ಕಥೆ – ವನಿತಾ ವಿಶ್ವನಾಥ್
ಪುಷ್ಪಾಳಿಗೆ ಶಾಲೆಯಿಂದ ಜರ್ಮನಿಗೆ ಹೋಗಿ ಬರುವ ಅವಕಾಶ ಸಿಕ್ಕಿತ್ತು. ಆದರೆ ಕಡೇ ಗಳಿಗೆಯಲ್ಲಿ ಪುಷ್ಪಾಳ ಸಹೋದ್ಯೋಗಿ ನಳಿನಿಗೆ ಈ ಅವಕಾಶ ಸಿಕ್ಕಿತು. ಹೀಗೇಕಾಯಿತು……?
“ಮೇಡಂ, ನಿಮಗೆ ಬಿಡುವಾದಾಗ ಪ್ರಿನ್ಸಿಪಾಲ್ ಆಫೀಸ್‌ಗೆ ಹೋಗಬೇಕಂತೆ.”
ಅದನ್ನು ಕೇಳಿದ ಕೂಡಲೇ ಪುಷ್ಪಾ ಚಿಂತಿತಳಾದಳು. ಪ್ರಿನ್ಸಿಪಾಲ್ ಸರ್ ಯಾವ ಕಾರಣಕ್ಕಾಗಿ ತನ್ನನ್ನು ಕರೆದಿರಬಹುದು? ಹಳೆಯ ಕಟು ಅನುಭವ ಅವಳಿಗೆ ನೆನಪಾಯಿತು. ಆಗ ಅವರು ಅಪ್ರತ್ಯಕ್ಷವಾಗಿ ಅವಳಿಗೆ ಬೇಸರ ಉಂಟುಮಾಡಿದ್ದರು.
ಕೊನೆಯ ಪೀರಿಯಡ್ ಪಾಠ ಮುಗಿಸಿ ತನ್ನ ಪುಸ್ತಕಗಳನ್ನು ಜೋಡಿಸಿಕೊಂಡು ಪ್ರಿನ್ಸಿಪಾಲ್ ರ ಕೋಣೆಯತ್ತ ವೇಗವಾಗಿ ನಡೆದಳು.
ದಾರಿಯಲ್ಲಿ ನಳಿನಿ ಸಿಕ್ಕರು, “ಪುಷ್ಪಾ, ಇಷ್ಟು ವೇಗವಾಗಿ ಎಲ್ಲಿಗೆ ಹೋಗ್ತಿದ್ದೀರಿ?”
“ಪ್ರಿನ್ಸಿಪಾಲ್ ರನ್ನು ಮೀಟ್ ಮಾಡೋಕೆ.”
“ಅದಕ್ಕೆ ಹೆದರೋದೇನಿದೆ?”
“ನನಗೆ ಅವರನ್ನು ಕಂಡರೆ ಭಯ ಆಗುತ್ತೆ.”
“ಅವರೇನು ಹುಲೀನಾ, ಸಿಂಹಾನಾ ಭಯಪಡೋಕೆ? ಸರಿ ನಾನು ಬರ್ತೀನಿ.”
ಪುಷ್ಪಾ ಪ್ರಿನ್ಸಿಪಾಲ್ ಕೋಣೆಯ ಬಾಗಿಲಲ್ಲಿ, “ಸರ್, ಮೇ ಐ ಕಮಿನ್?” ಎಂದಳು.
“ಬನ್ನಿ…. ಬನ್ನಿ… ಪುಷ್ಪಾ ಕೂತ್ಕೊಳ್ಳಿ. ಕಾಫಿ ತರಿಸ್ಲಾ?” ಪುಷ್ಪಾಗೆ ಸಂಕೋಚಾಯಿತು. “ಹ್ಞೂಂ ಸರ್,” ಎಂದಳು.
“ಈ ಬಾರಿ ನಿಮ್ಮ ಕ್ಲಾಸಿನ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆದಿದ್ದಾರೆ. ಕಂಗ್ರಾಟ್ಸ್.”
“ಥ್ಯಾಂಕ್ಯು ಸರ್.”
“ಸರಿ. ಆ ವಿಷಯ ಬಿಡಿ. ಅಂದಹಾಗೆ ನಿಮ್ಮ ಬಳಿ ಪಾಸ್‌ಪೋರ್ಟ್ ಇದೆಯಾ?”
“ಇಲ್ಲ ಸರ್,” ಪುಷ್ಪಾ ನಿಧಾನವಾಗಿ ಹೇಳಿದಳು.
“ಹಾಗಿದ್ರೆ ಮಾಡಿಸಿಕೊಳ್ಳಿ. ಈ ಬಾರಿ ಟೀಚರ್ಸ್ ಡೆಲಿಗೇಶನ್ ಜರ್ಮನಿಗೆ ಹೋಗ್ತಾ ಇದೆ. ಅದಕ್ಕೆ ನಿಮ್ಮ ಹೆಸರನ್ನು ಕಳಿಸ್ತೀನಿ. ನೀವು ಬೇಗನೆ ಪಾಸ್‌ಪೋರ್ಟ್ ಮಾಡಿಸಿಕೊಳ್ಳಿ.”
“ಓ.ಕೆ. ಸರ್.”
“ನಿಮ್ಮ ವಿದೇಶ ಯಾತ್ರೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ.”
ಪುಷ್ಪಾಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವಳು ಪ್ರಿನ್ಸಿಪಾಲ್‌ರ ಮುಖವನ್ನೇ ನೋಡುತ್ತಿದ್ದಳು. 60-65 ವರ್ಷದ ಪ್ರಿನ್ಸಿಪಾಲ್ ಪ್ಯಾಂಟ್, ಶರ್ಟ್ ಧರಿಸಿ ಗೋಲ್ಡನ್ ಫ್ರೇಮ್ ಕನ್ನಡಕ ಧರಿಸಿದ್ದು ನೋಡಿ ಪುಷ್ಪಾಗೆ ತನ್ನ ಅಪ್ಪನ ನೆನಪಾಯಿತು.
“ಸರ್, ಯಾವಾಗ ಹೋಗೋದು?”
