ಕಥೆ - ಜಿ.ಕೆ. ವೇದವಲ್ಲಿ
ಗಂಡ ರಾಜೀವನ ಮನೆ ಬಿಟ್ಟ ಬಳಿಕ ಗೀತಾ ತನ್ನ ಸಹೋದ್ಯೋಗಿ ಸುಂದರ್‌ಗೆ ಹತ್ತಿರವಾಗಿದ್ದಳು. ಆದರೆ ಅವಳು ಮತ್ತೆ ರಾಜೀವ್ ಬಳಿಯೇ ಹಿಂತಿರುಗುವಂತಾಗಲು ಅಂಥಾದ್ದೇನು ನಡೆಯಿತು......?
ಗೀತಾ ಬಹಳ ಹೊತ್ತಿನಿಂದ ಮೋಡಗಳನ್ನೇ ನೋಡುತ್ತಿದ್ದಳು ಹಾಗೂ ಯೋಚಿಸುತ್ತಿದ್ದಳು. ಬೀಸುವ ಗಾಳಿಗೆ ತೊಯ್ದಾಡುವ ಹತ್ತಿಯ ಮುದ್ದೆಗಳಂತಿರುವ ಮೋಡದ ತುಂಡುಗಳು ಮನಸ್ಸಿಗೆ ಎಷ್ಟು ನೆಮ್ಮದಿ ಕೊಡುತ್ತವೆ. ನಮ್ಮ ಅಸ್ತಿತ್ವ ಕಾಲದ ಹೊಡೆತಗಳೊಂದಿಗೆ ಒಮ್ಮೆ ಮುದುರಿದರೆ ಒಮ್ಮೆ ಹೊಸ ಆಯಾಮಗಳನ್ನು ಮುಟ್ಟಲು ಪ್ರಯತ್ನಿಸುತ್ತದೆ.
ಅವಳ ಮನಸ್ಸಿನ ಎಲ್ಲ ಮೂಲೆಗಳಲ್ಲೂ ಒಂದು ವಿಚಿತ್ರವಾದ ಸ್ಪಂದನವಿತ್ತು. ಪ್ರೇಮದ ವಯಸ್ಸಂತೂ ತಾರುಣ್ಯಾವಸ್ಥೆಯಲ್ಲಿಯೇ ಇರುತ್ತದೆಂದು ಜನ ಹೇಳುತ್ತಾರೆ. ಆದರೆ ಗೀತಾ ಈ ವಯಸ್ಸಿನಲ್ಲೂ ಅದರ ಮೂರ್ಖತೆಯನ್ನು ಅಷ್ಟೇ ಗಾಢತೆಯಿಂದ ಅನುಭವಿಸುತ್ತಿದ್ದಳು. ತಾನೂ ಗಾಳಿಯ ಬೀಸುವಿಕೆಯೊಂದಿಗೆ ಹಾರಬೇಕೆಂದು ಗೀತಾ ಇಚ್ಛಿಸುತ್ತಿದ್ದಳು. ಅಲ್ಲಿ ಯಾರ ದೃಷ್ಟಿಯೂ ಅವಳ ಮೇಲೆ ಬೀಳುವಂತಿರಲಿಲ್ಲ. ಅವಳು ಮತ್ತು ಅವಳ ಅನುಭವ ಎರಡೇ ಇರಬೇಕು.
ಅವಳು ಬಾಲ್ಯದಿಂದ ಇದುವರೆಗೆ ತನ್ನದೇ ವಿಧಾನಗಳಿಂದ ಬದುಕುತ್ತಿದ್ದಾಳೆ. ಒಮ್ಮೊಮ್ಮೆ ಬದುಕಿನ ವೇಗವನ್ನು ಸುಂದರ ಬೀಡುಗಳಲ್ಲಿ ಬಿಡದಿದ್ದರೆ ನದಿಯ ಪ್ರವಾಹದಂತೆ ಹರಿದುಹೋಗುತ್ತದೆ.
ಅಂದು ಸುಂದರ್ ಅವಳನ್ನು ರೇಗಿಸಿದ್ದ, ``ನೀನು ಬೇರೆಯವರಂತೆ ಖಂಡಿತಾ ಇಲ್ಲ. ವಿಭಿನ್ನ ರೀತಿಯಲ್ಲಿ ಯೋಚಿಸುತ್ತೀಯ. ನಿನ್ನ ಬದುಕಿನ ಬಗ್ಗೆ ನಿನ್ನ ವರ್ತನೆಯೂ ಬಹಳ ಭಿನ್ನವಾಗಿದೆ......''
