ವ್ಯಂಗ್ಯ –  ವಿಮಲಾ ಮೂರ್ತಿ 

ಅಮ್ಮಾವರೇ, ನನ್ನನ್ನು ಕೆಲಸದವಳು, ಆವಳು, ನೌಕರಿ ಮಾಡೋಳು ಅಂತ ಕರೆಯೋಕೆ ನಿಮಗೆಷ್ಟು ಧೈರ್ಯ? ಕರಿಯೋದಾದ್ರೆ ಪ್ರೀತಿಯಿಂದ ನನ್ನ ಹೆಸರನ್ನು ಕೂಗಿ ಕರೀರಿ. ಇಲ್ಲಾಂದ್ರೆ ಮೆಯ್ಡ್ ಸರ್ವೆಟ್‌ ಅಥವಾ ಮೆಯ್ಡ್ ಅಂತಾನೇ ಕರೀರಿ. ಕಿವಿಗೊಟ್ಟು ಕೇಳಿ ಅಮ್ಮಾವರೆ. ನಾನು ಕೆಲಸದವಳಲ್ಲ. ನಾನು ಯಾರ ಮನೆಗೆ ಹೋದರೂ ರಾಣಿ ತರಹ ಇರ್ತೀನಿ. ನನ್ನನ್ನು ಕೆಲಸದವಳೂಂತ ಯಾರೂ ಹೇಳಕ್ಕಾಗಲ್ಲ. ಕೆಲಸ ನನಗೆ ತೃಣಕ್ಕೆ ಸಮಾನ. ನನಗೆ ಬೇಸರವಾದಾಗ ಇಂತಹ ಕೆಲಸಕ್ಕೆ ಬಾರದ ಉದ್ಯೋಗಕ್ಕೆ ಬೈ ಹೇಳಿ ಹೊರಟೋಗ್ತೀನಿ. ನನ್ನ ಅಗತ್ಯ ಇರೋದು ನಿಮಗೆ. ನಿಮ್ಮ ಅಗತ್ಯ ನನಗೆ ಇಲ್ಲ. ಬೇಕಾದಷ್ಟು ನೌಕರಿಗಳು ನನ್ನ ದಾರೀನ ಕಾಯ್ತಿವೆ. ಒಂದು ಮನೇಲಿ ಕೆಲಸ ಬಿಟ್ರೆ 10 ಮನೆಗಳು ನನ್ನನ್ನು ಕೆಲಸಕ್ಕೆ ಇಟ್ಕೋಳೋಕೆ ಕಾಯ್ತಿರುತ್ತವೆ. ಬೇಕೂಂದ್ರೆ ಇಟ್ಕೊಳ್ಳಿ. ಇಲ್ಲಾಂದ್ರೆ ನಾನು ಹೊರಟೆ……

ಒಂದು ವಿಷಯ ಸರಿಯಾಗಿ ಅರ್ಥ ಮಾಡ್ಕೊಳ್ಳಿ ಅಮ್ಮಾವರೇ, ನಾನು ನನಗೆ ಬೇಕಾದ ಹಾಗೆ ಕೆಲಸ ಮಾಡ್ತೀನಿ. ಒಂದುವೇಳೆ ನೀವು ನನ್ನನ್ನು ಕೆಲಸಕ್ಕೆ ತಗೊಂಡ್ರೆ ನನಗೆ ಸಮಯದ ಕಟ್ಟುಪಾಡು ಹಾಕುವಂತಿಲ್ಲ. ನಾನು ನಿಮ್ಮ ಹಾಗೆ ಅಥವಾ ನಿಮ್ಮ ಯಜಮಾನ್ರ ಹಾಗೆ ಆಫೀಸಿನಲ್ಲಿ ಕೆಲಸ ಮಾಡ್ತಿಲ್ಲ. ಅಲ್ಲಿ ಟೈಮಿಗೆ ಸರಿಯಾಗಿ ತಲುಪಬೇಕಾಗುತ್ತೆ. ನಾನು ಆರಾಮಾಗಿ ನನ್ನ ಮನೆಯ ಕೆಲಸ ಮುಗಿಸಿ, ಡ್ರೆಸ್‌ ಮಾಡ್ಕೊಂಡು ಕೆಲಸಕ್ಕೆ ಬರ್ತೀನಿ. ಆಮೇಲೆ ಲೇಟಾಯ್ತೂಂತ ನೀವು ಗೊಣಗಬಾರದು. ತಿಳೀತಾ?

