ಕಥೆ - ಅಮುದಾ
ಕಿಲಕಿಲ ನಗು, ಹರಟೆ, ಕೇಕೆಗಳಿಂದ ಮಧ್ಯಾಹ್ನ ಗಡದ್ದಾಗಿ ಉಂಡು, ನಿದ್ದೆಗೆ ಜಾರಿದ್ದ ಗೌತಮನಿಗೆ ಪಟಕ್ಕನೆ ಎಚ್ಚರವಾಯಿತು. ಅಂದು ಭಾನುವಾರ ಬೇರೆ. ಯಾರಾದರೂ ನೆಂಟರು ಉದಯವಾದರೇನೋ ಎಂದುಕೊಳ್ಳುತ್ತಾ, ಕಣ್ಣು ತಿಕ್ಕುತ್ತಾ ರೂಮಿನಿಂದ ಹೊರಗೆ ಬಂದು ಕೆಳಗೆ ಬಗ್ಗಿ ನೋಡಿದನು.
ಹಜಾರದಲ್ಲಿ ಯಾರೋ ನಾಲ್ಕು ಜನ ಹುಡುಗಿಯರು, ಅಮ್ಮ ಮತ್ತು ತಂಗಿ ಇಂಚರಾ ಎಲ್ಲರೂ ಕೂಡಿ ಕುಳಿತು ಹರಟೆ ಹೊಡೆಯುತ್ತಿದ್ದರು.
ಬಹುಶಃ ಅವರೆಲ್ಲ ಇಂಚರಾಳ ಗೆಳತಿಯರು ಇರಬಹುದು. `ಆಕೆಗೆ ಒಂದಿಷ್ಟಾದರೂ ಪ್ರಜ್ಞೆ ಬೇಡ್ವಾ? ಅಣ್ಣ ಮಲಗಿದ್ದಾನೆ. ಬಾಯಿ ತುಸು ಕಮ್ಮಿ ಮಾಡ್ಬೇಕು ಅಂತ!' ಎಂದು ಮನದಲ್ಲೇ ಬೈಯ್ದುಕೊಂಡ.
ಡಿಗ್ರಿ ಕ್ಲಾಸಿನ ಇಂಚರಾಗೆ ಅಣ್ಣನನ್ನು ರೇಗಿಸುವುದು, ಕೆಣಕುವುದು ಎಂದರೆ ಬಲು ಹಿಗ್ಗು! ಅವಳು ಹಾಗೆಲ್ಲ ಯೋಚನೆ ಮಾಡ್ತಾಳಾ?! ಇವಳೂ ಒಬ್ಬ ತಂಗೀನೇ... ಎಂದುಕೊಳ್ಳುತ್ತಾ ಕೆಳಗೆ ಕೂತವರನ್ನು ಒಂದು ಕ್ಷಣ ದಿಟ್ಟಿಸಿದ. ಅದರಲ್ಲಿ ಒಬ್ಬ ಯುವತಿ ಅವನನ್ನು ತೀವ್ರವಾಗಿ ಸೆಳೆದಳು.
ಏನು ಚೆಲುವೆ! ಅಬ್ಬಾ ಆಕೆಯ ಬಣ್ಣ ಇನ್ನೂ ಎದ್ದು ಕಾಣುವಂತೆ ನೀಲಿ ಬಣ್ಣದ ಕೊರಳು ಪೂರ್ತಿ ಕವರಾದ ಹೈನೆಕ್ ಕಾಲರ್ ಇರುವಂಥ ಚೂಡಿದಾರ್ ಹಾಕಿದ್ದಳು. ಆಕೆ ನಕ್ಕರೆ ಬೆಳ್ಳನೆ ಮುಖದ ತುಂಬಾ ಕೆಂಗುಲಾಬಿ ಅರಳುತ್ತಿತ್ತು. ಅವಳ ಪಾದಗಳು ಎಷ್ಟು ಸುಂದರ! ಕೆಳಗೆ ನೆಲಕ್ಕೆ ಊರಿದ್ದ ಒತ್ತಡಕ್ಕೆ ಸುತ್ತಲೂ ಕೆಂಪಾದ ಬಣ್ಣಬಂದಿತ್ತು. ಆಕೆಯ ಕಡುಗಪ್ಪಾದ ಕೂದಲನ್ನು ಕ್ಲಿಪ್ ಒಂದರಲ್ಲಿ ಬಲವಂತವಾಗಿ ಬಂಧಿಸಲಾಗಿತ್ತು. ಹಣೆಯ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳಿಗೆ ಅವನು ಪೂರ್ತಿ ತನ್ಮಯನಾಗಿ ಹೋದ!
