ಕಥೆ – ಟಿ.ಆರ್. ಉಷಾರಾಣಿ
ಹಳ್ಳಿಯ ಮುಗ್ಧೆ ರೇಶ್ಮಿ ಮಹಾನಗರದ ಗಂಡನನ್ನು ತವರಿನವರ ಬಲವಂತಕ್ಕೆ ಮದುವೆಯಾಗಿದ್ದಳು. ಗಂಡನ ಮೃಗೀಯ ವರ್ತನೆಯ ಬಗ್ಗೆ ಸದಾ ತನ್ನ ನೆರೆಯವಳಾದ ಪಾವನಿ ಬಳಿ ಹೇಳಿಕೊಂಡು ಗೋಳಾಡುತ್ತಿದ್ದಳು. ಇಂಥ ರೇಶ್ಮಿ ಸೆರೆವಾಸ ಸೇರಿದ್ದು ಏಕೆ…..?
ಕೋಣೆಯ ತುಂಬಾ ಮಬ್ಬುಗತ್ತಲು. ಫ್ಯಾನ್ ಗಾಳಿಯೂ ಸಾಲದೆಂಬಂತೆ ರೇಶ್ಮಿ ಬೆವರುತ್ತಿದ್ದಾಳೆ. ಅವಳ ರೇಷ್ಮೆಯಂತಹ ಕೂದಲೆಲ್ಲಾ ಕೆದರಿದೆ, ಕಣ್ಣುಗಳು ಅರ್ಧ ಮುಚ್ಚಿವೆ. ಹಣೆಯಿಂದ ಬೆವರು ಧಾರಾಕಾರವಾಗಿ ಸುರಿಯುತ್ತಿದೆ. ಬೈತಲೆಯಲ್ಲಿದ್ದ ಸಿಂಧೂರ ಕರಗಿ ಮೂಗಿನ ಮೇಲಿಂದ ಕೆಳಗಿಳಿಯುತ್ತಿದೆ. ಮಂಚದ ಮೂಲೆಯಲ್ಲಿ ಮುದುರಿ ಕುಳಿತಿದ್ದಾಳೆ. ಎಷ್ಟು ಹೊತ್ತಿನಿಂದ ಹಾಗೆ ಕುಳಿತಿದ್ದಳೋ ಗೊತ್ತಿಲ್ಲ.
ಅವಳ ರೌದ್ರವೆಲ್ಲಾ ಕಡಿಮೆ ಆದ ಮೇಲೆ ಮಂಚದಿಂದ ಕೆಳಗಿಳಿದಳು. ತನ್ನ ನಗ್ನ ದೇಹವನ್ನು ಬೆಡ್ ಶೀಟ್ ನಿಂದ ಮುಚ್ಚಿಕೊಂಡು ಬಚ್ಚಲು ಮನೆಗೆ ಹೋಗಿ ಶವರ್ ಆನ್ ಮಾಡಿ ಸ್ನಾನ ಮಾಡಿದಳು. ಅವಳಿಗೆ ಸ್ವಲ್ಪ ಸಮಾಧಾನವಾಯಿತು. ಬೀರುವಿನಿಂದ ಸೀರೆ ತೆಗೆದುಕೊಂಡು ಮೈ ಮುಚ್ಚಿಕೊಂಡಳು. ರೂಮಿನ ಲೈಟ್ ಆನ್ ಮಾಡಿ ಗಂಡ ಸುಜಿತ್ ನತ್ತ ನೋಡಿದಳು. ಅವನು ಅಂಗಾತ ಮಲಗಿದ್ದ, ಕಣ್ಣುಗಳು ಮುಚ್ಚಿದ್ದವು, ದೇಹ ನಗ್ನವಾಗಿತ್ತು. ಬೆಡ್ ಶೀಟ್ ನಿಂದ ಮುಚ್ಚಿ ರೂಮಿನ ಬಾಗಿಲು ಎಳೆದುಕೊಂಡು ಹೊರಬಂದಳು.
ಡೈನಿಂಗ್ ಟೇಬಲ್ ಬಳಿ ಬಂದು ಗಟಗಟನೆ ಬಾಯಿಗೆ ನೀರು ಸುರಿದುಕೊಂಡು ಹೊರಬಂದು ಸರಿಯಾಗಿ ಸೀರೆ ಉಟ್ಟುಕೊಂಡಳು. ಅವಳಿಗೆ ಮೈಕೈ ವಿಪರೀತ ನೋಯುತ್ತಿತ್ತು. ಹಾಲ್ ನಲ್ಲಿದ್ದ ಸೋಫಾದ ಮೇಲೆ ಮೈ ಚೆಲ್ಲಿದಳು. ಬೆಳಗಾದದ್ದೇ ತಿಳಿಯಲಿಲ್ಲ. ಅವಳಿಗೆ ನಡೆಯಲೂ ಸಹ ಆಗುತ್ತಿರಲಿಲ್ಲ. ತೊಡೆಯ ಸಂದುಗಳಲ್ಲಿ ಅತೀವವಾದ ವೇದನೆ, ಕೆನ್ನೆಗಳೆಲ್ಲಾ ಕೆಂಪಗೆ ಊದಿಕೊಂಡಿತ್ತು. ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿದಾಗ ಪ್ರಯಾಸದಿಂದ ಎದ್ದು ಬಾಗಿಲು ತೆರೆದಳು. ಸುಜಿತ್ ನ ಸ್ನೇಹಿತ ಮತ್ತು ಸಹೋದ್ಯೋಗಿ ಜಿತೇಂದ್ರ ಕುಮಾರ್ ಅದೇ ಫ್ಲಾಟ್ ನಲ್ಲಿ ವಾಸವಿದ್ದರು. ಪ್ರತಿನಿತ್ಯ ಇಬ್ಬರೂ ಸೇರಿ ಜಾಗಿಂಗ್ ಗೆ ಹೋಗುತ್ತಿದ್ದರು. ಅಂದು ಸುಜಿತ್ ಜಾಗಿಂಗ್ ಗೆ ಬಾರದೇ ಇದ್ದುದರಿಂದ ಫೋನ್ ಮಾಡಿದ, ಅದು ನಿರುತ್ತರವಾದಾಗ ತಾನೇ ಖುದ್ದಾಗಿ ಬಂದಿದ್ದ.
