ಬಾಲಿವುಡ್ ಸುಂದರಿಯರು ಹಸೆಮಣೆ ಏರಿದಾಗ
ಬೀ ಟೌನಿನ ಎಷ್ಟೋ ತಾರೆಯರು ಪರಸ್ಪರ ಕೈ ಹಿಡಿದು ಮುಂದಿನ ಜೀವನದ ಕನಸು ಕಾಣುತ್ತಾರೆ. ಎಷ್ಟೋ ಜೋಡಿಗಳು ಇಂದಿಗೂ ಆದರ್ಶವಾಗಿ ಉಳಿದಿದ್ದರೆ, ಎಷ್ಟೋ ಜೋಡಿಗಳು ಬಿಟ್ಟು ಅಗಲಿವೆ. ಈ ಸ್ಟಾರ್‌ಗಳ ಮದುವೆ ವೈಭವ, ಡ್ರೆಸ್, ಮೇಕಪ್ ಇಂದಿಗೂ ರೋಚಕ. ಇಂಥವರಲ್ಲಿ ಕೆಲವರನ್ನು ನೆನೆಯುತ್ತಾ…
ಶರ್ಮಿಳಾ ಟ್ಯಾಗೋರ್ : ಶರ್ಮಿಳಾ ಪಟೌಡಿ ಜೊತೆ ಮದುವೆ ಘೋಷಿಸಿದಾಗ ಸಾವಿರಾರು ಹೃದಯಗಳು ಚೂರಾದವು. ಶರ್ಮಿಳಾರ ಮದುವೆ ಬಂಗಾಳಿ ಹಾಗೂ ಮುಸ್ಲಿಂ ಎರಡೂ ಸಂಪ್ರದಾಯಗಳಂತೆ ನಡೆಯಿತು. ಶರ್ಮಿಳಾ ಚಿನ್ನದ ಬಣ್ಣದ ಘಾಘ್ರಾ, ಹೆವಿ ಜ್ಯೂವೆಲರಿ ಧರಿಸಿದ್ದರು. ಡ್ರೆಸ್ ಜ್ಯೂವೆಲರಿ ಹೊಂದುತ್ತಿರಲಿಲ್ಲ. ಅದನ್ನೇ ಆಕೆಯ ಸೊಸೆ ಕರೀನಾ ಮುಂದೆ `ಡೀ ಡೇ’ ಚಿತ್ರದಲ್ಲಿ ಧರಿಸಿದಳು.
ಸಾಯಿರಾಬಾನು : ದಿಲೀಪ್ ಕುಮಾರ್ ಜೊತೆ ಸಾಯಿರಾ ಈಗಲೂ ಖುಷಿಯಾಗಿದ್ದಾರೆ. ಮಧುಬಾಲಾ ಜೊತೆ ದಿಲೀಪ್‌ರ ಲವ್ ಫೇಲ್ಯೂರ್ ಆದಾಗ, ಸಾಯಿರಾ ಅವರ ಸಾಯಾ ಆದರು. ರಿಚ್ ಗ್ರ್ಯಾಂಡ್ ಸೀರೆ, ಹೂಮಾಲೆಗಳಲ್ಲಿ ಜಗ್ಗಿದ್ದ ಸಾಯಿರಾ, ಇಂದಿಗೂ ಪತಿಗೆ ಆದರ್ಶ ಸಂಗಾತಿ!
ಜಯಾ ಅಮಿತಾಭ್ : `ಅಭಿಮಾನ್’ ಚಿತ್ರದಿಂದ ಆರಂಭವಾದ ಇವರ ಪ್ರೇಮ ದಿನೇದಿನೇ ಮೇಲೇರುತ್ತಿದೆ. ಬೇಗ ಅವರ ಮದುವೆ ನಡೆಯಿತು. ಕೆಂಪು ಲೆಹಂಗಾದಲ್ಲಿ ವಧು, ಬಿಳಿ ಶೇರ್ವಾನಿಯಲ್ಲಿ ವರ ಮಿಂಚಿದರು. ಇವರ ವೈವಾಹಿಕ ಜೀವನದಲ್ಲಿ ರೇಖಾ ವಕ್ರರೇಖೆಗಳನ್ನು ಮೂಡಿಸಲು ಯತ್ನಿಸಿದರೂ, ಇಬ್ಬರೂ ತಮ್ಮ ಸ್ಥಾನ ಬಿಟ್ಟುಕೊಡದೆ ಮಗಸೊಸೆಗೆ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ.
