ಅತ್ತರು, ಸೆಂಟು, ಪರ್ಫ್ಯೂಮ್ ಗಳಲ್ಲಿ ಎಷ್ಟೆಲ್ಲ ಬಗೆ ಉಂಟು? ಇವನ್ನು ಹೇಗೆ, ಯಾಕೆ, ಯಾವಾಗ ಬಳಸಬೇಕು….?
ಪರ್ಫ್ಯೂಮ್ ಮಾಮೂಲಿ ವಸ್ತುವಲ್ಲ. ಇದು ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಕಳೆ ನೀಡಿ, ಗುಂಪಿನ ನಾಲ್ವರಲ್ಲಿ ಎದ್ದು ತೋರುವಂತೆ ಮಾಡಬಲ್ಲದು. ಯಾರಾದರೂ ನಿಮ್ಮ ಹತ್ತಿರದಿಂದ ಸುಳಿದು ಹೋದರೆ, ನಿಮ್ಮಿಂದ ಒಂದು ಸುಗಂಧಿತ ಪರಿಮಳ ತೇಲಿ ಬಂದಾಗ, ಅವರು ಖಂಡಿತಾ ಅದರಿಂದ ಪ್ರಭಾವಿತರಾಗುತ್ತಾರೆ. ಇದರಿಂದ ನಿಮ್ಮದು ಎಂಥ ಉನ್ನತ ವ್ಯಕ್ತಿತ್ವ ಎಂಬುದು ಸಾಬೀತಾಗುತ್ತದೆ. ಇದಕ್ಕಾಗಿ ಕೇವಲ ಉತ್ತಮ ಸುಗಂಧ ಮಾತ್ರ ಇದ್ದರೆ ಸಾಲದು, ಅದನ್ನು ಸೂಕ್ತ ಸಂದರ್ಭದಲ್ಲಿ ಹೇಗೆ, ಯಾವಾಗ ಬಳಸಬೇಕೆಂಬುದೂ ಮುಖ್ಯವಾಗುತ್ತದೆ.
ಈ ಸೆಂಟು ಪೂಸಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ, ಅದನ್ನು ನೇರ ನಿಮ್ಮ ಚರ್ಮದ ಮೇಲೆ ಹೆಚ್ಚಿಸಿಕೊಳ್ಳಬೇಕು. ಬಹಳ ಜನ ಇದನ್ನು ಬಟ್ಟೆಯ ಮೇಲೆ ಸ್ಫ್ರೇ ಮಾಡಿಕೊಳ್ಳುತ್ತಾರೆ, ಹಾಗೆ ಮಾಡಬೇಡಿ. ದೇಹದ ಯಾವ ಭಾಗಗಳಲ್ಲಿ ನರ ಸುಲಭವಾಗಿ ಕಾಣಸಿಗುತ್ತದೋ, ಅಲ್ಲಿ ಹಚ್ಚಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಏಕೆಂದರೆ ಈ ಭಾಗಗಳಲ್ಲಿನ ಶಾಖ, ಇದನ್ನು ನಿಧಾನವಾಗಿ ದೇಹಾದ್ಯಂತ ಹರಡಲು ಹೆಚ್ಚು ಸಹಕಾರಿ.
ಸ್ನಾನ ಆದ ನಂತರ ಇದನ್ನು ಸವರಿಕೊಳ್ಳಬೇಕು ಎಂಬುದೇ ಸರಿ. ಆದರೆ ಆಗ ನಿಮ್ಮ ದೇಹ ಸಂಪೂರ್ಣ ಒಣಗಿರಬೇಕು. ಬಹುತೇಕ ಮಂದಿ ಇದನ್ನು ಹಚ್ಚಿಕೊಂಡ ನಂತರ ತಮ್ಮ ಮಣಿಕಟ್ಟನ್ನು ಉಜ್ಜಿಕೊಳ್ಳುತ್ತಾರೆ, ಇದು ಸರಿಯಲ್ಲ, ತಪ್ಪು. ಇದರಿಂದ ಸುಗಂಧದ ಮೇಲ್ಪದರದ ನೋಟ್ಸ್ ಹಾಳಾಗಿ ಹೋಗುತ್ತದೆ, ಹಾಗಾಗಿ ಅದರ ಪರಿಣಾಮ ತಗ್ಗುತ್ತದೆ. ಬೇಕಾದ ಕಡೆ ಸ್ಪ್ರೇ ಮಾಡಿಕೊಂಡು, ಅದನ್ನು ಸಹಜವಾಗಿ ಒಣಗಲು ಬಿಡಿ.