“ಭಾಭೀ… ಸುಜಿತ್ ಎಲ್ಲಿ….? ನಿಮಗೇನಾಗಿದೆ…..” ಎಂದು ಅವಳ ನಡೆಯಲಾರದ ಸ್ಥಿತಿಯನ್ನು ನೋಡಿ ಕೇಳಿದವನು ಸಣ್ಣಗೆ ಬೆವರಿದ. ಅವಳ ಭುಜ, ಕೈ ಹಿಡಿದುಕೊಂಡು ಮೆಲ್ಲಗೆ ಸೋಫಾದ ಮೇಲೆ ಕುಳ್ಳಿರಿಸಿದ. ರೇಶ್ಮಿ ಅರ್ಧ ನಿಮೀಲಿತ ನೇತ್ರದಿಂದ ಪ್ರಯಾಸವಾಗಿ ರೂಮಿತ್ತ ಕೈ ಚಾಚಿ ತೋರಿ ಗಂಡ ಮಲಗಿದ್ದಾನೆಂದು ಸಂಜ್ಞೆ ಮಾಡಿದಳು. ಜಿತೇಂದ್ರ ಸೀದಾ ರೂಮಿನೊಳಗೆ ನುಗ್ಗಿ, “ಸುಜಿತ್…. ಸುಜಿತ್….” ಎಂದು ಕೂಗಿದ. ಪ್ರತ್ಯುತ್ತರವಿಲ್ಲ. ಮಂಚದ ಸಮೀಪಕ್ಕೆ ಬಂದು ಅವನನ್ನು ಅಲ್ಲಾಡಿಸಿದ ಅವನಿಂದ ಚಲನವೇ ಇಲ್ಲ. ಮುಖ ಪಕ್ಕಕ್ಕೆ ವಾಲಿತ್ತು. ಗೆಳೆಯನಿಗೆ ಹೆದರಿಕೆಯಾಗಿ ಮಾತೇ ಬರಲಿಲ್ಲ. ಮೂಗಿನ ಕೆಳಗೆ ಬೆರಳು ಹಿಡಿದ `ಊಹ್ಞೂಂ….’ ಉಸಿರಾಟ ನಡೆಯುತ್ತಿರುವಂತೆ ಕಾಣಲಿಲ್ಲ. ಅಲ್ಲೇ ಬಿದ್ದಿದ್ದ ಚಿಕ್ಕ ದಾರವನ್ನು ಅವನ ಮೂಗಿನ ಹೊಳ್ಳೆಗಳ ಮುಂದೆ ಹಿಡಿದ ಅದು ಲಂಬಾಕಾರವಾಗಿ ನಿಂತಲ್ಲೇ ನಿಂತಿತು.

ಗಾಬರಿಯಿಂದ ಅವನು ತಕ್ಷಣವೇ ರೂಮಿನಿಂದ ಹೊರಬರುತ್ತಾ, “ಭಾಭೀ….” ಎಂದು ಕೂಗಿದ. ಅವಳು ಸೋಫಾದ ಮೇಲೆ ಹಾಗೆ ಒರಗಿಕೊಂಡಿದ್ದಳು. ಅವಳಿಗೂ ಸರಿಯಾಗಿ ಜ್ಞಾನವಿರಲಿಲ್ಲ. ಅವಳ ಸ್ಥಿತಿಯೂ ಶೋಚನೀಯವಾಗಿತ್ತು. ನೀರು ಬೇಕೆಂದು ಅವಳು ಅವನನ್ನು ಕೇಳಿದಳು. ಅವಳಿಗೆ ನೀರಿನ ಬಾಟಲಿ ತಂದು ಕೊಟ್ಟು, ತನ್ನ ಹೆಂಡತಿಗೆ ಫೋನ್ ಮಾಡಿದ. ತಕ್ಷಣವೇ ಅವನ ಹೆಂಡತಿ ಸುಹಾನಿ ಕೂಡ ಬಂದಳು.
ಬಹುಶಃ ಯಾರೋ ಬಂದಿರಬೇಕು, ಏನೋ ನಡೆದಿದೆ ಎಂದು ಗಂಡ ಹೆಂಡತಿ ಇಬ್ಬರೂ ಮಾತನಾಡಿಕೊಂಡರು. ಏನು ಮಾಡುವುದೆಂದು ತಿಳಿಯದೆ ಇಬ್ಬರೂ ಗಲಿಬಿಲಿಗೊಂಡರು. ಕಡೆಗೆ 100ಕ್ಕೆ ಫೋನಾಯಿಸಿದ ಜಿತೇಂದ್ರ ಕುಮಾರ್. ಸುಹಾನಿ ರೇಶ್ಮಿಯ ಹಣೆ ಮುಟ್ಟಿ ನೋಡಿದರೆ ಅದು ಸುಡುತ್ತಿತ್ತು. ಅವಳು ಅರೆಪ್ರಜ್ಞಾವಸ್ಥೆಯಲ್ಲಿದ್ದಳು.
ಅರ್ಧ ಗಂಟೆಯೊಳಗೆ ಪೊಲೀಸ್ ಪಡೆಯೇ ಬಂದಿಳಿಯಿತು. ಅಲ್ಲಿನ ಚಿತ್ರಣವೇ ಬದಲಾಗಿ ಹೋಯಿತು. ಮಹಿಳಾ ಪೊಲೀಸ್ ರೇಶ್ಮಿಯ ಮುಖಕ್ಕೆ ನೀರೆರಚಿದಳು. ಅವಳು ನಿಧಾನಕ್ಕೆ ಕಣ್ಣು ಬಿಟ್ಟಾಗ, ಎದುರಿಗಿದ್ದ ಪೊಲೀಸರನ್ನು ನೋಡಿ ಪೂರ್ತಿ ಹೆದರಿದಳು. ಪಕ್ಕದಲ್ಲಿದ್ದ ಸುಹಾನಿಯನ್ನು ನೋಡಿ ಅವಳಿಗೆ ಸ್ವಲ್ಪ ಧೈರ್ಯ ಬಂದಿತು.
`ತಾವಿಬ್ಬರೇ ಗಂಡಹೆಂಡತಿ ಇದ್ದ ಮನೆಯಲ್ಲಿ ಪೊಲೀಸ್ ಮತ್ತೆ ಗುರುತೇ ಇಲ್ಲದ ಯಾರ್ಯಾರೋ ಮನೆಯಲ್ಲೆಲ್ಲಾ ಓಡುತ್ತಿದ್ದಾರೆ, ರೂಮಿನ ಬಾಗಿಲಿಗೆ ಯಾರೂ ಬರದಂತೆ ಏಕೆ ಅಡ್ಡ ಇಡಲಾಗಿದೆ,’ ಎಂದು ಯೋಚಿಸಿದ ರೇಶ್ಮಿಗೆ ತಲೆ ಸಿಡಿದುಹೋಗುತ್ತಿತ್ತು. `ಚಹಾ ಕುಡಿಯದಿದ್ದರೆ ತನಗೆ ತಲೆನೋವಿನಿಂದ ಮುಕ್ತಿಯಿಲ್ಲ,’ ಎಂದುಕೊಂಡು ನಿಧಾನವಾಗಿ ಮೇಲೆದ್ದಳು. ಮಹಿಳಾ ಪೋಲೀಸ್ ಅವಳನ್ನು ಅಲ್ಲಾಡದೆ ಕುಳಿತುಕೊಳ್ಳುವಂತೆ ಹೇಳಿದಳು.
“ದೀದೀ ನಂಗೆ ಚಾಯ್ ಬೇಕು. ತುಂಬಾ ಸುಸ್ತು. ಪ್ಲೀಸ್ ಬಿಡಿ,” ಎಂದು ಕೈ ಮುಗಿದಳು ರೇಶ್ಮಿ.
ಪೊಲೀಸ್ ಅಧಿಕಾರಿ ವೃತ್ತಿಯಿಂದ ಎಷ್ಟೇ ಕಠಿಣಳಾದರೂ ಅವಳೂ ಹೆಣ್ಣು, ಇವಳ ಸ್ಥಿತಿಗೆ ಮರುಕಪಟ್ಟು ಸುಹಾನಿಗೆ ಚಾಯ್ ಮಾಡುವಂತೆ ಹೇಳಿದಳು.
“ಬೇಗ ಬಂದು ಇಲ್ಲೇ ಕುಳಿತುಕೊಳ್ಳಬೇಕು. ಹೋಗು….” ಎಂದು ಸುಹಾನಿಗೆ ಜಾಗ ಬಿಟ್ಟಳು.
