ಮನೆಗೆ ಅನಿರೀಕ್ಷಿತ ಅತಿಥಿಗಳು ಅಪರೂಪಕ್ಕೆ ಬಂದಾಗ, ಅವರಿಗೆ ಸಿಂಪಲ್ ಸ್ನಾಕ್ಸ್ ಬದಲಿಗೆ, ಇಂಥ ಟೇಸ್ಟಿ ಟೇಸ್ಟಿ ಸ್ನಾಕ್ಸ್ ಇರಲಿ! ಚೀಸ್, ಬ್ರೆಡ್, ಅಣಬೆಗಳ ಈ ಸ್ನಾಕ್ಸ್ ಟ್ರೈ ಮಾಡಿ ನೋಡಿ!
ಚೀಸ್ ಚಿಲೀ ಟೋಸ್ಟ್

ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಒಂದಿಷ್ಟು ತುರಿದ ಮೋಜರೆಲಾ ಚೀಸ್, ಹೆಚ್ಚಿದ ಕ್ಯಾಪ್ಸಿಕಂ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಣ್ಣೆ.
ವಿಧಾನ : ಒಂದು ಬೇಸನ್ನಿಗೆ ಚೀಸ್ ಹರಡಿಕೊಳ್ಳಿ. ನಂತರ ಇದಕ್ಕೆ ಕ್ಯಾಪ್ಸಿಕಂ, ಹಸಿಮೆಣಸು ಸೇರಿಸಿ. ಆಮೇಲೆ ಉಪ್ಪು, 2 ಬಗೆ ಖಾರ ಸೇರಿಸಿ. ಇವನ್ನೆಲ್ಲ ಒಟ್ಟಾಗಿ ಚೆನ್ನಾಗಿ ಕಲಸಿಕೊಳ್ಳಿ. ಇದೀಗ ಚೀಸ್ ಚಿಲೀ ಮಿಶ್ರಣ ರೆಡಿ! ಇದನ್ನು ಸ್ವಲ್ಪ ಹೊತ್ತು ಹಾಗೇ ಮುಚ್ಚಿಡಿ. ಒಂದು ತವಾ ಬಿಸಿ ಮಾಡಿ, ಅದಕ್ಕೆ ತುಸು ಬೆಣ್ಣೆ ಹಾಕಿಡಿ. ಇದಕ್ಕೆ ಬ್ರೆಡ್ ಸ್ಲೈಸ್ ಹಾಕಿ, ಒಂದು ಬದಿ ಗರಿಗರಿ ಟೋಸ್ಟ್ ಮಾಡಿ. ಇದನ್ನು ತಿರುವಿ ಹಾಕಿ ಇನ್ನೊಂದು ಬದಿಗೂ ಬೆಣ್ಣೆ ಸವರಿಡಿ. ಇದರ ಮೇಲೆ ಒಂದು ಪದರ ಚೀಸ್ ಚಿಲೀ ಮಿಶ್ರಣ ಹರಡಿಕೊಳ್ಳಿ. ಅದು ಪೂರ್ತಿ ಕವರ್ ಮಾಡುವಂತಿರಲಿ. ಚೀಸ್ ಕರಗುವವರೆಗೂ ಇದನ್ನು ಬಿಸಿ ಮಾಡಿ. ಇದೀಗ ಗರಿಗರಿ ಟೋಸ್ಟ್ ರೆಡಿ ಆಯ್ತು. ಇದನ್ನು ಕೆಳಗಿಳಿಸಿ ತ್ರಿಕೋನಾಕಾರವಾಗಿ ಕತ್ತರಿಸಿ. ಇದನ್ನು ಟೊಮೇಟೊ ಸಾಸ್ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಚೀಸ್, ಬಟರ್, ಗಾರ್ಲಿಕ್ ಫ್ಲೇವರ್ ನ ಬ್ರೆಡ್ ರುಚಿ ಟ್ರೈ ಮಾಡಿ, ಸವಿದು ನೋಡಿ!
