ಲಖ್ನೌ ಸೆಂಟ್ರಲ್ ಗೆ ಮರಳಿ ಬಾರದ ಕೃತಿ
`ಹೀರೋಪಂಕ್ತಿ’ಯಿಂದ ಮಿಂಚಿದ ಹುಡುಗಿಯ ಡಿಮ್ಯಾಂಡ್ಸ್ ದಿನೇದಿನೇ ಹೆಚ್ಚುತ್ತಿವೆ. ಹೀಗಾಗಿಯೇ ಈ ಮೇಡಂ ಇತ್ತೀಚೆಗೆ ಎಷ್ಟು ಬಿಝಿ ಎಂದರೆ ಹೊಸ ಚಿತ್ರಗಳೇ ಬೇಡ ಎಂದು ತಿರಸ್ಕರಿಸುತ್ತಿದ್ದಾಳೆ. ತನ್ನ ಮುಂದಿನ `ರಾಬ್ತಾ’ ಮತ್ತು `ಬರೋಲಿ ಕೀ ಬರ್ಫಿ’ ಚಿತ್ರಗಳಿಂದಾಗಿ ಕೃತಿ, ನಿರ್ದೇಶಕ ರಂಜಿತ್ ತಿವಾರಿಯ `ಲಖ್ನೌ ಸೆಂಟ್ರಲ್’ ಚಿತ್ರವನ್ನು ಅಪೂರ್ಣಗೊಳಿಸಿ ಸುಮ್ಮನಿದ್ದಾಳೆ. ಡೇಟ್ಸ್ ಹೊಂದುತ್ತಿಲ್ಲ ಎನ್ನುವ ಈಕೆ ಆ ಚಿತ್ರದ ನಾಯಕ ಫರ್ಹಾನ್‌ನ ಮಾತುಗಳನ್ನೂ ಕೇಳುತ್ತಿಲ್ಲವಂತೆ. ಹೀಗಾಗಿ ಅನಿವಾರ್ಯವಾಗಿ ಸಯಾಮಿ ಖೇರ್ ಆ ಚಿತ್ರಕ್ಕೆ ನಾಯಕಿ ಆಗಿದ್ದಾಳೆ. ಲಖ್ನೌ ಸೆಂಟ್ರಲ್ ಎಂಬುದು ರೈಲ್ವೆ ಸ್ಟೇಷನ್ ಕುರಿತಾಗಿ ಅಲ್ಲವಂತೆ, ಅಲ್ಲಿನ ಜೇಲ್ ಕುರಿತದ್ದಂತೆ! ಹೀಗಾಗಿ ಇಡೀ ಚಿತ್ರ ಅದರಲ್ಲಿ ಬಂಧಿತರಾದ ನಾಲ್ವರ ಕುರಿತಾಗಿ ಓಡುತ್ತದೆ. ಕೈದಿಗಳ ನೈಜ ಜೀವನ ಕುರಿತಾದ ಈ ಚಿತ್ರದಲ್ಲಿ ಫರ್ಹಾನ್, ರೋಹಿತ್ ರಾಯ್, ಗಿಪ್ಪಿ ಗ್ರೋವರ್, ರಾಜೇಶ್ ಶರ್ಮ ಕೈದಿ ಪಾತ್ರಗಳಲ್ಲಿದ್ದಾರೆ. ಸಯಾಮಿ ಇವರ ಜೊತೆ ಒಡನಾಟವಿರುವ ಎನ್‌ಜಿಓ ವರ್ಕರ್.
ಈತನ ವಿಷಯವೇ ಬೇರೆ!
ಅವಾರ್ಡ್ ಫಂಕ್ಷನ್ಸ್ ಮತ್ತು ಬಾಲಿವುಡ್ ಈವೆಂಟ್ ಗಳಲ್ಲಿ ಈ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೂ ಕಾಣಿಸಿಕೊಳ್ಳವುದೇ ಇದ್ದರೂ, ಈತನ ಮುಂದಿನ ಚಿತ್ರಗಳ ಕುರಿತು ವೀಕ್ಷಕರು ಕುತೂಹಲದಿಂದ ಕಾಯುತ್ತಾರೆ. `ಪೀಕೆ’ ಚಿತ್ರದ ಬಹುದಿನಗಳ ನಂತರ
`ದಂಬಗ್’ ನಲ್ಲಿ ಈತನ ನಟನೆ ಪ್ರಶಂಸಾರ್ಹ! ಆಮೀರ್ ಕುರಿತಾಗಿ ಒಂದು ಉತ್ತಮ ವಿಚಾರ ಎಂದರೆ, ಈತ ಯಾವುದೇ ಪಾತ್ರ ಕೊಟ್ಟರೂ ಅದರಲ್ಲಿ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ವಯಸ್ಸಿನ ಈ ತಿರುವಿನಲ್ಲಿ `ದಬಂಗ್’ ಚಿತ್ರದ ನಂತರ ಹೆಚ್ಚಿಸಿಕೊಂಡಿದ್ದ ಮೈ ತೂಕವನ್ನು ಹೇಗೆ ಕರಗಿಸಿದರು ಎಂಬುದು ಗಮನೀಯ ಅಂಶ. ತಮ್ಮ ಮುಂದಿನ `ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರಕ್ಕಾಗಿ ಈಗಾಗಲೇ ಈತ ದಾಡಿ ಮೀಸೆ ಬೆಳೆಸಿಕೊಂಡು ತಯಾರಿ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಆಮೀರ್ ಬಿಲ್‌ಕುಲ್ ಫಂಕೀ ಲುಕ್ಸ್ ಹೊಂದಿದ್ದಾರೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ತೆರೆ ಕಾಣಲಿರುವ ಈ ಚಿತ್ರ, ಒಬ್ಬ ಗಿಟಾರಿಸ್ಟ್ ಹುಡುಗಿಯ ಕಥೆ ಹೊಂದಿದೆ. ಇದಾದ ಮೇಲೆ ಈತ ಯಶ್‌ರಾಜ್‌ರ `ಠಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರದಲ್ಲಿ ಬಿಝಿಯಂತೆ. ಅದಾದ ಮೇಲೆ ಈತ ಆ್ಯಸ್ಟ್ರೋನಾಟ್ ರಾಕೇಶ್ ಶರ್ಮಾರ ಬಯೋ ಪಿಕ್ ಚಿತ್ರದಲ್ಲಿ ಮುಂದುವರಿಯಲಿದ್ದಾರೆ.