ಸುಹಾನಿ ಮಾಡಿಕೊಟ್ಟ ಬಿಸಿ ಬಿಸಿ ಚಹಾವನ್ನು ಅಲ್ಲೇ ಸೋಫಾದ ಮೂಲೆಗೊರಗಿ ಕುಳಿತ ರೇಶ್ಮಿ ಸೊರ್ ಸೊರ್ ಎಂದು ಹೀರಿದಳು. ಅವಳಿಗೆ ಸ್ಪಲ್ಪ ಚೈತನ್ಯ ಬಂದಂತಾಯಿತು. ಮಹಿಳಾ ಪೊಲೀಸ್ ಅವಳ ಚಲನವಲನವನ್ನೇ ಗಮನಿಸುತ್ತಿದ್ದಳು, “ಏನಾಯಿತು? ಮನೆಗೆ ಯಾರಾದರೂ ಬಂದು ಏನಾದರೂ ಮಾಡಿದರೆ…..?” ಮೌನವಾಗಿದ್ದ ರೇಶ್ಮಿಯನ್ನು ತಿವಿದು, “ನಿನ್ನನ್ನೇ ಕೇಳ್ತಾ ಇರೋದು,” ಎಂದು ಸ್ವಲ್ಪ ಒರಟಾಗಿ ಕೇಳಿದಳು.

ರೇಶ್ಮಿ ಹೆದರಿ ಸುಹಾನಿಗೆ ಒರಗಿಕೊಂಡು ಕುಳಿತಳು, ನಡುಗುತ್ತಲೇ ಹಿಂದಿಯಲ್ಲಿ, “ಮನೆಗೆ ಯಾರೂ ಬರಲಿಲ್ಲ. ಏನಾಗಿದೆ ಅವನಿಗೆ….? ಕತ್ತಲೆಯಲ್ಲಿ ನನಗೆ ಕಾಣಲಿಲ್ಲ. ನಾನು ಎದ್ದಾಗ ಮಲಗಿದ್ದ. ಅದಕ್ಕೆ ನಾನು ಇಲ್ಲಿ ಬಂದು ಮಲಗಿದೆ. ನನ್ನ ಹಳ್ಳಿಗೆ ಬಿಟ್ಟುಬಿಡು, ನನ್ನ ಪಾಡಿಗೆ ನಾನು ಆರಾಮವಾಗಿ ಹೋಗ್ತೀನಿ ಎಂದು ಗೋಗರೆದೆ. ಅವನಿಗೆ ಮಾತೇ ಇಲ್ಲ. ನನಗೆ ಮೈಕೈ ತುಂಬಾ ನೋಯ್ತಿದೆ. ನೋಡಿ….” ಎಂದು ತನ್ನ ಕೆಂಪಾದ ಕೆನ್ನೆಗಳನ್ನು ತೋರಿಸಿದಳು.
ಅವಳ ಕೆನ್ನೆಗಳ ಮೇಲೆ ಕಚ್ಚಿದ ಗಾಯಗಳಿಂದ ಊದಿಕೊಂಡು ಒಳ್ಳೆ ಬೆಂಕಿಯುಂಡೆಯಂತೆ ಕಾಣುತ್ತಿತ್ತು. ಅವಳ ಹೇಳಿಕೆಯಿಂದ ಪೊಲೀಸರು ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
`ಇವಳು ಹೇಳುವ ಪ್ರಕಾರ ಮನೆಗೆ ಯಾರೂ ಬಂದಿಲ್ಲ. ಗಂಡನೇ ಇವಳಿಗೆ ಹಿಂಸೆ ನೀಡಿದ್ದಾನೆ. ಆದರೆ ಅವನು ಹೇಗೆ ಸತ್ತ…..? ಇದು ಬಗೆಹರಿಯದ ಸಮಸ್ಯೆ. ವಿಷಪ್ರಾಶನವೇನೂ ಆದಂತೆ ಕಾಣುತ್ತಿಲ್ಲ, ಅವನ ಮೈ ನೀಲಿಗಿಟ್ಟಿಲ್ಲ. ಯಾವುದೇ ಆಯುಧದ ಪ್ರಯೋಗ ಆಗಿಲ್ಲ. ಅವನಿಗೆ ಸಾವು ಸಂಭವಿಸಿರುವ ವಿಷಯವೇ ಇವಳಿಗೆ ತಿಳಿದಿಲ್ಲ. ನಡುವೆ ಯಾರಾದರೂ ಬಂದಿರಬೇಕೇ….?’ ಪೊಲೀಸ್ ಅಧಿಕಾರಿ ಆಲೋಚಿಸಿದಳು.
ಪೊಲೀಸರು ಫೋಟೋಗಳನ್ನು ತೆಗೆದುಕೊಂಡು ಹೆಣವನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿ, ರೇಶ್ಮಿಯನ್ನು ಬಂಧಿಸಿ ಸ್ಟೇಶನ್ ಗೆ ಕರೆದೊಯ್ದರು. ಅಲ್ಲಿಂದ ಅವಳನ್ನು ಪೊಲೀಸ್ ಕಾವಲಿನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
ಅದೇ ಅಪಾರ್ಟ್ ಮೆಂಟ್ ನ ಮತ್ತೊಂದು ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಪಾವನಿ ಮತ್ತು ರಾಘವ್ ದಂಪತಿಗಳು ಆಗ ತಾನೇ ಗೋವಾ ಟೂರ್ ಮುಗಿಸಿಕೊಂಡು ಮನೆಗೆ ವಾಪಸ್ಸಾದಾಗ ಆಶ್ಚರ್ಯ ಕಾದಿತ್ತು. ರೇಶ್ಮಿ ಸುಜಿತ್ ವಾಸಿಸುತ್ತಿದ್ದ ಫ್ಲಾಟಿಗೆ ಪೊಲೀಸರು ಏಕೆ ತಡೆ ರಿಬ್ಬನ್ ಕಟ್ಟಿ ಯಾರೂ ಒಳಗೆ ಹೋಗದಂತೆ ಮಾಡಿದ್ದರೋ ಇವರಿಗೆ ತಿಳಿಯಲಿಲ್ಲ.
ಅದನ್ನು ಕಂಡೊಡನೆ ಪಾವನಿಗೆ ಪ್ರಯಾಣದ ಆಯಾಸವೆಲ್ಲಾ ಮರೆತುಹೋಯಿತು, “ಏಕೆ ಏನಾಯಿತು….? ಈ ಫ್ಲಾಟ್ ಗೆ ಏಕೆ ಸೀಲ್ ಮಾಡಿದ್ದಾರೆ…? ಪೊಲೀಸರೇಕೆ ಕಾವಲು ಕಾಯುತ್ತಿದ್ದಾರೆ….” ಎಂದು ಅಲ್ಲಿ ನಿಂತಿದ್ದವರನ್ನು ಕೇಳಿದಳು. ಅವಳಿಗೆ ಗೊಂದಲವಾಗಿತ್ತು. ಪೊಲೀಸರು ಬಾಯಿ ಬಿಡಲಿಲ್ಲ, “ಹೋಗಮ್ಮ ನಿಮ್ಮ ಕೆಲ್ಸ ನೋಡ್ಕೋಳಿ ಹೋಗಿ,” ಎಂದು ಗದರಿ ಅವಳ ಉತ್ಸಾಹಕ್ಕೆ ತಣ್ಣೀರೆರೆಚಿದರು.
