ಎಂ.ಟಿ.ಆರ್‌ ಹೋಟೆಲ್‌ನಿಂದ ಲಾಂಗ್‌ ವಾಕ್‌ ಹೊರಟಿದ್ದ ಸದಾಶಿವರಾಯರನ್ನು ನಿಲ್ಲಿಸಿ, ಸ್ಪೀಡಾಗಿ ಸ್ಕೂಟಿಯಲ್ಲಿ ಸಾಗುತ್ತಿದ್ದ ಹುಡುಗಿ ಕೇಳಿದಳು, “ಲಾಲ್‌ಬಾಗ್‌ ವೆಸ್ಟ್ ಗೇಟ್‌ಗೆ ಹೋಗಬೇಕು….”

“ಅರೆ ಹೋಗಮ್ಮ….. ಅದಕ್ಕಾಗಿ ವಾಕಿಂಗ್‌ ಹೊರಟ ಪ್ರತಿಯೊಬ್ಬರನ್ನೂ ಹೀಗೆ ನಿಲ್ಲಿಸಿ ವರದಿ ಒಪ್ಪಿಸುತ್ತಿದ್ದರೆ, ನೀನು ಅಲ್ಲಿಗೆ ಹೋಗಿ ಸೇರುವುದು ಯಾವಾಗ?” ಎನ್ನುವುದೇ?

ಟಿ.ವಿ. ನ್ಯೂಸ್‌ ನೋಡುತ್ತಿದ್ದ ರಾಹುಲ್ ಅಮ್ಮನನ್ನು ಕೂಗಿ ಕರೆದ, “ಅಮ್ಮಾ, ನೋಡೀಗ, ಕೆಳಗಿನ ಮಟ್ಟದಲ್ಲಿದ್ದ ನಮ್ಮ ದೇಶ ಮೊದಲಿನ ಸ್ಥಿತಿಗಿಂತ ಈಗ ಮೇಲೆ ಏರಿದೆಯಂತೆ…. ಪ್ರಯಾಣ ಮಾಡುವಾಗ ನಾವು ಎಚ್ಚರಿಕೆಯಿಂದ ಇರಬೇಕು. ಏನೇನು ಬದಲಾವಣೆ ಆಗಿದೆಯೋ ಏನೋ?”

ತಾಯಿ ಒಳಗಿನಿಂದ ಬಂದವರೆ, “ಏನೋ ಹಾಗಂದ್ರೆ….? ಏನು ಹೇಳ್ತಿದ್ದೀಯಾ?” ಎಂದು ಆತಂಕದಿಂದ ವಿಚಾರಿಸಿದರು.

ಟಿ.ವಿ. ಗಮನಿಸಿದಾಗ, ಸಿಂಧು ಮತ್ತು ಸಾಕ್ಷಿ ಇಬ್ಬರೂ ನಮ್ಮ ದೇಶವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ ಎಂದು ಫ್ಲಾಷ್‌ ನ್ಯೂಸ್‌ ಬರುತ್ತಿತ್ತು!

ಬರ್ಗರ್‌ ತಿನ್ನುತ್ತಿದ್ದ ಸತೀಶನನ್ನು ಗಮನಿಸಿ ಟೀಚರ್‌ ಹೇಳಿದರು, “ಹಾಲು, ಬಾದಾಮಿ ಸೇವಿಸಬೇಕು. ಅದರಲ್ಲಿ ಒಳ್ಳೆಯ ಪೌಷ್ಟಿಕಾಂಶಗಳಿವೆ.”

“ಯಾರು ಹೇಳಿದ್ರು… …….. ಪಿಜ್ಜಾ ಬರ್ಗರ್‌ನಲ್ಲಿ ಪೌಷ್ಟಿಕಾಂಶ ಇಲ್ಲಾಂತ…. ಹಾಲು, ಬಾದಾಮಿ ಸೇವಿಸುವ ನಮ್ಮವರು ಒಲಿಂಪಿಕ್ಸ್ ಮೆಡಲ್ ಇಲ್ಲದೆ ಬಂದರು, ಬರ್ಗರ್‌ ಪಿಜ್ಜಾ ತಿಂದವರು ಉಳಿದ ಪದಕ ಬಾಚಿಕೊಂಡು ಹೋದರು!” ಎಂದ ಸತೀಶ್‌.