ಕೃತಿ ಉಣಿಸಲಿದ್ದಾಳೆ ಬರೇಲಿ ಬರ್ಫಿ
ಹೀರೋಪಂತಿಯ ಹುಡುಗಿ ಕೃತಿ ಸೇನ್‌ಳ ಹೆಸರು ಒಮ್ಮೆ ರಮಣ್‌ಧನ್ ಜೊತೆಗಿದ್ದರೆ ಮತ್ತೊಮ್ಮೆ ಸುಶಾಂತ್ ಸಿಂಗ್ ಜೊತೆ ಕೇಳಿಸುತ್ತದೆ. ಆದರೆ ಈಗ ಕೃತಿ ಚಾಕಲೇಟ್ ಹೀರೋಗಳನ್ನು ಬಿಟ್ಟು ಆಯುಷ್ಮಾನ್ ಖುರಾನಾ ಮತ್ತು ರಾಜ್‌ಕುಮಾರ್ ರಾವ್ ಜೊತೆ `ಬರೇಲಿ ಕೀ ಬರ್ಫಿ’ ಚಿತ್ರದಲ್ಲಿ ಮಿಂಚಲಿದ್ದಾಳೆ. ಈ ಚಿತ್ರನ್ನು `ನಿಲ್ ಬಟೆ ಸನ್ನಾಟಾ’ ಚಿತ್ರದ ನಿರ್ದೇಶಕ ಅಶ್ವಿನಿ ತಿವಾರಿ ಮಾಡುತ್ತಿದ್ದಾರೆ. ಉ.ಪ್ರ. ರಾಜ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಇಬ್ಬರು ಹೀರೋಗಳ ವೈಭವವಿದೆ.
ಸೋನಾ ಈಗ ಲೇಡಿ ಸಿಂಗಂ ಅಲ್ಲ!
ಇತ್ತೀಚೆಗೆ ಸೋನಾಕ್ಷಿ ಸಿನ್ಹಾಳಿಗೆ ಸ್ಟಂಟ್ ಸಿನಿಮಾಗಳ ಭೂತ ಮೆಟ್ಟಿದೆ. ಹಿಂದೆ `ಅಕೀರಾ’ ಚಿತ್ರದಲ್ಲಿ ಬೇಕಾದಷ್ಟು ಡಿಶುಂ ಡಿಶುಂ ಆಯ್ತು. ಈಕೆ ಅಂದುಕೊಂಡಂತೆ ಚಿತ್ರ ಓಡಲಿಲ್ಲ. ಇತ್ತೀಚೆಗೆ ರಿಲೀಸ್ ಆದ `ಫೇವರ್ಸ್-2′ ಕೂಡ ತೋಪಾಯಿತು. ಇದರಲ್ಲಿ ಈಕೆ ಸೀಕ್ರೆಟ್ ಏಜೆಂಟ್ ಆಗಿದ್ದಳು. ಬೇಕಾದಷ್ಟು ಫೈಟ್ ನಡೆಸಿದರೂ, ಇಡೀ ಚಿತ್ರದಲ್ಲಿ ತನ್ನ ಪ್ರಭಾವ ಉಳಿಸಲಾಗಲಿಲ್ಲ. ಈ ತೋಪಾದ ಚಿತ್ರಗಳಿಂದ ಸೋನಾ ಬುದ್ಧಿ ಕಲಿತರೆ ಸರಿ, ಇಲ್ಲದಿದ್ದರೆ ಅವಳ ಕೆರಿಯರ್ರೂ ತೋಪೇ!
ಚುಂಬನದಿಂದ ಜಪ್ತಿಯ ಗತಿ!
ಕೇಳಲು ತುಸು ವಿಚಿತ್ರ ಅನಿಸಿದರೂ, ನಟ ಗೋವಿಂದ ನಟಿ ಶಿಲ್ಪಾಶೆಟ್ಟಿ ಜಪ್ತಿಯ ಗತಿಗೆ ಸಿಲುಕಿದ್ದಾರೆ. `ಛೋಟೆ ಸರ್ಕಾರ್’ ಚಿತ್ರದ `ಚುಮ್ಮಾ ಉಧಾರ್ ದೇ ದೇ…. ಬದ್ಲೆ ಮೇ ಯುಪಿ ಬಿಹಾರ್ ಲೇ ಲೇ….’ ಅಶ್ಲೀಲ ಹಾಡಿನ ವಿರುದ್ಧ ಜಾರ್ಖಂಡ್ ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಕೇಸ್ ನಡೆಯುತ್ತಿದ್ದು, ಇಬ್ಬರು ಕಲಾವಿದರು ಸತತ ಕೋರ್ಟಿಗೆ ಹಾಜರಾಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಕೇಸ್ ಎಷ್ಟೇ ಮುಂದೂಡಲ್ಪಟ್ಟರೂ ಹಾಜರಾಗದ ಇವರಿಗೆ ಕೋರ್ಟ್ ಕಳೆದ 20ನೇ ಜುಲೈನಲ್ಲೇ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಆದರೆ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ. ಅದಾದ ಮೇಲೆ 18ನೇ ಅಕ್ಟೋಬರ್ ಕೋರ್ಟಿಗೆ ಬರಬೇಕೆಂದು ಹೇಳಿದರೂ ಇವರು ಕಿವಿಗೆ ಹಾಕಿಕೊಳ್ಳಲಿಲ್ಲ. ಮುಂದೆ ನವೆಂಬರ್ 18ಕ್ಕೂ ಹಾಜರಾಗದಿದ್ದಾಗ ಇಬ್ಬರ ಮನೆ ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ. ಛೇ….ಛೇ! ಈ ಗತಿ ಬರಬಾರದಿತ್ತು.