“ಇನ್ನೂ ಡೇಟ್ ಗೊತ್ತಿಲ್ಲ. ಅಂದಹಾಗೆ ಈ ಕಾನ್ಛರೆನ್ಸ್ ಇರೋದು ಬರುವ ತಿಂಗಳ ಕಡೇ ವಾರದಲ್ಲಿ.”
ಪುಷ್ಪಾಗೆ ತನ್ನ ಸಂತಸ ಅಡಗಿಸಲಾಗುತ್ತಿರಲಿಲ್ಲ. “ಮತ್ತೆ, ಇನ್ನೊಂದು ವಿಷಯ ನಿಮಗೆ ಹೇಳಬೇಕಿತ್ತು. `ಭಾರತದಲ್ಲಿ ಮಹಿಳೆಯರ ಮುನ್ನಡೆ’ ಈ ಟಾಪಿಕ್ ಬಗ್ಗೆ ಒಂದು ಒಳ್ಳೆಯ ಆರ್ಟಿಕಲ್ ರೆಡಿ ಮಾಡಿ. ಭಾರತದಲ್ಲಿ ಮಹಿಳೆಯರು ಎಷ್ಟು ಮುಂದುವರೆದಿದ್ದಾರೆ ಎಂದು ಅಲ್ಲಿನವವರಿಗೆ ತಿಳಿಯಬೇಕು.”
“ಸರ್, ನಾನು 2-3 ದಿನಗಳಲ್ಲಿ ಆರ್ಟಿಕಲ್ ಬರೆದು ನಿಮಗೆ ಕೊಡುತ್ತೇನೆ.”
“ಒಂದು ವಾರ ಟೈಂ ತಗೊಳ್ಳಿ. ಆದರೆ ಒಳ್ಳೆ ಪಾಯಿಂಟ್‌ಗಳನ್ನು ಕೋಟ್ ಮಾಡಿ ರೆಡಿ ಮಾಡಿ. ರೇಖಾ ಅವರಿಗೂ ಬರೆಯೋಕೆ ಹೇಳ್ತೀನಿ. ಇಬ್ಬರ ಲೇಖನಗಳಲ್ಲೂ ಒಳ್ಳೊಳ್ಳೆಯ ಪಾಯಿಂಟ್ಸ್ ತಗೊಂಡು ಉನ್ನತವಾದ ಆರ್ಟಿಕಲ್ ರೆಡಿ ಮಾಡಬಹುದು. ಅದನ್ನು ಎಲ್ಲರ ಮುಂದೆಯೂ ಓದಬಹುದು.”
“ಆಯ್ತು ಸರ್.”
“ಸರಿ. ಈಗ ನೀವು ಹೋಗಿ. ನಿಮ್ಮ ಪಾಸ್‌ಪೋರ್ಟ್ ಬೇಗನೆ ಮಾಡಿಸ್ಕೊಳ್ಳಿ.”
“ಥ್ಯಾಂಕ್ಯು ಸರ್.”
ತಾನು ವಿದೇಶಕ್ಕೆ ಹೋಗುವ ಕನಸು ಇಷ್ಟು ಬೇಗ ನನಸಾಗುತ್ತಿದೆ ಎಂದು ಯೋಚಿಸಿ ಅವಳಿಗೆ ಬಹಳ ಖುಷಿಯಾಯಿತು. ಪ್ರಿನ್ಸಿಪಾಲ್ ರೂಮ್ ನಿಂದ ಹೊರಬಂದ ಕೂಡಲೇ ತನ್ನ ಖುಷಿಯನ್ನು ಹಂಚಿಕೊಳ್ಳಲು ಗಂಡ ಹರ್ಷನಿಗೆ, `ನನ್ನ ಪಾರ್ಸ್‌ಪೋರ್ಟ್ ಮಾಡಿಸಬೇಕು. ಈ ಬಾರಿ ಸ್ಕೂಲ್‌ನಿಂದ ವಿದೇಶಕ್ಕೆ ಹೋಗುವ ಡೆಲಿಗೇಶನ್‌ನಲ್ಲಿ ನನ್ನನ್ನು ಕಳಿಸಲಿದ್ದಾರೆ. ನಾನು ಜರ್ಮನಿಗೆ ಹೋಗಲಿದ್ದೇನೆ,’ ಎಂದು ಮೆಸೇಜ್ ಮಾಡಿದಳು. `ಆಯ್ತು ಮಾಡಿಸ್ತೀನಿ. ನೀನೇನೂ ಯೋಚಿಸ್ಬೇಡ,’ ಹರ್ಷ ಕೂಡಲೇ ಉತ್ತರಿಸಿದ.
ವಿದೇಶ ಯಾತ್ರೆಯ ಬಗ್ಗೆ ಯೋಚಿಸುತ್ತಾ ಪುಷ್ಪಾಳ ಮುಖ ಖುಷಿಯಿಂದ ಕೆಂಪಗಾಗಿತ್ತು. ತನಗೆ ರೆಕ್ಕೆಗಳು ಮೂಡಿ ಆಕಾಶದಲ್ಲಿ ಹಾರುತ್ತಿದ್ದೇನೆಂದು ಅವಳಿಗೆ ಅನ್ನಿಸುತ್ತಿತ್ತು. 30 ವರ್ಷದ ಪುಷ್ಪಾ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವಳು. ಅವಳು ಚಿಕ್ಕಂದಿನಿಂದ ಓದವುದರಲ್ಲಿ ಮುಂದಿದ್ದಳು. ಅವಳ ಅಕಾಡೆಮಿಕ್ ರೆಕಾರ್ಡ್‌ನಿಂದಾಗಿ ಒಂದು ಇಂಟರ್‌ನ್ಯಾಷನಲ್ ಸ್ಕೂಲ್ ನಲ್ಲಿ ಇಂಗ್ಲಿಷ್ ಟೀಚರ್ ಹುದ್ದೆ ಸಿಕ್ಕಿತ್ತು. ಪರಿಶ್ರಮ ಹಾಗೂ ಪಾಂಡಿತ್ಯದಿಂದಾಗಿ ಸ್ಕೂಲ್ ನಲ್ಲಿ ಅವಳಿಗೆ ಬಹಳ ಮರ್ಯಾದೆ ಇತ್ತು. ಸ್ಟಾಫ್‌ರೂಮ್ ನಲ್ಲಿನ ಡರ್ಟಿ ಪಾಲಿಟಿಕ್ಸ್ ಮತ್ತು ಗಾಸಿಪ್‌ನಿಂದ ಅವಳು ಯಾವಾಗಲೂ ದೂರವಿರುತ್ತಿದ್ದಳು. ಇಂಟರ್‌ನ್ಯಾಷನಲ್ ಸ್ಕೂಲ್ ಆಗಿದ್ದರಿಂದ ಅಲ್ಲಿ ವಿದೇಶಿ ಮಕ್ಕಳು ಹೆಚ್ಚಾಗಿದ್ದರು. ಅವರನ್ನು ನೋಡಿ ನೋಡಿ ಅವಳಿಗೂ ವಿದೇಶ ಯಾತ್ರೆಯ ಕನಸು ಬೀಳುತ್ತಿತ್ತು. ಆದರೆ ಅದು ಇಷ್ಟು ಬೇಗ ನೆರವೇರುವುದೆಂದು ಕನಸಿನಲ್ಲೂ ಊಹಿಸಿರಲಿಲ್ಲ.