ಇನ್ನೊಂದು ಮುಖ್ಯವಾದ ವಿಷಯ. ನನ್ನ ಹತ್ರ ಮೊಬೈಲ್ ಇದೆ. ನನ್ನ ಮೊಬೈಲ್ನಿಂದ ಯಾರ ಜೊತೇಗೇ ಆಗ್ಲಿ, ಎಷ್ಟು ಹೊತ್ತೇ ಆಗ್ಲಿ, ಬೇಕೆಂದಾಗ, ಹೇಗೇ ಮಾತಾಡ್ಲಿ, ಕೆಲಸ ಬಾಕಿ ಇದೆ. ಯಾರ ಜೊತೆ ಇಷ್ಟು ಮಾತಾಡ್ತಾ ಇದ್ದೀಯಾಂತ ನೀವು ಅಡ್ಡಿ ಮಾಡಬಾರದು.

ಆಮೇಲೆ, ನನಗೆ ಇಷ್ಟವಾದಾಗೆಲ್ಲ ಸಿಹಿಯಾದ, ಸ್ಪೆಷಲ್ ಕಡಕ್‌ ಟೀ ಕೊಡಬೇಕು. ಅದಿಲ್ಲದೆ ನನಗೆ ಕೈಕಾಲೇ ಆಡೋದಿಲ್ಲ. ಅದಕ್ಕೆಲ್ಲಾ ನೀವು ಬೇಸರ ಮಾಡಿಕೊಳ್ಳೋ ಹಾಗಿಲ್ಲ. ಇನ್ನೊಂದು ವಿಷಯ ಹೇಳೋದೇ ಮರೆತುಬಿಟ್ಟೆ. ಮಧ್ಯಾಹ್ನ ನನಗೆ ಇಷ್ಟವಾದ ಟಿ.ವಿ. ಸೀರಿಯಲ್‌ ನೋಡಬೇಕು. ನಾನು ಜೋರಾಗಿ ಫ್ಯಾನ್‌ ಹಾಕ್ಕೊಂಡು ಸೋಫಾದಲ್ಲಿ ಕೂತು ಸೀರಿಯಲ್ ಅಥವಾ ಸಿನಿಮಾ ನೋಡಿದ್ರೆ, ನೀವು ಕೋಪಿಸಿಕೊಳ್ಳೋ ಹಾಗಿಲ್ಲ. ಟಿವಿಯಲ್ಲಿ ಬರೋ ಜಾಹೀರಾತುಗಳು ನನ್ನ ಜನರಲ್ ನಾಲೆಜ್‌ನ ಇಂಪ್ರೂವ್‌ ಮಾಡಿವೆ. ಪಾತ್ರೆ ಕ್ಲೀನ್‌ ಮಾಡೋ ಯಾವ ಪೌಡರ್‌ನಲ್ಲಿ ನೂರು ನಿಂಬೆಯ ಶಕ್ತಿ ಇದೆ. ಯಾವ ಡಿಟರ್ಜೆಂಟ್‌ನಲ್ಲಿ 10 ಕೈಗಳ ಒಗೆತದ ಶಕ್ತಿ ಇದೆ ಅಂತೆಲ್ಲಾ ಅವುಗಳಿಂದಲೇ ತಿಳ್ಕೊಂಡಿದ್ದೀನಿ. ಈ ಜಾಹೀರಾತುಗಳನ್ನು ನಮ್ಮಂತಹ ಮೆಯ್ಡ್ ಗಳಿಗೇ ಮಾಡಲಾಗಿದೆ. ಏಕೆಂದರೆ ನಮ್ಮ ಕೈಗಳು ಕೋಮಲವಾಗಿರಬೇಕು, ನಾವು ಕಡಿಮೆ ಶ್ರಮಪಡಬೇಕು ಅಂತ. ನೀವು ಆ ವಸ್ತುಗಳನ್ನು ಮೊದಲೇ ಮಾರುಕಟ್ಟೆಯಿಂದ ತಂದಿಡಬೇಕು ತಿಳೀತಾ…..?

