ನಮ್ಮ ಮನೆಯಲ್ಲಿ ಬಹಳ ಕಷ್ಟದ ದಿನಗಳವು. ನನ್ನ ತಾಯಿ, ತಂದೆ ಬರುವ ಅಲ್ಪ ಆದಾಯದಲ್ಲಿ ಹೇಗೋ ಮನೆ ನಡೆಸಿಕೊಂಡು ನಮ್ಮ ಮೂವರನ್ನೂ ಓದಿಸುತ್ತಿದ್ದರು. ನಾನು ಡಿಗ್ರಿ ಓದುತ್ತಿದ್ದೆ. ಹಿರಿಯವಳಾದ ನನ್ನ ಮದುವೆಯ ಕುರಿತು ಮಾತುಕಥೆ ನಡೆಯುತ್ತಿತ್ತು. ಅಲ್ಲಿ ಇಲ್ಲಿ 1-2 ವರ ಬಂದು ನೋಡಿಕೊಂಡು ಹೋಗಿ, ವರದಕ್ಷಿಣೆ ಗಿಟ್ಟಲ್ಲ ಬೇಡ ಎನ್ನುತ್ತಿದ್ದರು.
ಹೀಗಿರುವಾಗ ಒಮ್ಮೆ ನನ್ನ ಸೋದರಮಾವ ತಮ್ಮ ಆಫೀಸಿಗೆ ಹೊಸದಾಗಿ ಅಕೌಂಟೆಂಟ್ ಆಗಿ ಬಂದು ಸೇರಿದ್ದ ಹುಡುಗನನ್ನು ನಮ್ಮ ಮನೆಗೆ ಕರೆದುಕೊಂಡು ಬಂದು, ಹುಡುಗಿ ನೋಡುವ ಶಾಸ್ತ್ರವಿದೆ ಎಂದು ಹೇಳಿದರು. ಎಲ್ಲರೂ ವರದಕ್ಷಿಣೆ ವಿಚಾರವಾಗಿ ಬೇಡ ಎನ್ನುತ್ತಾರೆ ಎಂಬ ಕೋಪದಲ್ಲಿ ನಾನು ಯಾವ ಡ್ರೆಸ್, ಮೇಕಪ್ ಮಾಡಿಕೊಳ್ಳದೆ, ಕೆದರಿದ ತಲೆ, ಹಳೆ ಸೀರೆಯಲ್ಲೇ ಬಂದು ಅವರನ್ನು ಭೇಟಿಯಾದೆ.
ಔಪಚಾರಿಕ ಮಾತುಕಥೆ ನಡೆದು, ಅಮ್ಮ ನನಗೆ ಹುಡುಗನಿಗೆ ಕಾಫಿ ಕೊಡುವಂತೆ ಹೇಳಿದರು. ಮಾವ ಮೊದಲೇ ವಿಷಯ ಹೇಳದೆ ಹುಡುಗನ್ನ ಕರೆ ತಂದಿದ್ದರಿಂದ ಯಾವ ತಿಂಡಿ, ಸ್ವೀಟ್ ಏನೂ ಇರಲಿಲ್ಲ. ಮನೆಯ ಪರಿಸ್ಥಿತಿ ವಿವರಿಸಿದ ಮಾವ, ವರದಕ್ಷಿಣೆ ಸಿಗಲಾರದು ಎಂದು ನೇರವಾಗಿ ಹೇಳಿದರು.
ಅದೆಲ್ಲ ಏನೂ ಬೇಡ, ಹುಡುಗಿ ನನಗೆ ಒಪ್ಪಿಗೆ. ಶಾಸ್ತ್ರೋಕ್ತವಾಗಿ ಹುಡುಗಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ನಮ್ಮ ತಾಯಿ ತಂದೆಗೆ ಪರಿಚಯಿಸಿ ಎಂದು ಹೇಳಿ, ಹುಡುಗ ವಿಳಾಸ ಕೊಟ್ಟು ಹೊರಟುಹೋದ. ಮುಂದಿನ ಭಾನುವಾರ ಅವರ ಮನೆಗೆ ಹೋಗಿ ನೋಡಿದಾಗ ಈ ಸಂಬಂಧ ಕುದುರಬಹುದೆಂಬ ನಂಬಿಕೆ ಬರಲಿಲ್ಲ. ಅಷ್ಟು ಅನುಕೂಲಸ್ಥರು. ಹುಡುಗನ ತಾಯಿತಂದೆ ಸಹ ಅದೇ ಆದರ್ಶದ ಮಾತುಗಳಾಡಿ, ಸರಳ ಮದುವೆಗೆ ಒತ್ತಾಯಿಸಿದರು. ಇಂದು ನಾನು ಈ ಮನೆಯ ಸೊಸೆಯಾಗಿ ಬಹಳ ಸುಖಿಯಾಗಿದ್ದೇನೆ. ಅಂದು ಇವರಾಡಿದ ಮಾತು ನಾನು ಎಂದೆಂದೂ ಮರೆಯುವಂಥದ್ದಲ್ಲ!