ಅವಳು ಆಚೆ ಬಂದಾಗ ನಳಿನಿ ಮತ್ತೆ ಎದುರಾದರು, “ಯಾಕೆ ಕರೆದಿದ್ರು ಪ್ರಿನ್ಸಿಪಾಲ್?” ಎಂದು ಕೇಳಿದರು.
“ಏನಿಲ್ಲ…. ಮಕ್ಕಳಿಗೆ ಒಳ್ಳೆಯ ಮಾರ್ಕ್ಸ್ ಬಂದಿದೇಂತ ಕಂಗ್ರಾಟ್ಸ್ ಹೇಳಿದ್ರು.”
“ಹೌದಾ, ಸರಿ.”
ಪುಷ್ಪಾ ಬೇಗನೆ ಮನೆಗೆ ಬಂದಳು. ಮನಸ್ಸು ಖುಷಿಯಾಗಿದ್ದರಿಂದ ಆಯಾಸ ದೂರವಾಗಿತ್ತು. ಅವಳು ಗಂಡನನ್ನು ಖುಷಿಪಡಿಸಲು ಅವನಿಗೆ ಇಷ್ಟವಾದ ಮಟರ್ ಪನೀರ್ ಮತ್ತು ಪಾವ್ ಮಾಡಿದಳು. ನಂತರ ಫ್ರೆಶ್ ಆಗಿ ಒಳ್ಳೆಯ ಸೀರೆ ಉಟ್ಟು ರೆಡಿಯಾದಳು. ಅಂದು ಅವಳು ಹಗುರವಾದ ಮೇಕಪ್ ಮಾಡಿಕೊಂಡು ಲಿಪ್‌ಸ್ಟಿಕ್ ಕೂಡ ಹಚ್ಚಿಕೊಂಡಿದ್ದಳು. ಆಗಲೇ ಡೋರ್‌ಬೆಲ್ ಸದ್ದಾಯಿತು. ಅವಳು ಬಾಗಿಲು ತೆರೆದಳು.
ಅವಳು ಆ ರೀತಿ ರೆಡಿಯಾಗಿರುವುದನ್ನು ಕಂಡು ಹರ್ಷನಿಗೆ ಆಶ್ಚರ್ಯವಾಯಿತು. “ಎಲ್ಲಾದರೂ ಹೊರಟಿದ್ದೀಯಾ? ನನಗೆ ತುಂಬಾ ಆಯಾಸವಾಗಿದೆ. 1 ಕಪ್ ಕಾಫಿ ಕೊಡು,” ಎಂದ.
“ಇಲ್ಲಾರೀ, ಎಲ್ಲೂ ಹೋಗಬೇಕಾಗಿಲ್ಲ. ಸುಮ್ಮನೆ ಡ್ರೆಸ್ ಮಾಡಿಕೊಂಡಿದ್ದೀನಿ.”
ಪುಷ್ಪಾ ಹರ್ಷನಿಗೆ ಇಷ್ಟವಾದ ಸವೋಸ ತಂದಿದ್ದಳು. ಅದನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ಕೊಟ್ಟಳು. ಹರ್ಷ ನಗುತ್ತಾ ಹೇಳಿದ, “ಓಹೋ, ಫಾರಿನ್ ಟೂರ್‌ಗೆ ಹೋಗ್ತಿದ್ದೀಯಾಂತ ನನಗೆ ಟ್ರೀಟ್ ಕೊಡ್ತಿದ್ದೀಯಾ? ಸರಿ ಪಾಸ್‌ಪೋರ್ಟ್ ಯಾವಾಗ ಬೇಕು?”
“ಇನ್ನೂ ಟೈಂ ಇದೆ. ಬರುವ ತಿಂಗಳ ಕೊನೇ ವಾರದಲ್ಲಿ ಕಾನ್ಛರೆನ್ಸ್ ಇದೇಂತ ಸರ್ ಹೇಳಿದರು.”
“ಸರಿ. ನಾನು ಆನ್‌ಲೈನ್‌ನಲ್ಲಿ ಫಾರಂ ಭರ್ತಿ ಮಾಡ್ತೀನಿ. ಅಲ್ಲಿಂದ ರಿಪ್ಲೈ ಬಂದ ಮೇಲೆ ಒಂದು ದಿನ ರಜಾ ಹಾಕಬೇಕು. ಎಲ್ಲ ಸರ್ಟಿಫಿಕೇಟ್‌ಗಳು, ಡಾಕ್ಯುಮೆಂಟ್ಸ್ ತಗೊಂಡು ಪಾಸ್‌ಪೋರ್ಟ್ ಆಫೀಸ್‌ಗೆ ಹೋಗಬೇಕು.”
“ಓ.ಕೆ. ನೀವು ಹೇಳಿದಾಗ ನಾನು ರಜಾ ತಗೋತೀನಿ.”
“ನಿಂದು ಟೂರ್ ಎಷ್ಟು ದಿನಗಳು ಆಗುತ್ತೆ?”
“ಅದೆಲ್ಲಾ ಇನ್ನೂ ಹೇಳಿಲ್ಲ.”
