ವ್ಯಂಗ್ಯ - ಎಂ. ಜ್ಯೋತಿ
ಸುಂದರಳಾದ ಪತ್ನಿ ಹಾಗೂ ತೀಕ್ಷ್ಣವಾದ ಕಣ್ಣುಗಳುಳ್ಳ ಕುಕ್ ಇಬ್ಬರ ನಡುವೆ ಸೀನಿಯರ್ ಎಕ್ಸಿಕ್ಯೂಟಿವ್ ಆದ ನಾನು ಹೇಗೆ ಸಿಲುಕಿಕೊಂಡೆ ಎಂದರೆ ಮನೆಯಿಂದ ಹೊರಗೆ ಬರಲೂ ಕಷ್ಟವಾಗತೊಡಗಿತು. ಆಗ ನಾನು ಹೇಗೆ ಪಾರಾಗಬೇಕೆಂದು ನೀವೇ ಹೇಳಿ…......
ಓದು ಪೂರ್ತಿಯಾಯಿತು. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ ಸಿಕ್ಕಿತು. ಒಳ್ಳೆಯ ಏರಿಯಾದಲ್ಲಿ ಡಬಲ್ ಬೆಡ್‌ರೂಂನ ಫ್ಲ್ಯಾಟ್‌ನ್ನು ಬಾಡಿಗೆಗೆ ಪಡೆದೆ. ಕೆಲಸಕ್ಕೆ ಸೇರುವಷ್ಟರಲ್ಲಿ ಅಪ್ಪ ಅಮ್ಮ ನನಗೊಂದು ಕನ್ಯೆಯನ್ನು ನೋಡಿದ್ದರು. ಮದುವೆಗೆ ಒಪ್ಪಿಗೆ ನೀಡಲು ನನ್ನನ್ನು ಒಂದು ಕಡೆ ಕರೆದಿದ್ದರು. ನಾನು ಒಂದು ಕಾಂಪ್ಲೆಕ್ಸ್ ನಲ್ಲಿದ್ದ ರೆಸ್ಟೋರೆಂಟ್‌ನಲ್ಲಿ ವಿದ್ಯಾಳನ್ನು ಭೇಟಿಯಾದೆ. ನಾವು ಒಟ್ಟಿಗೆ ಪನೀರ್ ಕಟ್ಲೆಟ್, ಪನೀರ್ ಚಿಲಿ ಸವಿದೆವು. ವಿದ್ಯಾ ಮೈಸೂರಿನವಳು. ಅವಳಿಗೆ ರೆಸ್ಟೋರೆಂಟ್‌ನ ವಾತಾವರಣ, ತಿಂಡಿ ಎಲ್ಲ ಬಹಳ ಇಷ್ಟವಾಯಿತು. ನಾವಿಬ್ಬರೂ ಚೆನ್ನಾಗಿ ಹರಟಿದೆವು.
``ನನಗೆ ರೊಟ್ಟಿ, ಚಪಾತಿ, ಸ್ಪೈಸಿ ಫುಡ್ ಬಹಳ ಇಷ್ಟ,'' ನಾನು ವಿದ್ಯಾಗೆ ಹೇಳಿದೆ.
``ನಾನೂ ನಿಮಗೆ ಏನೋ ಹೇಳಬೇಕಿತ್ತು,'' ಮಿತಭಾಷಿಯಾದ ವಿದ್ಯಾ ಹೇಳಿದಳು.
``ಹಿಂಜರಿಕೆಯಿಲ್ಲದೆ ಹೇಳಿ. ಯಾರನ್ನಾದರೂ ಇಷ್ಟಪಡ್ತಿದ್ದೀರಾ? ಏನಾದರೂ ಅಫೇರ್ ಇದೆಯಾ? ಏನಾದರೂ ಸಮಸ್ಯೆ ಇದೆಯಾ?'' ನಾನು ಒಟ್ಟಿಗೆ ಪ್ರಶ್ನೆಗಳನ್ನು ಹಾಕಿದೆ. ನನಗೆ ಚಿಂತೆಯಾಗಿತ್ತು. ತೆಳ್ಳಗೆ, ಬೆಳ್ಳಗೆ, ಉದ್ದವಾಗಿ, ನಸುನಾಚುತ್ತಿದ್ದ ವಿದ್ಯಾಳನ್ನು ನಾನು ಇಷ್ಟಪಟ್ಟಿದ್ದೆ.
``ನನಗೆ ಅಡುಗೆ ಬರಲ್ಲ. ಇದುವರೆಗೆ ಮಾಡಿಲ್ಲ. ನಮ್ಮ ದೊಡ್ಡ ಕುಟುಂಬದಲ್ಲಿ ಅಡುಗೆಯವರು ಇದ್ದಾರೆ. ಊಟ, ತಿಂಡಿ ತಿನ್ನೋಕೆ ಚೆನ್ನಾಗಿ ಬರುತ್ತೆ,'' ವಿದ್ಯಾ ತಲೆತಗ್ಗಿಸಿ ಹೇಳಿದಳು. ಅವಳು ಮುಗುಳ್ನಗುತ್ತಲೂ ಇದ್ದಳು. ಅವಳಿಗೆ ನನ್ನ ತೊಂದರೆ ಅರ್ಥವಾಗಿತ್ತು.