ಆದರೆ ಅವಳ ಗಂಡ ರಾಘವನಿಗೆ ವಿಷಯ ಗೊತ್ತಿತ್ತು. ಆದರೆ ಅವನ ಕಾಳಜಿ ಮನೆಯಲ್ಲಿ ಒಬ್ಬರೇ ಇದ್ದ ತನ್ನ ತಾಯಿಗೆ ಏನೂ ತೊಂದರೆ ಆಗಿಲ್ಲದಿರುವ ಬಗ್ಗೆ ಅವರನ್ನು ವಿಚಾರಿಸುವುದಾಗಿತ್ತು. ಆಕೆ ತುಂಬಾ ಹೆದರಿ ಹಾಸಿಗೆಯ ಮೂಲೆಯಲ್ಲಿ ಮುದುರಿ ಕುಳಿತಿದ್ದರು. ಮಗನನ್ನು ನೋಡಿದ ಕೂಡಲೇ ಬಾಟಲಿಯೊಳಗಿದ್ದ ಗಾಳಿಯಂತೆ ಒತ್ತಡದಲ್ಲಿ ಹೊರಬಿತ್ತು ಅವರ ಆತಂಕದ ಮಾತುಗಳು.
`ಗಂಡನಿಗೂ ತಿಳಿದಿದೆ, ಅತ್ತೆಗೂ ತಿಳಿದಿದೆ. ಆದರೆ ಎಲ್ಲರೂ ತನ್ನಿಂದ ಏನೋ ಮರೆಮಾಚುತ್ತಿದ್ದಾರೆ,’ ಎಂದು ಪಾವನಿಗೆ ಎಲ್ಲಿಲ್ಲದ ಆತಂಕ.
ಪ್ರಯಾಣ ಮುಗಿಸಿ ಮನೆಗೆ ಬಂದ ತಕ್ಷಣ ಅತ್ತೆ ಬಿಸಿ ಬಿಸಿ ಕಾಫಿ ಕೊಡುತ್ತಾರೆ ಎಂದುಕೊಂಡಿದ್ದ ಪಾವನಿಗೆ ನಿರಾಸೆ ಕಾದಿತ್ತು. ಅವಳ ಅತ್ತೆ ಹೆದರಿದ ಹರಿಣಿಯಾಗಿದ್ದರು. ಕೊನೆಗೆ ಅವಳಿಗೆ ಆತಂಕ ತಡೆಯಲು ಸಾಧ್ಯವಾಗದೆ, “ರಾಘು….ಪ್ಲೀಸ್ ಏನಾಯ್ತು ಹೇಳಿ….” ಎಂದಳು.
“ಮೊದಲು ನೀನು ಫ್ರೆಶ್ ಅಪ್ ಆಗಿ, ಮೂರು ಕಪ್ ಬಿಸಿ ಬಿಸಿ ಕಾಫಿ ತೆಗೆದುಕೊಂಡು ಬಾ. ಪಾಪ ಅಮ್ಮ ಏನಾದರೂ ತಿಂದಿದ್ದಾರೋ ಇಲ್ಲವೋ…. ಕಾಫಿ ಕುಡೀತಾ ಆಮೇಲೆ ಎಲ್ಲಾ ಹೇಳ್ತೀನಿ,” ಎಂದು ರಾಘವ್ ಹೆಂಡತಿಯ ಭುಜ ತಟ್ಟಿ ಒಳಗೆ ಕಳಿಸಿ, ತಾಯಿಯ ಪಕ್ಕದಲ್ಲೇ ಮಂಚದ ಮೇಲೆ ಕುಳಿತುಕೊಂಡ.
ಪಾವನಿಗೆ ವಿಷಯ ತಿಳಿದುಕೊಳ್ಳುವ ಆತುರ. ಬೇಗ ಬೇಗ ಫ್ರೆಶ್ ಅಪ್ ಆಗಿ, ಬಿಸಿಬಿಸಿ ಕಾಫಿ ಮಾಡಿ ಅತ್ತೆಗೂ, ಗಂಡನಿಗೂ ಕೊಟ್ಟಳು. ಕಾಫಿ ತೆಗೆದುಕೊಳ್ಳುವಾಗ ಅತ್ತೆಯ ಕೈ ನಡುಗುವುದನ್ನು ಗಮನಿಸಿ ಅವಳೂ ಅತ್ತೆಯ ಮತ್ತೊಂದು ಪಕ್ಕದಲ್ಲಿ ಕುಳಿತು, “ಅಮ್ಮಾ, ಮೊದಲು ಕಾಫಿ ಕುಡೀರಿ. ಇನ್ನು ಮೇಲೆ ನಿಮ್ಮೊಬ್ಬರನ್ನೇ ಬಿಟ್ಟು ಎಲ್ಲೂ ಹೋಗೋದಿಲ್ಲ,” ಎಂದಳು ಗಂಡನ ಕಡೆ ತಿರುಗಿ, “ರಾಘು, ಅಮ್ಮನನ್ನೂ ಕರೆದುಕೊಂಡು ಹೋಗೋಣಾಂತ ನಾನು ನಿಮಗೆ ಹೇಳ್ದೆ ತಾನೇ….? ನೀವಿಬ್ಬರೇ ಹೋಗಿ ಅಂತ ಅಮ್ಮಾನೇ ಬಲವಂತ ಮಾಡ್ತಿದ್ದಾರೆ ಎಂದಿರಿ. ಈಗ ನೋಡಿ…. ಅಮ್ಮ ಯಾಕಿಷ್ಟು ಗಾಬರಿಯಾಗಿದ್ದಾರೆ…?” ಎಂದು ಗಂಡನನ್ನು ಆತಂಕದಿಂದ ಕೇಳಿದಳು.
ಕಾಫಿ ಹೀರುತ್ತಾ, “ಪಾವನಿ…. ಪಕ್ಕದ್ಮನೆಯ ನಿನ್ನ ಪ್ರಾಣಸ್ನೇಹಿತೆ ರೇಶ್ಮಿ ತನ್ನ ಗಂಡನನ್ನು ಕೊಲೆ ಮಾಡಿದ್ದಾಳಂತೆ, ಅವಳನ್ನು ಅರೆಸ್ಟ್ ಮಾಡಿ ಕರಕೊಂಡು ಹೋಗಿದ್ದಾರೆ. ಈ ವಿಷಯ ನಮ್ಮ ಅಪಾರ್ಟ್ ಮೆಂಟ್ ಗ್ರೂಪ್ ನಲ್ಲಿ ಬಂತು. ಆದರೆ ನೀನು ನೋಡಿರಲಿಲ್ಲ. ಟೂರ್ ನ ಸಂತೋಷ ಸುಮ್ಮನೆ ಯಾಕೆ ಹಾಳು ಮಾಡುವುದೆಂದು ನಾನು ನಿನಗೆ ತಿಳಿಸಲಿಲ್ಲ. ನಿನ್ನ ಮೊಬೈಲ್ ನಿಂದ ನಾನೇ ಡಿಲೀಟ್ ಮಾಡಿದ್ದೆ.
“ಆದರೆ ಅಮ್ಮನ ಬಗ್ಗೆ ತುಂಬಾ ಚಿಂತೆಯಾಗುತ್ತಿತ್ತು. ಕೊನೆಗೆ ಎದುರು ಮನೆ ಮೀನಾಕ್ಷಮ್ಮನವರಿಗೆ ಅಮ್ಮನ ಜೊತೆ ಮಲಗುವಂತೆ ರಿಕ್ವೆಸ್ಟ್ ಮಾಡಿದೆ. ನೋಡು ತುಂಬಾ ಮುಗ್ಧೆ ಅಂತಿದ್ಯಲ್ಲಾ ಅವಳೇ ಈ ಕೆಲಸ ಮಾಡಿರುವುದು,” ಎಂದು ರಾಘವ್ ಹೇಳಿದ.