ಹರ್ಷ ನಿರಾಸೆಯಿಂದ ಹೇಳಿದ, “ನಾನು ಫಾರಿನ್ ಕನಸು ಕಾಣ್ತಾನೇ ಇದ್ದುಬಿಟ್ಟೆ. ನೀನು ಹಾರಿ ಹೋಗ್ತಾ ಇದ್ದೀಯ.”
ಪುಷ್ಪಾ ತನ್ನದೇ ಆದ ಖುಷಿಯಲ್ಲಿ ಹರ್ಷನ ಮಾತನ್ನು ಗಮನಿಸಲಿಲ್ಲ.“ಒಂದು ಒಳ್ಳೇ ಟ್ರ್ಯಾಲಿ ಬ್ಯಾಗ್ ತಗೋಬೇಕ್ರಿ. ಒಂದು ದೊಡ್ಡ ಪರ್ಸ್ ಕೂಡ ತಗೋಬೇಕು…”“ಆಯ್ತು. ನೀನೆಲ್ಲಾ ಲಿಸ್ಟ್ ಮಾಡು. ಆಮೇಲೆ ನಿಧಾನವಾಗಿ ಎಲ್ಲವನ್ನೂ ಖರೀದಿ ಮಾಡೋಣ. ನಾನಂತೂ ಇದುವರೆಗೆ ಫಾರಿನ್ ಟೂರ್ ಹೋಗಿಲ್ಲ. ಅಲ್ಲಿ ಏನೇನು ಬೇಕಾಗುತ್ತೇಂತ ನಿಮ್ಮ ಸ್ಕೂಲ್‌ನವರನ್ನು ಕೇಳು,” ಎಂದ ಹರ್ಷ. ಪುಷ್ಪಾ ಫಾರಿನ್ ಟೂರ್‌ನ ಕನಸುಗಳಲ್ಲಿ ಕಳೆದುಹೋದಳು. ಅವಳು ಮೊಬೈಲ್ ನಲ್ಲಿ ಜರ್ಮನಿಯ ಹವಾಮಾನ ನೋಡಿ ಹೇಳಿದಳು, “ರೀ, ನಾನು ಹೋಗುವಾಗ ಅಲ್ಲಿ ಬಹಳ ಚಳಿ ಇರುತ್ತೆ. ಒಂದು ಓವರ್ ಕೋಟ್ ತಗೋಬೇಕು.”
“ಅದು ತುಂಬಾ ದುಬಾರಿ ಆಗುತ್ತೆ. ಆಮೇಲೆ ಲೇಟೆಸ್ಟ್ ಆಗುತ್ತೆ,”
“ಅದಂತೂ ಸರಿ.”
“ಮದುವೆಗೆ ಮುಂಚೆ ನಾನು ತಗೊಂಡಿದ್ದ ಜಾಕೆಟ್ ಕೂಡ ಇದೆ. ಅದನ್ನು ಈಗ ಉಪಯೋಗಿಸ್ತಾನೇ ಇಲ್ಲ. ನೀನು ಮೊದಲು ನನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡು. ಆಮೇಲೆ ಪರ್ಚೇಸ್ ಮಾಡು. ಇವತ್ತು ಅಮ್ಮ ಫೋನ್ ಮಾಡಿದ್ರು. ಅಪ್ಪ ಹಾಸಿಗೆ ಹಿಡಿದಿದ್ದಾರೆ. ಒಂದು ಸಾರಿ ಬಂದು ನೋಡಿಕೊಂಡು ಹೋಗು. ನಿನ್ನ ತಂಗಿ ರಾಧಾ ವಾರಕ್ಕೊಮ್ಮೆ ಬಂದು ನೋಡಿಕೊಂಡು ಅಗತ್ಯ ವಸ್ತುಗಳನ್ನು ತಂದುಕೊಟ್ಟು ಹೋಗ್ತಾಳೆ. ಅಳಿಯ ಒಳ್ಳೆಯವರು. ಅವಳಿಗೆ ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ ಎಂದರು,” ಎಂದ ಹರ್ಷ.
ಪುಷ್ಪಾಳ ಮೂಡ್ ಹಾಳಾಯಿತು. ಅವಳು ಕಣ್ಣುಮುಚ್ಚಿ ನಿದ್ರಿಸುವಂತೆ ನಟಿಸಿದಳು.
“ನಿದ್ದೆ ಮಾಡ್ತಿದ್ದೀಯಾ?” ಹರ್ಷನ ನಿದ್ದೆ ಹಾರಿಹೋಗಿತ್ತು. ಫಾರಿನ್‌ಗೆ ಹೊರಡುವ ಸಿದ್ಧತೆಗೆ ಬಹಳ ಖರ್ಚಾಗುತ್ತೆ. ಜರ್ಮನಿಯಲ್ಲಿ ಶಾಪಿಂಗ್ ಖರ್ಚು ಎಲ್ಲವನ್ನೂ ಹೇಗೆ ಮ್ಯಾನೇಜ್ ಮಾಡುವುದು? ಓವರ್‌ಕೋಟ್ ಖರೀದಿಸುವ ಬದಲು ಯಾರಿಂದಾದರೂ ಕೇಳಿ ಪಡೆಯುವುದು ಎಂದು ಪುಷ್ಪಾ ಕಣ್ಣುಮುಚ್ಚಿ ಯೋಚಿಸುತ್ತಿದ್ದಳು.
ಹರ್ಷ ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ. ಪುಷ್ಪಾ ಇಂಟರ್‌ನೆಟ್‌ನಲ್ಲಿ ಹುಡುಕಿ ತನ್ನ ಆರ್ಟಿಕಲ್ ತಯಾರಿಸಿ ಪ್ರಿನ್ಸಿಪಾಲ್‌ಗೆ ಕೊಟ್ಟು ನೆಮ್ಮದಿಯಾಗಿ ಉಸಿರಾಡಿದಳು.
