ಬೇಸನ್ ಪನೀರ್ ಗ್ರೇವಿ
ಮೂಲ ಸಾಮಗ್ರಿ : 1 ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಿಟಕಿ ಅರಿಶಿನ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಹಸಿ ಮೆಣಸು.
ಗ್ರೇವಿಗಾಗಿ ಸಾಮಗ್ರಿ : ಅರ್ಧ ಕಪ್ ಈರುಳ್ಳಿ ಪೇಸ್ಟ್, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಕಾಶ್ಮೀರಿ ಮಿರ್ಚ್ ಮಸಾಲ, ಗರಂ ಮಸಾಲ, ಅರ್ಧ ಕಪ್ ಟೊಮೇಟೊ ಪೇಸ್ಟ್, ಅರ್ಧ ಸೌಟು ರೀಫೈಂಡ್ ಎಣ್ಣೆ, ತುಸು ಹೆಚ್ಚಿದ ಕೊ.ಸೊಪ್ಪು, ಉದ್ದಕ್ಕೆ ಸೀಳಿದ ಹಸಿ ಮೆಣಸು.
ವಿಧಾನ : ಮೊದಲು ಬೇಸನ್ನಿಗೆ ಕಡಲೆಹಿಟ್ಟು ಹಾಕಿಕೊಂಡು ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಜೀರಿಗೆ, ತುಸು ಬಿಸಿ ನೀರು ಬೆರೆಸಿಕೊಳ್ಳುತ್ತಾ ಇಡ್ಲಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಅರ್ಧ ಗಂಟೆ ಕಾಲ ನೆನೆಯಲು ಬಿಡಿ. ನಂತರ ಇದರಿಂದ ದಪ್ಪ ಗಾತ್ರದ ದೋಸೆ ತಯಾರಿಸಿ. ನಂತರ ಉದ್ದದ ತುಂಡುಗಳಾಗಿ ಕತ್ತರಿಸಿ ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಈ ತುಂಡುಗಳನ್ನೆಲ್ಲ ಹಾಕಿ ಒಮ್ಮೆ ಬಾಡಿಸಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ. ಇದಕ್ಕೆ ಮೊದಲು ಒಗ್ಗರಣೆ ಕೊಟ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಂತರ ಈರುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಒಂದೊಂದಾಗಿ ಎಲ್ಲಾ ಮಸಾಲೆ ಸೇರಿಸಿ ಕೆದಕಬೇಕು. ಅಗತ್ಯ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ ಕುದಿಸಿರಿ. ಕೊನೆಯಲ್ಲಿ ಬಾಡಿಸಿದ ಕಡಲೆ ತುಂಡು ಹಾಕಿ ಎಲ್ಲವನ್ನೂ ಚೆನ್ನಾಗಿ ಕುದಿಸಬೇಕು. ಕೆಳಗಿಳಿಸಿ ಕೊ.ಸೊಪ್ಪು, ಹಸಿಮೆಣಸು ತೇಲಿ ಬಿಟ್ಟು ಬಿಸಿ ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.
ಬ್ರೆಡ್ ಪನೀರ್ ಬಜ್ಜಿ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, 2-3 ಆಲೂ (ಬೇಯಿಸಿ ಮಸೆದಿಡಿ), 10-12 ಬ್ರೆಡ್ ಸ್ಲೈಸ್, ಅಷ್ಟೇ ಪ್ರಮಾಣದ ಪನೀರ್ ಸ್ಲೈಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿಮೆಣಸು, ಓಮ, ಚಾಟ್ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಖಾರ, ಓಮ, ತುಸು ಇಂಗು ಎಲ್ಲಾ ಸೇರಿಸಿ ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಇನ್ನೊಂದು ಬಟ್ಟಲಲ್ಲಿ ಮಸೆದ ಆಲೂವಿಗೆ ಪುಡಿಮೆಣಸು, ಉಪ್ಪು, ಚಾಟ್ಮಸಾಲ, 2 ಬಗೆ ಪೇಸ್ಟ್ ಹಾಕಿ ಮಿಶ್ರಣ ಕಲಸಿಡಿ. ಬ್ರೆಡ್ ಸ್ಲೈಸ್ನ್ನು ತ್ರಿಕೋನಾಕಾರಾಗಿ ಕತ್ತರಿಸಿ ಬೆಣ್ಣೆ ಹಚ್ಚಿರಿ. ತೆಳುವಾದ ಪನೀರ್ ಸ್ಲೈಸ್ ಅಂಟಿಸಿ. ಇವೆರಡರ ಮಧ್ಯೆ ಆಲೂ ಮಿಶ್ರಣ ಸ್ಯಾಂಡ್ವಿಚ್ ಆಗಲಿ. ಈಗ ಈ ಜೋಡಿ ಸ್ಲೈಸ್ನ್ನು ಕಡಲೆಹಿಟ್ಟಲ್ಲಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುಂತೆ ನೀಟಾಗಿ ಕತ್ತರಿಸಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಪೈಸಿ ಕಾರ್ನ್ ಬಾಲ್ಸ್
ಸಾಮಗ್ರಿ : 1 ಕಪ್ ಬೆಂದ ತಾಜಾ ಕಾರ್ನ್, ಅರ್ಧ ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿಯ ಪೇಸ್ಟ್, ಚಾಟ್ಮಸಾಲ, 1 ಗಿಟುಕು ತೆಂಗಿನ ತುರಿ, 1 ಕಪ್ ಬ್ರೆಡ್ ಕ್ರಂಬ್ಸ್, ತುಸು ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ, ಬೇಯಿಸಿ ಮಸೆದ ಆಲೂ 1 ಕಪ್, 2 ಚಮಚ ಕಾರ್ನ್ಫ್ಲೋರ್.