ಅಮ್ಮಾವರೆ, ನಿಮ್ಮ ಅತ್ತೆ ಮಾವ, ನಿಮ್ಮ ಜೊತೆಗೇ ಬಂದು ಇರುತ್ತಾರೆ ಅಂತ ಮೊದಲೇ ಹೇಳಿಬಿಡಬೇಕು. ವಯಸ್ಸಾದ ಅತ್ತೆ, ಮಾವ ಇರೋ ಮನೆಗಳಲ್ಲಿ ನಾನು ಕೆಲಸ ಮಾಡಲ್ಲ. ನಾವು ಕೆಲಸ ಮಾಡ್ತಿರುವಾಗ ಇದು ಮಾಡು, ಅದು ಮಾಡು, ಇದ್ಯಾಕೆ ಮಾಡಲಿಲ್ಲ, ಅದ್ಯಾಕೆ ಮಾಡಲ್ಲಾಂತ ಅವರುಗಳು ತಲೆ ತಿಂತಾ ಇರ್ತಾರೆ. ಅಸಲಿ ವಿಷಯ ಏನೆಂದರೆ ಸೊಸೆ ಮೇಲೆ ಅವರ ಅಧಿಕಾರ ನಡೆಯುವುದಿಲ್ಲ. ಹೀಗಾಗಿ ನಮ್ಮಂಥವರ ಮೇಲೇ ಅವರ ದರ್ಬಾರ್‌!

ಇನ್ನೊಂದು ವಿಷಯ ಅಮ್ಮಾವರೆ, ನನಗೆ ನನ್ನದೇ ಆದ ಕೆಲವು ರೂಲ್ಸ್‌ ಅಂಡ್‌ ರೆಗ್ಯುಲೇಷನ್ಸ್ ಇವೆ. ಕೆಲಸಕ್ಕೆ ಸೇರೋಕೆ ಮೊದಲೇ ಇದರ ಬಗ್ಗೆ ಮಾತಾಡೋದು ಒಳ್ಳೆಯದು ಅಂದ್ಕೊಂಡಿದ್ದೀನಿ. ನನಗೆ ತಿಂಗಳಿಗೆ 4 ರಜಗಳು (ಅಂದರೆ ವಾರಕ್ಕೊಂದು) ಬೇಕೇ ಬೇಕು. ನಿಮ್ಮ ಯಜಮಾನರ ಆಫೀಸ್‌ನಲ್ಲಿ `ಫೈವ್‌ ಡೇಸ್‌ ವೀಕ್‌’ನ ವ್ಯವಸ್ಥೆ ಇದೆ. ಆದರೆ ನಾನು `ಸಿಕ್ಸ್ ಡೇಸ್‌ ವೀಕ್‌’ನಲ್ಲಿ ಕೆಲಸ ಮಾಡಲು ಸಿದ್ಧಳಾಗಿದ್ದೇನೆ. ಆದರೆ ನನಗೆ ಅಷ್ಟು ರಜೆಗಳು ಸಾಕಾಗಲ್ಲ. ಎಂದಾದರೂ ಹಬ್ಬಗಳಿಗೆ ರಜೆ ಸಿಗುತ್ತೆ ತಾನೇ?

