ಹಮ್ ಆಪ್ಕೆ ಹೈ ಕೌನ್,’ ಮೈ ಹೂ ನಾ, ಕಲ್ ಹೋ ನಾ ಹೋ, ಓಂ ಶಾಂತಿ ಓಂ ನಂತಹ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿದ್ದ ಹಾಸ್ಯ ನಟ ಸತೀಶ್ ಶಾ (74) ಶನಿವಾರ ನಿಧನರಾಗಿದ್ದಾರೆ.
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಸತೀಶ್ ಶಾ, ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದು ಅವರು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಮ್ಮ ಅಸಾಧಾರಣ ಹಾಸ್ಯ ಪ್ರಜ್ಞೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಸತೀಶ್ ಶಾ, ಸಾರಾಭಾಯಿ ವರ್ಸಸ್ ಸಾರಾಭಾಯಿ ಟಿವಿ ಧಾರಾವಾಹಿಯಲ್ಲಿನ ಇಂದ್ರವದನ್ ಸಾರಾಭಾಯಿ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು. ಈ ಪಾತ್ರವನ್ನು ಭಾರತೀಯ ದೂರದರ್ಶನ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾಗಿದೆ.
ಜನಪ್ರಿಯ ಹಾಸ್ಯ ಧಾರಾವಾಹಿ ಯೇ ಜೋ ಹೈ ಜಿಂದಗಿ ಯಲ್ಲಿಯೂ ಅವರು ನಟಿಸಿದ್ದರು. ಅದರ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದರು. ಸತೀಶ್ ಶಾ ಕೇವಲ ದೂರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದರು.
“ಜಾನೇ ಭಿ ದೋ ಯಾರೋ”, “ಹಮ್ ಸಾಥ್ ಸಾಥ್ ಹೈ”, “ಮೈ ಹೂ ನಾ”, “ಓಂ ಶಾಂತಿ ಓಂ”, “ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ” ಸೇರಿದಂತೆ ಅನೇಕ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಕನ್ನಡದ ಟಿ.ಬಿ. ಶ್ರೀನಿವಾಸ್ ನಿರ್ದೇಶನದಲ್ಲಿ ತೆರೆಕಂಡಿದ್ದ “ಶಾಂತಿ ಶಾಂತಿ ಶಾಂತಿ” ಸಿನಿಮಾದಲ್ಲೂ ನಟಿಸಿದ್ದರು. “ಯೇ ಜೋ ಹೈ ಜಿಂದಗಿ” ಮೊದಲಾದ ದೂರದರ್ಶನ ಧಾರಾವಾಹಿ ಮೂಲಕ ಮನೆಮಾತಾಗಿದ್ದರು. “ಕಾಮಿಡಿ ಸರ್ಕಸ್” ಎಂಬ ಟಿವಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಸತೀಸ ಶಾ ನಿಧಾನಕ್ಕೆ ಪ್ರಧಾನಿ ಮೋದಿ, ಬಾಲಿವುಡ್ ತಾರೆಯರು, ಟಿವಿ ಉದ್ಯಮ ಸಹೋದ್ಯೋಗಿಗಳು, ರಾಜಕಾರಣಿಗಳು , ಕ್ರೀಡಾಪಟುಗಳು ಕಂಬನಿ ಮಿಡಿದಿದ್ದಾರೆ.
ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರು ಸತೀಶ್ ಶಾ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರನ್ನು ಭಾರತೀಯ ಮನರಂಜನೆಯ ನಿಜವಾದ ದಂತಕಥೆ ಎಂದು ಸ್ಮರಿಸಲಾಗುತ್ತದೆ. ಅವರ ಸಹಜ -ಸುಲಲಿತ ಹಾಸ್ಯ ಮತ್ತು ಅಪ್ರತಿಮ ನಟನೆ ಅಸಂಖ್ಯಾತ ಜನರ ಜೀವನದಲ್ಲಿ ನಗುವನ್ನು ತಂದವು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಬರೆದಿದ್ದಾರೆ.
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದು, ಪ್ರತಿದಿನ ಹೊಸ ಬೆಳಿಗ್ಗೆ, ಹೊಸ ಕೆಲಸ ಮತ್ತು ಇನ್ನೊಬ್ಬ ಸಹೋದ್ಯೋಗಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಸತೀಶ್ ಶಾ, ಒಬ್ಬ ಮಹಾನ್ ಪ್ರತಿಭೆ, ತುಂಬಾ ಬೇಗನೆ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ದುಃಖ ಸಾಮಾನ್ಯವಲ್ಲ, ಆದರೆ ಜೀವನ ಮುಂದುವರಿಯುತ್ತದೆ ಮತ್ತು ಪ್ರದರ್ಶನ ಮುಂದುವರಿಯುತ್ತದೆ ಎಂದು ಅವರು ಬರೆದಿದ್ದಾರೆ.