ವಿದೇಶಯಾತ್ರೆಯ ಕನಸುಗಳಲ್ಲಿ ಕಳೆದುಹೋದ ಪುಷ್ಪಾ ಶಾಲೆಯ ಕೆಲಸಗಳನ್ನೂ ಬಹಳ ಜವಾಬ್ದಾರಿಯಿಂದ ಮಾಡುತ್ತಿದ್ದಳು. ಪ್ರಿನ್ಸಿಪಾಲ್ ರ ರೂಮಿಗೆ ಅವಳು ಹೋಗಿಬರುವುದು ಜಾಸ್ತಿಯಾಗಿತ್ತು. ಪ್ರಿನ್ಸಿಪಾಲ್ ರು ತಮ್ಮ ಒಂದು ಪುಸ್ತಕದ ಪ್ರೂಫ್‌ರೀಡಿಂಗ್ ಕೆಲಸವನ್ನು ಅವಳಿಗೇ ಒಪ್ಪಿಸಿದ್ದರು. ಇಂತಹ ಹೆಚ್ಚುವರಿ ನಿರುಪಯುಕ್ತ ಕೆಲಸಗಳಿಗಾಗಿ ಅವರ ರೂಮಿಗೆ ಹೋಗಬೇಕಾಗಿತ್ತು. ವಿದೇಶ ಯಾತ್ರೆಯ ಆಸೆಯಲ್ಲಿ ಅವರಿಗೆ ಕೋಪ ಬರಿಸಲು ಅವಳಿಗೆ ಇಷ್ಟವಿರಲಿಲ್ಲ.
ಪ್ರಿನ್ಸಿಪಾಲ್ ಅವಳ ಆರ್ಟಿಕಲ್ ನ್ನು ಬಹಳ ಹೊಗಳಿದ್ದರು. ಅದೇ ಖುಷಿಯಲ್ಲಿ ಅವಳು ಪ್ರಿನ್ಸಿಪಾಲ್ ರ ಹಿಂದೆಮುಂದೆ ಸುತ್ತುತ್ತಿದ್ದಳು.
ಒಂದು ದಿನ ಅವಳು ಸ್ಟಾಫ್‌ರೂಮ್ ನಲ್ಲಿ ವಿದ್ಯಾರ್ಥಿಗಳ ಹೋಂವರ್ಕ್ ನೋಡುತ್ತಿದ್ದಳು. ಅಷ್ಟರಲ್ಲಿ ಅಲ್ಲಿಗೆ ನಳಿನಿ ಬಂದು, “ಪುಷ್ಪಾ, ಇವತ್ತು ಪ್ರಿನ್ಸಿಪಾಲ್ ಅದೇ ಟಾಪಿಕ್ ಮೇಲೆ ಆರ್ಟಿಕಲ್ ಬರೆಯೋಕೆ ಹೇಳಿದರು,” ಎಂದಳು.
“ಹೌದು. ಅವರೇ ಹೇಳಿದ್ರು. ಇನ್ನೂ ಹಲವರ ಕೈಲಿ ಬರಿಸ್ತೀನೀಂತ.”
“ನಿಮ್ಮ ಆರ್ಟಿಕಲ್ ರೆಡಿ ಆಯ್ತಾ?’
‘“ಆಯ್ತು. ಪ್ರಿನ್ಸಿಪಾಲ್ ಗೆ ಕೊಟ್ಟಿದ್ದೀನಿ. ಚೆನ್ನಾಗಿದೇಂತ ಹೊಗಳಿದ್ರು.”
“ಅದರಲ್ಲಿ ಯಾವ ಯಾವ ಪಾಯಿಂಟ್ಸ್ ಕೋಟ್ ಮಾಡಿದ್ದೀಯಾ?” ಪುಷ್ಪಾಗೆ ಒಂದು ಕ್ಷಣ ಆಶ್ಚರ್ಯವಾಗಿತ್ತು. ನಂತರ ಫೈಲ್ ತೆರೆದು ತೋರಿಸಿದಳು. ನಳಿನಿಯ ವರ್ತನೆ ಅವಳಿಗೆ ಹಿಡಿಸುತ್ತಿರಲಿಲ್ಲ. ನಳಿನಿ ಆಗಾಗ್ಗೆ ಪುಷ್ಪಾಳನ್ನು ಟೀಕಿಸುತ್ತಿದ್ದಳು.
“ಪುಷ್ಪಾ, ಈಗ್ಲಾದ್ರೂ ಬದಲಾಗು. ಜರ್ಮನಿಗೆ ಹೋಗ್ತಿದ್ದೀಯ. ಬ್ಯೂಟಿಪಾರ್ಲರ್‌ಗೆ ಹೋಗಿ ಬಾ. ಒಳ್ಳೆ ಗೌರಮ್ಮನ ತರಹ ಇದ್ದೀಯಾ?!’ ಎನ್ನುತ್ತಿದ್ದಳು. ಪುಷ್ಪಾಗೆ ಬೇಸರವಾಯಿತು. ಆದರೂ ಅವಳು ಮುಗುಳ್ನಕ್ಕಳು.
“ನಿನ್ನ ಪಾಸ್‌ಪೋರ್ಟ್ ಬಂತಾ?”
“ಇನ್ನೂ ಇಲ್ಲ.”
“ನನ್ನ ಪಾಸ್‌ಪೋರ್ಟ್ ಬರುವ ವರ್ಷ ಎಕ್ಸ್ ಪೈರ್ ಆಗುತ್ತೆ ಅದನ್ನು ರಿನ್ಯೂ ಮಾಡಿಸಬೇಕು,” ಎಂದು ಹೇಳಿ ಹೊರಟಳು.