ಇದಲ್ಲದೇ ನಾನು ಎಂದಾದರೂ ಕಾಯಿಲೆಗೆ ಗುರಿಯಾದರೆ ಆಗ ನನ್ನ ಗಂಡ, ಮಕ್ಕಳಿಗೆ ಕಾಯಿಲೆ ಎಂದು ಹೇಳಿ ರಜೆ ತಗೋಳ್ತೀನಿ. ಒಮ್ಮೊಮ್ಮೆ ನೆಂಟರ ಮದುವೆ ಅಥವಾ ಸಾವು ಅಂತ ನೆಪ ಹೇಳಿ ರಜೆ ತಗೋಳ್ತೀನಿ. ಇದಲ್ಲದೆ ನಿಮ್ಮ ಮನೆಗೆ ನೆಂಟರು ಬರುವವರಿದ್ದರೆ ಆಗ ನಾನು ರಜೆ ಹಾಕ್ಲೇ ಬೇಕು.

ನನ್ನ ಬಳಿ ನೆಪಗಳಿಗೆ ಕೊರತೆಯೇ ಇಲ್ಲ. ಬೇಕಾದರೆ ರಜೆ ಪಡೆಯಲು 101 ನೆಪಗಳು ಅಂತ ಪುಸ್ತಕಾನೇ ಬರೆದುಬಿಡ್ತೀನಿ. ಆದರೆ ಏನ್ಮಾಡ್ಲಿ ಅಮ್ಮಾವರೆ, ನಾನು ನಿಮ್ಮ ತರಹ ಓದಿಲ್ಲ. ಆದರೂ ಓದಿರೋರ ಕಿವಿ ಕತ್ತರಿಸ್ತೀನಿ.

ಇನ್ನು ಅಮ್ಮಾವರೆ, ಅಡ್ವಾನ್ಸ್ ತಗೊಳ್ಳೋ ಬಗ್ಗೇನೂ ಮಾತಾಡಿಬಿಟ್ರೆ ಒಳ್ಳೇದು. ಅಡ್ವಾನ್ಸ್ ತಗೋಳೋಕೂ ನನ್ನ ಬಳಿ 101 ನೆಪಗಳಿವೆ. ನಿಮಗೇ ನನ್ನ ಅಗತ್ಯ ಇರೋದು. ಆಗಲ್ಲ ಅಂತ ಮೊದಲು ಹೇಳಿದರೂ ಸಹ ನೀವು ಅಡ್ವಾನ್ಸ್ ಕೊಡಲೇಬೇಕಾಗುತ್ತದೆ. ಏಕೆಂದರೆ ನಿಮ್ಮ ಬಳಿ ಬೇರೇನೂ ಉಪಾಯವಿಲ್ಲ. 4-5 ಸಾವಿರ ಅಡ್ವಾನ್ಸ್ ಕೊಟ್ಟರೆ ರಾವಣಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಇದ್ದ ಹಾಗಿರುತ್ತೆ. ಈ ಅಡ್ವಾನ್ಸ್ ಮೊತ್ತವನ್ನು ಪ್ರತಿ ತಿಂಗಳೂ ಬರೀ 200 ರೂ. ಮಾತ್ರ ಸಂಬಳದಲ್ಲಿ ಮುರಿದುಕೊಳ್ಳಿ. ಎಂದಾದರೂ ತಲೆ ಕೆಟ್ಟಾಗ ನಿಮ್ಮನ್ನು ಬಿಟ್ಟು ಅಡ್ವಾನ್ಸ್ ಎತ್ಕೊಂಡು ಓಡಿಹೋಗ್ತೀನಿ.