ಗಾರ್ಲಿಕ್ ಬ್ರೆಡ್ ವಿತ್ ಚೀಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 1 ಕಪ್ ಗಟ್ಟಿ ಹಾಲು, ಹೆಚ್ಚಿದ ತುಸು ಕ್ಯಾಪ್ಸಿಕಂ, ಹೂಕೋಸು, ಈರುಳ್ಳಿ (ಒಟ್ಟಾರೆ 1 ಬಟ್ಟಲು), 4 ಚಮಚ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ, ಚಿಲೀ ಫ್ಲೇಕ್ಸ್, ಬೆಳ್ಳುಳ್ಳಿ ಪೇಸ್ಟ್, ಅಗತ್ಯಕ್ಕೆ ತಕ್ಕಷ್ಟು ರೀಫೈಂಡ್ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ, ಇದಕ್ಕೆ ಗೋಧಿಹಿಟ್ಟು ಹಾಕಿ ಘಮ್ಮೆನ್ನುವಂತೆ ಹುರಿಯಿರಿ. ನಂತರ ಇದಕ್ಕೆ ಹಾಲು ಬೆರೆಸಿ, ಮಂದ ಉರಿಯಲ್ಲಿ ಕೆದಕಬೇಕು. ಗಂಟಾಗದಂತೆ ನೋಡಿಕೊಳ್ಳಿ. ನಂತರ ಇದಕ್ಕೆ ಒಂದೊಂದಾಗಿ ಹೆಚ್ಚಿದ ತರಕಾರಿ ಹಾಕಿ ಬಾಡಿಸಬೇಕು. ನಂತರ ಇದಕ್ಕೆ ಉಪ್ಪು, ಮೆಣಸು, ಹಾಕಿ ಮತ್ತಷ್ಟು ಬಾಡಿಸಿ. ಇದೀಗ ಬ್ರೆಡ್ ಗೆ ಬೇಕಾದ ಪೇಸ್ಟ್ ರೆಡಿ ಆಯ್ತು. ನಂತರ ಬ್ರೆಡ್ ಗೆ ಬೆಣ್ಣೆ ಸವರಿಕೊಂಡು, ಅದರ ಮೇಲೆ ಬೆಳ್ಳುಳ್ಳಿ ಪೇಸ್ಟ್ ಸವರಬೇಕು. ಇದರ ಮೇಲೆ ಒಂದು ಪದರ ತರಕಾರಿ ಮಿಶ್ರಣ ಬರಲಿ. ಆಮೇಲೆ ಚಿಲೀ ಫ್ಲೇಕ್ಸ್, ಮೆಣಸು, ಓರಿಗ್ಯಾನೋ ಉದುರಿಸಿ. ಕೊನೆಯಲ್ಲಿ ಇದರ ಮೇಲೆ ತುರಿದ ಚೀಸ್ ಉದುರಿಸಿ. ಈ ತರಹ ಎಲ್ಲಾ ಬ್ರೆಡ್ ಸ್ಲೈಸ್ ರೆಡಿ ಮಾಡಿ. ನಂತರ ತವಾ ಮೇಲೆ ತುಸು ಬೆಣ್ಣೆ ಬಿಸಿ ಮಾಡಿ, ಈ ಸ್ಲೈಸ್ ಗಳನ್ನು ಮತ್ತೆ ಬಿಸಿ ಮಾಡಿ. ಚೀಸ್ ಕರಗಿದಂತೆ, ಇದನ್ನು ಬಿಸಿಯಾಗಿ ಕಾಫೀ/ಟೀ ಜೊತೆ ಸವಿಯಲು ಕೊಡಿ.
ಎಂದಾದರೂ ಈ ತರಹ ಅಣಬೆ ಕಟ್ ಲೆಟ್ ಟ್ರೈ ಮಾಡಿದ್ದೀರಾ? ಇದು ಮಕ್ಕಳ ಪಾರ್ಟಿಗೆ ಹೇಳಿ ಮಾಡಿಸಿದ ಸ್ನಾಕ್ಸ್ ಎನಿಸಿದೆ!
