ಪ್ರಕಾಶ್‌ ತಮ್ಮ ಆಫೀಸ್‌ನಲ್ಲಿ ದೊಡ್ಡ ಪದವಿಯಲ್ಲಿದ್ದಾರೆ. ಆಫೀಸ್‌ನಲ್ಲಿ ಅವರ ಅಧಿಕಾರ ಜೋರಾಗಿರುತ್ತದೆ. ಅವರ ಕೈಕೆಳಗೆ ಬಹಳಷ್ಟು ಜನ ಕೆಲಸ ಮಾಡುತ್ತಾರೆ. ಆದರೆ ಈ ಪ್ರಭಾವ, ಅಧಿಕಾರ ಅವರು ಮನೆಗೆ ಬಂದ ಕೂಡಲೇ ಮಾಯವಾಗುತ್ತದೆ. ಏಕೆಂದರೆ ಮನೆಗೆ ಬಂದು ಹೆಂಡತಿಯ ದರ್ಪ, ದಬ್ಬಾಳಿಕೆ ನೋಡಿದ ಕೂಡಲೇ ಅವರ ಧೈರ್ಯ ಕುಗ್ಗಿಹೋಗುತ್ತದೆ. ಹೆಂಡತಿಯ ಮುಂದೆ ಅವರದೇನೂ ನಡೆಯುವುದಿಲ್ಲ. ಹೆಂಡತಿಯನ್ನು ಜೀ ಹುಜೂರ್‌ ಅನ್ನದೇ ಬೇರೆ ಉಪಾಯವಿಲ್ಲ.

ಅಂತೂ ಮನೆಯಲ್ಲಿ ಶಾಂತಿ ನೆಲೆಸಿದೆ.

ಈ ಕಥೆ ಬರೀ ಪ್ರಕಾಶ್‌ರದ್ದಲ್ಲ. ಹೆಂಡತಿಯ ಇಂತಹ ಆ್ಯಟಿಟ್ಯೂಡ್‌ಗಳ ಬಗ್ಗೆ ಯಾವಾಗಲೂ ದೂರುವ ಅನೇಕ ಗಂಡಂದಿರಿದ್ದಾರೆ. ಆದರೆ ಅವರು ಬಯಸಿದರೂ ಏನನ್ನೂ ಮಾಡಲಾಗುವುದಿಲ್ಲ. ಈ ಸಮಸ್ಯೆ ಕಷ್ಟವಿದೆ ಎಂದು ಗೊತ್ತು. ಆದರೆ ಬಗೆಹರಿಸಲು ಆಗುವುದೇ ಇಲ್ಲ ಎಂದಲ್ಲ. ಇದಕ್ಕೆ ಕೊಂಚ ತಿಳಿವಳಿಕೆ ಹಾಗೂ ಧೈರ್ಯದ ಅಗತ್ಯವಿದೆ.

ಚುಚ್ಚುವಿಕೆ ಡಾಟ್‌ಕಾಂನಿಂದ ಹೀಗೆ ಪಾರಾಗಿ ಸುತ್ತಾಡಿ ಬನ್ನಿ : ಹೆಂಡತಿ ಅಂತಹ ಆ್ಯಟಿಟ್ಯೂಡ್‌ ತೋರಿಸುವವರಾಗಿದ್ದರೆ ಸ್ವಲ್ಪ ಹೊತ್ತು ಅತ್ತಿತ್ತ ಸುತ್ತಾಡಿ ಬನ್ನಿ. ಅಂದರೆ ಆ ಪರಿಸ್ಥಿತಿಯಲ್ಲಿ ಸಿಕ್ಕಿಬೀಳಬೇಡಿ. ಅಂತಹ ಸ್ಥಿತಿಯಿಂದ ಎಷ್ಟು ತಪ್ಪಿಸಿಕೊಳ್ಳುವಿರೋ ಅಷ್ಟು ತಕರಾರು ಕಡಿಮೆಯಾಗುತ್ತದೆ.