ಸ್ಕರ್ಟ್ ಸಂಭಾಳಿಸುವುದರಲ್ಲೇ ಆಯ್ತು!
ಬಾಲಿವುಡ್‌ನಲ್ಲಿ ನಡೆಯುವ ಒಂದು ವಿಡಂಬನೆ ಎಂದರೆ, ಮೊದಲೇನೋ ನಟಿಯರು ಶಾರ್ಟ್ ಮಿನಿ ಡ್ರೆಸ್ ಧರಿಸಿ ಈವೆಂಟ್ಸ್, ಫ್ಯಾಷನ್ ಶೋಗಳಿಗೆ ಬಂದುಬಿಡುತ್ತಾರೆ, ಆದರೆ ನಂತರ ಅಲ್ಲಿರುವಷ್ಟು ಹೊತ್ತೂ ಅದನ್ನು ಸರಿಪಡಿಸಿಕೊಳ್ಳುತ್ತಾ, ದೇಹ ಮುಚ್ಚಿಕೊಳ್ಳಲು ಒದ್ದಾಡುತ್ತಾರೆ….! ಇದು ಪಬ್ಲಿಸಿಟಿ ಸ್ಟಂಟಾ ಅಥವಾ ಗೊತ್ತಿಲ್ಲದೆಯೇ ಹೀಗಾಗುತ್ತಾ? ಹಾಲಿವುಡ್‌ನಲ್ಲಿ ಯಾವುದೇ ನಟಿಯ ಮಾಲ್‌ಫಂಕ್ಷನ್ ಆದರೂ, ಅವಳು ಅದನ್ನು ಡೋಂಟ್ ಕೇರ್ ಎನ್ನದೇ ಎಂಜಾಯ್ ಮಾಡುತ್ತಾಳೆ. ನಮ್ಮಲ್ಲೂ ಎಷ್ಟೋ ಬೋಲ್ಡ್ ನಟಿಯರು ಇಂಥ ಸಂದರ್ಭಗಳಲ್ಲಿ ಏನೂ ಆಗಲೇ ಇಲ್ಲ ಎಂಬಂತೆ ಇರುತ್ತಾರೆ, ಆದರೆ ಇನ್ನೂ ಕೆಲವರು ಇಂಥ ಶಾರ್ಟ್ ಡ್ರೆಸೆಸ್ ಧರಿಸಿ, ಬಹಳ ಕಸಿವಿಸಿಗೆ ಸಿಕ್ಕಿದವರಂತೆ ಒದ್ದಾಡುತ್ತಾರೆ. ಕಳೆದ ತಿಂಗಳು ಪರಿಣಿತಿ ಒಂದು ಪ್ರಾಡೆಕ್ಟ್ ಲಾಂಚ್‌ಗೆ ಹೋಗಿ ಇದೇ ದುಃಸ್ಥಿತಿಗೆ ಸಿಲುಕಿದಳು. ಪಕ್ಕದ ಫೋಟೋ ನೋಡಿ, ಇಡೀ ಫಂಕ್ಷನ್ ಮುಗಿಯುವವರೆಗೂ ಅವಳು ಅದನ್ನು ಸಂಭಾಳಿಸುವುದರಲ್ಲೇ ಸುಸ್ತಾದಳು ಎಂಬುದು ಸ್ಪಷ್ಟವಾಗುತ್ತದೆ.
ಪ್ರಿಯಾಂಕಾ ಸಹ ಅತ್ತೆಸೊಸೆ ಧಾರಾವಾಹಿಗೆ ಬರುವಳೇ?