ಶಿಫ್ಟ್ ಆದ ಸೈಫ್
ಒಂದೆಡೆ ಮನೆಗೆ ಮಗು ಬರುವ ಸಂಭ್ರಮ, ಇನ್ನೊಂದು ಕಡೆ ಸೈಫ್ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯೋ ಬಿಝಿ! ಇದರಲ್ಲಿ ಸೈಫ್ ಆಗಿದ್ದಾನೆ ಶೆಫ್. ಇದು ಹಾಲಿವುಡ್‌ನ `ಶೆಫ್’ ಚಿತ್ರದ ಹಿಂದಿ ರೀಮೇಕ್. ರಾಜಕೃಷ್ಣ ಮೆನನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ ಮುಂದಿನ ಜುಲೈಗೆ ಬಿಡುಗಡೆ ಆಗಲಿದೆ. ಸೈಫ್‌ಗೀಗ ಒಂದು ಸೂಪರ್‌ಹಿಟ್ ಚಿತ್ರ ಬೇಕೇ ಬೇಕು. ಕಳೆದ `ಫ್ಯಾಂಟಮ್’ ಚಿತ್ರದಲ್ಲಿ ಕತ್ರೀನಾ ಜೊತೆಗಿದ್ದರೂ ಅದು ಫ್ಲಾಪ್ ಎನಿಸಿತು. `ಏಜೆಂಟ್ ವಿನೋದ್’ ಕಥೆಯೂ ಇದೇ ಆಯ್ತು. ಮುಂದಿನ ರಂಗೂನ್ ಹಾಗೂ ಶೆಫ್ ಸಕ್ಸಸ್ ಆಗುತ್ತಾ? ಕಾದು ನೋಡಬೇಕು.
ರಮಣ್ ಹಿಂದೆ ಬಿದ್ದ ಜ್ಯಾಕ್ಲೀನ್
‘ನೀ ಎಲ್ಲೆ ಹೋದರೂ…. ನಾ ನಿನ್ನ ಬಿಡಲಾರೆ!’ ಎಂಬಂತೆ ಜ್ಯಾಕ್ಲೀನ್ ಈಗ ರಮಣ್ ಧವನ್ ಹಿಂದೆ ಬಿದ್ದಿದ್ದಾಳೆ. `ಢಿಶುಂ’ ಚಿತ್ರದ ನಂತರ ಈ ಶ್ರೀಲಂಕಾ ಸುಂದರಿಗೆ ನಮ್ಮ ಮುಂಬೈ ಹುಡುಗ ಅದೆಷ್ಟು ಇಷ್ಟ ಅಂದ್ರೆ, ರಮಣನ ಮುಂದಿನ ಚಿತ್ರ `ಜುಡ್ವಾ-2’ನಲ್ಲೂ ಇವಳೇ ನಾಯಕಿ. `ಢಿಶುಂ’ನಲ್ಲಿ ಜಾನ್ ಜೊತೆ ಮರ ಸುತ್ತಿದ ಜ್ಯಾಕ್ಲೀನ್, ರಮಣನನ್ನು ಬಿಡುತ್ತಲೇ ಇಲ್ಲ. ಮುಂದೆ ಈ ಜೋಡಿ….? ಕಾಲವೇ ನಿರ್ಧರಿಸಬೇಕು.
ಕಪಿಲ್ ಮನ ತುಂಬದ ಒಬ್ಬ ನಾಯಕಿ
ಕಮೆಡಿಯನ್, ನಟ, ಆ್ಯಂಕರ್ ಆದ ಕಪಿಲ್ ಶರ್ಮ ಈಗ 2ನೇ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ. ತನ್ನ ಮೊದಲನೇ ಚಿತ್ರ `ಕಿಸ್ ಕಿಸ್ ಕೋ ಪ್ಯಾರ್ ಕರೂ’ದಲ್ಲಿ 4 ಹೆಂಗಸರೊಡನೆ ರೊಮಾನ್ಸ್ ನಡೆಸಿದ ಈತ, ಮುಂದಿನ `ಫಿರಂಗಿ’ ಚಿತ್ರದಲ್ಲಿ ಇಬ್ಬಿಬ್ಬರು ನಾಯಕಿಯರ ಜೊತೆ ಚಿನ್ನಾಟವಾಡಲಿದ್ದಾನೆ. ಈ ಚಿತ್ರದಲ್ಲಿ ಕಪಿಲ್ ಜೊತೆ ತಮನ್ನಾ ಮತ್ತು ಇಶಿತಾ ಇಬ್ಬರೂ ಇರುತ್ತಾರೆ, ಕಾಮಿಡಿಗೇನೂ ಕೊರತೆ ಇಲ್ಲ.
ಮಲ್ಲಿಕಾಳ ಲೂಟಿಯಾಯ್ತೇ?
ಬೇರೆಯವರ ಹೃದಯಕ್ಕೆ ಕನ್ನ ಹಾಕುವ ಮಲ್ಲಿಕಾ ಈಗ ತಾನೇ ಲೂಟಿ ಆಗಿದ್ದಾಳೆ! ಅದೂ ನಮ್ಮ ದೇಶದಲ್ಲಲ್ಲ, ಫ್ರಾನ್ಸಿನಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆ. ಮಲ್ಲಿಕಾ ಟ್ವಿಟರ್‌ನಲ್ಲಿ ಹೇಳಿಕೊಂಡದ್ದು ಎಂದರೆ, ಪ್ಯಾರಿಸ್‌ನಲ್ಲಿ ಒಬ್ಬ ಫ್ರೆಂಡ್ ಮದುವೆಗೆಂದು ಇಬ್ಬರೂ ಹೊರಟಿದ್ದರಂತೆ. ಇವರ ಅಪಾರ್ಟ್‌ಮೆಂಟ್‌ಗೆ ದಿಢೀರ್ ಎಂದು ನುಗ್ಗಿದ ಮೂರು ಮುಸುಕುಧಾರಿಗಳು, ಮೊದಲು ಟಿಯರ್ ಗ್ಯಾಸ್ ಬಿಟ್ಟು ಆಕ್ರಮಣ ನಡೆಸಿ, ಬಾಯ್‌ಫ್ರೆಂಡ್‌ನ ಸಾಯಹೊಡೆದು ಇದ್ದುದೆಲ್ಲನ್ನೂ ದೋಚಿಕೊಂಡರಂತೆ. ಮಲ್ಲಿಕಾ…. ಅಯ್ಯೋ ಪಾಪ!
ನನ್ನ ಮನೆಯವರೇ ನನ್ನ ಫ್ಯಾನ್!
ಕೆಲ ದಿನಗಳಿಂದ ಸದಾ ಲೈಮ್ ಲೈಟ್‌ನಲ್ಲಿರುವ ಟ್ವಿಂಕಲ್ ಖನ್ನಾ, ತನ್ನ ಪತಿಯೇ ತನ್ನ ದೊಡ್ಡ ಫ್ಯಾನ್ ಎನ್ನುತ್ತಾಳೆ. ಈಕೆ ಈಗ ಪುಸ್ತಕ ಬರೆಯುತ್ತಿದ್ದಾಳೆ. ಮೊದಲ ಪುಸ್ತಕದ ನಂತರ ತನ್ನ ಎರಡನೇ ಪುಸ್ತಕ `ದಿ ಲೆಜೆಂಡ್ ಆಫ್ ಲಕ್ಷ್ಮಿ’ಯ ಬಿಡುಗಡೆಯ ಸಮಯದಲ್ಲಿ ಎಲ್ಲ ಸ್ಟಾರ್ಸ್‌ಗಳ ಸಮಕ್ಷಮ ಲಾಂಚ್ ಮಾಡಿದಳು. ತನ್ನ ಈ ಕೃತಿಯನ್ನು ಪತಿ ಅಕ್ಷಯ್‌ಗೆ ಸಮರ್ಪಿಸಿರುವ ಟ್ವಿಂಕಲ್, ಆತ ತನ್ನ ದೊಡ್ಡ ಫ್ಯಾನ್ ಹಾಗೂ ಪ್ರಶಂಸಕ ಎನ್ನುತ್ತಾಳೆ. ಇಂಥ ಒಬ್ಬ ಸಂಗಾತಿ ತನಗೆ ಸಿಕ್ಕಿರುವುದು ತನ್ನ ಅದೃಷ್ಟ ಎನ್ನುತ್ತಾಳೆ. ಕರಣ್ ಜೋಹರ್ ಈಕೆಯ ಕೃತಿಯನ್ನು ಸ್ತ್ರೀಪಕ್ಷಪಾತಿ ಎಂದಾಗ, ಗಂಡಸರು ರೂಪಿಸಿದ ಪಂಜರದಿಂದ ಹೊರಬಂದು ಬದುಕಲು ಕಲಿಯುತ್ತಿರುವ ಇಂದಿನ ಹೆಂಗಸರಿಗೆ ಇಂಥ ಪ್ರತಿಕ್ರಿಯೆಗಳು ಸಹಜ ಬಿಡಿ, ಎಂದು ಆತನ ಬಾಯಿಬಡಿದಳಂತೆ.