``ನೋ ಪ್ರಾಬ್ಲಂ. ನಾವು ಅಡುಗೆಯವಳನ್ನು ಇಟ್ಕೊಳೋಣ. ಬೆಂಗಳೂರಿನ ವಾತಾವರಣದಲ್ಲಿ ಅಡುಗೆ ಮಾಡೋದೇ ದೊಡ್ಡ ಕಷ್ಟ. ಆಮೇಲೆ ವಿದ್ಯಾ ಕಪ್ಪಗಾಗಿಬಿಡ್ತಾರೆ,'' ಸಧ್ಯ, ಅವಳಿಗೆ ಯಾವ ಅಫೇರ್ ಇಲ್ಲವೆಂದು ತಿಳಿದು ನಿರಾಳನಾದೆ. ನಾನು ಎಂಥದೇ ಪರಿಸ್ಥಿತಿಯಲ್ಲೂ ವಿದ್ಯಾಳನ್ನು ಕಳೆದುಕೊಳ್ಳಲು ಇಚ್ಛಿಸುತ್ತಿರಲಿಲ್ಲ. ನನ್ನ ಒಪ್ಪಿಗೆ ಸಿಕ್ಕ ನಂತರ ಮದುವೆಯ ಸಿದ್ಧತೆಗಳು ಶುರುವಾದವು.
ಒಂದು ತಿಂಗಳೊಳಗೇ ವಿದ್ಯಾ, ನನ್ನ ಪ್ರೀತಿಪಾತ್ರಳೂ, ಮನದನ್ನೆಯೂ, ಪ್ರೇಯಸಿ ಮತ್ತು ಮನೆಯಾಕೆಯೂ ಆದಳು. ನಾವು ಮುಂಬೈ, ಗೋವಾ, ಮಹಾಬಲೇಶ್ವರಕ್ಕೆ ಹನಿಮೂನ್‌ಗೆಂದು ಹೋದೆವು. ಮುಂಬೈನ ಥಿಯೇಟರ್‌ನಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿದ್ದ `ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ನೋಡಿದೆವು. ಗೋವಾದಲ್ಲಿ ವಿದ್ಯಾಳನ್ನು ಬಿಕಿನಿಯಲ್ಲಿ ಸೆರೆಹಿಡಿದೆ. ಮಹಾಬಲೇಶ್ವರದಲ್ಲಿ ಸ್ಪೆಷಲ್ ಸ್ಟ್ರಾಬೆರಿ ಸವಿದೆವು. ಜೊತೆಜೊತೆಗೆ ಕುದುರೆ ಸವಾರಿ ಮಾಡಿದೆವು, ಮುಳುಗುವ ಸೂರ್ಯನನ್ನು ನೋಡಿ ಆನಂದಿಸಿದೆವು.
`ಅಡುಗೆಯವಳು ಬಂದರೆ ನಾನು ಬೆಂಗಳೂರಿಗೆ ಬರ್ತೀನಿ,' ಎಂದು ವಿದ್ಯಾ ಕಂಡೀಷನ್ ಹಾಕಿದ್ದರಿಂದ ನಾನು ಬೆಂಗಳೂರಿನಲ್ಲಿ ಆಫೀಸಿನ ಗೆಳೆಯರಿಗೆಲ್ಲಾ ಈ ಬಗ್ಗೆ ತಿಳಿಸಿದೆ. ನನ್ನ ಒಂದಿಬ್ಬರು ಗೆಳೆಯರು ಕಾಂಪ್ಲೆಕ್ಸ್ ನಲ್ಲಿ ಬೇರೆ ಬೇರೆ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದರು. ನಾನು ಸೆಕ್ಯೂರಿಟಿ ಆಫೀಸ್‌ನಲ್ಲಿ ಅಡುಗೆಯಾಕೆಯ ಬಗ್ಗೆ ವಿಚಾರಿಸಿದೆ.
ಮರುದಿನ ಬೆಳಗ್ಗೆ ಅಡುಗೆಯವಳು ಬಂದಳು. ಅಂದು ರಜೆ ಇತ್ತು. ನಾನು ನ್ಯೂಸ್‌ಪೇಪರ್‌ನಲ್ಲಿ ಮುಳುಗಿದ್ದೆ. ನಾನು ಆಕೆಯನ್ನು ಗಮನವಿಟ್ಟು ನೋಡಿದೆ. ತೆಳ್ಳಗೆ, ಕರ್ರಗೆ, ದೊಡ್ಡ ದೊಡ್ಡ ಕಣ್ಣುಗಳು. ಒಟ್ಟಿನಲ್ಲಿ ಸುಂದರಿಯಾಗಿದ್ದಳು. ಸುಕ್ಕು ಸುಕ್ಕಾಗಿದ್ದರೂ ಸ್ವಚ್ಛವಾಗಿದ್ದ ಚೂಡೀದಾರ್ ಧರಿಸಿದ್ದಳು.