ಸೂಕ್ತ ಪ್ರಮಾಣದ ಕುರಿತು ಎಚ್ಚರ ವಹಿಸುವುದೂ ಅತ್ಯಗತ್ಯ : 2-4 ಸಲ ಸ್ಪ್ರೇ ಮಾಡಿಕೊಂಡರೆ ಸಾಕು. ಅದು ಬಿಟ್ಟು ಧಾರಾಳ ಸವರುವಿಕೆ, ಹೆಚ್ಚಿನ ಪ್ರಯೋಗ, ಜನರನ್ನು ಇದರಿಂದ ಅಸಹಜಗೊಳ್ಳುವಂತೆ ಮಾಡಬಹುದು. ಬದಲಿಗೆ ಲೈಟ್ಲಿಟ್ಲ್ ಸ್ಪ್ರೇ, ಸುದೀರ್ಘ ಕಾಲ ಆಕರ್ಷಣೆ ಉಳಿಸಿಕೊಳ್ಳುತ್ತದೆ.
ಹಾಗಾದರೆ ಈ ಸೆಂಟಿನಲ್ಲಿ ಎಷ್ಟು ಬಗೆ? ಅದನ್ನು ಯಾವಾಗ, ಏಕೆ ಆರಿಸಬೇಕು? : ಎಲ್ಲಕ್ಕೂ ಮೊದಲು ಲಿಕ್ವಿಡ್ ಸ್ಪ್ರೇಗೆ ಆದ್ಯತೆ. ಇದರಲ್ಲಿ `ಯು ಡೀ ಪರ್ಫ್ಯೂಮ್ ‘ ಹಾಗೂ `ಯು ಡೀ ಟಾಯ್ಲೆಟೀ’ ಪ್ರಮುಖ. ಸುಗಂಧದ ತೈಲಾಂಶ ಹೆಚ್ಚಿರುತ್ತದೆ, ಹೀಗಾಗಿ ಇದು ಸುದೀರ್ಘ ಕಾಲ ಬಾಳಿಕೆ ಬರುತ್ತದೆ. ಇದು ಪಾರ್ಟಿ, ಶುಭ ಸಮಾರಂಭಗಳಂಥ ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದು. ಅದೇ ಸುಗಂಧ ಲೈಟ್ ಆಗಿದ್ದು, ಅದು ದಿನವಿಡೀ ಬಳಕೆಗೆ ಅಂದ್ರೆ ಆಫೀಸ್ ಯಾ ಹೊರಗಿನ ಓಡಾಟಕ್ಕೆ ದಿನವಿಡೀ ಸರಿಹೋಗುತ್ತದೆ.
ಇತ್ತೀಚೆಗೆ ಸಾಲಿಡ್ ಸೆಂಟಿನ ಬಳಕೆಯೂ ಹೆಚ್ಚುತ್ತಿದೆ. ಇದು ಸಣ್ಣ ಡಬ್ಬಿಗಳಲ್ಲಿ ಲಭ್ಯ, ಬಾಮ್ ತರಹ ಇರುತ್ತದೆ. ಇದನ್ನು ಬೆರಳ ತುದಿಯಲ್ಲಿ ಹಿಡಿದು, ನಿಮ್ಮ ಮಣಿಕಟ್ಟು, ಕುತ್ತಿಗೆ ಇತ್ಯಾದಿ ಬೇಕಾದೆಡೆ ಸವರಿಕೊಳ್ಳಿ. ಇದು ಲೀಕ್ ಆಗದು. ಪ್ರವಾಸ ಹೊರಟಾಗ ಇದು ಹೆಚ್ಚು ಅನುಕೂಲಕರ. ನೀವು ಸಾದಾ, ಕ್ಲಿಯರ್, ಪ್ರೈವೇಟ್ ಸುಗಂಧ ಬಯಸಿದರೆ, ಇದು ನಿಮಗೆ ಹೆಚ್ಚು ಸೂಕ್ತ.