ಚೆನ್ನಾಗಿ ಆಲೋಚಿಸಿ ಕೆಲಸ ಮಾಡಿ : ಒಂದು ವೇಳೆ ಆಫೀಸ್‌ನಿಂದ ಬಂದ ಕೂಡಲೇ ಅಥವಾ ಮನೆಯಲ್ಲಿ ಸುಮ್ಮನೆ ಕೂತಿದ್ದು ನೋಡಿ ಹೆಂಡತಿ ನಿಮಗೆ ಮನೆ ಕೆಲಸ ಮಾಡಲು ಆರ್ಡರ್‌ ಮಾಡಿ, ತಾನು ಟಿ.ವಿ. ನೋಡಲು ಕೂತುಬಿಟ್ಟರೆ ನಾನೂ ಸುಸ್ತಾಗಿ ಈಗ ತಾನೆ ಮನೆಗೆ ಬಂದಿದ್ದೇನೆ ಅಥವಾ ಈಗ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದೇನೆ. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಸೇರಿ ಎಲ್ಲ ಕೆಲಸ ಮುಗಿಸೋಣ ಎಂದು ಹೇಳಿ. ಮನೆಯ ಕೆಲಸ ಪುರುಷರು ಮಾಡಬಾರದು ಎಂದಲ್ಲ.

ವಾರ್ನಿಂಗ್‌ ಕೊಡಿ :  ನೀವು ಕಾರಣವಿಲ್ಲದೇ ಹೆಂಡತಿಯ ಮೇಲೆ ಕೂಗಾಡಬೇಡಿ. ಅವರಿಗೂ ಹಾಗೆ ಮಾಡಲು ಬಿಡಬೇಡಿ. ವಿಷಯವನ್ನು ಆರಾಮವಾಗಿ ಬಗೆಹರಿಸಿಕೊಳ್ಳುವುದು ಒಳ್ಳೆಯದೆಂದು ಹೇಳಿ. ಇಲ್ಲದಿದ್ದರೆ ಕಿರುಚುವುದು ನಿಮಗೂ ಬರುತ್ತದೆಂದು ಹೇಳಿ. ಆಗ ಅವರು ಮುಂದಿನ ಬಾರಿ ನಿಮ್ಮೊಂದಿಗೆ ಅಶಿಷ್ಟತೆಯಿಂದ ವರ್ತಿಸುವ ಮೊದಲು ಒಮ್ಮೆ ಖಂಡಿತಾ ಯೋಚಿಸುತ್ತಾರೆ.

ಪರಸ್ಪರ ವಿಶ್ವಾಸ ಹೆಚ್ಚಿಸಿ : ನಿಮಗೆ ಹೆಂಡತಿಯ ಇಂತಹ ವರ್ತನೆ ಒಂದು ಚೂರೂ ಹಿಡಿಸುವುದಿಲ್ಲವೆಂದು ಪ್ರೀತಿಯಿಂದಲೂ ಅವರಿಗೆ ತಿಳಿಯಪಡಿಸಬಹುದು. ಅವರಲ್ಲಿ ಕೊಂಚ ಬದಲಾವಣೆ ತರುವ ಅಗತ್ಯವಿದೆ. ಒಂದು ವೇಳೆ ಅವರಿಗೆ ನಿಮ್ಮ ಕುಂದುಕೊರತೆಗಳು ಕಂಡು ಬಂದಲ್ಲಿ ನಿಮ್ಮನ್ನು ನೀವು ಬದಲಿಸಿಕೊಳ್ಳಲು ಸಿದ್ಧರೆಂದು ತಿಳಿಸಿ. ಇದರಿಂದ ನಿಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ ಹೆಚ್ಚುತ್ತದೆ.

ಉತ್ತಮ ಸಲಹೆ

ಹೆಚ್ಚು ರೋಫ್‌ ಹಾಕುವ ನಿಟ್ಟಿನಲ್ಲಿ ಗಂಡನ ದೃಷ್ಟಿಯಲ್ಲಿ ನಿಮ್ಮ ಗೌರವ ಕಡೆಯ ಕಿಮ್ಮತ್ತಾಗಬಾರದು.

– ನೀವು ಆಫೀಸ್‌ನಲ್ಲಿ ನಿಮ್ಮ ಪತಿಯ ಬಾಸ್‌ ಆಗಿರಬಹುದು. ಆದರೆ ಅದು ಮನೆ, ನಿಮ್ಮ ಆಫೀಸ್‌ ಅಲ್ಲ ಎಂಬುದನ್ನು ಮರೆಯದಿರಿ. ಆದ್ದರಿಂದ ಪ್ರತಿ ವಿಷಯದಲ್ಲೂ ಹುಕುಂ ಚಲಾಯಿಸಬೇಡಿ.