ನನ್ನ ಕೈ ಶುದ್ಧವಾಗಿದೆ. ಅದನ್ನು ಬೇಕಾದರೆ ಡಂಗೂರ ಸಾರಿ ಹೇಳ್ತೀನಿ. ನಾನು ಹಿಂದೆ ಕೆಲಸ ಮಾಡಿರೋ ಮನೆಗಳಲ್ಲಿ ವಿಚಾರಿಸಿ ನೋಡಿ. ಇದುವರೆಗೆ ಅವರ ಮನೆಯಿಂದ ಒಂದು ಸೂಜೀನೂ ಕಾಣೆಯಾಗಿಲ್ಲ. ಆದರೆ ಇತರ ವಸ್ತುಗಳು ಹೇಗೆ ಮಾಯವಾಗುತ್ತದೆಂದು ಯಾರೂ ನನ್ನ ಮೇಲೆ ಸಂದೇಹ ಪಡುವಂತಿಲ್ಲ. ಏಕೆಂದರೆ ನಾನು ಸ್ವತಃ ಏನೂ ಮಾಡುವುದಿಲ್ಲ. ಆದರೆ ಬೇರೆಯವರಿಗೆ ವಿಷಯ ತಿಳಿಸಬಹುದು. ಮನೆಯವರೆಲ್ಲರ ದಿನಚರಿ ನನಗಿಂತ ಹೆಚ್ಚು ಯಾರಿಗೆ ತಿಳಿದಿದೆ? ಮನೆಗೆ ಯಾರು ಎಷ್ಟು ಹೊತ್ತಿಗೆ ಬರುತ್ತಾರೆ, ಎಷ್ಟು ಹೊತ್ತಿಗೆ ಹೊರ ಹೋಗುತ್ತಾರೆ, ಅಲ್ಮೇರಾ ಕೀ ಎಲ್ಲಿ ಇಡುತ್ತಾರೆ. ಒಡವೆಗಳನ್ನು ಎಲ್ಲಿಡುತ್ತಾರೆ, ರಜೆಗೆ ಎಲ್ಲಿ ಪ್ರವಾಸ ಹೊರಡುತ್ತಾರೆ ಎಂಬುದೆಲ್ಲಾ ನನಗೆ ತಿಳಿದಿರುತ್ತದೆ. ನಾನು ಏನೂ ಮಾಡುವುದಿಲ್ಲ. ನನ್ನಿಂದ ಮಾಹಿತಿ ಪಡೆದು ಇನ್ಯಾರೋ ಕಳ್ಳತನ ಮಾಡುತ್ತಾರೆ. ನನ್ನನ್ನು ಮಾಲು ಸಮೇತ ಹಿಡಿಯುವುದು ನಿಮ್ಮಿಂದ ಸಾಧ್ಯವಿಲ್ಲ.

