ಕಥೆ - ವನಿತಾ ವಿಶ್ವನಾಥ್
ಪುಷ್ಪಾಳಿಗೆ ಶಾಲೆಯಿಂದ ಜರ್ಮನಿಗೆ ಹೋಗಿ ಬರುವ ಅವಕಾಶ ಸಿಕ್ಕಿತ್ತು. ಆದರೆ ಕಡೇ ಗಳಿಗೆಯಲ್ಲಿ ಪುಷ್ಪಾಳ ಸಹೋದ್ಯೋಗಿ ನಳಿನಿಗೆ ಈ ಅವಕಾಶ ಸಿಕ್ಕಿತು. ಹೀಗೇಕಾಯಿತು......?
``ಮೇಡಂ, ನಿಮಗೆ ಬಿಡುವಾದಾಗ ಪ್ರಿನ್ಸಿಪಾಲ್ ಆಫೀಸ್‌ಗೆ ಹೋಗಬೇಕಂತೆ.''
ಅದನ್ನು ಕೇಳಿದ ಕೂಡಲೇ ಪುಷ್ಪಾ ಚಿಂತಿತಳಾದಳು. ಪ್ರಿನ್ಸಿಪಾಲ್ ಸರ್ ಯಾವ ಕಾರಣಕ್ಕಾಗಿ ತನ್ನನ್ನು ಕರೆದಿರಬಹುದು? ಹಳೆಯ ಕಟು ಅನುಭವ ಅವಳಿಗೆ ನೆನಪಾಯಿತು. ಆಗ ಅವರು ಅಪ್ರತ್ಯಕ್ಷವಾಗಿ ಅವಳಿಗೆ ಬೇಸರ ಉಂಟುಮಾಡಿದ್ದರು.
ಕೊನೆಯ ಪೀರಿಯಡ್ ಪಾಠ ಮುಗಿಸಿ ತನ್ನ ಪುಸ್ತಕಗಳನ್ನು ಜೋಡಿಸಿಕೊಂಡು ಪ್ರಿನ್ಸಿಪಾಲ್ ರ ಕೋಣೆಯತ್ತ ವೇಗವಾಗಿ ನಡೆದಳು.
ದಾರಿಯಲ್ಲಿ ನಳಿನಿ ಸಿಕ್ಕರು, ``ಪುಷ್ಪಾ, ಇಷ್ಟು ವೇಗವಾಗಿ ಎಲ್ಲಿಗೆ ಹೋಗ್ತಿದ್ದೀರಿ?''
``ಪ್ರಿನ್ಸಿಪಾಲ್ ರನ್ನು ಮೀಟ್ ಮಾಡೋಕೆ.''
``ಅದಕ್ಕೆ ಹೆದರೋದೇನಿದೆ?''
``ನನಗೆ ಅವರನ್ನು ಕಂಡರೆ ಭಯ ಆಗುತ್ತೆ.''
``ಅವರೇನು ಹುಲೀನಾ, ಸಿಂಹಾನಾ ಭಯಪಡೋಕೆ? ಸರಿ ನಾನು ಬರ್ತೀನಿ.''
ಪುಷ್ಪಾ ಪ್ರಿನ್ಸಿಪಾಲ್ ಕೋಣೆಯ ಬಾಗಿಲಲ್ಲಿ, ``ಸರ್, ಮೇ ಐ ಕಮಿನ್?'' ಎಂದಳು.
``ಬನ್ನಿ.... ಬನ್ನಿ... ಪುಷ್ಪಾ ಕೂತ್ಕೊಳ್ಳಿ. ಕಾಫಿ ತರಿಸ್ಲಾ?'' ಪುಷ್ಪಾಗೆ ಸಂಕೋಚಾಯಿತು. ``ಹ್ಞೂಂ ಸರ್,'' ಎಂದಳು.
``ಈ ಬಾರಿ ನಿಮ್ಮ ಕ್ಲಾಸಿನ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆದಿದ್ದಾರೆ. ಕಂಗ್ರಾಟ್ಸ್.''
``ಥ್ಯಾಂಕ್ಯು ಸರ್.''
``ಸರಿ. ಆ ವಿಷಯ ಬಿಡಿ. ಅಂದಹಾಗೆ ನಿಮ್ಮ ಬಳಿ ಪಾಸ್‌ಪೋರ್ಟ್ ಇದೆಯಾ?''
``ಇಲ್ಲ ಸರ್,'' ಪುಷ್ಪಾ ನಿಧಾನವಾಗಿ ಹೇಳಿದಳು.
``ಹಾಗಿದ್ರೆ ಮಾಡಿಸಿಕೊಳ್ಳಿ. ಈ ಬಾರಿ ಟೀಚರ್ಸ್ ಡೆಲಿಗೇಶನ್ ಜರ್ಮನಿಗೆ ಹೋಗ್ತಾ ಇದೆ. ಅದಕ್ಕೆ ನಿಮ್ಮ ಹೆಸರನ್ನು ಕಳಿಸ್ತೀನಿ. ನೀವು ಬೇಗನೆ ಪಾಸ್‌ಪೋರ್ಟ್ ಮಾಡಿಸಿಕೊಳ್ಳಿ.''
``ಓ.ಕೆ. ಸರ್.''
``ನಿಮ್ಮ ವಿದೇಶ ಯಾತ್ರೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ.''