– ಗಂಡ ಇರಲಿ, ಮಕ್ಕಳೂ ನಿಮ್ಮನ್ನು ಕಂಡು ಹೆದರುತ್ತಾರೆ. ನಿಮ್ಮ ಬೆನ್ನ ಹಿಂದೆ ಅಮ್ಮ ಬಹಳ ಕೆಟ್ಟವಳು ಎಂದು ಆಡಿಕೊಳ್ಳುತ್ತಾರೆ. ಅದು ನಿಮಗೆ ಇಷ್ಟವಾಗುದಿಲ್ಲ.

ಆ್ಯಟಿಟ್ಯೂಡ್‌ಗೆ ಕಾರಣ ತಿಳಿದುಕೊಳ್ಳಿ   

– ಅವರು ನಿಮಗಿಂತ ಹೆಚ್ಚು ಗುಡ್‌ ಲುಕಿಂಗ್‌ ಆಗಿದ್ದಾರೆಯೇ?

– ಅವರು ಆಫೀಸ್‌ನಲ್ಲೂ ನಿಮ್ಮ ಬಾಸ್‌ ಆಗಿದ್ದಾರೆಯೇ?

– ಅವರು ಶ್ರೀಮಂತರ ಮನೆಯಿಂದ ಬಂದರೇ?

– ಅವರು ತಮ್ಮ ತವರುಮನೆಯಲ್ಲಿ ಎಲ್ಲರಿಗಿಂತ ದೊಡ್ಡವರೇ? ತಮ್ಮ, ತಂಗಿಯರಿಗೆ ರೋಫ್‌ ಹಾಕುತ್ತಾ ಹಾಕುತ್ತಾ ಅವರಿಗೆ ಇದು ಅಭ್ಯಾಸವಾಗಿ ಹೋಗಿದೆಯೇ?

– ನಿಮ್ಮ ಪತ್ನಿ ಫ್ರಸ್ಟ್ರೇಟ್‌ ಆಗಲು ನಿಮ್ಮಿಬ್ಬರ ಮಧ್ಯೆ ಏನಾದರೂ ವಿಷಯ ನಡೆದಿದ್ದು, ಅದರ ಕೋಪವನ್ನು ನಿಮ್ಮ ಮೇಲೆ ತೋರಿಸುತ್ತಿದ್ದಾರೆಯೇ?

ಕಾರಣವಿಲ್ಲದೆ ಕೋಪ ಬಂದಾಗ

ನಿಮಗೆ ಎಂದಾದರೂ ಕೋಪ ಬಂದು ಸಂಗಾತಿಯ ಮೇಲೆ ಕಾರಣವಿಲ್ಲದೆ ಕಿರುಚಾಡಿದಾಗ ನಿಮ್ಮ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಪರೀಕ್ಷೆ ಮಾಡಿಸಬೇಕು. ಗ್ಲೂಕೋಸ್‌ ಮಟ್ಟ ಸಾಮಾನ್ಯಕ್ಕಿಂತ ಕಡಿಮೆಯಾದಾಗ ಜನ ಕೋಪಗೊಳ್ಳುತ್ತಾರೆ ಹಾಗೂ ಆಕ್ರಮಣಕಾರಿಯಾಗುತ್ತಾರೆ.

ಓಹಿಯೋ ಯೂನಿರ್ವಸಿಟಿಯ ಮನೋವಿಜ್ಞಾನದ ಪ್ರೊಫೆಸರ್‌ ಬ್ರ್ಯಾಡ್‌ ಬುಶ್‌ಮನ್‌ ಹೀಗೆ ಹೇಳುತ್ತಾರೆ, “ಹಸಿವೆಯಂತಹ ಸಾಮಾನ್ಯ ಕ್ರಿಯೆಯಿಂದ ಕುಟುಂಬದಲ್ಲಿ ಜಗಳ ಹಾಗೂ ಒಮ್ಮೊಮ್ಮೆ ಚಿತ್ರಹಿಂಸೆಗೆ ಕಾರಣವಾಗುತ್ತದೆ.”

ಸಂಶೋಧನೆಯಲ್ಲಿ 107 ದಂಪತಿಗಳ ಮೇಲೆ ಅಧ್ಯಯನ ನಡೆಸಲಾಯಿತು. ಪ್ರತಿ ದಂಪತಿಗಳನ್ನೂ ವಿವಾಹಿತ ಬದುಕಿನಲ್ಲಿ ಸಂತುಷ್ಟರಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಲಾಯಿತು. 21 ದಿನಗಳರೆಗೆ ನಡೆಸಿದ ಅಧ್ಯಯನದಲ್ಲಿ ವಿವಾಹಿತ ಜೋಡಿಗಳಲ್ಲಿ ಪ್ರತಿ ಸಂಜೆಯ ಗ್ಲೂಕೋಸ್‌ ಮಟ್ಟ, ಸಂಗಾತಿಯೊಂದಿಗಿನ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಯಿತು.