ಪಾವನಿಗೆ ಅವಳ ಕಿವಿಯನ್ನೇ ನಂಬಲಾಗಲಿಲ್ಲ. “ರೇಶ್ಮಿ ಕೊಲೆ ಮಾಡಿದಳಾ… ಅದು ತನ್ನ ಗಂಡನ್ನ…..? ಇಲ್ಲಾರೀ ನಾನು ತುಂಬಾ ಕ್ರೈಂ ಸ್ಟೋರಿ ನೋಡ್ತಾ ಇರ್ತೀನಿ. ಬೇರೆ ಯಾರೋ ಮಾಡಿ ಇವಳ ಮೇಲೆ ಹಾಕಿರಬಹುದು. ಅವಳು ಹಳ್ಳಿಯ ಮುಗ್ಧ ಹುಡುಗಿ. ತುಂಬಾ ಒಳ್ಳೆಯವಳು. ನಾನೂ ಅವಳು ಪ್ರತಿದಿನ ಮಾತಾಡ್ತಾ ಇದ್ವಿ. ಅವಳು ಕೊಲೆ ಮಾಡೋದಕ್ಕೆ ಸಾಧ್ಯವೇ ಇಲ್ಲ…..” ಎಂದು ಪಾವನಿ ನ್ಯಾಯಾಧೀಶರಂತೆ ತೀರ್ಮಾನ ಹೇಳಿದಾಗ ರಾಘವನಿಗೆ ನಗು ಬಂದಿತು.
“ಅವಳು ನಿನ್ನ ಜೊತೆ ಮಾತನಾಡುವಾಗ, ತನ್ನ ಗಂಡನ ಬಗ್ಗೆ ಏನಾದರೂ ಕಂಪ್ಲೇಂಟ್ ಹೇಳ್ತಾ ಇದ್ಲಾ…..?” ರಾಘವ್ ಗಂಭೀರವಾಗಿ ಕೇಳಿದ.
“ಅಂತಹ ದೊಡ್ಡ ಕಂಪ್ಲೇಂಟ್ ಏನೂ ಇಲ್ಲ. ಆದರೆ ಒಂದು ವಿಷ್ಯಾ ಹೇಳ್ತಾ ಇದ್ಲು. ಅದೂ…” ಎಂದು ಅನುಮಾನಿಸುತ್ತಾ ಅತ್ತೆಯ ಕಡೆ ತಿರುಗಿದಳು.
ಅವರು ಮೌನವಾಗಿ ಕುಳಿತಿದ್ದರು. ಏಕೆಂದರೆ ರೇಶ್ಮಿ ಚಿಕ್ಕ ಹುಡುಗಿ ಎಂದು ಎಷ್ಟೋ ಸಲ ಅವಳಿಗೆ ತಾವು ಮಾಡಿದ ಅಡುಗೆಯನ್ನು ಕೊಡುತ್ತಿದ್ದರು. ಅವಳು, `ಬಹುತ್ ಅಚ್ಛಾ ಮಾಜಿ…..’ ಎಂದು ಉದ್ಗಾರ ತೆಗೆಯುತ್ತಿದ್ದಳು. ಆದರೆ ಈ ಘಟನೆ ನಡೆದಾಗಲಿಂದ ಅವರ ಜಂಘಾಬಲವೇ ಉಡುಗಿದಂತೆ ಆಗಿತ್ತು. ಬಲವಂತವಾಗಿ 3 ದಿನದ ಮಟ್ಟಿಗೆ ಮಗ ಸೊಸೆಯನ್ನು ಗೋವಾ ಟೂರಿಗೆ ಕಳುಹಿಸಿದ್ದರು. ಆ ಮೂರು ದಿನದಲ್ಲಿ ಇಷ್ಟೆಲ್ಲಾ ನಡೆದುಬಿಟ್ಟಿತ್ತು. ಹಾಲಿನವರು, ಪೇಪರ್ ನವರು ಯಾರನ್ನೂ ಅಪಾರ್ಟ್ ಮೆಂಟ್ ಒಳಗೆ ಬಿಟ್ಟಿರಲಿಲ್ಲ. ಎಲ್ಲರೂ ಕೆಳಗೆ ಹೋಗಿಯೇ ತೆಗೆದುಕೊಳ್ಳಬೇಕಿತ್ತು.
“ಅಮ್ಮನ ಕಡೆ ಯಾಕೆ ನೋಡ್ತೀಯಾ….? ಪರವಾಗಿಲ್ಲ ಹೇಳು ಅದೇನು ಹೇಳ್ತಾ ಇದ್ಲು ಅಂತ….” ಎಂದು ರಾಘವ್ ಅವಸರಿಸಿದ.
“ಅವಳ ಗಂಡ ರಾತ್ರಿಯಲ್ಲಿ ಅವಳನ್ನು ತುಂಬಾ ಗೋಳುಹೊಯ್ದುಕೊಳ್ತಾ ಇದ್ದನಂತೆ. ಪ್ರತಿ ದಿನ ಅವಳ ಮೈ ನೀಲಿಗಟ್ಟಿರುತ್ತಿತ್ತು. ಅದ್ದರಿಂದ ಅವಳು ನನ್ನನ್ನು ಹಳ್ಳಿಗೆ ಕಳುಹಿಸಿಬಿಡಿ ಅಂತ ಕೇಳ್ತಿದ್ಲಂತೆ,” ಎಂದು ಪಾವನಿ ತೊದಲುತ್ತಾ ಹೇಳಿದಳು ಅತ್ತೆಯ ಮುಖ ನೋಡಿದಳು. ಅವರು ಕೇಳಲಾರದಂತೆ ತಲೆ ತಗ್ಗಿಸಿ ಕುಳಿತಿದ್ದರು.
“ಸರಿ ಹಾಗಾದ್ರೆ…. ಸಂಕಟ ತಡೆಯಲಾರದೇ ಕೊಲೆ ಮಾಡಿದರೆ ಊರಿಗೆ ಹೋಗಬಹುದು ಎಂದುಕೊಂಡು ಕೊಲೆ ಮಾಡಿದ್ದಾಳೆ,” ರಾಘವ್ ನಿರ್ಣಯವಿತ್ತ.
“ಇಲ್ಲಾರೀ…. ಪಾಪ ಗಂಡ ಅಂದ್ರೆ ಪ್ರಾಣನೇ ಇಟ್ಟುಕೊಂಡಿದ್ದಳು,” ಎಂದು ಪಾವನಿ ಅವನ ನಿರ್ಣಯವನ್ನು ವಿರೋಧಿಸಿದಳು.
ಇತ್ತೀಚೆಗೆ ಪಾವನಿ ರೇಶ್ಮಿಗೆ ಕನ್ನಡ ಪಾಠ ಹೇಳಿಕೊಡಲು ಪ್ರಾರಂಭಿಸಿದ್ದಳು. ಅವಳು ಹಿಂದಿ ಹುಡುಗಿಯಾದ್ದರಿಂದ `ನಮ್ಮ ಹಲ್ಲಿ,’ ಎನ್ನುತ್ತಿದ್ದಳು. ತಾಯಿ ಮಗುವಿಗೆ ಹೇಳಿಕೊಡುವಂತೆ, ಹಲ್ಲಿ ಅಲ್ಲ…. ಹಲ್ಲಿ ಅಂದ್ರೆ ಛಿಪ್ಕಲಿ. ಆದ್ದರಿಂದ `ಹಳ್ಳಿ’ ಎಂದು ಪಾವನಿ ತಿದ್ದುತ್ತಿದ್ದಳು.
“ರಾಘು, ಒಂದ್ಸಲ ನಾನು ರೇಶ್ಮೀನಾ ನೋಡಬೇಕು. ಯಾವ ಪೊಲೀಸ್ ಸ್ಟೇಷನ್ ನಲ್ಲಿದ್ದಾಳೆಂದು ವಿಚಾರಿಸಿ ನೋಡಿಕೊಂಡು ಬರೋಣ್ವಾ….” ಎಂದಳು.