ಮಶ್ರೂಮ್ ಕಟ್ ಲೆಟ್
ಸಾಮಗ್ರಿ : 10-12 ತಾಜಾ ಬಟನ್ ಅಣಬೆ, ತುಸು ಹೆಚ್ಚಿಕೊಂಡ 3 ಬಗೆಯ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಮೆಣಸು, ತುರಿದ ಚೀಸ್, ವೈಟ್ ಬ್ರೆಡ್ ಕ್ರಂಬ್ಸ್, ಅಗತ್ಯವಿದ್ದಷ್ಟು ಮೈದಾ, ಆರಾರೂಟ್, ಕರಿಯಲು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ತುಸು ಆರಾರೂಟ್, ಮೈದಾ, ಉಪ್ಪು, ಬಿಳಿ ಮೆಣಸು, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ನಂತರ ಅಣಬೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ತೆಗೆಯಿರಿ, ಪೂರ್ತಿ ಬೇಯಬಾರದು. (ಇದುವೇ ಬ್ಲಾಂಚ್ ಮಾಡುವ ವಿಧಾನ). ಇದರ ನಡುವೆ ತುಸು ಒತ್ತಿರಿ. ಚೀಸ್ ಗೆ ಉಪ್ಪು, ಬಿಳಿ ಮೆಣಸು ಉದುರಿಸಿ ಅದನ್ನು ಇದರ ಮೇಲೆ ತುಂಬಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಇವನ್ನು ಹೆಚ್ಚಿಕೊಂಡು, ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್ ಜೊತೆ ಸವಿಯಲು ಕೊಡಿ.
ಈ ತರಹ ಎಂದಾದರೂ ಅಣಬೆಯನ್ನು ಗ್ರಿಲ್ ಮಾಡಿದ್ದೀರಾ? ಈ ಸಲ ಟ್ರೈ ಮಾಡಿ ನೋಡಿ!
ಗ್ರಿಲ್ಡ್ ಮಶ್ರೂಮ್

ಸಾಮಗ್ರಿ : 250 ಗ್ರಾಂ ಅಣಬೆ, ಅರ್ಧ ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಾಲಲ್ಲಿ ನೆನೆದ ಕೇಸರಿ, ಹುಳಿಮೊಸರು, ಗರಂಮಸಾಲ, ಚಾಟ್ ಮಸಾಲ, ತುಸು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ (ಚಾಟ್ ಮಸಾಲ ಬಿಟ್ಟು) ಎಲ್ಲಾ ಸಾಮಗ್ರಿ ಹಾಕಿ, ಚೆನ್ನಾಗಿ ಬೆರೆಸಿಕೊಂಡು, 40 ನಿಮಿಷ ಹಾಗೇ ನೆನೆಯಲು ಬಿಡಿ. ನಂತರ ತುಸು ಎಣ್ಣೆ ಬಿಸಿ ಮಾಡಿ, ಇದನ್ನು ಹದನಾಗಿ ಬಾಡಿಸಿ. ಕೊನೆಯಲ್ಲಿ ಇದರ ಮೇಲೆ ಚಾಟ್ ಮಸಾಲ ಉದುರಿಸಿ ಬಿಸಿಯಾಗಿ ಸವಿಯಲು ಕೊಡಿ.
ಮಕ್ಕಳ ಬರ್ತ್ ಡೇ ಪಾರ್ಟಿಗಳಿಗೆ ಏನಾದರೂ ಹೊಸತನ್ನು ಮಾಡಲು ಬಯಸುವಿರಾ? ಇಲ್ಲಿನ ಈ ಪೊಟೇಟೋ ಸಾಲ್ಸಾ ಟ್ರೈ ಮಾಡಿ ನೋಡಿ!
ಪೊಟೇಟೋ ಸಾಲ್ಸಾ

ಸಾಮಗ್ರಿ : 4-5 ಮಧ್ಯಮ ಗಾತ್ರದ ಆಲೂ, 4-5 ಚಮಚ ಆಲಿವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ, ಕಸೂರಿಮೇಥಿ, ಎಳ್ಳು, ಮೆಯೋನೀಸ್.