ಗ್ಲೂಕೋಸ್‌ ಮಟ್ಟ ಕಡಿಮೆ ಕಂಡುಬಂದ ಜನರಲ್ಲಿ ಅವರು ತಮ್ಮ ಸಂಗಾತಿಗಳ ಮೇಲೆ ಹೆಚ್ಚು ಕೋಪಗೊಳ್ಳುತ್ತಾರೆ ಎಂದು ತಿಳಿದುಬಂದಿತು. ಅದನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಅದನ್ನು ಹತ್ತಿಕ್ಕಲು ಗಟ್ಟಿಯಾದ ಧ್ವನಿಯಲ್ಲಿ ಮಾತಾಡುತ್ತಾರೆ. ಗ್ಲೂಕೋಸ್‌ ಮಟ್ಟ ಕಡಿಮೆಯಾಗುವುದರಿಂದ ಹಸಿವು ಮತ್ತು ಕೋಪದ ಪರಿಸ್ಥಿತಿ ಹತ್ತಿರದ ಸಂಬಂಧಗಳನ್ನು ಪ್ರಭಾವಿತಗೊಳಿಸುತ್ತದೆ.

– ಕೆ. ಗೌರಿ ಮನೋಹರಿ 

ಹೆಂಡತಿಯರ ಬಗ್ಗೆ ಗಂಡಂದಿರ ಹೇಳಿಕೆಗಳು

ಮಿಲಿಟರಿಯವ : ನನ್ನನ್ನು ಕಂಡರೆ ಶತ್ರುಗಳೆಲ್ಲ ಹೆದರುತ್ತಾರೆ. ನಾನು ನನ್ನ ಹೆಂಡತಿಗೆ ಹೆದರುತ್ತೇನೆ.

ಜಡ್ಜ್ : ನಾನು ಕೋರ್ಟ್‌ನಲ್ಲಿ ತೀರ್ಪು ಕೊಡುತ್ತೇನೆ. ಆದರೆ ಮನೆಯಲ್ಲಿ ನ್ಯಾಯಕ್ಕಾಗಿ ಹಂಬಲಿಸುತ್ತೇನೆ.

ಡಾಕ್ಟರ್‌ : ನಾನು ಪ್ರಪಂಚವನ್ನೇ ಸರಿಪಡಿಸುತ್ತೇನೆ. ಮನೆಯಲ್ಲಿ ಹೆಂಡತಿ ನನ್ನನ್ನು ಸರಿಪಡಿಸುತ್ತಾಳೆ.

ಅಡುಗೆಯವ : ನಾನು ಎಲ್ಲರಿಗೂ ಬೇಯಿಸಿ ಹಾಕ್ತೀನಿ. ಮನೆಯಲ್ಲಿ ಹೆಂಡತಿ ನನ್ನನ್ನು ಬೇಯಿಸುತ್ತಾಳೆ.

ಅಕೌಂಟೆಂಟ್‌ : ನಾನು ಎಲ್ಲರ ಲೆಕ್ಕ ಇಡ್ತೀನಿ. ಮನೆಯಲ್ಲಿ ಹೆಂಡತಿ ನನ್ನ ಲೆಕ್ಕ ಚುಕ್ತಾ ಮಾಡ್ತಾಳೆ.

ಟೀಚರ್‌ : ನಾನು ಕಾಲೇಜಿನಲ್ಲಿ ಲೆಕ್ಚರ್‌ ಕೊಡ್ತೀನಿ. ಮನೇಲಿ ನನ್ನ ಹೆಂಡತಿಯ ಲೆಕ್ಚರ್‌ ಕೇಳ್ತೀನಿ.

ಆಫೀಸರ್‌ : ನಾನು ಆಫೀಸ್‌ನಲ್ಲಿ ಮಾತ್ರ ಬಾಸ್‌. ಆದರೆ ಮನೇಲಿ ಹೆಂಡತಿ ಹೇಳಿದಂತೆ ಕೇಳುತ್ತೇನೆ.