``ಹೌದು. ನೀನು ಹೇಳಿದ್ದು ನಿಜ. ಜನರ ಬದುಕಿನ ಆರಂಭದಲ್ಲೇ ಎಲ್ಲ ನಿರ್ಧಾರಿತವಾಗಿರುತ್ತದೆ. ಈ ವಯಸ್ಸಿನಲ್ಲಿ ಓದು ಮುಗಿಸಿರಬೇಕು. ಈ ವಯಸ್ಸಿನಿಂದಲೇ ಉದ್ಯೋಗ, ಈ ವಯಸ್ಸಿನಲ್ಲೇ ಮದುವೆ, ಮಕ್ಕಳು, ಇಡೀ ಜೀವನ ಅದೇ ಸಂಬಂಧಗಳಲ್ಲಿ ಬಂಧಿಯಾಗಿರೋದು. ಸಂತೋಷಕ್ಕಿಂತ ದುಃಖವೇ ಹೆಚ್ಚಾಗಿರುತ್ತದೆ. ನಾನು ಈ ತಿಕ್ಕಾಟದಲ್ಲಿ ಬೇರೆಯೇ ಆಗಿ ಬದುಕಲು ಇಚ್ಛಿಸುತ್ತೇನೆ. ಅದಕ್ಕಾಗಿ ನನ್ನನ್ನು ಒಂದು ಉದ್ದೇಶಕ್ಕಾಗಿ ಅರ್ಪಿಸಿಕೊಂಡಿದ್ದೇನೆ, ಉದ್ದೇಶವಿಲ್ಲದಿದ್ದರೆ ಮನುಷ್ಯ ಎಷ್ಟು ಅಪೂರ್ಣನಾಗುತ್ತಾನೆ, ಅಲ್ವಾ?''
``ಆದರೆ ನನಗನ್ನಿಸುತ್ತೆ, ಅಪೂರ್ಣನಾದ ಮನುಷ್ಯ ಬದುಕಲು ಒಂದು ಉದ್ದೇಶವನ್ನು ಹುಡುಕುತ್ತಾನೆ.''
ಸುಂದರ್ ಅವಳು ಹೇಳಿದ ವಿಷಯಕ್ಕೆ ಗೇಲಿ ಮಾಡಿದ್ದ. ಆದರೆ ಅದರಿಂದ ಅವಳು ವಿಚಲಿತಳಾಗಲಿಲ್ಲ.
ಸುಂದರ್, ``ಇದಕ್ಕೆ ವಿರುದ್ಧವಾದ ಯೋಚನೆ ಇದೆ. ಆದರೆ ಅದರಲ್ಲೇನು ತಪ್ಪು? ನದಿಯ 2 ದಂಡೆಗಳಂತೆ ನಾವು ಸೇರಲಾಗುವುದಿಲ್ಲ. ಆದರೆ ಜೊತೆಯಲ್ಲಂತೂ ಹೋಗಬಹುದು,'' ಎಂದ.
ಅವಳು ಸುಂದರ್‌ಗೆ, ``ಮನುಷ್ಯ ಪೂರ್ಣ ಅನಿಸಿಕೊಳ್ಳಲು ಇತರರ ಸಹಾಯದ ಅಗತ್ಯವಿಲ್ಲ. ಪ್ರಕೃತಿ ಮನುಷ್ಯನನ್ನು ಪೂರ್ಣನನ್ನಾಗಿ ಮಾಡಿ ಕಳಿಸಲಿಲ್ಲವೇ? ಸಂಗಾತಿಯಿಲ್ಲದೆ ವ್ಯಕ್ತಿ ಅಪೂರ್ಣನೆಂದು ಜನ ಏಕೆ ತಿಳಿದುಕೊಳ್ಳುತ್ತಾರೆ?'' ಎಂದು ಹೇಳಿದಳು.
``ನಾನು ಹಾಗೆ ಹೇಳಲಿಲ್ಲ,'' ಸುಂದರ್ ವಿರೋಧಿಸಿದ.
``ಆದರೆ ನೀನು ಹೇಳಿದ್ದರ ಅರ್ಥ ಅದೇ...''
``ಇಲ್ಲ ಹಾಗಲ್ಲ. ನೀನು ನನ್ನ ಮಾತನ್ನು ಅದೇ ರೂಪದಲ್ಲಿ ಬೇರೆಯವರೊಂದಿಗೆ ನೀನು ಮಾತಾಡುವಂತೆ ತಿರುಗಿಸಿಬಿಟ್ಟೆ.''
ನಂತರ ಅವಳು ಸ್ವಲ್ಪ ಹೊತ್ತು ಮೌನ ವಹಿಸಿದಾಗ ಸುಂದರ್ ಅವಳನ್ನು ರೇಗಿಸುತ್ತಾ ಹೇಳಿದ್ದ, ``ಒಂದು ವಿಷಯ ಕೇಳಬೇಕು. ನೀನು ಯಾಕಿಷ್ಟು ಮಾತಾಡ್ತೀಯ? ಸ್ವಲ್ಪ ಹೊತ್ತು ಮೌನವಾಗಿದ್ದು ನೋಡು. ಸುಂದರ ಕ್ಷಣಗಳನ್ನು ಅನುಭವಿಸು. ಬಹಳಷ್ಟು ವಿಷಯಗಳು ಹಾಗೂ ನೆನಪುಗಳು ಒಂದೊಂದಾಗಿ ಅರಳಿದ ಹೂಗಳಂತೆ ಸುಗಂಧ ಸೂಸುತ್ತವೆ.''