ಈಗ ಸ್ವಲ್ಪ ಪರ್ಸನಲ್ ವಿಷಯ ಹೇಳ್ತೀನಿ. ಇದು ಕೊಂಚ ರೊಮ್ಯಾಂಟಿಕ್‌ ವಿಷಯ. ನಿಮ್ಮ ಯಜಮಾನರು ಅಥವಾ ವಯಸ್ಸಿಗೆ ಬರ್ತಿರೋ ನಿಮ್ಮ ಗಂಡು ಮಕ್ಕಳನ್ನು ಒಲಿಸಿಕೊಳ್ಳೋಕೆ ನನ್ನ ಬಳಿ 101 ವಿಧಾನಗಳಿವೆ. ಕಸ ಗುಡಿಸೋವಾಗ ನನ್ನ ಸೀರೆ ಮೀನಖಂಡಗಳ ಮೇಲೆ ಹೋಗುತ್ತದೆ (ಅದಂತೂ ಹೋಗುತ್ತಲೇ ಇರುತ್ತದೆ) ಅಲ್ಲಿ ಅಥವಾ ನೀವು ಕೊಟ್ಟಿರೋ `ಲೋಕಟ್‌’ ಬ್ಲೌಸ್‌ನೊಳಗೆ ಅವರ ಇಣುಕು ನೋಟ ಬಿದ್ದು ಅವರಿಗೆ ಸೆಳೆತ ಉಂಟಾದರೆ ನೀವು ನನಗೆ ದೋಷಾರೋಪಣೆ ಮಾಡುವಂತಿಲ್ಲ. ಈ `ಲೋಕಟ್‌’ ಬ್ಲೌಸ್‌ ನೀವೇ ತಾನೇ ನನಗೆ ಕೊಟ್ಟಿದ್ದು? ಮತ್ತೆ ನಿಮ್ಮ ಯಜಮಾನರು ಸಂದರ್ಭ ಸಿಕ್ಕಾಗ ಯಾವುದಾದರೂ ನೆಪ ಹೇಳಿ ಅಥವಾ ವಯಸ್ಸಿಗೆ ಬಂದಿರೋ ನಿಮ್ಮ ಗಂಡುಮಕ್ಕಳು ಕಾಲೇಜಿಗೆ ಚಕ್ಕರ್‌ ಹಾಕಿ ಬೇಗನೇ ಮನೆಗೆ ಬರತೊಡಗಿದರೆ ಅದರಲ್ಲಿ ನನ್ನ ತಪ್ಪೇನಿದೆ? ಯಜಮಾನ್ರು ಹಾಗೂ ನಿಮ್ಮ ಮಕ್ಕಳು ಗುಟ್ಟಾಗಿ ನನಗೆ ಬಕ್ಷೀಸು ಕೊಟ್ಟರೆ ನೀವು ತಲೆ ಕೆಡಿಸಿಕೊಳ್ಳಬಾರದು. ಆದರೆ ಆ ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿದ್ರೆ ತಾನೇ?

ಇನ್ನೊಂದು ಮುಖ್ಯವಾದ ವಿಷಯ ನಿಮಗೆ ಗೊತ್ತೇ ಇಲ್ಲ ಅಮ್ಮಾವರೆ. ನಿಮ್ಮಂಥವರ ಮನೆಗಳಲ್ಲಿ ಕೆಲಸ ಮಾಡೋ ನಮ್ಮಂತಹ ಮೆಯ್ಡ್ ಸರ್ವೆಂಟ್‌ಗಳು ಒಟ್ಟಿಗೇ ಸೇರಿದಾಗ ಎಂತೆಂತಹ ಮಾತುಗಳನ್ನು ಆಡಿಕೊಳ್ತೀವೀಂತ ನೀವು ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ. ನಮ್ಮ ಮಾತುಕಥೆಯ ಮೇನ್‌ ಟಾಪಿಕ್‌, ನಮ್ಮ ಟಾರ್ಗೆಟ್‌ ನೀವೇ ಆಗಿರುತ್ತೀರಿ ಎಂದು ತಿಳಿದಾಗ ನೀವು ಕೋಪಗೊಳ್ಳುತ್ತೀರಿ.

ಎಲ್ಲ ಮೆಯ್ಡ್ ಸರ್ವೆಂಟ್‌ಗಳೂ ತಮ್ಮ ತಮ್ಮ ಯಜಮಾನಿಯರ ಬಣ್ಣ, ರೂಪ ಮತ್ತು ಸ್ವಭಾವಕ್ಕೆ ಅನುಗುಣವಾಗಿ ಏನೇನು ನಿಕ್‌ನೇಮ್ ಗಳನ್ನು ಇಟ್ಟಿದ್ದಾರೆ ಗೊತ್ತಾ? ಒಬ್ಬ ಯಜಮಾನಿ ಅವಳ ಮೆಯ್ಡ್ ಪ್ರಕಾರ ಕರೀ ಎಮ್ಮೆ ಅಂತೆ, ಇನ್ನೊಬ್ಬಳು ಇಡೀ ದಿನ ಹೆಬ್ಬಾವಿನ ತರಹ ಹಾಸಿಗೇಲಿ ಬಿದ್ದುಕೊಂಡಿರ್ತಾಳಂತೆ, ಇನ್ನೊಬ್ಬ ಯಜಮಾನಿಗೆ ಬೆಕ್ಕಿನ ಹಾಗೆ ನಾಲಿಗೆ ಚಪಲ ಅಂತೆ, ಇನ್ನೊಬ್ಬಳು ಸದಾ ಅಲಂಕರಿಸಿಕೊಂಡು ಓಡಾಡ್ತಿರ್ತಾಳಂತೆ, ಒಬ್ಬಳು ಸದಾ ಪತ್ತೇದಾರಿಣಿ ತರಹ ವರ್ತಿಸ್ತಾಳಂತೆ. ಹೀಗೆ ನಿಮ್ಮಂತಹವರ ಮಿಮಿಕ್ರಿ ಮಾಡ್ತಾ ಇರ್ತೀವಿ. ಎಂದಾದರೂ ನಾವು ರಜೆ ತೆಗೆದುಕೊಂಡಾಗ ಮನೆ ಕೆಲಸ ಮಾಡುವಾಗ ನಿಮ್ಮ ಪರದಾಟ ನೆನೆಸಿಕೊಂಡು ಬಿದ್ದುಬಿದ್ದು ನಗುತ್ತೇವೆ.