ಯುನೆಸ್ಕೋ ಮೂಲಕ ಗ್ಲೋಬಲ್ ಗುಡ್‌ವಿಲ್ ಅಂಬಾಸಿಡರ್ ಆಗಿರುವ ಪ್ರಿಯಾಂಕಾ, ಇದೀಗ ಅಸ್ಸಾಂ ರಾಜ್ಯ ಸರ್ಕಾರದಿಂದಲೂ ಅಲ್ಲಿನ ಪ್ರವಾಸೋದ್ಯಮ ಇಲಾಖೆಗೂ ಅಂಬಾಸಿಡರ್ ಆಗಿದ್ದಾರೆ. `ಕ್ವಾಂಟಿಕೋ’ ಮತ್ತು `ಬೇವಾಚ್’ ಶೋಗಳ ಶೂಟಿಂಗ್ ಮುಗಿಸಿದ ನಂತರ, ಇದೀಗ ಈಕೆ ಬೀ ಟೌನಿನಲ್ಲಿ ರೀಎಂಟ್ರಿ ಪಡೆಯುತ್ತಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ, ಪ್ರಿಯಾಂಕಾ ಈಗ ಏಕ್ತಾ ಕಪೂರ್‌ರ ಅತ್ತೆಸೊಸೆ ಧಾರಾವಾಹಿಯಲ್ಲೂ ಕಾಣಿಸಲಿದ್ದಾರಂತೆ! ಒಂದು ಅವಾರ್ಡ್ ಫಂಕ್ಷನ್‌ನಲ್ಲಿ ಬಾಲಿವುಡ್‌ನಲ್ಲಿ ಗಂಡಸರ ವರ್ಚಸ್ಸು ಕುರಿತಾಗಿ ಕೇಳಲಾದ ಪ್ರಶ್ನೆಗೆ, ಈಕೆ ನೀಡಿದ ಉತ್ತರ ಕೇಳಿ ಅಲ್ಲಿದ್ದವರೆಲ್ಲ ಸ್ತಂಭೀಭೂತರಾದರು… ಇಂದಿನ ಬಾಲಿವುಡ್‌ನ ಯಾವ ನಟನೂ ಹಾಲಿವುಡ್‌ಗೆ ಹಾರಬಲ್ಲಂಥ ಮೀಟರ್ ಹೊಂದಿಲ್ಲ ಎಂದು ನೇರವಾಗಿಯೇ ಉತ್ತರಿಸಿದರು!
ಮತ್ತೆ 3ನೇ ಬಾರಿ ಒಂದಾಗಲಿರುವ ಜೋಡಿ
ಅನುಷ್ಕಾ ಶರ್ಮ ಮತ್ತು ಶಾರೂಖ್ ಖಾನ್ ಜೋಡಿ ಸಹ ಕಾಜೋಲ್ ಶಾರೂಖ್ ಜೋಡಿ ತರಹವೇ ಹಿಟ್ ಎನಿಸಿದೆ. `ರಬ್ ನೇ ಬನಾ ದೀ ಜೋಡಿ,’ `ಜಬ್ ತಕ್ ಹೈ ಜಾನ್’ ಚಿತ್ರದ ನಂತರ ಇದೀಗ ಇಮ್ತಿಯಾಜ್ ಅಲಿಯರ ನಿರ್ದೇಶನದ, ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಈ ಜೋಡಿ ಮಿಂಚಲಿದೆ. ಹಿಂದಿನ 2 ಚಿತ್ರಗಳ ಯಶಸ್ಸು, ಅದೇ ನಿರ್ದೇಶಕ, ಅದೇ ತಂಡ, ಗಮನಿಸಿದರೆ ಈ ಚಿತ್ರ ಹಿಟ್ ಆಗುವ ಸೂಚನೆ ನೀಡುತ್ತಿದೆ. ಈ ಚಿತ್ರದಲ್ಲಿ ಶಾರೂಖ್ ಗೈಡ್ ಆದರೆ, ಅನುಷ್ಕಾ ಗುಜರಾತಿ ಹುಡುಗಿ. ಈ ಚಿತ್ರದಲ್ಲಿ ಎಂಗೇಜ್‌ಮೆಂಟ್ ರಿಂಗ್ ಸಹ ಪ್ರಮುಖ ಪಾತ್ರಧಾರಿ ಆಗಿದೆಯಂತೆ. ಹೀಗಾಗಿ ಚಿತ್ರಕ್ಕೆ `ದಿ ರಿಂಗ್’ ಅಥವಾ `ರೆಹನುಮಾ’ (ನೆನಪಿನ ಚಿಹ್ನೆ) ಎಂದಿಟ್ಟರೂ ಆಶ್ಚರ್ಯವೇನಿಲ್ಲ.
ಅಥಿಯಾ ಅನಿಲ್ ಒಟ್ಟೊಟ್ಟಿಗೆ
`ಹೀರೋ’ ಚಿತ್ರದ ನಂತರ ಖಾಲಿ ಕುಳಿತಿರುವ ಅಥಿಯಾ ಶೆಟ್ಟಿಗೆ ಇದೀಗ ಅರ್ಜುನ್ ಮತ್ತು ಅನಿಲ್ ಕಪೂರ್ ಜೊತೆ ನಟಿಸುವ ಸುವರ್ಣಾವಕಾಶ! ಇಂಥ ದೊಡ್ಡ ಕಲಾವಿದರ ಜೊತೆ ಕೆಲಸ, ಅದೂ ಕಾಮಿಡಿ ಚಿತ್ರ ಎಂದಾಗ ಆಕೆ ಬಹಳ ನವರ್ಸ್ ಆದಳಂತೆ. ಅನಿಲ್ ಬಜ್ಮಿಯವರ `ಮುಬಾರಕ್’ ಚಿತ್ರದಲ್ಲಿ ಅರ್ಜುನ್ ಅನಿಲ್ ಒಟ್ಟಿಗೆ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ಅನಿಲ್ ಸರ್ದಾರ್ಜಿ ಆಗಿದ್ದರೆ, ಅವರ ಸಂಗಾತಿಯಾಗಿ ಇಲಿಯಾನಾ ಡೀಕ್ರೂಸ್ ಇರುತ್ತಾರೆ. ಅರ್ಜುನ್ ಜೋಡಿ ಅಥಿಯಾ ಆಗಿರ್ತಾಳೆ.