ರೋಲ್ ಆನ್ ಸೆಂಟು ಸಹ ಒಂದು ಸರಳ ಆಯ್ಕೆ. ಇದರಲ್ಲಿ ಒಂದು ಸಣ್ಣ ಬಾಮ್ ಇದ್ದು, ಅದರಿಂದ ಸೆಂಟು ನೇರ ಚರ್ಮದ ಮೇಲೆ ಆಳವಾಗಿ ಹರಡುತ್ತದೆ. ಇದರಲ್ಲಿ ಹೆಚ್ಚು ವೇಸ್ಟೇಜ್ ಬರದು. ಇದು ಸಾಮಾನ್ಯವಾಗಿ ಆಲ್ಕೋಹಾಲ್ ಫ್ರೀ ಆಗಿರುತ್ತದೆ. ಹೀಗಾಗಿ ಸೆನ್ಸಿಟಿವ್ ಸ್ಕಿನ್ ನವರಿಗೆ ಉತ್ತಮ ಆಯ್ಕೆ ಎನಿಸಿದೆ.
ಬಾಡಿ ಮಿಸ್ಟ್ ಲೈಟ್ ಆಗಿದ್ದು, ಬಲು ತಾಜಾ ಸುಗಂಧ ಒದಗಿಸುತ್ತದೆ. ಇದನ್ನು ದೇಹವಿಡೀ ಹಚ್ಚಬಹುದು, ಮುಖ್ಯವಾಗಿ ಸ್ನಾನದ ನಂತರ. ಬೇಸಿಗೆ ಯಾ ಬೇರೆ ಸೀಸನ್ ಇರಲಿ, ದಿನವಿಡೀ ಹೊರಗಿರುವಾಗ, ಇದರ ಬಳಕೆ ಹೆಚ್ಚಿನ ಆರಾಮ ನೀಡುತ್ತದೆ. ಹ್ಞಾಂ, ಮರೆಯದೆ ಇದನ್ನು ದಿನಕ್ಕೆ 2-3 ಸಲ ಹಚ್ಚಿಕೊಳ್ಳಬೇಕು, ಏಕೆಂದರೆ ಇದು ಸುದೀರ್ಘ ಬಾಳಿಕೆ ಬರದು, ಹೀಗಾಗಿ ಮತ್ತೆ ಮತ್ತೆ ಹಚ್ಚಬೇಕಾಗುತ್ತದೆ.
ಅತ್ತರು ಎಂಬುದು ಸಹ ಪರಂಪರಾಗತ ಸುಗಂಧ ಎನಿಸಿದೆ, ಇದನ್ನು ಅನಾದಿ ಕಾಲದಿಂದ ಪೀಳಿಗೆಯಿಂದ ಪೀಳಿಗೆಗೆ ಬಳಸಲಾಗುತ್ತಿದೆ. ಇದು ಒಂದು ಬಗೆಯ ಶುದ್ಧ ಪರ್ಫ್ಯೂಮ್ ಆಯಿಲ್ ಆಗಿದ್ದು, ಆಲ್ಕೋಹಾಲ್ ಫ್ರೀ ಎನಿಸಿದೆ. ಇದು ಬಹಳ ಸ್ಟ್ರಾಂಗ್ ಆಗಿದ್ದು, ಕೇವಲ 1-2 ಹನಿಗಳ ಬಳಕೆಯೇ ಸಾಕು, ದಿನವಿಡೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಇದನ್ನು ಸಾಂಪ್ರದಾಯಿಕ ಸಂದರ್ಭಗಳು, ಹಬ್ಬಗಳಲ್ಲಿ ಬಳಸುತ್ತಾರೆ.