ನಾಲ್ಕೈದು ಮೆಟ್ಟಿಲು ಹತ್ತಿದರೆ ಮೇಲಿನ ಕೋಣೆ, ಅದರ ಹೊರಗೆ ಇರುವ ಕಟಾಂಜನದ ಹತ್ತಿರ ನಿಂತು ನೋಡಿದರೆ ಕೆಳಗೆಲ್ಲ ಸ್ಪಷ್ಟವಾಗಿಯೇ ಕಾಣುತ್ತಿತ್ತು. ಅಷ್ಟರಲ್ಲಿ ಅಲ್ಲೊಬ್ಬಳು ಯುವತಿ ಮೇಲೆ ದೃಷ್ಟಿ ಹಾಯಿಸಿದಳು.
ಹೀಗೆ ನಿಂತು ನೋಡುವುದು ತಪ್ಪಾಗುತ್ತದೆ ಎಂದುಕೊಂಡ ಗೌತಮ್ ಮತ್ತೆ ರೂಮಿನೊಳಗೆ ಹೋಗಿ ಲ್ಯಾಪ್‌ಟಾಪ್ ನೋಡುತ್ತಾ ಕುಳಿತ.
ಸರಿಯಾಗಿ ಒಂದು ಗಂಟೆಗೆಲ್ಲ ಗಲಾಟೆ ಶಾಂತವಾಯಿತು. ಅವರೆಲ್ಲ ಹೋದರೆಂದು ಗೊತ್ತು ಮಾಡಿಕೊಂಡ ಗೌತಮ್ ಕೆಳಗೆ ಹಜಾರಕ್ಕೆ ಇಳಿದುಬಂದ. ಅವನು ಬಂದ ಸದ್ದಿಗೆ ಅಮ್ಮ ಕಾಫಿ ತಂದುಕೊಟ್ಟಳು.
ಅವನ ಕಣ್ಣುಗಳು ಇಂಚರಾಳನ್ನು ಹುಡುಕುತ್ತಿತ್ತು, ``ಎಲ್ಲಿ ಅವಳು?'' ಅಂದವನಿಗೆ, ``ಗೆಳತಿಯರನ್ನು ಆ ಕೊನೆ ತನಕ ಬಿಟ್ಟುಬರಲು ಹೋಗಿದ್ದಾಳೆ,'' ಎಂದು ಅಮ್ಮನಿಂದ ತಿಳಿಯಿತು.
``ಮನೆಯಲ್ಲಿ ಇದುವರೆಗೆ ಕೂತು ಹರಟಿದ್ದು ಸಾಕಾಗ್ಲಿಲ್ಲವೇನೋ...?'' ಎಂದು ಕಿಚಾಯಿಸಿದ.
``ಇರಲಿ ಬಿಡೋ. ಮದುವೆಯಾಗಿ ಹೋದ ಮೇಲೆ ಹೀಗೆಲ್ಲ ಇರೋಕಾಗುತ್ತಾ?'' ಎನ್ನುತ್ತಾ ಒಳಗೆ ಹೋದರು ಅಮ್ಮ.
ಸಾಫ್ಟ್ ವೇರ್ ಎಂಜಿನಿಯರ್ ಆದ ಗೌತಮನಿಗೆ ಕೆಲಸ ಸಿಕ್ಕು ಎರಡು ವರ್ಷಗಳಾಗಿತ್ತು. ಈಗ ಅವನಿಗೆ ಹೆಣ್ಣು ನೋಡಲು ಶುರು ಮಾಡಿದ್ದರು.
ಅಷ್ಟರಲ್ಲಿ ಒಳಗೆ ಬಂದ ತಂಗಿಗೆ, ``ಏನೇ ನೀನು! ಅಣ್ಣ ಅನ್ನೋ ಕಾಳಜಿ ಒಂದಿಷ್ಟಾದರೂ ಇದೆಯಾ? ನಿದ್ದೆ ಮಾಡ್ತಿದ್ದಾನೆ. ಡಿಸ್ಟರ್ಬ್ ಮಾಡ್ಬಾರ್ದು ಅನ್ನೋದು ಗೊತ್ತಾಗಲ್ವಾ?''
``ಆಹಾಹಾ....! ಏನು ನಿದ್ದೆ ಮಾಡೋದು? ರಾತ್ರಿಯೆಲ್ಲಾ ಗಸ್ತು ತಿರುಗೋಕೆ ಹೋಗ್ತೀಯಾ?''