ವಿಧಾನ : ಮೊದಲು ಮಿಕ್ಸಿಗೆ ತಾಜಾ ಕಾರ್ನ್ ಹಾಕಿ ತಿರುವಿಕೊಳ್ಳಿ. ನಂತರ ಇದಕ್ಕೆ ಉಪ್ಪು, ಉಳಿದ 3 ಪೇಸ್ಟ್ ಹಾಕಿ ಮತ್ತೊಮ್ಮೆ ತರಿತರಿಯಾಗಿ ತಿರುವಿಕೊಳ್ಳಿ. ಇದಕ್ಕೆ ಮಸೆದ ಆಲೂ, ಕಾರ್ನ್ಫ್ಲೋರ್, ಕಡಲೆಹಿಟ್ಟು, ಚಾಟ್ ಮಸಾಲೆ, ತೆಂಗಿನ ತುರಿ, ಕೊ.ಸೊಪ್ಪು ಹಾಕಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದರಿಂದ ನಿಂಬೆ ಗಾತ್ರದ ಉಂಡೆ ಕಟ್ಟಿಕೊಂಡು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಪೈಸಿ ಪನೀರ್ ಫಿಂಗರ್ಸ್
ಸಾಮಗ್ರಿ : 1 ಕಪ್ ಕಡಲೆಹಿಟ್ಟು, 200 ಗ್ರಾಂ ಪನೀರ್, ಅರ್ಧ ಕಪ್ ಅನ್ನ, ಅರ್ಧ ಚಮಚ ಗಸಗಸೆ, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-2 ಚಿಟಕಿ ಸೋಡ, ಅರಿಶಿನ, ಅರ್ಧ ಕಪ್ ಮೊಸರು, 1 ಚಮಚ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಉಪ್ಪಿನಕಾಯಿ ಮಸಾಲೆ, ಕರಿಯಲು ಎಣ್ಣೆ.
ವಿಧಾನ : ಮೊದಲು ಮಿಕ್ಸಿಗೆ ಅನ್ನ, ಕಡಲೆಹಿಟ್ಟು, ಉಪ್ಪು, ಮಸಾಲೆ, ಮೊಸರು ಎಲ್ಲಾ ಬೆರೆಸಿ ಚಲಾಯಿಸಿ, ಇದು ಬೋಂಡ ಹದಕ್ಕಿರಬೇಕು. ಪನೀರ್ನ್ನು ಉದ್ದುದಕ್ಕೆ ಹೆಚ್ಚಿಡಿ. ಅದನ್ನು ಕಡಲೆ ಮಿಶ್ರಣದಲ್ಲಿ ಅದ್ದಿಕೊಂಡು ಎಳ್ಳು, ಗಸಗಸೆಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಚೀಸ್ ಕಾಯಿನ್ಸ್
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ನೆನೆಸಿದ ಅವಲಕ್ಕಿ, 1-1 ಸಣ್ಣ ಚಮಚ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, 2 ಚಿಟಕಿ ಅರಿಶಿನ, ಒಂದಿಷ್ಟು ಹೆಚ್ಚಿದ ಹಳದಿ-ಕೆಂಪು ಕ್ಯಾಪ್ಸಿಕಂ, ಈರುಳ್ಳಿ, ಕೊ.ಸೊಪ್ಪು, ಪುದೀನಾ, ತುರಿದ ಚೀಸ್, ಕರಿಯಲು ಎಣ್ಣೆ.
ವಿಧಾನ : ಮೊದಲು ನೆನೆಸಿದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ತಿರುವಿಕೊಳ್ಳಿ. ಇದಕ್ಕೆ ಕಡಲೆಹಿಟ್ಟು ಬೆರೆಸಿ ಮತ್ತೆ ಪೇಸ್ಟ್ ಮಾಡಿ. ಇದು ತುಂಬಾ ತೆಳು ಆಗಬಾರದು. ಇದಕ್ಕೆ ಉಳಿದ ಮಸಾಲೆ, ಉಪ್ಪು ಸೇರಿಸಿ. ಇದರಿಂದ ದಪ್ಪ ಗಾತ್ರದ ದೋಸೆ ತಯಾರಿಸಿ. ಗುಂಡಗಿನ ಚೂಪಾದ ಸ್ಟೀಲ್ ಬಟ್ಟಲಿನಿಂದ ಈ ದೋಸೆಗಳನ್ನು ಕತ್ತರಿಸಿ. ಈ ಕಾಯಿನ್ಸ್ ಮೇಲೆ ಹೆಚ್ಚಿದ ಹಳದಿ, ಕೆಂಪು ಕ್ಯಾಪ್ಸಿಕಂ ಬರಲಿ. ನಂತರ ಈರುಳ್ಳಿ ಹರಡಿ. ಅದರ ಮೇಲೆ ಉಪ್ಪು, ಮೆಣಸು ಉದುರಿಸಿ. ತುರಿದ ಚೀಸ್ ಹರಡಿರಿ. ಓನ್ನಲ್ಲಿ ಈ ಕಾಯಿನ್ಸ್ ಇರಿಸಿ, ಚೀಸ್ ಕರಗುವವರೆಗೂ ಬೇಕ್ ಮಾಡಿ. ನಂತರ ಹೊರತೆಗೆದು ಇವನ್ನು ತಟ್ಟೆಯಲ್ಲಿ ಜೋಡಿಸಿ. ಇದರ ಮೇಲೆ ಚಿತ್ರದಲ್ಲಿರುಂತೆ ಕ್ಯಾಪ್ಸಿಕಂ-ಈರುಳ್ಳಿಗಳಿಂದ ಅಲಂಕರಿಸಿ ಸವಿಯಲು ಕೊಡಿ.