ಪುಷ್ಪಾಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವಳು ಪ್ರಿನ್ಸಿಪಾಲ್‌ರ ಮುಖವನ್ನೇ ನೋಡುತ್ತಿದ್ದಳು. 60-65 ವರ್ಷದ ಪ್ರಿನ್ಸಿಪಾಲ್ ಪ್ಯಾಂಟ್, ಶರ್ಟ್ ಧರಿಸಿ ಗೋಲ್ಡನ್ ಫ್ರೇಮ್ ಕನ್ನಡಕ ಧರಿಸಿದ್ದು ನೋಡಿ ಪುಷ್ಪಾಗೆ ತನ್ನ ಅಪ್ಪನ ನೆನಪಾಯಿತು.
``ಸರ್, ಯಾವಾಗ ಹೋಗೋದು?''
``ಇನ್ನೂ ಡೇಟ್ ಗೊತ್ತಿಲ್ಲ. ಅಂದಹಾಗೆ ಈ ಕಾನ್ಛರೆನ್ಸ್ ಇರೋದು ಬರುವ ತಿಂಗಳ ಕಡೇ ವಾರದಲ್ಲಿ.''
ಪುಷ್ಪಾಗೆ ತನ್ನ ಸಂತಸ ಅಡಗಿಸಲಾಗುತ್ತಿರಲಿಲ್ಲ. ``ಮತ್ತೆ, ಇನ್ನೊಂದು ವಿಷಯ ನಿಮಗೆ ಹೇಳಬೇಕಿತ್ತು. `ಭಾರತದಲ್ಲಿ ಮಹಿಳೆಯರ ಮುನ್ನಡೆ' ಈ ಟಾಪಿಕ್ ಬಗ್ಗೆ ಒಂದು ಒಳ್ಳೆಯ ಆರ್ಟಿಕಲ್ ರೆಡಿ ಮಾಡಿ. ಭಾರತದಲ್ಲಿ ಮಹಿಳೆಯರು ಎಷ್ಟು ಮುಂದುವರೆದಿದ್ದಾರೆ ಎಂದು ಅಲ್ಲಿನವವರಿಗೆ ತಿಳಿಯಬೇಕು.''
``ಸರ್, ನಾನು 2-3 ದಿನಗಳಲ್ಲಿ ಆರ್ಟಿಕಲ್ ಬರೆದು ನಿಮಗೆ ಕೊಡುತ್ತೇನೆ.''
``ಒಂದು ವಾರ ಟೈಂ ತಗೊಳ್ಳಿ. ಆದರೆ ಒಳ್ಳೆ ಪಾಯಿಂಟ್‌ಗಳನ್ನು ಕೋಟ್ ಮಾಡಿ ರೆಡಿ ಮಾಡಿ. ರೇಖಾ ಅವರಿಗೂ ಬರೆಯೋಕೆ ಹೇಳ್ತೀನಿ. ಇಬ್ಬರ ಲೇಖನಗಳಲ್ಲೂ ಒಳ್ಳೊಳ್ಳೆಯ ಪಾಯಿಂಟ್ಸ್ ತಗೊಂಡು ಉನ್ನತವಾದ ಆರ್ಟಿಕಲ್ ರೆಡಿ ಮಾಡಬಹುದು. ಅದನ್ನು ಎಲ್ಲರ ಮುಂದೆಯೂ ಓದಬಹುದು.''
``ಆಯ್ತು ಸರ್.''
``ಸರಿ. ಈಗ ನೀವು ಹೋಗಿ. ನಿಮ್ಮ ಪಾಸ್‌ಪೋರ್ಟ್ ಬೇಗನೆ ಮಾಡಿಸ್ಕೊಳ್ಳಿ.''
``ಥ್ಯಾಂಕ್ಯು ಸರ್.''
ತಾನು ವಿದೇಶಕ್ಕೆ ಹೋಗುವ ಕನಸು ಇಷ್ಟು ಬೇಗ ನನಸಾಗುತ್ತಿದೆ ಎಂದು ಯೋಚಿಸಿ ಅವಳಿಗೆ ಬಹಳ ಖುಷಿಯಾಯಿತು. ಪ್ರಿನ್ಸಿಪಾಲ್ ರೂಮ್ ನಿಂದ ಹೊರಬಂದ ಕೂಡಲೇ ತನ್ನ ಖುಷಿಯನ್ನು ಹಂಚಿಕೊಳ್ಳಲು ಗಂಡ ಹರ್ಷನಿಗೆ, `ನನ್ನ ಪಾರ್ಸ್‌ಪೋರ್ಟ್ ಮಾಡಿಸಬೇಕು. ಈ ಬಾರಿ ಸ್ಕೂಲ್‌ನಿಂದ ವಿದೇಶಕ್ಕೆ ಹೋಗುವ ಡೆಲಿಗೇಶನ್‌ನಲ್ಲಿ ನನ್ನನ್ನು ಕಳಿಸಲಿದ್ದಾರೆ. ನಾನು ಜರ್ಮನಿಗೆ ಹೋಗಲಿದ್ದೇನೆ,' ಎಂದು ಮೆಸೇಜ್ ಮಾಡಿದಳು. `ಆಯ್ತು ಮಾಡಿಸ್ತೀನಿ. ನೀನೇನೂ ಯೋಚಿಸ್ಬೇಡ,' ಹರ್ಷ ಕೂಡಲೇ ಉತ್ತರಿಸಿದ.