ಬಹಳ ಹೊತ್ತಿನಿಂದ ಸುಹಾಸ್‌ ಆಫೀಸಿನಲ್ಲಿ ಕಾಣದಿದ್ದಾಗ ಮ್ಯಾನೇಜರ್‌ ಸಾರ್‌ಗೆ ತುಂಬಾ ಕೋಪ ಬಂದಿತು. ಅವನು ಬರುವುದನ್ನೇ ಕಾದಿದ್ದು ತಕ್ಷಣ ಚೇಂಬರ್‌ಗೆ ಕರೆಸಿಕೊಂಡರು.

ಮ್ಯಾನೇಜರ್‌ : ಯಾಕಯ್ಯ ಸುಹಾಸ್‌…. ಇಷ್ಟು ಹೊತ್ತು ಎಲ್ಲಿ ಹಾಳಾಗಿ ಹೋಗಿದ್ದೆ?

ಸುಹಾಸ್‌ : ಎಲ್ಲೂ ಇಲ್ಲ… ಹೇರ್‌ ಕಟಿಂಗ್‌ಗೆ ಹೋಗಿದ್ದೆ.

ಮ್ಯಾನೇಜರ್‌ : ಆದರೆ ಆಫೀಸ್‌ ಟೈಮಲ್ಲಿ ಯಾಕೆ ಹೋಗಿದ್ದೆ?

ಸುಹಾಸ್‌ : ನನ್ನ ಕೂದಲು ಬೆಳೆದಿದ್ದೇ ಆಫೀಸ್‌ ಟೈಮಲ್ಲಿ ತಾನೇ?

ಮ್ಯಾನೇಜರ್‌ : ಏನಯ್ಯ ಹೇಳ್ತಿದ್ದಿ… ನೀನು ಮನೆಯಲ್ಲಿದ್ದಾಗ ಕೂದಲು ಬೆಳೆಯುವುದಿಲ್ಲವೇ?

ಸುಹಾಸ್‌ : ನಾನು ಪೂರ್ತಿ ತಲೆ ಎಲ್ಲಿ ಬೋಳಿಸಿದೆ? ಆಫೀಸಿನಲ್ಲಿ ಎಷ್ಟು ಬೆಳೆದಿತ್ತೋ ಅಷ್ಟೇ ತಾನೇ ಕಟಿಂಗ್‌ ಮಾಡಿಸಿದ್ದು…?

ಮೈನಾ ಆ ಕಾಲೇಜಿಗೆ ಹೊಸದಾಗಿ ಸೇರಿದಾಗಿನಿಂದ ರಾಮು ಏನಾದರೊಂದು ನೆಪ ತೆಗೆದು ಅವಳನ್ನು ಚುಡಾಯಿಸಲು ಯತ್ನಿಸುತ್ತಿದ್ದ. ಅವನು ತನ್ನ ಪುಂಡಾಟಿಕೆಗಳಿಂದ ಕಾಲೇಜಿನ ಕಾಮಣ್ಣನೆಂದೇ ಹೆಸರು ಗಳಿಸಿದ್ದ.

ಅವನು ಸೀನಿಯರ್‌ ಡಿಗ್ರಿ ವಿದ್ಯಾರ್ಥಿ ಆಗಿದ್ದರೂ ಜೂನಿಯರ್‌ ವಿದ್ಯಾರ್ಥಿಗಳ ತರಗತಿಗೆ ಹೋಗಿ, ಹುಡುಗರನ್ನು ಮಾತನಾಡಿಸುವ ನೆಪದಲ್ಲಿ ಅಲ್ಲಿನ ಹುಡುಗಿಯರನ್ನು  ಛೇಡಿಸುತ್ತಿದ್ದ. ಏನೋ ಒಂದು ನೆಪದಲ್ಲಿ ಬೇರೆಯವರನ್ನು ಚೆನ್ನಾಗಿ ಮಾತನಾಡಿಸುತ್ತಾ ಹುಡುಗಿಯರನ್ನು ಗೋಳುಗುಟ್ಟಿಸುತ್ತಿದ್ದ. ಹೀಗೆ ಒಮ್ಮೆ ಮೈನಾಳ ಕ್ಲಾಸಿಗೆ ಬಂದು, ಅಲ್ಲಿದ್ದ ಗಿರೀಶ ಮತ್ತು ಗೆಳೆಯರನ್ನು, “ಹೇಗಿದ್ದೀರಿ… ಏನು ವಿಷಯ?” ಎಂದೆಲ್ಲ ಮಾತನಾಡಿಸುತ್ತಿದ್ದ.

