ಕಥೆ - ಸಿ.ಕೆ. ಸ್ನೇಹಾ
ಸತೀಶ್ ಒಮ್ಮೆ ನಿಟ್ಟುಸಿರು ಬಿಟ್ಟು ಹದಿನಾರು ವರ್ಷದ ಮಗಳು ಟೀನಾಳತ್ತ ದೃಷ್ಟಿ ಹರಿಸಿದರು.``ಇಲ್ಲ ಪಪ್ಪಾ.... ಇದು ಸಾಧ್ಯವಿಲ್ಲ. ನಿನಗೆ ಈ ವಯಸ್ಸಿನಲ್ಲಿ ಎರಡನೇ ಮದುವೆಯ ಆಲೋಚನೆ ಹೇಗೆ ಬಂದಿತು...?''
``ಟೀನಾ, ಪ್ಲೀಸ್ ಅರ್ಥ ಮಾಡಿಕೊ....''
``ಇಲ್ಲ ಪಪ್ಪಾ, ನನಗೆ ಏನೂ ಹೇಳಬೇಡ. ನಿನಗೆ ಅಮ್ಮನ ನೆನಪು ಇಷ್ಟು ಬೇಗ ಅಳಿಸಿಹೋಯಿತಲ್ಲವೇ? ಜೊತೆಗೆ ನಿನಗೆ ನನ್ನ ಬಗ್ಗೆಯೂ ಕೋಪವಿದೆ. ನಾನೇ ನನ್ನ ತಾಯಿಯನ್ನು ಕೊಂದೆನೆನ್ನುವ ಭಾವನೆ ನಿನ್ನದು. ಅದಕ್ಕೆ ನೀನು ನನ್ನನ್ನು ದೂರ ಮಾಡಿ ಎರಡನೇ ಮದುವೆಯಾಗುತ್ತಿದ್ದೀಯಾ?''
``ಹಾಗನ್ನಬೇಡ ಟೀನಾ, ನಿನ್ನನ್ನು ನೀನು ಹಳಿದುಕೊಳ್ಳುವುದು ತಪ್ಪು.''
ಟೀನಾ ಗೋಡೆಗೆ ತೂಗುಹಾಕಿದ್ದ ತಾಯಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ``ನಾನೆಂದೂ ನನ್ನ ತಾಯಿಯನ್ನು ನೋಡಿಲ್ಲ. ಆದರೆ ನೀನೇ ನನಗೆ ಹೇಳಿದ್ದೆಯಲ್ಲ.... ಅವಳು ಸುಂದರವಾಗಿದ್ದಳು, ಒಳ್ಳೆಯ ಗುಣದವಳು, ನಿನ್ನನ್ನು ಬಹಳ ಪ್ರೀತಿಸುತ್ತಿದ್ದಳು. ಅಂತ.... ನೀನೂ ಅವಳನ್ನು ಅಷ್ಟೇ ಪ್ರೀತಿಸುತ್ತಿದ್ದೆಯಲ್ಲವೇ? ಈಗ ಅದೆಲ್ಲವನ್ನೂ ಮರೆತು ಇನ್ನೊಬ್ಬ ಹೆಂಗಸಿನೊಡನೆ ಸಂಸಾರ ನಡೆಸಬೇಕು ಎಂಬ ಇಚ್ಛೆ ಹೇಗೆ ಮೂಡಿತು? ನನ್ನ ತಾಯಿಯ ಮೇಲೆ ನಿನಗಿದ್ದ ಪ್ರೀತಿ ಕೇವಲ ನಾಟಕದ ಪ್ರೀತಿ ಮಾತ್ರವೇ?''
``ಪ್ರೀತಿ ಎನ್ನುವುದೇ ಹಾಗೆ. ಅದು ಯಾವಾಗ ಹೇಗೆ ಚಿಗುರುತ್ತದೆ ಯಾರೂ ಹೇಳಲಾರರು. ನಿನಗಿನ್ನೂ ಚಿಕ್ಕ ವಯಸ್ಸು. ನಾನಿದನ್ನು ಹೇಳಿದರೆ ನಿನಗೆ ಅರ್ಥೈಸಿಕೊಳ್ಳಲು ಆಗುವುದೆ? ನಿನ್ನ ತಾಯಿಯನ್ನು ನಾನು ನನ್ನ ಜೀವಕ್ಕೆ ಸಮನಾಗಿ ಪ್ರೀತಿಸುತ್ತಿದ್ದೆ. ಈಗಲೂ ಅವಳ ನೆನಪು ನನ್ನ ಎದೆಯಾಳದಲ್ಲಿ ಕೊರೆಯುತ್ತಿದೆ. ಆದರೆ ಈಗ ಅವಳಿಲ್ಲ. ಇಂತಹ ಸಮಯದಲ್ಲಿ ನನಗೆ ಸಿಕ್ಕಿದ್ದು ಆಕೆ......''