ಈ ವಿಶೇಷ ಸಲಹೆಗಳನ್ನು ಮರೆಯದಿರಿ : ಅಗತ್ಯ ಎನಿಸಿದರೆ ಹೇರ್ ಸ್ಟೈಲ್ ಸೆಟ್ ಆದನಂತರ, ಕೂದಲಿನ ಮೇಲೆ ತೀರಾ ಲೈಟ್ ಆಗಿ ಸೆಂಟ್ ನ್ನು ಸ್ಪ್ರೇ ಮಾಡಬಹುದು, ಆದರೆ ಅದು ನೇರ ನಿಮ್ಮ ಸ್ಕಾಲ್ಪ್ ಮೇಲೆ ತಗುಲಬಾರದು. ಇದನ್ನು ನೇರವಾಗಿ ಬಿಸಿಲು ಬೀಳುವ ಜಾಗ ಯಾವ ಶಾಖ ಇರುವಂಥ ಕಡೆ ಇಡಲೇಬೇಡಿ. ಇದರಿಂದಾಗಿ ಅದರ ಗುಣಮಟ್ಟ ಕೆಡುವ ಸಾಧ್ಯತೆಗಳಿವೆ.
ಒಂದೇ ಸಲಕ್ಕೆ 2-3 ಬಗೆಯ ಸೆಂಟ್ ನ್ನು ಬೆರೆಸಿ ಹಚ್ಚಿಕೊಳ್ಳಬೇಡಿ. ಇದರಿಂದ ಸುಗಂಧದ ಕ್ಲಾಶ್ ಆಗುತ್ತದೆ. ಆಗ ನಾವು ಬಯಸಿದ ಪರಿಣಾಮ ಸಿಗುವುದಿಲ್ಲ. ಸುಗಂಧ ಎಂಬುದು ಕೇವಲ ಸುಂದರ ಅನುಭವ ಮಾತ್ರವಲ್ಲ, ಬದಲಿಗೆ ನಿಮ್ಮ ವ್ಯಕ್ತಿತ್ವದ ಐಡೆಂಟಿಟಿಯೂ ಹೌದು. ಹಾಗಾಗಿ ಅಗ್ಗದ ಆಸೆಗೆ ಬಿದ್ದು ಮುಗ್ಗಲು ಮಾಲು ಖರೀದಿಸಬೇಡಿ.
ನೀವು ಏನನ್ನು ಧರಿಸುತ್ತೀರಿ, ಹೇಗೆ ಮಾತನಾಡುತ್ತೀರಿ, ಬಾಡಿ ಲ್ಯಾಂಗ್ವೇಜ್….. ಇತ್ಯಾದಿಗಳನ್ನು ಜನ ಒಮ್ಮೆ ಗಮನಿಸುತ್ತಾರೆ. ಆದರೆ ನಿಮ್ಮಿಂದ ಎಂಥ ಸುವಾಸನೆ ಹೊರಹೊಮ್ಮುತ್ತದೆ ಎಂಬುದನ್ನು ಅವರು ಸುದೀರ್ಘ ಕಾಲ ನೆನಪಿಡುತ್ತಾರೆ. ಹೀಗಾಗಿ ಮುಂದಿನ ಸಲ ಸೆಂಟು ಪೂಸಿಕೊಳ್ಳುವಾಗ, ಕೇವಲ ಅದರ ಸುಗಂಧದ ಬಗ್ಗೆ ಮಾತ್ರ ಯೋಚಿಸಬೇಡಿ. ಅದು ನಿಮ್ಮ ಐಡೆಂಟಿಟಿಗೆ ಎಂಥ ಉನ್ನತ ಸ್ಥಾನ ನೀಡಲಿದೆಯೋ ಎಂಬುದರ ಬಗ್ಗೆಯೂ ಯೋಚಿಸಿ.
– ಪ್ರತಿನಿಧಿ