ಕಾಜೋಲ್ ‘ಸಿಂಗ್ ಮದರ್’ ಮುಂದೇನು?
ಇದೀಗ 40ರ ಹೊಸ್ತಿಲು ದಾಟುತ್ತಿರುವ ಎವರ್‌ಗ್ರೀನ್ ನಟಿ ಕಾಜೋಲ್, ಇತ್ತೀಚೆಗಷ್ಟೇ ತನ್ನ ನೆಚ್ಚಿನ ಜೋಡಿ ಶಾರೂಖ್ ಜೊತೆ ಹಿಟ್ ಚಿತ್ರ ನೀಡಿ ಮತ್ತೊಮ್ಮೆ ಸೈ ಎನಿಸಿದ್ದಳು. ಈ ಚಿತ್ರದಲ್ಲಿ ಈಕೆಯ ಸೌಂದರ್ಯದ ಕುರಿತು ಹೆಚ್ಚು ಪ್ರಶಂಸೆಯ ಮಾತುಗಳು ಕೇಳಿಬಂದವು. ಬಲ್ಲ ಮೂಲಗಳ ಸುದ್ದಿ ಎಂದರೆ, ನಿರ್ದೇಶಕ ಆನಂದ್ ಗಾಂಧಿ ತಮ್ಮದೇ ಒಂದು ನಾಟಕವನ್ನು ಸಿನಿಮಾ ಮಾಡುತ್ತಿದ್ದಾರಂತೆ. `ಸಿಂಗ್ ಮದರ್’ ನಾಮಾಂಕಿತ ಈ ಚಿತ್ರದಲ್ಲಿ ಕಾಜೋಲ್ ನಾಯಕಿ. ನಿರ್ಮಾಪಕ ಅಜಯ್ ದೇವಗನ್. ಕಥೆಯ ಕ್ಲೈಮಾಕ್ಸ್ ನಾಟಕದಂತಿಲ್ಲದೆ ಬದಲಾಗುತ್ತದಂತೆ. ರಿಯಲ್ ನಲ್ಲಿ ಕಾಜೋಲ್ ಖಂಡಿತಾ ಸಿಂಗ್ ಮದರ್ ಅಲ್ಲ, ಅಜಯ್‌ರ ಆದರ್ಶ ಪತ್ನಿ, 2 ಮಕ್ಕಳ ತಾಯಿ.
ನನಗೆ ಯಾರ ಬಳಿಯೂ ಕಿರೀಕ್ ಇಲ್ಲ!
ಬಾಲಿವುಡ್‌ನ ಈ ಬಣ್ಣದ ಚಿಟ್ಟೆಗಳ ನಡುವೆ ನಿಜಕ್ಕೂ ಇಷ್ಟೊಂದು ಮತ್ಸರ ಉಂಟೇ ಅಥವಾ ಗಾಸಿಪ್‌ಗಾಗಿ ಹೀಗಾಡ್ತಾರಾ? ಆದರೆ ಎಷ್ಟೋ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಒಬ್ಬಳು ಬರುವಷ್ಟರಲ್ಲಿ ಮತ್ತೊಬ್ಬಳು ಆ ಜಾಗದಿಂದ ಮಾಯವಾಗುವುದಂತೂ ನಿಜ. ಇದು ಮತ್ಸರ ಅಲ್ಲದೆ ಮತ್ತೇನು? ಕಂಗನಾ ಮತ್ತು ಸೋನಂ ನಡುವೆ ಶೀತಲಯುದ್ಧದ ನಂತರ, ಸುದ್ದಿ ಈಗ ಆಲಿಯಾ ಮತ್ತು ಶ್ರದ್ಧಾರ ನಡುವಿನದು. ಆದರೆ ಶ್ರದ್ಧಾ ಇಂಥ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದಳು. ತನಗೆ ಆಲಿಯಾಳ ಕೆಲಸ ಬಲು ಇಷ್ಟ ಎನ್ನುತ್ತಾಳೆ. ಅವಳೊಂದಿಗೆ ಭೇಟಿ, ಓಡಾಟ ಇಷ್ಟ ಅಂತಾಳೆ.
ಇವರಿಬ್ಬರ ನಡುವೆ ಇದ್ದಕ್ಕಿದ್ದಂತೆ ಆಲಿಯಾಳ ಬಾಯ್‌ಫ್ರೆಂಡ್ ಸಿದ್ದಾರ್ಥ್ ಮಲ್ಹೊತ್ರ ಕುರಿತಂತೆ ಕಿರೀಕ್ ಶುರುವಾಗಿತ್ತು. ಇದಕ್ಕೆ ಶ್ರದ್ಧಾ ಹೇಳ್ತಾಳೆ, “ನಿಜಕ್ಕೂ ಇಂಥ ಸುದ್ದಿಗಳು ಬಲು ಮನರಂಜನೆ ಒದಗಿಸುತ್ತವೆ. ಇಂಥ ಸುದ್ದಿ ಪ್ರಕಟವಾದಾಗ ನಾವು ಜೋರಾಗಿ ನಕ್ಕುಬಿಡ್ತೇವೆ. ಜನರ ಬಳಿ ಮಸಾಲೆ ವಿಷಯ ಇಲ್ಲದಿದ್ದಾಗ ಇಂಥವನ್ನು ತಾವೇ ಹುಟ್ಟುಹಾಕುತ್ತಾರೆ.
ಅಧಿಕ ಬಿಂದಾಸ್ ಆಗುತ್ತಿರುವ ವಾಣಿ
ರಣವೀರ್ ಸಿಂಗ್ ಮತ್ತು ವಾಣಿ ಕಪೂರ್, ಯಶ್‌ರಾಜ್‌ರ `ಬೇಫಿಕ್ರೆ’ ಚಿತ್ರ ಸೈನ್ ಮಾಡಿದಾಗಿನಿಂದ ಇಬ್ಬರೂ ಬಹು ಚರ್ಚೆಯಲ್ಲಿದ್ದಾರೆ. ಒಮ್ಮೆ ಚಿತ್ರದ ಹಾಟ್ ಕಿಸ್ಸಿಂಗ್ ಸೀನ್ಸ್ ಚರ್ಚೆಯಲ್ಲಿದ್ದರೆ, ಮತ್ತೊಮ್ಮೆ ಖುಲ್ಲಂಖುಲ್ಲ ಇವರಿಬ್ಬರ ಲವ್ ಕೆಮಿಸ್ಟ್ರಿ. ಆದರೆ ಕಳೆದ ತಿಂಗಳು ನಡೆದದ್ದು ಮಾತ್ರ ತುಸು ಜಾಸ್ತಿ ಎನ್ನುವಂತಿತ್ತು. ಈ ಚಿತ್ರದ ಸಾಂಗ್ ಲಾಂಚಿಂಗ್ ಈವೆಂಟ್‌ನಲ್ಲಿ `ಬೇಫಿಕ್ರೆ’ ಕಪಲ್ ಪರಸ್ಪರ ಎಷ್ಟು ಮುಳುಗಿಹೋಗಿದ್ದರೆಂದರೆ, ವಾಣಿಗೆ ತನ್ನ ಟೈಟ್ ಡ್ರೆಸ್ ಎಲ್ಲೆಲ್ಲಿ ಸಡಿಲ ಆಗುತ್ತಿದೆ ಎಂದೂ ಗೊತ್ತಾಗಲಿಲ್ಲವಂತೆ! ಆಫ್ ಶೋಲ್ಡರ್ ಆದ ಕಾರಣ ಈಕೆಯ ಈ ಗ್ಲಾಮರಸ್ ಡ್ರೆಸ್ ಸಾಕಷ್ಟು ಕೆಳಗೆ ಸರಿದಿತ್ತು. ಒಳವಸ್ತ್ರಗಳೂ ಕಂಡವಂತೆ! ಅವಳು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕ್ಯಾಮೆರಾ ತನ್ನ ಕಮಾಲ್ ಮಾಡಿಬಿಟ್ಟಿತ್ತು. ಈ ಚಿತ್ರಕ್ಕೆ ಇನ್ನಿದಕ್ಕಿಂತ ಪಬ್ಲಿಸಿಟಿ ಬೇಕೇ?