ವಿಧಾನ : ಆಲೂ ಚೆನ್ನಾಗಿ ತೊಳೆದು, ಒರೆಸಿ, ಅದನ್ನು ಚಿತ್ರದಲ್ಲಿರುವಂತೆ ಉದ್ದುದ್ದಕ್ಕೆ ಹೋಳು ಮಾಡಿಕೊಳ್ಳಿ. ಇದನ್ನು ಕುದಿ ನೀರಿಗೆ ಹಾಕಿ ಲೈಟ್ ಆಗಿ ಬ್ಲಾಂಚ್ ಮಾಡಿ. ನಂತರ ಒಂದು ಬೇಸನ್ನಿಗೆ ಉಳಿದೆಲ್ಲ ಸಾಮಗ್ರಿ ಹಾಕಿ, ಮಸಾಲೆ ಮಿಶ್ರಣ ಕಲಸಿಡಿ. ಇದರಲ್ಲಿ ಆಲೂ ತುಂಡು ಸೇರಿಸಿ ಎಲ್ಲ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ, ಎಳ್ಳಿನಲ್ಲಿ ಹೊರಳಿಸಿ. ನಂತರ ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ, ಒಂದು ಓವನ್ ಪ್ರೂಫ್ ಡಿಶ್ಶಿಗೆ ಈ ಆಲೂ ಹಾಕಿರಿಸಿ, 180 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ, ನಂತರ ಮೆಯೋನೀಸ್ ಜೊತೆ ಸವಿಯಲು ಕೊಡಿ.
ಫುಡ್ ವೆಜಿಟೆಬಲ್ ಟ್ರೀಟ್ ಈಗ ಎಲ್ಲೆಡೆ ಧಂಡಿಯಾಗಿ ತಾಜಾ ತರಕಾರಿ ತುಸು ಅಗ್ಗವಾಗಿ ಸಿಗುತ್ತಿರುವಾಗ, ಅದೇ ಪ್ರಧಾನವಾಗಿ ಇರುವಂಥ ರೆಸಿಪೀಸ್ ಟ್ರೈ ಮಾಡಿ ನೋಡೋಣವೇ?
ಸ್ಪೆಷಲ್ ಟರ್ನಿಪ್ ಪಲ್ಯ

ಸಾಮಗ್ರಿ : ಗುಂಡಗಿನ ಕೆಂಪು ಮೂಲಂಗಿ ಯಾ ನವಿಲುಕೋಸು 500 ಗ್ರಾಂ, ಧಾರಾಳವಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ, ಒಂದಿಷ್ಟು ಉದ್ದಕ್ಕೆ ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಕಪ್ ಹಸಿ ಬಟಾಣಿ, ತುಸು ಎಣ್ಣೆ.
ವಿಧಾನ : ನವಿಲುಕೋಸಿನ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಗ್ಗರಣೆ ಕೊಟ್ಟ ನಂತರ ಹಸಿ ಮೆಣಸು, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಇದಕ್ಕೆ ತುರಿದ ಕೋಸು, ಬಟಾಣಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಸೇರಿಸಿ ಬಾಡಿಸಬೇಕು. ಕೊನೆಯಲ್ಲಿ ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ. ಬಿಸಿ ಬಿಸಿ ಅನ್ನ ಯಾ ಚಪಾತಿ ಜೊತೆ ಸವಿಯಲು ಕೊಡಿ.
ಎಲೆಕೋಸು ಕ್ಯಾರೆಟ್ ನ ಈ ಜುಗಲ್ ಬಂದಿ ಪಲ್ಯ, ಎಲ್ಲರಿಗೂ ಬಹಳ ಇಷ್ಟವಾಗಲಿದೆ!
ಕ್ಯಾರೆಟ್ ಎಲೆಕೋಸಿನ ಪಲ್ಯ

ಸಾಮಗ್ರಿ : 500 ಗ್ರಾಂ ಹೆಚ್ಚಿದ ಎಲೆಕೋಸು, 1 ಕಪ್ ಉದ್ದಕ್ಕೆ ಹೆಚ್ಚಿಕೊಂಡ ತಾಜಾ ಕ್ಯಾರೆಟ್, 1 ಕಪ್ ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸು, ಕೊ.ಸೊಪ್ಪು, ಕರಿಬೇವು, ಸಣ್ಣಗೆ ಹೆಚ್ಚಿದೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ, ತೆಂಗಿನ ತುರಿ, ಅರಿಶಿನ ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಮೆಂತ್ಯ.