35 ವರ್ಷದ ನಳಿನಿ ಶ್ಯಾಮಲ ವರ್ಣದ ಫ್ಯಾಷನೆಬಲ್ ಮಹಿಳೆ. ಸ್ಲೀವ್ ಲೆಸ್ ಟಾಪ್, ಸ್ಕರ್ಟ್, ಕತ್ತರಿಸಿದ ಕೂದಲು, ಮುಖಕ್ಕೆ ಗಾಢ ಮೇಕಪ್ ತುಟಿಗಳಿಗೆ ಡಾರ್ಕ್ ಲಿಪ್‌ಸ್ಟಿಕ್, ಕಿವಿಗಳಲ್ಲಿ ಮ್ಯಾಚಿಂಗ್ ಇಯರ್‌ರಿಂಗ್ಸ್, ನೇಲ್‌ಪಾಲಿಶ್ ಮತ್ತು ಮ್ಯಾಚಿಂಗ್ ಸ್ಯಾಂಡಲ್ಸ್ ಅವಳ ಗುರುತಾಗಿದ್ದವು. ನಳಿನಿಯನ್ನು ಕಂಡು ಪುಷ್ಪಾಳಿಗೂ ಹಲವಾರು ಬಾರಿ ವೆಸ್ಟರ್ನ್ ಉಡುಪು ಧರಿಸಲು ಆಸೆಯಾಗುತ್ತಿತ್ತು. ಆದರೆ ಅವಳ ಮೇಲೆ ಆದರ್ಶ ಭಾರತೀಯ ಮಹಿಳೆಯ ಭೂತ ಸವಾರಿ ಮಾಡುತ್ತಿತ್ತು. ಹರ್ಷ ಆಗಾಗ್ಗೆ ಅವಳಿಗೆ ವೆಸ್ಟರ್ನ್ ಡ್ರೆಸ್ ಖರೀದಿಸಲು ಹೇಳುತ್ತಿದ್ದ. ಆದರೆ ಪುಷ್ಪಾ ಮನಸ್ಸು ಮಾಡಿರಲಿಲ್ಲ. ಪುಷ್ಪಾ ಬ್ಯೂಟಿಪಾರ್ಲರ್‌ಗೆ ಹೋಗಲು ಮನಸ್ಸು ಮಾಡಿದ್ದಳು. ಅವಳು ರಜೆಯಲ್ಲಿ ಊರಿಗೆ ಹೊರಡುವಾಗ ಅವಳ ದೃಷ್ಟಿ ಪ್ರಿನ್ಸಿಪಾಲ್‌ರ ಕೋಣೆಯ ಮೇಲೆ ಬಿತ್ತು. ನಳಿನಿ ಅವರೊಂದಿಗೆ ನಗುನಗುತ್ತಾ ಮಾತಾಡುತ್ತಿದ್ದಳು. ಏಕೋ ಏನೋ ಅಂದು ಪುಷ್ಪಾಳ ಮನಸ್ಸಿನಲ್ಲಿ ಅನುಮಾನ ಉಂಟಾಯಿತು. ಅವಳ ಮೂಡ್ ಹಾಳಾಯಿತು. ಅವಳು ಹರ್ಷನ ತೋಳುಗಳಲ್ಲಿ ಬಿಕ್ಕಿದಳು.
“ಏನಾಯ್ತು?”
“ಏನಿಲ್ಲ. ನಳಿನಿ ಏನೋ ಮಸಲತ್ತು ನಡೆಸುತ್ತಿದ್ದಾಳೆ ಅನಿಸುತ್ತಿದೆ.”
“ನಡಿ. ಇವತ್ತು ಶಾಪಿಂಗ್ ಮಾಡೋಣ.”
“ಬೇಡ. ನನಗೆ ಯಾಕೋ ಇವತ್ತು ಸರಿಹೋಗ್ತಿಲ್ಲ.”
ಪುಷ್ಪಾಳ ಪಾರ್ಸ್‌ಪೋರ್ಟ್ ರೆಡಿಯಾಗಿ ಬಂದಿತ್ತು. ಅವಳು ಪ್ರಿನ್ಸಿಪಾಲ್ ರ ಚೇಂಬರ್‌ಗೆ ಹೋದಳು. ತನ್ನ ಹೆಸರು ನಿಜಕ್ಕೂ ಶಿಫಾರಸು ಮಾಡಿದ್ದಾರೋ ಅಥವಾ ಎಲ್ಲ ಗಾಳಿ ಸುದ್ದಿಯೋ ಎಂದು ಸ್ಪಷ್ಟವಾಗಿ ತಿಳಿಯುವ ಇಚ್ಛೆ ಇತ್ತು. ಪ್ರಿನ್ಸಿಪಾಲ್ ಅವಳಿಗೆ ಪ್ರೀತಿಯಿಂದ ಸಮಾಧಾನಪಡಿಸುತ್ತಾ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅವಳ ಲೇಖನವೇ ಆಯ್ಕೆಯಾಗಿದೆ. ಇನ್ನೂ ಅಲ್ಲಿಂದ ಕನ್ಛರ್ಮೇಶನ್ ಬಂದಿಲ್ಲ. ಶಾಪಿಂಗ್ ಇತ್ಯಾದಿ ಮಾಡಿಕೊಳ್ಳಿ. ಬೇಗನೆ ವೀಸಾ ಇಂಟರ್‌ವ್ಯೂಗೆ ಹೋಗಬೇಕಾಗುತ್ತದೆ ಎಂದರು.
ಪುಷ್ಪಾಳಿಗಂತೂ ಅಂದು ರೆಕ್ಕೆಗಳು ಮೂಡಿದಂತಿತ್ತು. ಅವಳ ಮನಸ್ಸು ಹಗುರವಾಗಿತ್ತು. ಅವಳು ಮನಸ್ಸಿನಲ್ಲೇ ಫಾರಿನ್ ಟ್ರಿಪ್ಸ್ ಕನಸು ಹೆಣೆಯುತ್ತಿದ್ದಳು. ಹರ್ಷ ಒಂದು ವಾರದೊಳಗೆ ಅವಳು ಲಿಸ್ಟ್ ನಲ್ಲಿ ಬರೆದಿದ್ದ ವಸ್ತುಗಳನ್ನೆಲ್ಲಾ ಖರೀದಿಸಿದ್ದ. ಸ್ಟಾಫ್‌ರೂಮ್ನಲ್ಲಿ ಇತರ ಟೀಚರ್‌ಗಳು ವಿದೇಶ ಯಾತ್ರೆಗಾಗಿ ಅವಳನ್ನು ಅಭಿನಂದಿಸುತ್ತಿದ್ದರು. ಪ್ರಿನ್ಸಿಪಾಲರು ಹೇಳಿದ ನಂತರ ಅವಳ ಊಹಾಪೋಹಗಳೆಲ್ಲಾ ನಂಬಿಕೆಯಲ್ಲಿ ಬದಲಾಯಿತು. ಪುಷ್ಪಾ ಗಂಡನಿಗೆ ಫೋನ್ ಮಾಡಿ ತಾನು ಬ್ಯೂಟಿಪಾರ್ಲರ್‌ಗೆ ಹೋಗುತ್ತಿದ್ದೇನೆ. ಬರುವುದು ತಡವಾಗುತ್ತೆ ಎಂದು ಹೇಳಿದಳು. ಅವಳ ಮನಸ್ಸು ಖುಷಿಯಿಂದ ಕುಣಿಯುತ್ತಿತ್ತು. ಅವಳು ತನ್ನ ಕೂದಲನ್ನು ಮಾಡರ್ನ್ ಸ್ಟೈಲ್ ನಲ್ಲಿ ಕಟ್ ಮಾಡಿಸಿಕೊಂಡಳು. ಜೀನ್ಸ್ ಪ್ಯಾಂಟ್, ಟೀಶರ್ಟ್ ಖರೀದಿಸಿದಳು.