ತಮನ್ನಾಳ ಪೂರೈಸಿದ ತಮನ್ನ
ದಕ್ಷಿಣದ ಮಹಾನ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿಯವರ `ಬಾಹುಬಲಿ’ ಚಿತ್ರ ಮಾಡದ ರೆಕಾರ್ಡೇ ಇಲ್ಲ. ಇದೀಗ ಇದರ ಎರಡನೇ ಭಾಗ ಅಷ್ಟೇ ಚರ್ಚೆಯಲ್ಲಿದೆ. ಪೂರ್ವಾರ್ಧದಲ್ಲಿ ತಮನ್ನಾ ಕ್ರಾಂತಿಕಾರಿ ಆವಂತಿಕಾಳ ಪಾತ್ರದಲ್ಲಿ ಮಿಂಚಿದ್ದಳು. ಉತ್ತರಾರ್ಧದಲ್ಲಿ ಅದಕ್ಕಿಂತಲೂ ಉತ್ತಮ ಪಾತ್ರ ದೊರಕಿರುವುದಾಗಿ ತಮನ್ನಾ ದಿಲ್ಖುಷ್ ಆಗಿದ್ದಾಳೆ.
ಹೆಸರಲ್ಲೇನಿದೆ?
ಹೆಸರು ತಾನೇ? ಅದರಲ್ಲೇನು? ಅಂತಾರೆ. ಅದು ಅಷ್ಟು ಸುಲಭವಾಗಿ ತಳ್ಳಿಹಾಕುವ ವಿಚಾರವಲ್ಲ. ಇತ್ತೀಚೆಗೆ ಬೇಬೋಗೆ ಒಂದು ಬೇಬಿ ಹುಟ್ಟಿದಾಗ ವಿವಾದಗಳೂ ಹುಟ್ಟಿಕೊಂಡವು. ಕಾರಣ….? ಮಗುವಿನ ಹೆಸರು. ಸೈಫ್-ಕರೀನಾ ಮಗುವಿಗೆ ತೈಮೂರ್ ಅಲೀಖಾನ್ ಪಟೌಡಿ ಎಂದಿಟ್ಟರು. ತೈಮೂರ್ ಎಂದರೆ ಇತಿಹಾಸದಲ್ಲಿ ಎಂಥ ಕ್ರೂರ ಡಿಕ್ಟೇಟರ್ ಹಾಗೂ ಭಾರತದ ಮೇಲೆ ದಂಡೆತ್ತಿ ಬಂದ ಲೂಟಿಕೋರ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ ಈ ದಂಪತಿ ತೈಮೂರ್ ಹೆಸರನ್ನೇ ಫೈನಲ್ ಮಾಡಿದಾಗ, ಪಬ್ಲಿಕ್‌ನ ಟ್ವಿಟರ್ ವಾರ್ ಶುರುವಾಯಿತು. ಪಾಕಿಸ್ತಾನದಿಂದಲೂ ವಿರೋಧಿ ಕಮೆಂಟ್ಸ್ ಬರತೊಡಗಿತು. ಒಬ್ಬರಂತೂ ಸೈಫ್‌ಗೆ `ತೈಮೂರ್ ಬಗ್ಗೆ ಏನೂ ಗೊತ್ತಿಲ್ಲ ಅನ್ನಲು ನೀನೇನು ಹೆಬ್ಬೆಟ್ಟಾ….?’ ಎಂದಂರಂತೆ. ಸೈಫ್ ಪ್ರಕಾರ, ತೈಮೂರ್ ಒಂದು ಟರ್ಕಿ ಶಬ್ದ. ಇದರರ್ಥ ಹುಲಿಯ ಗುಂಡಿಗೆಯವನು. 2-3 ವರ್ಷಗಳ ಹಿಂದೆಯೇ ಸೈಫ್ ಅಪ್ಪ ಆಗಿದ್ದರು. ಈ ಸಲ ಮತ್ತೆ ಅಪ್ಪ ಅನಿಸುವಷ್ಟರಲ್ಲಿ ಇವರ ಆ ಮಗಳು ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾಳೆ!