– ಸ್ಮೃತಿ, ಮೈಸೂರು.
ನಾವು ನಮ್ಮ ದೊಡ್ಡಮ್ಮನ ಮಗಳ ಮದುವೆಗೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಹೊರಟಿದ್ದೆವು. ನಾವು ನೆಂಟರ ಜೊತೆಗೂಡಿ ಒಟ್ಟು 15 ಜನಕ್ಕೆಂದು ಮೊದಲೇ ಎಸಿ ಕೋಚ್ ರಿಸರ್ವ್ ಮಾಡಿಸಿದ್ದೆವು. ಆದರೆ ಸ್ಟೇಷನ್‌ಗೆ ಬಂದ ಮೇಲೆ ಕೆಲವು ಕೋಚ್‌ಗಳು ಯಾವುದೋ ತಾಂತ್ರಿಕ ದೋಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವನ್ನು ಸೆಕೆಂಡ್ ಕ್ಲಾಸ್ ಕೋಚ್‌ಗಳಾಗಿ ಬದಲಾಯಿಸಿದ್ದರು. ಬೇರೆ ದಾರಿ ಇಲ್ಲದೆ ಪ್ರಯಾಣ ಮುಂದುವರಿಸಬೇಕಾಯಿತು.
ಅದು ಕ್ರಿಸ್‌ಮಸ್ ಸೀಸನ್. ಡಿಸೆಂಬರ್‌ನ ಕೊರೆಯುವ ಚಳಿಯಿಂದಾಗಿ ಎಲ್ಲರೂ ನಡುಗುತ್ತಿದ್ದರು. ಹೇಗಪ್ಪಾ ಇಡೀ ರಾತ್ರಿ ಕಳೆಯುವುದು ಎಂದು ಚಿಂತಿಸಿದೆವು. ಎಸಿ ಕೋಚ್ ತಾನೇ ಎಂದು ಅವರೇ ಬೆಡ್‌ಶೀಟ್, ದಿಂಬು ಕೊಡುತ್ತಾರೆಂದು ನಾವೇನೂ ತಂದಿರಲಿಲ್ಲ. ಈ ಮಕ್ಕಳು ಮರಿಗಳನ್ನು ಹೇಗಪ್ಪಾ ಸುಧಾರಿಸುವುದು ಎಂದು ಸಂಜೆ 7-10 ರವರೆಗೂ ಅದನ್ನೇ ಮಾತನಾಡುತ್ತಾ ಊಟ ಮುಗಿಸಿದೆವು. ನಮ್ಮ ಪಕ್ಕದಲ್ಲೇ ವಯಸ್ಸಾದ ರಾಮಜ್ಜ ಕುಳಿತಿದ್ದರು. ಅವರು ಕಂಬಳಿ ಮಾರುವವರು. ನಮ್ಮ ಸಂಕಟ ಕಂಡು ಅವರು ಸಮಾಧಾನ ಹೇಳಿದರು.
ಹೆಚ್ಚಿಗೆ ವಿವರಿಸದೆ ತಮ್ಮ ಹೊಸ ಕಂಬಳಿ ಬಂಡಲ್ ನಿಂದ ನಮಗೆಲ್ಲ ಕಂಬಳಿ ಕೊಟ್ಟು, ತಲೆಗೂ 1-1 ಇಟ್ಟುಕೊಳ್ಳಲು ಹೇಳಿದರು. ಆದರೆ ಅವೆಲ್ಲ ಹೊಸತು, ಅಷ್ಟೊಂದು ಖರೀದಿಸಲಾಗದು ಎಂದು ಹೇಳಿದಾಗ ಅದಕ್ಕೆ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ಕಷ್ಟ ಎಂದು ಬಂದಾಗ ಪರಸ್ಪರ ಸಹಕರಿಸುವುದೇ ನಿಜವಾದ ಮಾನವೀಯ ಧರ್ಮ, ಅದನ್ನೇ ತಾನು ನಂಬಿದ್ದೇನೆ ಅನುಸರಿಸುತ್ತೇನೆ ಎಂದರು.
ಅವರ ಮಾತುಗಳು ನಮ್ಮನ್ನು ಕಟ್ಟಿಹಾಕಿದವು. ಅವರೂ ಶಿವಮೊಗ್ಗಕ್ಕೆ ಹೊರಟಿದ್ದರು. ಬಲವಂತ ಮಾಡಿ ಒಪ್ಪಿಸಿ ಅವರನ್ನು ನಮ್ಮ ಮದುವೆಗೆ ಹೊರಡಿಸಿದೆವು. ಇಂಥ ಅಪರೂಪದ ವ್ಯಕ್ತಿತ್ವ, ಅವರ ತೂಕದ ಮಾತುಗಳನ್ನು ಎಂದೂ ಮರೆಯಾಗದು.
– ರತ್ನಮಾಲಾ, ತುಮಕೂರು.