ಷಿ ಸಂಕುಲದ ಬಗ್ಗೆ ಕಕ್ಕುಲಾತಿಯನ್ನು ಹೊಂದಿರುವುದು, ಅವುಗಳ ಕುರಿತು ಅಧ್ಯಯನ ನಡೆಸಿರುವುದು ಶ್ಲಾಘನೀಯವಾಗಿದೆ. ಡಾ. ಲೀಲಾ, ಹಿರಿಯ ನಾಗರಿಕರಾಗಿ, ಮಹಿಳಾ ಸಾಧಕರಾಗಿ, ಉತ್ಸಾಹಿಗಳಾಗಿ ಅನೇಕರಿಗೆ ಮಾದರಿಯಾಗಿದ್ದಾರೆ.

ಪಕ್ಷಿ ಸಂಕುಲ ಉಳಿಸಿ!
`ಪಕ್ಷಿ ಫೋಟೋಗಳನ್ನು ತೆಗೆಯುವುದೊಂದು ಧ್ಯಾನ. ತಾಳ್ಮೆ ಅವಶ್ಯಕ. ಹಕ್ಕಿಗಳು ಚಂಚಲ ಸ್ವಭಾದವು. ಆದ್ದರಿಂದ ಹಕ್ಕಿಗಳಿಗಾಗಿ ನಾವು ಹೋಗಿದ್ದೇವೆಯೇ ವಿನಾ, ನಮಗಾಗಿ ಹಕ್ಕಿಗಳಲ್ಲ ಎನ್ನುವ ಅರಿವು ಅಗತ್ಯ,’ ಎಂದು ಪಕ್ಷಿ ಫೋಟೋ ತೆಗೆಯುವ ಹೊಸಬರಿಗೆ ಸಲಹೆ, ಕಿವಿಮಾತು ಹೇಳುತ್ತಾರೆ. ಅಲ್ಲದೆ ಪಕ್ಷಿ ಸಂಕುಲ ಉಳಿಸಲು ಜನರಲ್ಲಿ ಮನವಿ ಮಾಡುತ್ತಾರೆ. ಇವರ ಮನವಿಗೆ ನಾವೆಲ್ಲ ಸ್ಪಂದಿಸಬೇಕಾಗಿದೆ. ಇವರಿಗೆ ಇನ್ನೂ ಹೆಚ್ಚಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ದೊರಕಲೆಂದು ಓದುಗರ ಪರವಾಗಿ ಗೃಹಶೋಭಾ ಹಾರೈಸುತ್ತಾಳೆ.
– ಈರಣ್ಣ ಬೆಂಗಾಲಿ





