ಪ್ರ : ನಾನು 19 ವರ್ಷದ ಕಾಲೇಜು ಕನ್ಯೆ. ಕಳೆದ 1 ತಿಂಗಳಿನಿಂದ ನನ್ನ ಬಲ ಸ್ತನದಲ್ಲಿ ಬಹಳ ನೋವು, ತುರಿಕೆ ಆಗುತ್ತಿದೆ. ಅದರಲ್ಲೂ ಮೊಲೆ ತೊಟ್ಟಿನ ಭಾಗದಲ್ಲಿ ಈ ಸಮಸ್ಯೆ ಹೆಚ್ಚು. ಇಂಟರ್‌ನೆಟ್ ಮೂಲಕ ಪರೀಕ್ಷಿಸಿದಾಗ ಈ ಲಕ್ಷಣಗಳು ಸ್ತನದ ಪೆಜೆಟ್ ಡಿಸೀಸ್, ಒಂದು ಬಗೆಯ ಕ್ಯಾನ್ಸರ್ ಎಂದು ಅರಿವಾಯಿತು. ಇದನ್ನು ಓದಿದಾಗಿನಿಂದ ನಾನು ಬಹಳ ಗಾಬರಿಗೊಂಡಿದ್ದೇನೆ. ನನಗೆ ಬಂದಿರುವ ಸಮಸ್ಯೆ ಈ ಪೆಜೆಟ್ ಡಿಸೀಸ್‌ನ ಲಕ್ಷಣವೇ ತಾನೇ? ಮುಂದೆ ನಾನೇನು ಮಾಡಬೇಕೆಂದು ದಯವಿಟ್ಟು ತಿಳಿಸಿರಿ.
ಉ : ಸ್ತನದಲ್ಲಿ ಅದರಲ್ಲೂ ಮುಖ್ಯವಾಗಿ ಮೊಲೆ ತೊಟ್ಟಿನ ಭಾಗದಲ್ಲಿ ಹೀಗೆ ತುರಿಕೆ, ನೋವು ಉಂಟಾಗಲು ಹಲವು ಕಾರಣಗಳಿವೆ. ಯಾವಾಗ ಹುಡುಗಿ ಪುಷ್ಪವತಿ ಆಗುತ್ತಾಳೋ, ಗರ್ಭವತಿ ಆದಾಗ, ಈ ತರಹ ಚರ್ಮ ಸ್ಟ್ರೆಚ್ ಆಗಿ ಹೀಗಾಗುವುದು ಸಾಮಾನ್ಯ. ಆದರೆ ಚರ್ಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಾದ ಕಾಂಟ್ಯಾಕ್ಟ್ ಡರ್ಮಟೈಟಿಸ್, ಎಗ್ಸಿಮಾ, ಸೋರಿಯಾಸಿಸ್, ಸ್ಕೇಬೀಸ್ ಮುಂತಾದವು ಕಾಡಿದಾಗಲೂ ಸಹ ಈ ಅಂಗದಲ್ಲಿ ಹೀಗಾಗುವ ಸಾಧ್ಯತೆ ಇದೆ.
ಕಾಂಟ್ಯಾಕ್ಟ್ ಡರ್ಮಟೈಟಿಸ್ ಹಿಂದೆ ಅನೇಕ ಕಾರಣಗಳಿವೆ. ಯಾವುದೇ ಸೋಪ್, ಸೆಂಟ್ ನಿಮಗೆ ಅಲರ್ಜಿ ಆಗಿರಬಹುದು. ಇನ್ನರ್‌ವೇರ್‌ನ ಒಳಭಾಗ ಹೊಂದಿಕೊಳ್ಳದೆ ಇರಬಹುದು, ಅತ್ಯಧಿಕ ಬೆವರಿನಿಂದ ಅಲರ್ಜಿ ಇತ್ಯಾದಿಗಳಿಂದ ಎಗ್ಸಿಮಾದಂಥ ರೋಗ ಕಾಣಿಸಬಹುದು.