1  ಗೌರವ ಕಳೆದುಕೊಳ್ಳಬೇಡಿ : ನೀವು ಪ್ರೀತಿಯಿಂದ ಕೊಂಚ ಸಲಿಗೆ ಕೊಟ್ಟರೆ ಅದರ ದುರ್ಲಾಭ ಪಡೆದು ಅವರು, ನಿಮ್ಮ ತಲೆಯ ಮೇಲೆ ಸವಾರಿ ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಪ್ರೀತಿ ಕೊಡಿ. ಆದರೆ ನಿಮ್ಮ ಗೌರವ ಕಳೆದುಕೊಳ್ಳಬೇಡಿ.

2 ನಿಮ್ಮ ದೈನ್ಯತೆಯನ್ನು ಬದಲಿಸಿಕೊಳ್ಳಿ : ನೀವು ಹೆಚ್ಚು ದೈನ್ಯತೆ ಪ್ರದರ್ಶಿಸುತ್ತೀರಾ ಎಂದೂ ಪರೀಕ್ಷಿಸಿಕೊಳ್ಳಿ. ನೆರೆಯವರ ಜೊತೆ ಜಗಳವಿರಲಿ, ಸಂಬಂಧಿಕರೊಡನೆ ಏನಾದರೂ ಮಾತುಕಥೆ ಇರಲಿ, ನೀವು ನಿಮ್ಮ ಪತ್ನಿಯನ್ನೇ ಮುಂದೆ ಬಿಡುತ್ತೀರಾ? ಹಾಗೇನಾದರೂ ಇದ್ದರೆ, ಮೊದಲು ನಿಮ್ಮ ಅಭ್ಯಾಸ ಬದಲಿಸಿಕೊಳ್ಳಿ. ಏಕೆಂದರೆ ಹೊರಗೆ ರೋಫ್‌ ಹಾಕುತ್ತಾ ಹಾಕುತ್ತಾ ಮನೆಯಲ್ಲಿ ನಿಮ್ಮ ಮೇಲೂ ಅಧಿಕಾರ ಪ್ರಯೋಗಿಸುತ್ತಾರೆ.

3 ಧೈರ್ಯ ಪ್ರದರ್ಶಿಸಿ : ಪ್ರತಿ ಬಾರಿ ಮುಂದೆ ಹಾಕುವುದು ಸರಿಯಲ್ಲ. ಆದ್ದರಿಂದ ಧೈರ್ಯ ಮಾಡಿ ಇಂತಹ ವರ್ತನೆಗೆ ಕಾರಣವೇನು ಎಂದು ನೇರವಾಗಿ ಕೇಳಿ. ಅಂತಹ ಮಾತುಗಳನ್ನು ಇನ್ನು ಮುಂದೆ ಸಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿ. ನಿಮ್ಮ ಬೆದರಿಕೆಯ ನಂತರ ಅವರು ಸುಧಾರಿಸಬಹುದು.

4 ಬಿಜಿಯಾಗಿರಿ :  ನಿಮ್ಮನ್ನು ಬಿಜಿಯಾಗಿಟ್ಟುಕೊಳ್ಳಿ. ಪರಸ್ಪರ ಘರ್ಷಣೆ ಕಡಿಮೆಯಾಗುತ್ತದೆ. ನೀವು ಹೆಚ್ಚು ಬಿಜಿಯಾಗಿದ್ದರೆ ನಿಮ್ಮಾಕೆ ನಿಮ್ಮೊಂದಿಗೆ ಮಾತಾಡುವುದು ಕಡಿಮೆಯೇ ಆಗುತ್ತದೆ.

5 ಓವರ್‌ ರಿಯಾಕ್ಟ್ ಮಾಡಬೇಡಿ : ನಿಮ್ಮ ಪತ್ನಿ ಸರಿಯಾಗೇ ಹೇಳುತ್ತಿರಬಹುದು. ಆದರೆ ಹೇಳುವ ರೀತಿ ಕೊಂಚ ಕರ್ಕಶವಾಗಿರಬಹುದು. ಅದು ಅವರ ಸ್ವಭಾವವಿರಬಹುದು. ಆದ್ದರಿಂದ ನೀವು ಓವರ್‌ ರಿಯಾಕ್ಟ್ ಮಾಡುತ್ತಿದ್ದೀರಾ ಎಂದೊಮ್ಮೆ  ಯೋಚಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