ಅಮ್ಮಾವರೆ, ಇದರ ಜೊತೆಗೆ ಕಾಲೋನಿಯಲ್ಲಿ ಯಾರ ಮನೆಯಲ್ಲಿ ಏನು ನಡೀತಿದೆ, ಯಾರು ಯಾರ ಜೊತೆ ಚಕ್ಕಂದ ಆಡುತ್ತಿದ್ದಾರೆ, ಯಾರು ಯಾರ ಕೈಗೆ ಸಿಕ್ಕುಬಿದ್ದರು, ಯಾರ ಮನೆಯಲ್ಲಿ ಪರಸ್ತ್ರೀ ಅಥವಾ ಪರಪುರುಷನ ಬಗ್ಗೆ ಗಂಡ ಹೆಂಡತಿಯರು ನಾಯಿಗಳಂತೆ ಜಗಳವಾಡುತ್ತಿದ್ದಾರೆ? ಈ ವಿಷಯಗಳ ಬಗ್ಗೆ ಗುಡ್ಡವನ್ನು ಬೆಟ್ಟದಂತೆ ಮಾಡಿ, ನಮ್ಮ ಕಡೆಯಿಂದ ಬಹಳಷ್ಟು ಉಪ್ಪು ಖಾರ ಹಚ್ಚಿ ಹೇಳಿ ಮನರಂಜನೆ ಪಡೆಯುತ್ತೇವೆ. ನಂತರ ಈ ವಿಷಯಗಳು ನಮ್ಮ ಬಾಯಿಂದಲೇ ಮನೆಮನೆಗೆ ಹೋಗಿ ಯಜಮಾನಿಯ ಎದುರು ಬ್ರಾಡ್‌ಕ್ಯಾಸ್ಟ್ ಆಗುತ್ತದೆ (ಅವರ ಸ್ವಂತ ಮನೆಯ ವಿಷಯಗಳನ್ನು ಬಿಟ್ಟು) ನಮ್ಮ ಈ ನ್ಯೂಸ್‌ ಚಾನೆಲ್‌ ಬಹಳ ಜನಪ್ರಿಯವಾಗಿದೆ.