ಅದರ ನಡುವೆ ಬೇಕೆಂದೇ ಮೈನಾಳ ಕಡೆ ತಿರುಗಿ, “ಲೂನಾ ಮೇಲೆ ನನ್ನ ಮೈನಾ… ಏನಮ್ಮ ನಿನ್ನ ಪುರಾಣ….” ಎಂದ ರಾಗವಾಗಿ. ಅವಳು ಬೇಕೆಂದೇ ನಿರ್ಲಕ್ಷಿಸಿದರೂ, “ಏ ಬುಲ್‌ ಬುಲ್‌ ಮಾತಾಡಕಿಲ್ವಾ?” ಎಂದ.

ಅವಳು ಹೊಸ ಚಪ್ಪಲಿ ಕೈಗೆ ತೆಗೆದುಕೊಳ್ಳುತ್ತಾ, “ಈಗ ಇಷ್ಟು ಸಾಕಾ… ಇನ್ನು ಸ್ವಲ್ಪ ಬೇಕಾ?” ಎಂದಾಗ ಇಡೀ ಕ್ಲಾಸಿನವರು, “ಕುಣಿಯೋ ಥೈ… ಥಕಾ” ಎಂದು ಜೊತೆಗೆ ದನಿಗೂಡಿಸಿದರು. ಅವನು ಅಲ್ಲಿಂದ ಪರಾರಿ!

ನಗರದ ಯುವ ಪ್ರೇಮಿಗಳಿಬ್ಬರೂ ಗಂಟೆಗಟ್ಟಲೆ ಪಾರ್ಕಿನಲ್ಲಿ ಕುಳಿತಿದ್ದರು. ಅವಳು ತಮ್ಮಿಬ್ಬರ ಪ್ರೇಮದ ಬಗ್ಗೆ, ಮುಂದಿನ ಭವಿಷ್ಯದ ಬಗ್ಗೆ ಮಾತನಾಡುತ್ತಲೇ ಇದ್ದಳು. ಅವನು ಕೇಳುತ್ತಿದ್ದ.

ಪ್ರೇಯಸಿ : ಇದೇನು….? ಆಗಿನಿಂದ ಒಂದೇ ಸಮನೆ ನಾನು ಮಾತನಾಡುತ್ತಿದ್ದೇನೆ, ನೀನು ಒಂದೂ ಮಾತಿಲ್ಲದೆ ಬರೀ ಕೇಳಿಸಿಕೊಳ್ಳುತ್ತಿದ್ದಿ.

ಪ್ರೇಮಿ : ಹ್ಞೂಂ ಮತ್ತೆ…. ಪ್ರವಚನ ಕೇಳುವಾಗ, ಪ್ರೇಯಸಿಯ ಮಾತುಗಳನ್ನು ಕೇಳಿಸಿಕೊಳ್ಳುವಾಗ ಅರ್ಥವಾಗುತ್ತೋ ಬಿಡುತ್ತೋ…. ಮಧ್ಯೆ ಡಿಸ್ಟರ್ಬ್‌ ಮಾಡದೆ ಕೇಳಲೇ ಬೇಕಂತೆ!

ಮಾಲಾ : ಸ್ವಾಮಿ, ನನ್ನನ್ನು ಅರುಣ್‌ಕಿರಣ್‌ ಇಬ್ಬರೂ ಪ್ರೇಮಿಸುತ್ತಿದ್ದಾರೆ. ಆದರೆ ಮುಂದೆ ಇವರಿಬ್ಬರಲ್ಲಿ ನನ್ನನ್ನು ಮದುವೆ ಆಗುವವರು ಯಾರು? ಯಾರು ಆ ಅದೃಷ್ಟವಂತರು?