ಅವಳು ಮನೆಗೆ ಬಂದಾಗ ಹರ್ಷ ಅವಳನ್ನು ನೋಡುತ್ತಲೇ ಇದ್ದುಬಿಟ್ಟ. ನಂತರ ಅವನು ಪ್ರೀತಿಯಿಂದ ಅವಳನ್ನು ಅಪ್ಪಿಕೊಂಡ. ಮರುದಿನ ಪುಷ್ಪಾ ತನ್ನ ಹೊಸ ಹೇರ್‌ಸ್ಟೈಲ್, ಟೀಶರ್ಟ್, ಜೀನ್ಸ್ ನಲ್ಲಿ ಸ್ಕೂಲಿಗೆ ಹೊರಟಾಗ ಎಲ್ಲರೂ ಅವಳನ್ನು ನೋಡುತ್ತಲೇ ಇದ್ದುಬಿಟ್ಟರು.
“ಪುಷ್ಪಾ, ನೀವು ಫಾರಿನ್‌ಗೆ ಹೋಗ್ತಿರೋದ್ರಿಂದ ನಿಮ್ಮ ಇಡೀ ಸ್ಟೈಲ್ ಬದಾಯಿಸಿದ್ದೀರಿ,” ಪ್ರಿಯಾ ಹೇಳಿದಳು.
ಅವಳು ಸ್ಟಾಫ್‌ರೂಮಿನಿಂದ ಹೊರಬಂದು ಕ್ಲಾಸ್‌ಗೆ ಹೋಗುವಾಗ ಪ್ರಿನ್ಸಿಪಾಲ್ ಭೇಟಿಯಾದರು. ಅವಳು ಗುಡ್‌ಮಾರ್ನಿಂಗ್ ಹೇಳಿ ಹೊರಡುವಾಗ ಪ್ರಿನ್ಸಿಪಾಲ್, “ಫ್ರೀ ಇದ್ದಾಗ ನನ್ನ ಚೇಂಬರ್‌ಗೆ ಬನ್ನಿ. ಕೊಂಚ ಮಾತಾಡಬೇಕಿತ್ತು,” ಎಂದರು.
ಅವಳ ಹೃದಯ ಜೋರಾಗಿ ಹೊಡೆದುಕೊಳ್ಳತೊಡಗಿತು. ಇಂದು ಅವರು ವೀಸಾ ಇಂಟರ್‌ವ್ಯೂಗೆ ಹೋಗಲು ಹೇಳಬಹುದು ಎಂದು ಯೋಚಿಸುತ್ತಿದ್ದಳು. ಮಕ್ಕಳಿಗೆ ಪಾಠ ಹೇಳಿಕೊಡಲು ಅವಳಿಗೆ ಮನಸ್ಸಿರಲಿಲ್ಲ. ಮುಂದಿನ ಪೀರಿಯಡ್ ಇರಲಿಲ್ಲ. ಅವಳು ಸೀದಾ ಪ್ರಿನ್ಸಿಪಾಲ್ ರ ಚೇಂಬರ್‌ಗೆ ಹೊರಟಳು.
“ಬನ್ನಿ ಕೂತ್ಕೊಳ್ಳಿ. ಈ ಹೊಸ ಹೇರ್‌ಸ್ಟೈಲ್‌ನಲ್ಲಿ ಬಹಳ ಸುಂದರವಾಗಿ ಕಾಣ್ತಿದ್ದೀರಿ.”`
`ಥ್ಯಾಂಕ್ಯು ಸರ್”
“ಕಾಫಿ ತರಿಸ್ಲಾ?”
“ಸರಿ ಸರ್.” ಅವಳು ಬೆವರಿನಿಂದ ತೊಯ್ದು ಹೋಗಿದ್ದಳು.
“ಯಾಕೆ ಇಷ್ಟು ಹೆದರಿಕೊಂಡಿದ್ದೀರಿ? ಜರ್ಮನಿಯಲ್ಲಂತೂ ಒಂದು ವಾರ ಪೂರ್ತಿ ಜೊತೆಯಲ್ಲೇ ಇರಬೇಕಾಗುತ್ತೆ.”
“ಏನಿಲ್ಲ ಸರ್. ಅಂಥಾದ್ದೇನೂ ಇಲ್ಲ.”
ಅವಳು ಕಾಫಿ ಕಪ್‌ನ್ನು ಅವರಿಗೆ ಕೊಡುವಾಗ ಅವರ ಕೈ ಅವಳ ಕೈಯನ್ನು ಸ್ಪರ್ಶಿಸಿತು. ಅವರು ಬೇಕೆಂದೇ ಸ್ಪರ್ಶಿಸಿದ್ದರು.
“ನಿಮ್ಮ ಕೈ ಬಹಳ ಕೋಮಲವಾಗಿದೆ.”
ಅವಳಿಗೆ ಗಾಬರಿಯಾಯಿತು. ಅವಳು ತಲೆ ಮೇಲೆತ್ತಿದಾಗ ಅವರ ಕಾಮುಕ ದೃಷ್ಟಿ ಅವಳ ಶರೀರದ ಮೇಲೆಲ್ಲಾ ಹರಿದಾಡುತ್ತಿರುವುದು ಕಾಣಿಸಿತು.