ಕಂಗನಾಳ ನೋವಿನ ನುಡಿ
ಬೇರೆ ಬೇರೆ ಆಗುವ ಸಂಗತಿ ವೇದಿಕೆ ಮೇಲೂ ಕಂಬನಿ ತರಬಲ್ಲದೇ? ಬಾಲಿವುಡ್ ಕ್ವೀನ್ ಕಂಗನಾಳ ಜೊತೆ ಹೀಗೆ ಆಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೀಬಾಕ್‌ನ `ಫಿಟ್ ಟು ಫೈಟ್ ಅವಾರ್ಡ್’ನಲ್ಲಿ ಪ್ರಶಸ್ತಿ ಪಡೆಯಲು ಹೊರಟ ಕಂಗನಾಳನ್ನು ಅವಳ ಲವ್ ಲೈಫ್ ಕುರಿತು ಕೇಳಿದಾಗ, ಅವಳು ಬಹಳ ಭಾವುಕಳಾಗಿ, ಹೃತಿಕ್ ಜೊತೆ ನಡೆಯುತ್ತಿರುವ ವಿವಾದದ ಕುರಿತು ತೆರೆದ ಮನಸ್ಸಿನಿಂದ ಹಂಚಿಕೊಂಡಳು. ತನ್ನ ಎದೆಯಾಳದ ನೋವನ್ನು ಗಝಲ್ ಹಾಡುವುದರ ಮೂಲಕ ತೋಡಿಕೊಂಡು ಮನಸ್ಸು ಹಗುರ ಮಾಡಿಕೊಂಡಳು. “ಈ ಹೋರಾಟದಲ್ಲಿ ನಾನೆಷ್ಟು ಸ್ಟ್ರಾಂಗ್ ಆಗುಳಿದೆ ಎಂಬುದನ್ನು ಜನ ಪ್ರತ್ಯಕ್ಷ ಗುರುತಿಸಿದ್ದಾರೆ. ಆದರೆ ಯಾರೂ ನನ್ನ ದೃಷ್ಟಿಕೋನದಿಂದ ಈ ವಿವಾದ ಗಮನಿಸುತ್ತಿಲ್ಲ. ಕೊನೆಗೆ ಅಂತಿಮ ವಿಷಯ ಹೊರಬಿದ್ದಾಗ, ನಾನು ನನ್ನನ್ನು ನಿಯಂತ್ರಿಸಿಕೊಳ್ಳಲಾರದೆ ಬಹಳ ದುರ್ಬಲಳಾದೆ. ಪ್ರಪಂಚದ ಮುಂದೆ ನನ್ನ ಭಾವನೆಗಳಿಗೆ ಬೆಲೆ ಇಲ್ಲದಂತೆ ಮಾಡಲಾಯಿತು. ಹಾಗೆ ಮಾಡಿ ಆತ (ಹೃತಿಕ್) ಎಂಥವರೆಂದೂ ತಾವೇ ನಿರೂಪಿಸಿದ್ದಾರೆ,” ಎಂದು ಅಲವತ್ತುಕೊಂಡಳು ಕಂಗನಾ.
ಕಿಲಾಡಿ ಕುಮಾರನ ಹೆಸರಿನಲ್ಲಿ
ಕಳೆದ ವರ್ಷ `ರುಸ್ತುಂ, ಏರ್‌ಲೆಫ್ಟಿನೆಂಟ್’ನಂಥ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಕಿಲಾಡಿ ಕುಮಾರ್‌ನ ಮೋಡಿ ಈ ಬಾರಿ ಏನೂ ಕಡಿಮೆ ಆಗಿಲ್ಲ. ಈ ತಿಂಗಳ ಅಂತ್ಯದ ಹೊತ್ತಿಗೆ `ಜಾಲಿ ಸ್ಟ್ರೈಕರ್-2′ ಚಿತ್ರದಿಂದ ಅಕ್ಷಯ್ ಕುಮಾರ್ ಎಂಥ ವರಸೆ ತೋರಿಸಲಿದ್ದಾರೋ ನೋಡೋಣ.
ನೋಟು ರದ್ದಿನ ಹಿಡಿತದಲ್ಲಿ ಬಾಕ್ಸ್ ಆಫೀಸ್
ನೋಟು ರದ್ದಿನಿಂದ ಯಾವ ವಿಭಾಗ ತಾನೇ ತತ್ತರಿಸಿಲ್ಲ? ಬಾಲಿವುಡ್ ಸಹ ಇದಕ್ಕೆ ಹೊರತಲ್ಲ. ಕಳೆದ 9/11 ನಂತರ ರಿಲೀಸ್ ಆದ ಚಿತ್ರಗಳೆಲ್ಲ ಬಾಕ್ಸ್ ಆಫೀಸಿನಲ್ಲಿ ತೋಪೇ ತೋಪು! ರಣವೀರ್ ಸಿಂಗ್‌ನಂಥ ಮಿನಿಮಮ್ ಗ್ಯಾರಂಟಿಯ ಮಾಸ್ ನಟನ ಚಿತ್ರ `ಬೇಫಿಕ್ರೆ’ ಸಹ ಠುಸ್ ಆಯಿತು. `ಕಹಾನಿ-2, ವಜಹ್ ತುಮ್ ಹೋ’ ಚಿತ್ರಗಳು ಪ್ರೇಕ್ಷಕರು ಬರುತ್ತಾರಾ ಎಂದು ಕಾಯತೊಡಗಿದವು. ಹೃತಿಕ್ ರೋಷನ್ ನಾಯಕನಾದ ಸಂಜಯ್ ಗುಪ್ತಾರ `ಕಾಬಿಲ್’ ಚಿತ್ರ ಏನು ಮಾಡಲಿದೆಯೋ ನೋಡಬೇಕು. ಈ ಚಿತ್ರ ಹಾಲಿವುಡ್‌ನ ನಕಲಿ ಎಂಬ ಆರೋಪದ ಪಟ್ಟಿ ಬೇರೆ ಹೊತ್ತಿದೆ. ಇದರಿಂದ ನಿರ್ದೇಶಕ ಸಂಜಯ್‌ಗೇನೂ ವ್ಯತ್ಯಾಸ ಇಲ್ಲವಂತೆ. `ಕಾಬಿಲ್’ ಬಿಡುಗಡೆ ಆಗಲಿರುವ ದಿನವೇ ಶಾರೂಖ್‌ನ `ರಯೀಸ್’ ಸಹ ಬಿಡುಗಡೆ ಆಗಲಿದೆ! ಪ್ರೇಕ್ಷಕರು ಬಂದರೆ ಸಾಕಾಗಿರುವ ಈ ದಿನಗಳಲ್ಲಿ ಇಬ್ಬರು ಮಹಾನ್ ತಾರೆಯರ ಚಿತ್ರಗಳು ಹೀಗೆ ಒಟ್ಟೊಟ್ಟಿಗೆ ರಿಲೀಸ್ ಆದರೆ ಬಾಕ್ಸ್ ಆಫೀಸ್ ಗತಿ ಏನಾಗಬೇಕು? `ಬಾಜೀರಾವ್ ಮಸ್ತಾನಿ, ಮೊಹಬ್ಬತೇ’ ಚಿತ್ರಗಳ ಗತಿ ಏನಾಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಸಲ್ಮಾನ್‌ಗೆ ದುರಹಂಕಾರವೇ?
`ದೋಸ್ತ್ ದೋಸ್ತ್ ನಾ ರಹಾ….’ ಹಾಡು ಇದೀಗ ಸಲ್ಲು-ಸಂಜೂರಿಗೆ ಅಕ್ಷರಶಃ ಅನ್ವಯವಾಗಲಿದೆ. ಕೆಲ ದಿನಗಳ ಹಿಂದೆ ಸಂಜಯ್‌ದತ್ ಜೇಲಿನಿಂದ ಹೊರಬಂದ ನಂತರ ಸಲ್ಮಾನ್ ಖಾನ್ ಮಾತ್ರವೇ ಆತನನ್ನು ಭೇಟಿಯಾಗಲು ಬಂದಿರಲಿಲ್ಲ. ಜೊತೆ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ, ಬಿಗ್‌ಬಾಸ್‌ನಲ್ಲೂ ಜೋಡಿ ಆಗಿದ್ದವರಿಗೆ ಇದ್ದಕ್ಕಿದ್ದಂತೆ ಈ ಬಿರುಕು ಏಕೋ ತಿಳಿಯಲಿಲ್ಲ. ಇತ್ತೀಚೆಗೆ ಒಂದು ಖಾಸಗಿ ವಾಹಿನಿಯ ಟಾಕ್ ಶೋನಲ್ಲಿ ಸಂಜು ಸಲ್ಮಾನ್‌ನನ್ನು ಏನೆಂದು ಭಾವಿಸುತ್ತಾರೆ ಎಂದು ಕೇಳಿದಾಗ `ದುರಂಹಕಾರಿ!’ ಎಂದು ಸ್ಪಷ್ಟವಾಗಿ ಉತ್ತರಿಸಿದರು. ಇದಕ್ಕೆ ಕಾರಣ….? ಒಂದೆರಡಂತೂ ಖಂಡಿತಾ ಅಲ್ಲ!
ಚಿನ್ನಮ್ಮ ಕುರಿತು ರೇಖಾ ಚಿತ್ರ
ಒಂದು ಹಿಟ್ ಚಿತ್ರದ ನಂತರ ಬಾಲಿವುಡ್‌ನಿಂದ ರೇಖಾ ದಕ್ಷಿಣದ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ಇಲ್ಲೂ ಅದು ಹಿಟ್ ಆಗುತ್ತಾ ಎಂಬುದೇ ಪ್ರಶ್ನೆ. `ವೀರಪ್ಪನ್’ (ಅಟ್ಟಹಾಸ) ಚಿತ್ರದ ನಂತರ ಈಗ ಆತ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾರ ಆಪ್ತಗೆಳತಿ ಶಶಿಕಲಾರ ಕುರಿತು ಚಿತ್ರ ಮಾಡುತ್ತಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಆ ಕುರಿತಾಗಿ, ಈ ಚಿತ್ರವನ್ನು ಫಿಕ್ಶನ್ ಫಾರ್ಮ್ಯಾಟ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಶಶಿಕಲಾರ ಕುರಿತಾದ ಈ ಚಿತ್ರ ನೇರ ಬಯೋಪಿಕ್ ಅನ್ನುವುದಕ್ಕಿಂತ ರಾಜಕೀಯ ಮುತ್ಸದ್ದಿಯ ಗೆಳತಿಯಾಗಿ ಪಟ್ಟ ಪಾಡಿನ ಕುರಿತಾಗಿರುತ್ತದೆ, ಕಾಲ್ಪನಿಕ ಹೌದು. ಇದು ಅಪ್ಪಟ ತಮಿಳರ ಹಿಂದಿ ಚಿತ್ರ ಆಗಲಿದೆ.
ಶ್ರದ್ಧಾಳ ಎಡೆಬಿಡದ ಡಯೆಟಿಂಗ್
`ರಾಕ್ ಆನ್-2′ ಚಿತ್ರದಿಂದ ಯಾರಿಗೇನು ನಷ್ಟವಾಯಿತೋ ಇಲ್ಲವೋ, ಆದರೆ ಶ್ರದ್ಧಾ ಕಪೂರ್‌ಳ ಭರವಸೆಯ ಮೇಲೆ ತಣ್ಣೀರು ಎರಚಿದಂತಾಗಿದೆ. ಇತ್ತೀಚೆಗೆ ಈಕೆಗೆ ಕೈ ಬಿಡುವಿಲ್ಲದಷ್ಟು ಕೆಲಸ. ಆಕೆ ಈಗ ದಾದರ್ ನ ತಂಗಿ ಹಸೀನಾ ಪಾರ್ಕರ್‌ಳ ಕುರಿತಾದ ಬಯೋಪಿಕ್ ಚಿತ್ರದಲ್ಲಿ ಬಿಝಿ. ಅದಕ್ಕಾಗಿ ತನ್ನ ತೂಕವನ್ನು ಸತತ ಕರಗಿಸುತ್ತಿದ್ದಾಳೆ. ಮಹಾನ್ ಬಾಯಿ ಚಪಲದ ಈಕೆ ಈಗ ಮಹಾರಾಷ್ಟ್ರಿಯನ್, ಪಂಜಾಬಿ ಆಹಾರ ಪೂರ್ತಿ ತ್ಯಜಿಸಿದ್ದಾಳಂತೆ. ಅದರ ಬದಲು ಈಗ ದಿನವಿಡೀ 6 ಮೀಲ್ಸ್ ಫಾರ್ಮುಲಾ ಫಾಲೋ ಮಾಡ್ತಿದ್ದಾಳೆ. ಈ ಆಹಾರದಲ್ಲಿ ಪ್ರೋಟೀನ್, ನಟ್ಸ್, ಬೀನ್ಸ್, ಸಲಾಡ್‌ಗಳಿರುತ್ತವೆ. ಕೇಳಲಿಕ್ಕೇನೋ ಇದು ಸಾಧಾರಣ ಡಯೆಟ್ ಎನಿಸಿದರೂ, ಶ್ರದ್ಧಾಳ ಈ ಡಯೆಟ್‌ನ ಮಂತ್ಲಿ ಖರ್ಚು ಸುಮಾರು ಒಂದೂವರೆ ಲಕ್ಷವಂತೆ!
ಹೇಗಿರಬಹುದು ಆನಂದರ ನಿಮ್ಮೋ?
`ತನು ವೆಡ್ಸ್ ಮನು’ ತರಹದ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಆನಂದ್ ರಾಯ್ ತಮ್ಮ ಮುಂದಿನ `ನಿಮ್ಮೋ’ ಚಿತ್ರ ಪ್ರಸ್ತುತಪಡಿಸಿದ್ದಾರೆ. ಸಾಧಾರಣ, ಸೀದಾಸಾದಾ ಕಥೆಯುಳ್ಳ ಈ ಚಿತ್ರ ತಮ್ಮ ಅಭಿಮಾನಿಗಳಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಾರೆ. `ನಿಮ್ಮೋ’ ಕಥೆ ಅಷ್ಟೇ ಸ್ವಾರಸ್ಯಕರ. ಈ ಚಿತ್ರದಲ್ಲಿ 8 ವರ್ಷದ ಒಬ್ಬ ಹುಡುಗನಿಗೆ 19ರ ಹರೆಯದ ಹುಡುಗಿ ಜೊತೆ ಲವ್ ಅಂತೆ! ಚಿತ್ರದ ನಾಯಕಿ ಮರಾಠಿ ನಟಿ ಅಂಜಲಿ ಪಾಟೀಲ್. ಇದು ಅಪ್ಪಟ ಭಾರತೀಯ ಕಥಾಹಂದರವುಳ್ಳ ಚಿತ್ರ ಎನ್ನುತ್ತಾರೆ ಆನಂದ್. ತನ್ನ ಪ್ರಾಮಾಣಿಕ ವಿಚಾರಧಾರೆಯಿಂದ ಚಿತ್ರ ಎಲ್ಲರ ಗಮನಸೆಳೆಯುತ್ತದೆ ಎನ್ನುತ್ತಾರೆ.
ಕೋಲ್ಕತಾದಿಂದ ಬಂದ ಹೊಸ ಮಾಸ್ಟರ್ ಶೆಫ್
ಮಾಸ್ಟರ್ ಶೆಫ್ ಸೀಸನ್-5ನ ಕಿಚನ್‌ಗೆ ಇದೀಗ ಹೊಸ ವಿಜೇತರು ಸಿಕ್ಕಿದ್ದಾರೆ. ಕೀರ್ತಿ ಭೂಟಿಕಾ ಈ ಸೀಸನ್ನಿನ ಮಾಸ್ಟರ್ ಶೆಫ್ ಇಂಡಿಯಾದ ವಿಜೇತರು. ಕೀರ್ತಿ ಇದುವರೆಗಿನ ಅತಿ ಕಿರಿಯ ಮಾಸ್ಟರ್‌ಶೆಫ್ ಎನಿಸಿದ್ದಾಳೆ. `ನಾನು ಬೆಸ್ಟ್ ಶೆಫ್ ಎಂದು ಗುರುತಿಸಲ್ಪಡಬೇಕು ಎಂಬುದು ನನ್ನ ಬಹುದಿನದ ಕನಸು. ಇಂದಿನ ಯುವ ಪೀಳಿಗೆಗೆ ನನ್ನ ಸಂದೇಶ ಇಷ್ಟೆ. ಸದಾ ದೊಡ್ಡ ಕನಸು ಕಾಣಿರಿ, ಅದನ್ನು ನನಸಾಗಿಸಲು ಹೋರಾಡಿರಿ,’ ಎನ್ನುತ್ತಾಳೆ ಕೋಲ್ಕತಾ ಮೂಲದ ಕೀರ್ತಿ.