``ಪಪ್ಪಾ.... ನನ್ನ ಎದುರಿಗೆ ಬೇರೊಬ್ಬ ಹೆಂಗಸಿನ ವರ್ಣನೆ ಪ್ರಾರಂಭಿಸಬೇಡ,'' ಟೀನಾ ಸತೀಶರ ಮಾತನ್ನು ಅರ್ಧಕ್ಕೇ ತುಂಡರಿಸಿದಳು.
``ನಿನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಅಮ್ಮನ ಸ್ಥಾನದಲ್ಲಿ ಬೇರೊಬ್ಬ ಹೆಂಗಸನ್ನು ತರುವುದಕ್ಕೆ ನೋಡುತ್ತಿಯಲ್ಲಾ..... ನನಗೊಬ್ಬ ಮಲತಾಯಿಯನ್ನು ತರಲು ಹವಣಿಸಿದ್ದೀಯಾ?''
``ಇಲ್ಲ ಟೀನಾ, ಅವಳು ನಿನಗೆ ನಿಜಕ್ಕೂ ಒಳ್ಳೆಯ ತಾಯಿ ಆಗಬಲ್ಲಳು.''
``ನಾನು ಹುಟ್ಟುವ ಸಮಯದಲ್ಲಿಯೇ ಅಮ್ಮ ಸಹಿಸಲಾರದ ಹೊಟ್ಟೆ ನೋವಿನಿಂದ ಸತ್ತು ಹೋದಳು. ಅವಳ ಸಾವಿಗೆ ನಾನೇ ಕಾರಣಳಾದೆ. ಇದರಿಂದ ನಿನಗೆ ನನ್ನನ್ನು ಕಂಡರೆ ಸಿಟ್ಟು, ಅಸಹನೆ ಇದೆ. ಇದೀಗ ನೀನು ಇನ್ನೊಂದು ಮದುವೆ ಮಾಡಿಕೊಳ್ಳುವ ಮೂಲಕ ನನ್ನ ಮೇಲೆ ಛಲ ಸಾಧಿಸುತ್ತಿರುವೆಯಾ?''
``ಇಲ್ಲ ಕಂದಾ, ನಿನ್ನ ಒಪ್ಪಿಗೆ ಇಲ್ಲದೆ ನಾನು ಇನ್ನೊಂದು ಮದುವೆ ಆಗಲಾರೆ. `ನನ್ನ ಅಮ್ಮನನ್ನು ನಾನೇ ಕೊಂದೆ,' ಎಂದು ಹೇಳಬೇಡ. ಐ ಲವ್ ಯೂ ಮೈ ಸ್ವೀಟ್ ಡಾಟರ್.....'' ಎಂದು ಸತೀಶ್ ಟೀನಾಳ ಕೈಯನ್ನು ಹಿಡಿದುಕೊಳ್ಳಲು ಮುಂದಾದರು. ಟೀನಾ ಮಾತ್ರ ಅವರನ್ನು ಬದಿಗೆ ಸರಿಸಿ ಬಾಗಿಲನ್ನು ಮುಂದೆ ಹಾಕಿಕೊಂಡು ಕಾಲೇಜಿಗೆ ಹೊರಟುಹೋದಳು.
ಸಂಜೆ ಕಾಲೇಜಿನಿಂದ ಬಂದವಳು ತಂದೆಯನ್ನು ಮಾತನಾಡಿಸದೆ ಪಕ್ಕದ ಮನೆಯಲ್ಲಿ ಮಹಿಮಾ ಟೀಚರ್ ಬಳಿ ಹೋದಳು. ಮಹಿಮಾ ಮದುವೆಯಾದ ಎರಡೇ ವರ್ಷಕ್ಕೇ ಪತಿಯನ್ನು ಕಳೆದುಕೊಂಡಿದ್ದರು. ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಆಕೆ ಮತ್ತೆ ಮದುವೆಯಾಗಿರಲಿಲ್ಲ. ಯುವ ಮನಸ್ಸುಗಳನ್ನು ಚೆನ್ನಾಗಿ ಅರಿತಿದ್ದ ಮಹಿಮಾಗೆ ಅವರೊಂದಿಗೆ ಹೇಗೆ ಮಾತನಾಡಬೇಕೆನ್ನುವುದು ತಿಳಿದಿತ್ತು. ಟೀನಾಳನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದ ಮಹಿಮಾಗೆ ಅವಳ ಗುಣಸ್ವಭಾವದ ಪರಿಚಯ ಚೆನ್ನಾಗಿತ್ತು. ಅವಳ ಎಲ್ಲಾ ಸಮಸ್ಯೆಗೂ ಇವರಲ್ಲಿ ಪರಿಹಾರ ಇರುತ್ತಿತ್ತು.