ಆಗ ಅವಳ ಅತ್ತೆ ಸುಮಿತ್ರಮ್ಮ ಬಾಯ್ತೆರೆದು, “ಪಾವನಿ, ಕೊಲೆಗಾರಳನ್ನು ಭೇಟಿ ಮಾಡಲು ನಿಂಗೇನು ಹುಚ್ಚು ಹಿಡಿದಿದೆಯಾ….? ಇನ್ನೆಂದೂ ಅವಳನ್ನು ಭೇಟಿ ಮಾಡಬೇಡ,” ಎಂದು ಗದರಿದರು.
ಪಾವನಿಗೆ ನಿರಾಶೆಯಾಯಿತು. ಆದರೂ, “ರಾಘು, ಇದರಲ್ಲೇನೋ ಮೋಸ ಇದೆ. ನೀವು ವಕೀಲರು. ಪ್ರತಿದಿನ ಅದೆಷ್ಟೋ ಅಪರಾಧಿಗಳನ್ನು ನೋಡ್ತಾ ಇರ್ತೀರಾ. ಒಂದು ಸಲ ನೋಡೋದ್ರಲ್ಲಿ ಏನು ತಪ್ಪು….” ಎಂದು ಗಂಡನಲ್ಲಿ ವಿನಂತಿಸಿಕೊಂಡಳು.
ಸುಮಿತ್ರಮ್ಮನವರಿಗೆ ಅವಳ ಮಾತು ಇಷ್ಟವಾಗಲಿಲ್ಲ. ಮುಖವನ್ನು ಎತ್ತಲೋ ತಿರುಗಿಸಿಕೊಂಡರು. ರಾಘವ್ ಟಿ.ವಿ ಆನ್ ಮಾಡಿದ. ಪ್ರತಿ ಚಾನೆಲ್ ನಲ್ಲೂ ತರಹೇವಾರಿ ಶೀರ್ಷಿಕೆಯೊಂದಿಗೆ ರೇಶ್ಮಿಯದೇ ಸುದ್ದಿ. ಅವಳ ಹೆಸರು ಸಿಂಧೂರಿ. ಅವಳಿಗೆ ಉದ್ದನೆಯ ನುಣುಪಾದ ಸೊಂಪಾದ ಕೂದಲಿತ್ತು. ಕೆಂಪು ಮಿಶ್ರಿತ ಬಿಳೀ ದುಂಡು ಕೆನ್ನೆಗಳು. ಅದಕ್ಕೇ ಅವಳನ್ನು ಅವಳ ಹಳ್ಳಿಯಲ್ಲಿ ರೇಶ್ಮಿ ಎಂದು ಕರೆಯುತ್ತಿದ್ದರು. ಅವಳು ಹತ್ತನೇ ತರಗತಿಯವರೆಗೂ ಮಾತ್ರ ಓದಿದ್ದಳು. ಅವಳ ಹಳ್ಳಿಯಲ್ಲಿ ಕಾಲೇಜು ಇರಲಿಲ್ಲ. ಮುದ್ದಾಗಿರುವ ಮಗಳು ಪಕ್ಕದ ಊರಿಗೆ ಹೋಗಿ ಓದುವುದು ಅವಳ ಬಾಪೂಗೆ ಒಲ್ಲದ ವಿಷಯವಾಗಿತ್ತು. ಆಗಲೇ ಅವಳಿಗೆ ಸಾಕಷ್ಟು ಸಂಬಂಧಗಳು ಬರುತ್ತಿದ್ದವು. ತನ್ನದೇ ಊರಿನ ಛೋಟು ಅಲಿಯಾಸ್ ರಂಜಿತ್ ಕುಮಾರ್ ನನ್ನು ಕಂಡರೆ ತುಂಬಾ ಪ್ರೀತಿ. ದೊಡ್ಡ ಗುಂಪು ಕಟ್ಟಿಕೊಂಡು ಒಬ್ಬರನ್ನೊಬ್ಬರು ರೇಗಿಸಿಕೊಂಡು ಜೀವನದ ಆನಂದವನ್ನು ಅನುಭವಿಸುತ್ತಿದ್ದವಳಿಗೆ ಈ ಮದುವೆ ಎಂಬ ಬಂಧನ ಬೇಡವಾಗಿತ್ತು.
ಮದುವೆಯಾದ ಕೂಡಲೇ ಗಂಡನ ಜೊತೆ ಬೆಂಗಳೂರಿಗೆ ಬಂದು ಸಂಸಾರ ಹೂಡಿದಳು. ತಂತಮ್ಮ ಬಾಲ್ಕನಿಯಲ್ಲಿ ನಿಂತು ಪಾವನಿ, ರೇಶ್ಮಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ರೇಶ್ಮಿಯ ಗಂಡ ಸಾಫ್ಟ್ ವೇರ್ ಉದ್ಯೋಗಿ. ಅವನು ಆಫೀಸಿಗೆ ಹೊರಟ ನಂತರ ತುಳಸೀ ಪೂಜೆಗೆಂದು ಬಾಲ್ಕನಿಗೆ ಬರುತ್ತಿದ್ದ ರೇಶ್ಮಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಕೈಯಲ್ಲಿ ಪೂರ್ಣಕುಂಭ ಹಿಡಿದು ತುಳಸೀ ತೀರ್ಥವನ್ನು ತೆಗೆದುಕೊಂಡು, `ದೀದೀ….’ ಎಂದು ನಾಲ್ಕು ಮನೆಗೆ ಕೇಳಿಸುವಂತೆ ಕೂಗುತ್ತಿದ್ದಳು.
ಪಾವನಿಗೆ ಪುರಸತ್ತಿದ್ದರೆ, ತನ್ನ ಬಾಲ್ಕನಿಯಲ್ಲಿ ನಿಂತು ಅವಳೊಂದಿಗೆ ಹರಟುತ್ತಿದ್ದಳು. ಪಾವನಿಗೆ ಹಿಂದಿ ಬರುತ್ತಿದ್ದರೂ ಅವಳ ಹಳ್ಳಿಯ ಹಿಂದಿ ಭಾಷೆ ಇವಳಿಗೆ ಪೂರ್ತಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೂ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಿದ್ದಳು. ಪಾವನಿ ಕೂಡ ಸಾಫ್ಟ್ ವೇರ್ ಎಂಜಿನಿಯರ್. ಆದರೆ ಅವಳದು ಮನೆಯಲ್ಲೇ ಕುಳಿತು ಮಾಡುವ ಕೆಲಸ. ಒಮ್ಮೊಮ್ಮೆ ಮಾತ್ರ ಆಫೀಸ್ ಗೆ ಹೋಗುತ್ತಿದ್ದಳು.