ಜ್ಯೋತಿಷಿ : ಅರುಣ್‌ ನಿನ್ನನ್ನು ಮದುವೆ ಆಗುತ್ತಾನೆ, ಕಿರಣ್‌ ಅದೃಷ್ಟಶಾಲಿಯಾಗಿ ಉಳಿಯುತ್ತಾನೆ!

ಶೀಲಾ : 500/- 1000/- ನೋಟ್‌ ಕ್ಯಾನ್ಸಲ್ ಮಾಡಿದ್ದಕ್ಕೆ ಎಷ್ಟೊಂದು ಕಪ್ಪು ಹಣ ಹೊರಗೆ ಬಂತು… ನೋಡಿದ್ಯಾ?

ಲೀಲಾ : ಹಾಗಿದ್ರೆ ಫೇರ್‌ ಅಂಡ್ ಲವ್ಲಿ ಕ್ರೀಂ ಬ್ಯಾನ್‌ ಮಾಡಿದ್ರೆ ಎಷ್ಟು ಕಪ್ಪು ಮುಖಗಳು ಹೊರಗೆ ಬರಬಹುದಲ್ವಾ?

ಒಂದೆಡೆ ಅಗಸರ ಮೈದಾನ ಕತ್ತೆಗಳಿಂದ ತುಂಬಿ ಹೋಗಿತ್ತು. ಅದರ ಮಧ್ಯೆ ಎಲ್ಲೋ ಒಂದೇ ಒಂದು ಕುದುರೆ ಮಾತ್ರ ಇತ್ತು. ಈಗ ಆ ಕುದುರೆ ಎಲ್ಲಿದೆ ಎಂದು ಹುಡುಕುವ ಪಂದ್ಯ ಒಡ್ಡಲಾಯಿತು.

ಒಬಾಮಾ ಬಂದರು. ಒಂದು ತಾಸು ಹುಡುಕಿದರೂ ಕುದುರೆ ಸಿಗಲಿಲ್ಲ. ನಿರಾಶರಾಗಿ ಕೈ ಚೆಲ್ಲಿದರು.

ಟ್ರಂಪ್‌ ಬಂದರು. 2 ತಾಸು ಹುಡುಕಾಡಿದರೂ ಕುದುರೆ ಸಿಗಲಿಲ್ಲ. ನಿರಾಶರಾಗಿ ಕೈ ಚೆಲ್ಲಿದರು.

ಮೋದಿ ಬಂದರು. 5 ನಿಮಿಷಗಳಲ್ಲಿ ಕುದುರೆ ಹಿಡಿದುಕೊಂಡು ಹೊರಗೆ ಬಂದೇಬಿಟ್ಟರು! ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಹೈರಾಣಾದ ಒಬಾಮಾ, ಟ್ರಂಪ್‌ ಒಂದೇ ಸಲಕ್ಕೆ ಕೇಳಿದರು, “ನೀವು ಅದು ಹೇಗೆ ಈ ಕುದುರೆಯನ್ನು ಹಿಡಿದು ತಂದಿರಿ?”

ಮೋದಿ ನಸುನಗುತ್ತಾ ಉತ್ತರಿಸಿದರು, “ನಾನು ಜೋರಾಗಿ `ಅಚ್ಚೆ ದಿನ್‌ ಆನೇ ವಾಲಾ ಹೈ’ ಅಂದಾಗ  ಕತ್ತೆಗಳೆಲ್ಲ ಖುಷಿಯಾಗಿ ನರ್ತಿಸತೊಡಗಿದವು. ಸುಮ್ಮನೆ ನಿಂತಿದ್ದ ಕುದುರೆಯನ್ನು ಗುರುತಿಸುವುದು ಕಷ್ಟವಾಗಲಿಲ್ಲ!”