ಸವಾಲು ಎದುರಿಸುವುದೇ ನನ್ನ ಹವ್ಯಾಸ
ಬಹಳ ದಿನಗಳ ನಿರೀಕ್ಷೆಯ ನಂತರ ಸಂಜಯ್‌ಲೀಲಾರ `ಪದ್ಮಾವತ್’ ಚಿತ್ರದ ತಾರಾಗಣ ಅಂತೂ ಫೈನಲ್ ಆಗಿದೆ. ದೀಪಿಕಾ ರಾಣಿ ಪದ್ಮಾವತಿ ಆದರೆ, ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿರುತ್ತಾನೆ. ಪದ್ಮಾವತಿಯ ಪತಿ ರಾಣಾ ರಾವ್‌ನ ಪಾತ್ರ ಶಾಹಿದ್ ಕಪೂರ್‌ನದು. ಲಕ್ಸ್ ಗೋಲ್ಡನ್ ಅವಾರ್ಡ್ ಸಂದರ್ಭದಲ್ಲಿ ದೀಪಿಕಾ, “ನಾನು ಈ ಬಾಲಿವುಡ್‌ಗೆ ಬಂದು ಈಗಾಗಲೇ 9 ವರ್ಷಗಳಾಯ್ತೆ ಎಂದು ಆಶ್ಚರ್ಯ ಆಗ್ತಿದೆ. ನಾನು ಈಗ ತಾನೇ ಕೆರಿಯರ್ ಆರಂಭಿಸಿದಂತಿದೆ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ. ಇನ್ನೂ ಹೆಚ್ಚಿನ ಸವಾಲಿನ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ,” ಎಂದಳು.
ಬಳುಕುವ ನಾಗಿಣಿಯ ಜಾರಿದ ಉಡುಗೆ
ಈಗ ಹಿಂದಿ ಮಾತ್ರಲ್ಲದೆ, ಭಾರತೀಯ ಕಿರುತೆರೆಯ ಎಲ್ಲಾ ಚ್ಯಾನೆಲ್‌ಗಳಲ್ಲೂ ನಾಗಿಣಿ ಬಲು ಜೋರಾಗಿ ಬುಸುಗುಡುತ್ತಿದ್ದಾಳೆ. ಕಲರ್ಸ್ ವಾಹಿನಿಯ `ನಾಗಿನ್-2′ ನಾಯಕಿ ಮೋನಿ ರಾಯ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾಳೆ. ಬಾಲಿವುಡ್‌ನ ಆಫರ್‌ಗಳ ನಂತರ ಮೋನಿ ಜೊತೆ ಒಂದು ವಿಚಿತ್ರ ಘಟನೆ ನಡೆಯಿತು. ಒಂದು ಈವೆಂಟ್‌ಗೆ ಬಂದ ಈ ತೆರೆದೆದೆಯ ಸುಂದರಿ `ಉಸ್ಸಪ್ಪಾ’ ಎನ್ನುತ್ತಾ ಎಲ್ಲರ ಮುಂದೆ ಮುಜುಗರಕ್ಕೆ ಈಡಾದಳು. ಅವಾರ್ಡ್ ಫಂಕ್ಷನ್‌ನಲ್ಲಿ ಶಾಮೀಲಾಗಿದ್ದ ಮೋನಿ, ಡಿಸೈನರ್ ಸ್ವಪ್ನಿಲ್ ಶಿಂಧೆಯ ಗೋಲ್ಡನ್ ಗೌನ್ ಧರಿಸಿ ಬಳುಕುತ್ತಾ ವೇದಿಕೆಗೆ ಬಂದಳು. ಆಕೆಯ ಈ ಗ್ಲಾಮರಸ್ ಔಟ್‌ಫಿಟ್ ಇತರ ನಾರೀಮಣಿಯರ ಮತ್ಸರದ ಬುಸುಗುಟ್ಟುವಿಕೆಗೆ ಕಾರಣವಾಗಿತ್ತು. ಅವಳು ಒಂದಿಷ್ಟು ಕ್ಯಾಟ್‌ವಾಕ್ ಮಾಡುವಷ್ಟರಲ್ಲಿ ಆ ಡ್ರೆಸ್ ಮಂಡಿಯವರೆಗೂ ಸರ್ರ್…. ಎಂದು ಜಾರಿಹೋಗಬೇಕೇ…? ನಾಗಿಣಿಗೆ ಯಾರೋ ಶಾಲು ಎಸೆದು ಬಚಾವ್ ಮಾಡಿದ್ದು ಬೇರೆ ವಿಚಾರ.
ನಾನು ಸೆಕ್ಸಿ ಎಂದು ಭಾವಿಸಿದ್ದೇ ಇಲ್ಲ!