“ದೀದೀ…. ನೀವು `ಉಪಹಾರ್’ ಸಿನಿಮಾ ನೋಡಿದ್ದೀರಾ…? ಅದೇ ಜಯಾಬಾಧುರಿಯ ತರಹ ನನ್ನ ಕಥೇನೂ. ನಮ್ಮ ಹಳ್ಳಿ ಮನೆಯಲ್ಲಿ ನನ್ನ ಕೋಣೆನೇ ಈ ಮನೆಯಷ್ಟು ಇತ್ತು. ನನಗೆ ತುಂಬಾ ಗೆಳೆಯರಿದ್ದರು. ನಾವೆಲ್ಲ ಎಷ್ಟು ಆಟ ಆಡ್ತಾಯಿದ್ವಿ…. ಮಾವಿನ ಹಣ್ಣಿನ ಕಾಲದಲ್ಲಂತೂ ನಮ್ಮ ಮನೆಯ ತೋಟದಲ್ಲಿ ಮಾವು ಇದ್ದರೂ, ಪಕ್ಕದ ತೋಟದಲ್ಲಿ ಕದ್ದು ತಿನ್ನುತ್ತಿದ್ದ ಮಾವಿನಕಾಯಿಯೇ ನಮಗೆ ತುಂಬಾ ರುಚಿ. ಛೋಟು ಕಿತ್ತು ಕೊಡ್ತಾ ಇದ್ದ. ನಾನು ಉಪ್ಪು ಮೆಣಸಿನಪುಡಿ ತಯಾರಿ ಮಾಡಿಕೊಂಡು ಹೋಗಿರುತ್ತಿದ್ದೆ. ಹಣ್ಣಾಗಿದ್ದರೆ ಒಂದೇ ಹಣ್ಣನ್ನು ನಾನು ಛೋಟು ಕಚ್ಚಿ ಕಚ್ಚಿ ತಿನ್ನುತ್ತಿದ್ದೆವು. ಆಗ ಅವನು ನನ್ನ ಕೆನ್ನೆಯನ್ನೂ ಕಚ್ಚಿ ಬಿಡುತ್ತಿದ್ದ,” ಎಂದು ನಾಚಿಕೆ ತೋರುತ್ತಿದ್ದಳು.
ಪಾವನಿಗೆ ಅವಳು ಹೇಳುವುದನ್ನು ಕೇಳಿಯೇ ಕೆನ್ನೆ ರಂಗೇರುತ್ತಿತ್ತು.
“ಏಯ್ ರೇಶ್ಮಿ ನಿನ್ನ ಗಂಡನ ಎದುರಿಗೆ ಏನಾದರೂ ಹೇಳಿಯೇ ಜೋಕೆ,” ಎಂದು ಅವಳನ್ನು ಪಾವನಿ ಎಚ್ಚರಿಸುವುದನ್ನು ಮರೆಯುತ್ತಿರಲಿಲ್ಲ. ರೇಶ್ಮಿಗೆ ಛೋಟು ವಿಷಯ ಹೇಳುವುದೆಂದರೆ ತುಂಬಾ ಖುಷಿ.
“ಮತ್ತ್ಯಾಕೆ ನೀನು ಅವನನ್ನೇ ಮದುವೆ ಆಗಲಿಲ್ಲ…..? ಅವನನ್ನೇ ಮದುವೆ ಆಗಬೇಕಿತ್ತು….” ಎಂದ ಪಾವನಿಯ ಮಾತಿಗೆ ಅವಳ ಮುಖ ಚಿಕ್ಕದಾಗುತ್ತಿತ್ತು.
“ನಮ್ಮ ಮನೆಯಲ್ಲಿ ಛೋಟು ಯಾರಿಗೂ ಇಷ್ಟವಿರಲಿಲ್ಲ. ಅವನಿಗೆ ಸರಕಾರಿ ಕೆಲ್ಸಾ ಇಲ್ಲ…. ಅವನು ಸರಿಯಾಗಿ ಓದಿಲ್ಲ…. ಆಸ್ತಿನೂ ಇಲ್ಲ. ಆದರೆ ಅವನಿಗೆ ನನ್ನನ್ನು ಕಂಡರೆ ತುಂಬಾ ಪ್ರೀತಿ. ನನಗೆ ಕಣ್ಣೀರು ಬಂದರೆ ತನ್ನ ನಾಲಿಗೆಯಿಂದ ಅದನ್ನು ನೆಕ್ಕುತ್ತಿದ್ದ.
`ರೇಶ್ಮಿ ನೀನು ಎಲ್ಲಿದ್ದರೂ ಚೆನ್ನಾಗಿರು. ನಿನ್ನ ಗಂಡನಾಗುವವನಂತೆ ನಾನೂ ಕೂಡ ಓದಿ ಸರ್ಕಾರಿ ಕೆಲಸದಲ್ಲಿ ಇದ್ದಿದ್ದರೆ ನಿನ್ನ ಬಾಪೂ ಖಂಡಿತಾ ನಂಗೆ ಮದುವೆ ಮಾಡಿಕೊಡುತ್ತಿದ್ದರು,’ ಎಂದು ಬೇಸರಪಟ್ಟುಕೊಳ್ಳುತ್ತಿದ್ದ. ನಾನು ಧೈರ್ಯ ಮಾಡಿ ಬಾಪೂಗೆ ಹೇಳಿ ಛೋಟೂನನ್ನೇ ಮದುವೆ ಆಗಬೇಕಿತ್ತು,” ಎಂದು ಅವಳಿಗೆ ಬೇಸರವಾದಗೆಲ್ಲಾ ಪಾವನಿಯ ಬಳಿ ಹೇಳಿಕೊಳ್ಳುತ್ತಿದ್ದಳು.
ಪಾವನಿಯ ಬಲವಂತಕ್ಕೆ ರಾಘವ್ ಲಾಯರ್ ಆಗಿದ್ದರಿಂದ ರೇಶ್ಮಿಯನ್ನು ಭೇಟಿ ಮಾಡಿಸಲು ಕರೆದುಕೊಂಡು ಹೋದ. ಅಷ್ಟು ಹೊತ್ತಿಗೆ ರೇಶ್ಮಿಗೆ ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಕರೆತಂದಿದ್ದರು. ಅದುವರೆಗೂ ರೇಶ್ಮಿಯ ಕಡೆಯವರು ಯಾರೂ ಬಂದಿರಲಿಲ್ಲ. ಅವರೆಲ್ಲಾ ದೂರದ ಹಳ್ಳಿಯಿಂದ ಬರಲು ಒಂದೆರಡು ದಿನಗಳಾಗುತ್ತಿತ್ತು. ಸುಜಿತ್ ಗೆ ಸಂಬಂಧಪಟ್ಟವರು ಮತ್ತು ಅವನ ಆಫೀಸಿನ ಕೆಲವರು ಬಂದಿದ್ದರು. ಅವನ ತಾಯಿ ತಂದೆಯರೂ ರೇಶ್ಮಿಯ ಊರಿನವರೇ ಆದ್ದರಿಂದ ಅವರೆಲ್ಲಾ ಬರುವುದು ತಡವೇ. ಪಾವನಿಯನ್ನು ನೋಡಿದ ತಕ್ಷಣ ರೇಶ್ಮಿಗೆ ತನ್ನ ತವರಿನವರೇ ಬಂದಿದ್ದಾರೇನೊ ಎನ್ನುವಷ್ಟು ಖುಷಿಯಾಯಿತು. ರೇಶ್ಮಿ ಸರಳುಗಳ ಹಿಂದಿನಿಂದ, “ದೀದೀ…. ನಂದೇನೂ ತಪ್ಪಿಲ್ಲ! ನೀವಾದ್ರೂ ಹೇಳಿ. ನನ್ನನ್ನು ಬಿಡಿಸಿ ಅಂತ ಲಾಯರ್ ಬಾಬೂಗೆ ಹೇಳಿ…. ನಾನು ಹಳ್ಳಿಗೇ ಹೋಗಿಬಿಡ್ತೀನಿ,” ಎಂದು ಅಳುತ್ತಾ ಹೇಳಿದಳು.