ಈ ತರಹದ ತುರಿಕೆ ಮೆಸ್ಟೈಟಿಸ್ (ಸ್ತನದಲ್ಲಿ ಕಾಣಿಸುವ ತೊಂದರೆಗಳ ರೋಗ)ನಂಥ ಕಾಯಿಲೆಯ ಲಕ್ಷಣ ಆಗಿರಬಹುದು. ಇದರ ಮೂಲ ಸ್ತನಗಳ ಒಳಗಿನ ಸೋಂಕಿಗೆ ಸಂಬಂಧಿಸಿದೆ. ಅದೇ ತರಹ ಸ್ತನದ ಪೆಜೆಟ್ ಡಿಸೀಸ್‌ನಲ್ಲೂ, ಮೊಲೆ ತೊಟ್ಟಿನ ಬಳಿ ಹೀಗಾಗುವ ಲಕ್ಷಣಗಳನ್ನು ಅಲ್ಲಗಳೆಯಲಾಗದು.
ಸಾಮಾನ್ಯವಾಗಿ ಈ ರೋಗ ತೀರಾ 20+ ಬದಲು 40+ ಹೆಂಗಸರಿಗೆ ಬರುತ್ತದೆ ಎಂಬುದೂ ನಿಜ. ಹೀಗಾಗಿ ಊಹಾಪೋಹಗಳಿಗೆ ಸಿಲುಕುವ ಬದಲು, ನೀವು ಯಾರಾದರೂ ಸ್ಕಿನ್ ಸ್ಪೆಷಲಿಸ್ಟ್ ಬಳಿ ತಕ್ಷಣ ತೋರಿಸಿ. ಅವರು ಆಮೂಲಾಗ್ರವಾಗಿ ತಪಾಸಣೆ ಮಾಡಿದ ನಂತರವೇ ಈ ಲಕ್ಷಣ ಯಾವ ರೋಗಕ್ಕೆ ಸಂಬಂಧಿಸಿದ್ದು ಎಂದು ಖಾತ್ರಿಪಡಿಸಿಕೊಂಡು, ಆ ಪ್ರಕಾರ ಚಿಕಿತ್ಸೆ ಆರಂಭಿಸುತ್ತಾರೆ.
ಪ್ರ : ನಾನು 24 ವರ್ಷದ ಉದ್ಯೋಗಸ್ಥ ಮಹಿಳೆ. ಮಳೆಗಾಲದಲ್ಲಿ ಕಣ್ಣುಗಳಿಗೆ ಸೋಂಕು ಉಂಟಾಗುತ್ತದೆ ಎಂದು ಕೇಳಿರುವೆ. ಇದು ನಿಜವೇ? ನಿಜ ಎಂದಾದರೆ ಅದರಿಂದ ರಕ್ಷಿಸಿಕೊಳ್ಳುವ ಉಪಾಯಗಳ ಬಗ್ಗೆ ತಿಳಿಸಿ.
ಉ : ಹೌದು. ಮಳೆಗಾಲದಲ್ಲಿ ಹಲವು ಪ್ರಕಾರದ ಬ್ಯಾಕ್ಟೀರಿಯಾಗಳು ಜನ್ಮ ತಳೆಯುತ್ತವೆ. ಜೊತೆಗೆ ಕ್ರಿಮಿಕೀಟಗಳ ಹಾವಳಿ ಕೂಡ ಈ ಅವಧಿಯಲ್ಲಿ ಜಾಸ್ತಿ. ವಾತಾರಣದಲ್ಲಿ ತೇವಾಂಶದ ಕಾರಣದಿಂದ ಸೋಂಕಿನ ಅಪಾಯ ಹೆಚ್ಚುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆ ಅತ್ಯವಶ್ಯ. ಕಣ್ಣುಗಳನ್ನು ಸ್ಪರ್ಶಿಸಬೇಡಿ ಹಾಗೂ ಉಜ್ಜಬೇಡಿ. ದಿನಕ್ಕೆ 2-3 ಸಲ ತಣ್ಣೀರಿನಿಂದ ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳಿ. ಅದರಿಂದ ಸೋಂಕಿನ ಅಪಾಯ ಕಡಿಮೆ ಆಗುತ್ತದೆ. ನೀರು ಮಡುಗಟ್ಟಿದ ಜಾಗದಿಂದ ದೂರವಿರಿ. ಏಕೆಂದರೆ ಅಂತಹ ಕಡೆಯೇ ಬ್ಯಾಕ್ಟೀರಿಯಾಗಳು ಹೆಚ್ಚು ಜನ್ಮ ತಳೆಯುತ್ತವೆ.