ಕಿರು ಪರದೆಯ ಯಶಸ್ವಿ ನಟಿ ಎನಿಸಿರುವ ದೃಷ್ಟಿಧಾಮಿನಿಗೆ ಸೆಕ್ಸಿಯೆಸ್ಟ್ ವುಮನ್ ಎಂಬ ಅಗ್ರಪಟ್ಟ ಸಿಕ್ಕಿದೆ. ಪ್ರತಿ ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡುವಂಥ ಧಾಮಿನಿ, ತನ್ನನ್ನು ತಾನು ಒಬ್ಬ ಸಾಧಾರಣ ಮಹಿಳೆ ಎಂದೇ ಭಾವಿಸುತ್ತಾಳೆ. “ನಾನೆಂದೂ ಬೋಲ್ಡ್ ಸೆಕ್ಸಿ ಎಂದು ನನ್ನ ಬಗ್ಗೆ ಭಾವಿಸಿಯೇ ಇಲ್ಲ. ಏಕೆಂದರೆ ನನ್ನದೆಲ್ಲ ಸೀದಾಸಾದಾ ಸರಳ ಜೀವನ,” ಎನ್ನುವ ಧಾಮಿನಿ, ಈಗ ಪ್ರಸ್ತುತ `ಪರ್‌ದೇಶ್ ಮೇ ಹೈ ಮೇರಾ ದಿಲ್’ ಧಾರಾವಾಹಿಯಲ್ಲಿ ಬಿಝಿಯೋ ಬಿಝಿ.
ನನಗೆ ಸಾಹಸಿ ಪಾತ್ರಗಳೇ ಇಷ್ಟ!
`ಕಾಲಾ ಟೀಕಾ’ ಶೋನಲ್ಲಿ ಯುಗಮಿಶ್ರನ ಪಾತ್ರ ನಿರ್ಹಿಸುತ್ತಿರುವ ರೋಹನ್ ಗಂಗೋತ್ರಿ ಪಕ್ಕಾ ಡೆಲ್ಲಿ ಹೈದ. ತನ್ನದೇ ಶೈಲಿಯಲ್ಲಿ ಜೀವನ ನಡೆಸಬಯಸುವ ವ್ಯಕ್ತಿ ರೋಹನ್‌ನ ಮೊದಲ ಶೋ ಎಂದರೆ ಆಶುತೋಷ್ ಗೋರ್‌ಕರ್‌ರ `ಎವರೆಸ್ಟ್.’ ಇದರಲ್ಲಿ ಗೌರಿಶಂಕರ ಶಿಖರವೇರಿ ಈ ಹೈದ ಪಟ್ಟಪಾಡು ಅಷ್ಟಿಷ್ಟಲ್ಲ. ಸಾಹಸವನ್ನೇ ಹವ್ಯಾಸವಾಗಿಸಿಕೊಂಡಿರುವ ರೋಹನ್, ರೀಲ್ ರಿಯಲ್ ಎರಡೂ ಕಡೆ ಅದನ್ನೇ ಹೆಚ್ಚು ಬಯಸುತ್ತಾನೆ, ತುಸು ಟ್ವಿಸ್ಟ್ ಗಳ ಸಹಿತ!
ಧೀರಜ್-ವಿನ್ನಿ ಏಕ್ ದೂಜೆ ಕೆ ಲಿಯೇ
`ಸಸುರಾಲ್ ಸಿಮರ್ ಕಾ’ ಧಾರಾವಾಹಿಯ ಹಿಟ್ ಜೋಡಿ ವಿನ್ನಿ ಅರೋಡಾ ಮತ್ತು ಧೀರಜ್ ರಿಯಲ್ ಲೈಫ್‌ನಲ್ಲೂ ಮದುವೆಯಾಗಿ ದಂಪತಿ ಎನಿಸಿದ್ದಾರೆ. ಅವರಿಬ್ಬರ ರಿಲೇಶನ್ ಧಾರಾವಾಹಿಯ ಆರಂಭದಿಂದಲೇ ಇತ್ತಂತೆ. ಮದುವೆಯ ಮೆಹಂದಿ, ಅರಿಶಿನ ಹಚ್ಚುವ ಸಮಾರಂಭಗಳಲ್ಲಿ ನಟಿಯರಾದ ಗದ್ದಿ ಡೋಗ್ರಾ, ನೇಹಾ ನಾರಂಗ್ ಮತ್ತಿತರ ಕಿರುತೆರೆಯ ಕಲಾವಿದರೆಲ್ಲ ಹಾಜರಿದ್ದರು. ನವ ವಧೂವರರು ತಮ್ಮ ನೂತನ ವಿವಾಹದ ಗೆಟಪ್‌ನಲ್ಲಿ ಹೇಗೆ ಮಿಂಚುತ್ತಿದ್ದಾರೆ ನೋಡಿ!