“ನಿಂಗೇನೂ ಆಗಲ್ಲ. ನೀನು ಹೊರಗೆ ಬರ್ತೀಯಾ, ಧೈರ್ಯವಾಗಿರು. ಆದರೆ ಸ್ವಲ್ಪ ತಾಳ್ಮೆ ತಂದ್ಕೋ ಬೇಕಿತ್ತು ಅಲ್ವಾ…..? ಯಾಕೆ ಹೀಗೆ ಮಾಡಿದೆ…..?”
“ಅಯ್ಯೋ ದೀದೀ…. ನೋವು ನೋವು ಅಂತ ಕಿರುಚಿಕೊಂಡರೂ ಬಿಡಲಿಲ್ಲ. ಕಚ್ಚಿ ಕಚ್ಚಿ ನಂಗೆ ಎಷ್ಟು ಗಾಯ ಮಾಡಿದಾನೆ ನೋಡಿ. ನಂದು ಹಟ್ಟಾಕಟ್ಟಾ ಶರೀರ. ನಾನೇನು ಮಾಡ್ಲಿ? ಅವನನ್ನು ತಡೋಕೆ ಪ್ರಯತ್ನಪಟ್ಟೆ ಆಗಲಿಲ್ಲ. ಅದಕ್ಕೆ ಅವನ ಕತ್ತಿನ ಮೇಲೆ ಭದ್ರವಾಗಿ ಕುಳಿತುಬಿಟ್ಟೆ ಅಷ್ಟೇ…. ಆ ಮಬ್ಬುಗತ್ತಿಯಲ್ಲಿ ನಂಗೆ ಅವನು ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವನು ಸುಮ್ಮನಾದನೆಂದು ತಿಳಿದು ನಾನು ಕೆಳಗಿಳಿದೆ. ಆದರೆ ಸತ್ತೇ ಹೋಗ್ತಾನೆ ಅಂತಾ ನಂಗೇನು ಗೊತ್ತಿತ್ತು. ಈ ಪೊಲೀಸಿನವರು ಹೇಳಿದಾಗಲೇ ಅವನು ಸತ್ತು ಹೋಗಿದ್ದಾನೆ ಅಂತ ನನಗೆ ಗೊತ್ತಾಗಿದ್ದು. ನಾನೇನೋ ಅವನು ಮಲಗಿದ್ದಾನೆ ಅಂತ ಅಂದುಕೊಂಡಿದ್ದೆ,” ಎಂದು ತಡೆದೂ ತಡೆದೂ ಹೇಳಿದಳು.
ರೇಶ್ಮಿಗೆ ಅಳಲೂ ಶಕ್ತಿ ಇರಲಿಲ್ಲ. ಅವಳ ಕೆನ್ನೆ, ಕುತ್ತಿಗೆ ಬಳಿ ಗಾಯದ ಗುರುತಿತ್ತು. ಅವಳ ತೆಳುವಾದ ಚುಗುಡಿ ಸೀರೆಯೊಳಗಿಂದ ಅವಳ ಎದೆಯ ಮೇಲ್ಭಾಗ, ಸೊಂಟದ ಬಳಿ ನೀಲಿಗಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. `ಅಬ್ಬಾ ಓದಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ… ಸ್ವಲ್ಪವಾದರೂ ಮನುಷ್ಯತ್ವ ಬೇಡವೇ….? ಹೆಂಡತಿಯನ್ನು ಹೀಗಾ ಹಿಂಸಿಸುವುದು….?’ ಎಂದುಕೊಂಡಳು ಪಾವನಿ.
“ದೀದೀ…. ನಮ್ಮ ಹಳ್ಳೀಲಿ ಚಮೇಲಿ ಅಂತ ಒಬ್ಬಳು ಇದ್ದಳು. ಅವಳಿಗೆ ಹುಚ್ಚು ಹಿಡಿದಿತ್ತು. ಅವಳು ಬೀದಿಯಲ್ಲಿ ನಿಂತು ಬರುವ ಹೋಗುವ ಗಂಡಸರಿಗೆಲ್ಲಾ, `ನಿಮ್ಮ ಹೆಂಡತಿಯನ್ನಾದರೆ ನಾಜೂಕಾಗಿ ನೋಡಿಕೊಳ್ತೀರಾ ನನ್ನನ್ನು ಮಾತ್ರ ಹೀಗೆ ಸಾಯಿಸ್ತೀರಾ,’ ಅಂತ ಕೂಗಾಡ್ತಾ ಇದ್ಲು. ನಾನೂ ಹೆಂಡತಿ ಅಲ್ವಾ…. ನಂಗೆ ಯಾಕೆ ಚಮೇಲಿಗೆ ಮಾಡಿದ ಹಾಗೆ ಮಾಡಿದಾರೆ…..? ಈ ಸ್ಥಿತಿಯಲ್ಲಿ ನನ್ನ ಛೋಟು ಏನಾದರೂ ನನ್ನನ್ನು ನೋಡಿದ್ದಿದ್ರೆ ಇವನ ಪ್ರಾಣ ತೆಗೆದಿದ್ದು ಒಳ್ಳೆಯದಾಯಿತು ಅಂತ ಹೇಳ್ತಿದ್ದ.
“ದೀದೀ ನಮ್ಮ ಬಾಪೂಗೆ ಫೋನ್ ಮಾಡಿ ಹೇಳ್ತೀರಾ…..? ನಾನು ಅವರ ಜೊತೆ ಹಳ್ಳಿಗೆ ಹೊರಟುಹೋಗ್ತೀನಿ. ನಂಗೆ ಈ ಪೇಟೆ ಸಹವಾಸ ಸಾಕು. ದೀದಿ… ನಾನು ನನ್ನ ಹಲ್ಲಿ ಅಲ್ಲ…. ಹಳ್ಳಿಗೆ ಜಾನಾ ಹೈ,” ಎಂದು ಅಂಗಲಾಚಿದಳು.
`ಇವಳಿಗೆ ಇನ್ನೆಲ್ಲಿಯ ಬಿಡುಗಡೆ…..? ಪಾಪ, ಎಷ್ಟು ಮುಗ್ಧೆ! ಇವಳಿಗೆ ಈ ಸ್ಥಿತಿ ಬರಬಾರದಾಗಿತ್ತು. ಪೊಲೀಸರ ಮುಂದೆ, ತಾನು ಗಂಡನ ಕತ್ತಿನ ಮೇಲೆ ಕುಳಿತಿದ್ದೆ ಅಂತ ಒಪ್ಪಿಕೊಂಡಿದ್ದಾಳೆ. ಅವರಿಗೆ ಅಷ್ಟು ಸಾಕು ಇವಳನ್ನು ಅಪರಾಧಿ ಎಂದು ತೀರ್ಮಾನಿಸಲು,’ ಎಂದು ಪಾವನಿಯ ಮನ ರೋದಿಸಿತು. ಪಾವನಿ ಹೊರಟು ನಿಂತಾಗ ರೇಶ್ಮಿ ಕೈ ಕೈ ಮುಗಿದು ಇನ್ನಷ್ಟು ಸಮಯ ಇರುವಂತೆ ಗೋಗರೆದಳು.
`ರೇಶ್ಮಿ ನಿಜವಾಗಿ ತಪ್ಪಿತಸ್ಥಳೇ….? ದೇವರೇ ಇವಳನ್ನು ಈ ವಿಪತ್ತಿನಿಂದ ಪಾರು ಮಾಡು,’ ಎಂದು ಪಾವನಿ ದೇವರಲ್ಲಿ ಬೇಡುತ್ತಾ ಭಾರವಾದ ಮನಸ್ಸಿನಿಂದ ಮನೆಯ ಕಡೆ ಹೆಜ್ಜೆ ಹಾಕಿದಳು.