ವಿಧಾನ : ಮೊದಲು ಎಲೆಕೋಸು, ಕ್ಯಾರೆಟ್ ನ್ನು ಬೇರೆ ಬೇರೆಯಾಗಿ ಬ್ಲಾಂಚ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕರಿಬೇವು, ಹಸಿಮೆಣಸು ಹಾಕಿ ಬಾಡಿಸಿ. ನಂತರ ಬಟಾಣಿ ಹಾಕಿ ಮಂದ ಉರಿಯಲ್ಲಿ ಕೆದಕಿ ಬೇಯಿಸಿ. ನಂತರ ಉಪ್ಪು, ಖಾರ, ಉಳಿದೆಲ್ಲ ಪದಾರ್ಥ ಹಾಕಿ, ಎಲ್ಲವೂ ಬೆರೆತುಕೊಳ್ಳುವಂತೆ ಹದನಾಗಿ ಬಾಡಿಸಿ. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ, ಕೆದಕಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆ ರಸ ಹಿಂಡಿಕೊಂಡು ಬಿಸಿ ಅನ್ನಸಾರಿನ ಜೊತೆ ಸವಿಯಿರಿ.
ಮಾಮೂಲಿ ಕೋಫ್ತಾ ಬದಲು ಈ ಸಲ ಹೂಕೋಸಿನೊಂದಿಗೆ ಬಟಾಣಿ ಬೆರೆಸಿ, ಈ ಹೊಸ ಬಗೆಯ ಸ್ಪೆಷಲ್ ಕೋಫ್ತಾ ಟ್ರೈ ಮಾಡಬಾರದೇಕೆ?
ಬಟಾಣಿ–ಹೂಕೋಸಿನ ಕೋಫ್ತಾ

ಕೋಫ್ತಾಗಾಗಿ ಸಾಮಗ್ರಿ : 3 ಕಪ್ ಶುಚಿಗೊಳಿಸಿ ನೀಟಾಗಿ ತುರಿದ ಹೂಕೋಸು. 1 ಕಪ್ ಹಸಿ ಬಟಾಣಿ, 3-4 ಹಸಿಮೆಣಸು, 1 ತುಂಡು ಶುಂಠಿ, 5-6 ಎಸಳು ಬೆಳ್ಳುಳ್ಳಿ, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆಪುಡಿ, 1 ಕಪ್ ಕಡಲೆಹಿಟ್ಟು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ.
ಮಸಾಲೆಗಾಗಿ ಸಾಮಗ್ರಿ : ಅರ್ಧ ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, ಅರ್ಧ ಕಪ್ ದಪ್ಪಗೆ ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಟೊಮೇಟೊ ಪೇಸ್ಟ್, ಅರಿಶಿನ, ಧನಿಯಾಪುಡಿ, ಗರಂಮಸಾಲ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ಈರುಳ್ಳಿ ಸೇರಿಸಿ ಬಾಡಿಸಿ. ನಂತರ ಬಟಾಣಿ, ಆಮೇಲೆ ಹೂಕೋಸು ಹಾಕಿ ನೀಟಾಗಿ ಬಾಡಿಸಿ. ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಸೇರಿಸಿ, ಚೆನ್ನಾಗಿ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಕಡಲೆಹಿಟ್ಟು ಸೇರಿಸಿ, ನೀರು ಚಿಮುಕಿಸಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ಕೋಫ್ತಾ ಉಂಡೆ ರೆಡಿ!
ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಮೊದಲು ದಪ್ಪಗೆ ಹೆಚ್ಚಿದ್ದು, ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಉಳಿದ ಮಸಾಲೆ, ಉಪ್ಪು ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ಗ್ರೇವಿ ಗಟ್ಟಿ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ ಕುದಿಸಿರಿ. ಮಂದ ಉರಿ ಮಾಡಿಕೊಂಡು, ಇದಕ್ಕೆ ಕರಿದ ಉಂಡೆ ಹಾಕಿ, ಮುರಿಯದಂತೆ ಮೆಲ್ಲಗೆ ಕೈಯಾಡಿಸಿ. 1-2 ಕುದಿ ಬಂದ ನಂತರ ಕೆಳಗಿಳಿಸಿ, ಹೆಚ್ಚಿದ ಪುದೀನಾ, ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.