ನಮ್ಮ ಯಜಮಾನಿಯನ್ನು ಬ್ಲ್ಯಾಕ್‌ಮೇಲ್ ಮಾಡಲೂ ನನಗೆ ಬರುತ್ತದೆ. ಹಬ್ಬಗಳಲ್ಲಿ ಭಕ್ಷೀಸು ಹಾಗೂ ದೀಪಾವಳಿಯಲ್ಲಿ 1 ತಿಂಗಳ ಸಂಬಳ ಪಡೆಯುತ್ತೇವೆ. ಪ್ರತಿ ವರ್ಷ ಹೊಸ ವರ್ಷದಂದು ಸಂಬಳ ಹೆಚ್ಚಿಸಿಕೊಳ್ಳಲೂ ನನಗೆ ಚೆನ್ನಾಗಿ ಬರುತ್ತದೆ. ಅದಲ್ಲದೆ ಅವರ ನೆರೆಮನೆಯವರು ತಮ್ಮ ಮೆಯ್ಡ್ ಸರ್ವೆಂಟ್‌ಗೆ ಎಷ್ಟು ಸಂಬಳ ಹೆಚ್ಚಿಸಿದರು ಎಂದೆಲ್ಲಾ ವರ್ಣಿಸಿ ಹೊಸ ಬಟ್ಟೆ, ಪಾತ್ರೆಗಳು, ಆಹಾರ ಪದಾರ್ಥಗಳನ್ನು ಪಡೆಯಲು ಹಿಂದೆ ಬೀಳುವುದಿಲ್ಲ.

ಕೊನೆಯಲ್ಲಿ ಇದನ್ನು ಸ್ಪಷ್ಟಪಡಿಸುತ್ತೇನೆ (ಬೆದರಿಕೆ ಎಂದಾದರೂ ತಿಳಿದುಕೊಳ್ಳಿ)  ನಾವು ಮೆಯ್ಡ್ ಸರ್ವೆಂಟ್‌ಗಳು ಸಂಘವನ್ನು ಕಟ್ಟಿದ್ದು ಅದಕ್ಕೆ ನಾನು ಅಧ್ಯಕ್ಷೆ. ನಮ್ಮ ಸಂಘದಲ್ಲಿ ಪ್ರತಿ ತಿಂಗಳೂ ಮೀಟಿಂಗ್‌ ಇರುತ್ತಿದ್ದು, ಅದರಲ್ಲಿ ನಮ್ಮ ಸಂಬಳ, ರಜೆಗಳು, ಕೆಲಸದ ಗಂಟೆಗಳ ಬಗ್ಗೆ ಚರ್ಚಿಸುತ್ತೇವೆ. ಬೇಡಿಕೆ ಈಡೇರದಿದ್ದರೆ ಚಳುವಳಿ ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು. ಠಾಣೆಗೆ ಹೋಗಿ ದೂರು ಕೊಟ್ಟರೂ ನಮಗೆ ಭಯವಿಲ್ಲ. ಏಕೆಂದರೆ ಕೊನೆಗೆ ನಮಗೇ ಜಯ. (ಅಪರಾಧಿ ಯಾರೇ ಆಗಿರಲಿ) ಕಾನೂನಂತೂ ಯಾವಾಗಲೂ ಅತ್ತೆಮನೆಯ ವಿರುದ್ಧ ಸೊಸೆಯ ಕೇಸ್‌ನಲ್ಲಿ ಸೊಸೆಯ ಪರವಾಗಿ, ಮಾಲೀಕರ ವಿರುದ್ಧ ಬಾಡಿಗೆದಾರರ ಕೇಸ್‌ನಲ್ಲಿ ಬಾಡಿಗೆದಾರರ ಪರ ವಹಿಸುತ್ತದೆ. ಹೀಗಾಗಿ ಯಜಮಾನಿಯ ವಿರುದ್ಧ ಕೆಲಸದವರ ಕೇಸ್‌ನಲ್ಲಿ ಕೆಲಸದವರ ಪರ ವಹಿಸುತ್ತದೆ ಎಂದು ನಮಗೆ ಸಂಪೂರ್ಣ ನಂಬಿಕೆ ಇದೆ. ನಾವು ಸರ್ವವ್ಯಾಪಿಗಳು, ಸರ್ವಶಕ್ತರು. ಬೇಕಾಗಿದ್ರೆ ಕೆಲಸಕ್ಕೆ ಇಟ್ಕೊಳ್ಳಿ. ಇಲ್ಲದಿದ್ರೆ ನಾನು ಹೊರಡ್ತೀನಿ……

Tags:
COMMENT