ಹೈಸ್ಕೂಲು ಓದುತ್ತಿದ್ದ ಗುಂಡ ರಜೆಯಲ್ಲಿ ಹಳ್ಳಿಗೆ ಹೋಗಿದ್ದ. ತಾನು ಕಲಿತಿದ್ದ ಇಂಗ್ಲಿಷ್‌ನಲ್ಲಿ ಠುಸ್‌ಪುಸ್‌ ಎಂದು ಒದರುತ್ತಾ ಎಲ್ಲರನ್ನೂ  ದಂಗುಬಡಿಸುತ್ತಿದ್ದ. ಹಳ್ಳಿಯ ಮುಗ್ಧರನ್ನು ರೋಪ್‌ ಹಾಕಿ ಗದರುತ್ತಿದ್ದ.

ಹೀಗೆ ಒಂದು ದಿನ ಸಂತೆಗೆ ಹೋದವನೆ, “ಗಿವ್‌ ಮಿ ಸ್ಟೋನ್‌ಶಾಪ್‌ ಫ್ರೂಟ್‌!” ಎಂದ.

“ಏನಪ್ಪ ಕೇಳ್ತಾ ಇದ್ದೀಯಾ… ಏನೂ ಗೊತ್ತಾಗ್ತಿಲ್ಲ,” ಎಂದ ಅಂಗಡಿಯವನು.

“ಛೇ…ಛೇ! ನಿಮಗೆಲ್ಲ ಇಂಗ್ಲಿಷೇ ಬರೋಲ್ಲ….. ಸ್ಟೋನ್‌ಶಾಪ್‌ ಫ್ರೂಟ್‌ ಅಂದ್ರೆ ಕಲ್ಲಂಗಡಿ ಹಣ್ಣು  ಅಂತ!”

ಗುಂಡ ತಲೆ ಮೇಲೆ ಕೈ ಹೊತ್ತು ಯೋಚಿಸುತ್ತಾ ಕುಳಿತಿದ್ದ. ಅಲ್ಲಿಗೆ ಬಂದ ಅವನ ಗೆಳೆಯ ರಾಮು ಕೇಳಿದ, “ಯಾಕೋ ಹೀಗೆ ಕುಳಿತಿದ್ದೀಯಾ?”

ಅದಕ್ಕೆ ಗುಂಡ, “ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ. ಅವಳಿಗೆ ಐ ಲವ್ ಯೂ ಅಂತ ಹೇಳ್ದೆ. ಅವಳು ಐ ಲವ್ ಯೂ ಟು ಅಂತ ಹೇಳಿದಳು. ಆ ಇನ್ನೊಬ್ಬ ಯಾರು ಅಂತ ಯೋಚಿಸ್ತಾ ಇದ್ದೀನಿ,” ಅನ್ನೋದೇ……?

ನಿರುದ್ಯೋಗಿ ಗುಂಡ ತನ್ನ ಪ್ರೇಯಸಿಯೊಡನೆ ವಿಂಡೋ ಶಾಪಿಂಗ್‌ ಮಾಡುತ್ತಾ ಎಂ.ಜಿ. ರೋಡ್‌ ಪೂರ್ತಿ ಸುತ್ತಾಡಿದ. ಎಷ್ಟು ದೂರ ವಾಕಿಂಗ್‌ ಹೋದರೂ ಅವನು ಏನೂ ಕೊಡಿಸುತ್ತಿಲ್ಲ ಎಂದು ಅವಳಿಗೆ ರೇಗಿತು.

ಅವಳು : ಇಷ್ಟು ವರ್ಷ ಬರೀ ಲವ್ವೇ ಆಯ್ತು… ಒಂದಾದ್ರೂ ಚಿನ್ನ ಬೆಳ್ಳಿ ಒಡವೆ ಬೇಡವೇ?

ಅವನು : ಚಿನ್ನ, ಬೆಳ್ಳಿ, ವಜ್ರ, ಕೆಂಪು, ಮುತ್ತು, ಹವಳ ಸುಖ ನೀಡುವುದೇ…. ಪ್ರೀತಿಯೇ ನನ್ನುಸಿರು! `ಕರ್ಣ’ ಚಿತ್ರದ ಹಾಡು ಕೇಳಿದ್ದೀ ತಾನೇ?

Tags:
COMMENT