ದೃಷ್ಟಿಯ ಬಾಲಿವುಡ್ ಡೆಬ್ಯು
`ಮಧುಬಾಲಾ, ಏಕ್ ಥಾ ರಾಜಾ ಏಕ್ ಥಿ ರಾಣಿ’ ಮುಂತಾದ ಟಿ.ವಿ. ಶೋಗಳಿಂದ ಖ್ಯಾತಳಾದ ದೃಷ್ಟಿ ದಾಮಿನಿ ಇಷ್ಟರಲ್ಲೇ ಬೆಳ್ಳಿ ಪರದೆಗೆ ಕಾಲಿಡಲಿದ್ದಾಳೆ. ಆಕೆ ಇದೀಗ ಹೊಸ ಕಿರುಚಿತ್ರ `ದಿ ಚೇಂಜ್’ನಲ್ಲಿ ನಟಿಸಲಿದ್ದಾಳೆ. ಇದು ನೋಟು ರದ್ದಿನ ಕುರಿತಾದ ಚಿತ್ರ. ಈ ಮೂಲಕ ಜನರಿಗೆ ನೋಟು ರದ್ದಿನ ಲಾಭ ಹಾನಿಗಳ ಕುರಿತಾದ ವಿವರ ತಿಳಿಯುತ್ತದಂತೆ. 20 ನಿಮಿಷಗಳ ಈ ಕಿರುಚಿತ್ರದ ನಿರ್ಮಾಪಕಿ ಆರತಿ ಪುರಿ.
ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ
`ಕಾಲಾ ಚಶ್ಮಾ ಜಜ್ತಾ ಹೈ….,’ `ಲಡ್ಕಿ ಬ್ಯೂಟಿಫುಲ್ ಕರ್‌ಗಯೀ ಕೂಲ್….’ ಮುಂತಾದ ಹಾಡುಗಳಿಂದ ಜನಪ್ರಿಯಳಾದ ಗಾಯಕಿ ನೇಹಾ ಕಕ್ಕಡ್ ಇದೀಗ ಹಿಮೇಶ್ ರೇಶಮ್ಯಾ ಜೊತೆ ಬೆರೆತು ಮಕ್ಕಳ ಹಾಡುಗಳಿಗೆ ತೀರ್ಪುಗಾರ್ತಿ ಆಗಲಿದ್ದಾಳೆ. ಝೀ ಟಿ.ವಿ. ತನ್ನ ಜನಪ್ರಿಯ ರಿಯಾಲಿಟಿ ಶೋ `ಸಾರೆಗಮಪಾ ಲಿಟಲ್ ಚ್ಯಾಂಪ್-6’ಗಾಗಿ ಆಡಿಶನ್ ಆರಂಭಿಸಿದೆ. ಈ ಬಾರಿಯ ಆಡಿಶನ್‌ನಲ್ಲಿ ಒಂದು ಸ್ವಸ್ಥ ಸ್ಪರ್ಧೆ ಶುರುವಾಗಲಿದೆ. ಇದರಲ್ಲಿ ಆಡಿಶನ್ ನೀಡಲಿರುವ ಮಗುವಿನ ಶಾಲೆಯ ಹೆಸರನ್ನೂ ತಿಳಿಸಲಾಗುತ್ತದೆ. ಮುಂದೆ ಮಗು ಸ್ಪರ್ಧೆಯಲ್ಲಿ ಮೇಲೇರಿದಂತೆ, ತನ್ನ ಊರಿನ ಜೊತೆ ಶಾಲೆಯ ಹೆಸರನ್ನೂ ಬೆಳಗುತ್ತದೆ. ಈ ಇಬ್ಬರು ಜಡ್ಜ್ ಗಳಿಗೂ ಇದರ ಭಾಗವಾಗಿದ್ದುದು ಬಹಳ ಖುಷಿಯಂತೆ!
ನಾವು ಜಾಗೃತರಾಗಿರಬೇಕು!
“ನಾವು ನಮ್ಮ ಸುತ್ತಮುತ್ತಲೂ ನಡೆಯುವ ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಗಮನಕೊಟ್ಟರೆ…. ಮುಂದೆ ನಡೆಯಬಹುದಾದ ದೊಡ್ಡ ಅವಘಡ ತಡೆಯಬಹುದು,” ಎನ್ನುತ್ತಾರೆ ನಟ ಮೋಹನೀಶ್ ಬೆಹಲ್. ಆತ ಟಿ.ವಿ.ಯಲ್ಲಿ ಬರಲಿರುವ ಹೊಸ ಕ್ರೈಮ್ ಶೋ `ಹೋಶಿಯಾರ್: ಸಹೀ ವಕ್ತ್ ಸಹೀ ಕದಂ’ನ ಮುಖ್ಯ ಆ್ಯಂಕರ್. ಆತನ ಪ್ರಕಾರ, “ನಮ್ಮ ಶೋ ಇತರರಿಗಿಂತ ವಿಭಿನ್ನ. ಏಕೆಂದರೆ ಈ ಶೋ ಮೂಲಕ ಯಾವುದೇ ದುರ್ಘಟನೆಗೆ ಕಾರಣ ಹಾಗೂ ಅದನ್ನು ತಡೆಹಿಡಿಯುವ ಉಪಾಯಗಳನ್ನೂ ತಿಳಿಸಲಾಗುತ್ತದೆ. ಬೇರೆ ಶೋಗಳಲ್ಲಿ ಕೇವಲ ಘಟನೆಯ ವರದಿಯಷ್ಟೇ ಪ್ರಸಾರಗೊಳ್ಳುತ್ತದೆ. ನಮ್ಮ ಶೋ ಕೇವಲ ಸತ್ಯ ಘಟನೆಗಳನ್ನೇ ಆಧರಿಸಿದ್ದಲ್ಲ…. ಆದರೆ ಇದರಲ್ಲಿ ನಮ್ಮ ಸುತ್ತಮುತ್ತಲೂ ನಡೆಯಬಹುದಾದ ಘಟನೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.”