“ನೀವಂತೂ `ಮುಟ್ಟಿದರೆ ಮುನಿ’ ತರಹ ಇದ್ದೀರಿ. ಬಹಳ ನಾಚಿಕೆ ಸ್ವಭಾವ ನಿಮ್ಮದು.” ಪ್ರಿನ್ಸಿಪಾಲ್ ವ್ಯಂಗ್ಯವಾಗಿ ನಗುತ್ತಾ, “ಈ ವಿಷಯದಲ್ಲಿ ನಳಿನಿ ಬಹಳ ಫ್ರೆಂಡ್ಲಿ ಆಗಿರುತ್ತಾರೆ,” ಎಂದರು.
ಪುಷ್ಪಾಳ ತಲೆ ನೋಯತೊಡಗಿತು, “ಸರ್, ನಾನು ಹೊರಡ್ಲಾ?” ಎಂದಳು.
“ಹ್ಞೂಂ ಹೋಗಿ.”
ಅವಳು ಭಯದಿಂದ ವೇಗವಾಗಿ ಅಲ್ಲಿಂದ ಹೊರಟಳು. ಅದಾದ ನಂತರ ಪ್ರಿನ್ಸಿಪಾಲ್‌ರ ವರ್ತನೆ ಬದಲಾಗಿತ್ತು. ಈಗ ಮೊದಲಿನಂತೆ ಅವಳಲ್ಲಿ ತಪ್ಪು ಕಂಡುಹಿಡಿಯುತ್ತಿದ್ದರು. ಸರಿಯಾದ ಟೈಂಗೆ ಬರುತ್ತಿಲ್ಲವೆಂದು, ಮಕ್ಕಳಿಗೆ ಸರಿಯಾಗಿ ಪಾಠ ಕಲಿಸುತ್ತಿಲ್ಲವೆಂದು ದೂರುತ್ತಿದ್ದರು. ಈಗ ನಳಿನಿ ಪ್ರಿನ್ಸಿಪಾಲ್ ರ ರೂಮಿನ ಅಕ್ಕಪಕ್ಕ ಕಾಣಿಸಿತೊಡಗಿದ್ದಳು. ಫಸ್ಟ್ ಟರ್ಮ್ ಪರೀಕ್ಷೆಯ ನಂತರ ಪ್ರಿನ್ಸಿಪಾಲ್ ಅವಳನ್ನು ಮನೆಯವರೆಗೆ ಬಿಡುತ್ತಿದ್ದರು.
ಒಂದು ದಿನ ಹರ್ಷ ಅವಳನ್ನು ಕೇಳಿದ, “ನಿನ್ನ ವೀಸಾ ಇಂಟರ್‌ವ್ಯೂನ ಡೇಟ್ ಇವತ್ತಿನವರೆಗೆ ಗೊತ್ತಾಗ್ಲಿಲ್ಲ.
”ಪುಷ್ಪಾ ಗಂಡನನ್ನು ಅಪ್ಪಿಕೊಂಡು ಜೋರಾಗಿ ಅಳತೊಡಗಿದಳು, “ರೀ, ಈ ಫಾರಿನ್ ಟೂರ್‌ನ ನೆಪದಲ್ಲಿ ಪ್ರಿನ್ಸಿಪಾಲ್ ನನ್ನಿಂದ ಏನನ್ನೋ ಅಪೇಕ್ಷಿಸುತ್ತಿದ್ದಾರೆ. ಆದರೆ ಅದೆಂದಿಗೂ ಸಾಧ್ಯವಿಲ್ಲ. ಆದ್ದರಿಂದ ನಳಿನಿಯವರೇ ಸೆಲೆಕ್ಟ್ ಆಗಬಹುದು,” ಎಂದಳು.
ಹರ್ಷ ಅವಳನ್ನು ಸಮಾಧಾನಪಡಿಸುತ್ತಾ, “ಅಳಬೇಡ. ನಾವಿಬ್ಬರೇ ಫಾರಿನ್‌ಗೆ ಹೋಗೋಣ. ಈಗ ಫಾರಿನ್ ಟ್ರಿಪ್ ದೊಡ್ಡ ವಿಷಯವೇನೂ ಅಲ್ಲ,” ಎಂದ.
ಮರುದಿನ ಅವಳು ಸ್ಕೂಲಿಗೆ ಹೊರಟಾಗ ಪ್ರಿಯಾ ಅವಳತ್ತ ಓಡಿಬಂದು, “ಏನಾದ್ರೂ ಮೇಲ್ ಬಂತಾ?” ಎಂದು ಕೇಳಿದಳು.
“ಈಗಲೇ ಚೆಕ್ ಮಾಡ್ತೀನಿ.”
“ಇನ್ನು ಅದು ಬರಲ್ಲಾ ಬಿಡು. ನಳಿನಿಗೆ ಮೇಲ್ ಬಂದಿದೆ. ಅವಳು ನಾಳೆ ವೀಸಾ ಇಂಟರ್‌ವ್ಯೂಗೆ ಹೋಗ್ತಿದ್ದಾಳೆ,” ಎಂದಳು.
“ಹೌದಾ?” ಪುಷ್ಪಾ ಹತಾಶಳಾದಳು.
ಆಗಲೇ ನಳಿನಿ ಬಂದು, “ಪುಷ್ಪಾ, ಬೀ ಪ್ರ್ಯಾಕ್ಟಿಕಲ್. ಸೀದಾ ಸಾದಾ ಗಿವ್ ಅಂಡ್ ಟೇಕ್‌ನ ಕಾಲ ಇದು. ಸೋ ಸಾರಿ ಪುಷ್ಪಾ, ನಾಳೆ ನಾನು ಜರ್ಮನಿಗೆ ಹೊರಡೋಕೆ ರೆಡಿ ಮಾಡ್ಕೋಬೇಕು. ಪ್ರಿನ್ಸಿಪಾಲ್ ಹೊರಗಡೆ ನನಗಾಗಿ ಕಾಯ್ತಿದ್ದಾರೆ,” ಎಂದು ಹೇಳಿದಳು.
ಪುಷ್ಪಾ ಆಶ್ಚರ್ಯಚಕಿತಳಾಗಿ ಗಿವ್ ಅಂಡ್ ಟೇಕ್‌ನ ಗಣಿತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು.