– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭರವಸೆಯ ಚಿತ್ರ ‘ಗತವೈಭವ’ ತನ್ನ ಗೀತೆ ಬಿಡುಗಡೆ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದೆ. ಆಶಿಕಾ ರಂಗನಾಥ್ ಮತ್ತು ನವ ನಟ ಎಸ್.ಎಸ್. ದುಷ್ಯಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡಿದ್ದು, ಖ್ಯಾತ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಭಾಗವಹಿಸಿ, ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಗತವೈಭವ’ ಚಿತ್ರವು ನವೆಂಬರ್ 14, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಎಲ್ಲರಿಗೂ ನಾನು ಇನ್ಸ್‌ಪಿರೇಷನ್ ಎಂದು ಹೇಳುತ್ತಾರೆ, ಅಷ್ಟೊಂದು ವಯಸ್ಸಾಗಿಯೇನು?” ಎಂದು ತಮಾಷೆಯಾಗಿ ನಗೆಬಿಟ್ಟರು. ಗತವೈಭವ ಚಿತ್ರದ ಶೂಟಿಂಗ್ ಸೆಟ್‌ಗೆ ಒಮ್ಮೆ ಭೇಟಿ ನೀಡಿದ್ದ ಅನುಭವವನ್ನು ಹಂಚಿಕೊಂಡ ಅವರು, ಸಿಂಪಲ್ ಸುನಿಯವರ ನಿರ್ದೇಶನ ಶೈಲಿಯನ್ನು ಶ್ಲಾಘಿಸಿದರು. ರಕ್ಷಿತ್ ಶೆಟ್ಟಿಯವರ ಸರಳ ಪ್ರೇಮಕಥೆಯ ಚಿತ್ರವೊಂದನ್ನು ನೋಡಿ ಸುನಿಯವರ ಫ್ಯಾನ್ ಆಗಿಬಿಟ್ಟಿದ್ದೆ. ಈ ಚಿತ್ರದಲ್ಲೂ ಅವರ ಕೆಲಸ ನನಗೆ ಇಷ್ಟವಾಗಿದೆ ಎಂದರು. ಶಿವಣ್ಣ ತಮ್ಮ ವೃತ್ತಿಜೀವನದಲ್ಲಿ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವುದನ್ನು ತಮ್ಮ ಭಾಗ್ಯ ಎಂದು ಹೇಳಿದರು. ನಾನೇ ಒಂದು ಬ್ರಾಂಡ್, ಬೇರೆ ಬ್ರಾಂಡ್‌ಗಳ ಹಿಂದೆ ಹೋಗಬೇಕಿಲ್ಲ ಎಂದು ಹೇಳಿದರು. ಚಿತ್ರದ ‘ಅಣ್ಣ-ತಂಗಿಯ ಬಂಧ’ ಗೀತೆಯನ್ನು ತಮ್ಮ ತಂಗಿ ಆಶಿಕಾ ಕಿಶನ್‌ಗೆ ಡೆಡಿಕೇಟ್ ಮಾಡಿದ ಶಿವಣ್ಣ, ವೇದಿಕೆಯಲ್ಲಿ ಈ ಗೀತೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಅಲ್ಲದೆ, ತಮ್ಮ ‘AK47’ ಚಿತ್ರದ ಕೆಲವು ಸನ್ನಿವೇಶಗಳನ್ನು ಸಹ ಹಂಚಿಕೊಂಡರು.
ನಟ ಎಸ್.ಎಸ್. ದುಷ್ಯಂತ್, ಶಿವರಾಜ್ ಕುಮಾರ್‌ರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡರು. ಸೇವಂತಿ ಸೇವಂತಿ ಚಿತ್ರದ ಶೂಟಿಂಗ್ ವೇಳೆ ಶಿವಣ್ಣ ತೊಡೆಯ ಮೇಲೆ ಕೂರಿಸಿಕೊಂಡು ಫೋಟೋ ಕೊಟ್ಟಿದ್ದರು. ಅವತ್ತಿನಿಂದ ನಾನು ಅವರ ಫ್ಯಾನ್ ಎಂದು ದುಷ್ಯಂತ್ ಭಾವುಕರಾದರು. ಬ್ರಿಟನ್‌ನಲ್ಲಿ ಕಾನೂನು ಓದುವಾಗಲೂ ಶಿವಣ್ಣರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡ ಅವರು, ನಮ್ಮ ತಲೆಮಾರಿನವರಿಗೆ ಡಾ. ರಾಜಕುಮಾರ್ ಅವರನ್ನು ನೋಡುವ ಅವಕಾಶ ಸಿಗಲಿಲ್ಲ. ಆದರೆ, ಶಿವಣ್ಣ ಅವರು ರಾಜಕುಮಾರ್‌ರಂತೆ ಕಾಣಿಸಿಕೊಳ್ಳುತ್ತಾರೆ ಎಂದು ಶ್ಲಾಘಿಸಿದರು. ಆಶಿಕಾ ರಂಗನಾಥ್ ಮತ್ತು ಸಿಂಪಲ್ ಸುನಿಯವರಿಂದ ತಾವು ಬಹಳ ಕಲಿತದ್ದಾಗಿ ಹೇಳಿದ ದುಷ್ಯಂತ್, ತಮ್ಮ ಚಿತ್ರರಂಗದ ಪಯಣದ ಬಗ್ಗೆ ಮಾತನಾಡಿದರು. “2018ರಲ್ಲಿ ಬೀದಿ ನಾಟಕ ಮಾಡುತ್ತಿದ್ದೆ. ತಂದೆ-ತಾಯಿಯ ವಿರೋಧದ ನಡುವೆಯೂ ಡಾ. ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ, ಚಿತ್ರರಂಗಕ್ಕೆ ಬರುವ ನಿರ್ಧಾರ ಕೈಗೊಂಡೆ ಎಂದು ಹೇಳಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ, ನಾನು ಡೈರೆಕ್ಟರ್ ಆಗಿದ್ದರೂ ಶಿವಣ್ಣರಿಗೆ ಫ್ಯಾನ್ ಎಂದು ಹೇಳಿದರು. ‘ಮುತ್ತಣ್ಣ’ ಚಿತ್ರದ ಗೀತೆಯ ಶೂಟಿಂಗ್ ವೇಳೆ ಶಿವಣ್ಣರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಅವರು, ಈ ಚಿತ್ರದ ಶಿಪ್ ಗೀತೆಯ ಚಿತ್ರೀಕರಣದ ಸವಾಲುಗಳ ಬಗ್ಗೆ ಮಾತನಾಡಿದರು. ಶಿಪ್ ಸಾಂಗ್ ಚಿತ್ರೀಕರಣಕ್ಕಾಗಿ ದೇಶ-ವಿದೇಶಗಳಲ್ಲಿ ಹುಡುಕಿದೆವು. ಅಂತಿಮವಾಗಿ ಪೋರ್ಚುಗಲ್‌ನಲ್ಲಿ ಶಿಪ್ ಸಿಕ್ಕಿತು. ಇದು ಚಿತ್ರದ ಒಂದು ದೊಡ್ಡ ಸವಾಲಾಗಿತ್ತು ಎಂದು ವಿವರಿಸಿದರು.
ನಟಿ ಆಶಿಕಾ ರಂಗನಾಥ್, ‘ಮಾಸ್ ಲೀಡರ್’ ಚಿತ್ರದಲ್ಲಿ ಶಿವಣ್ಣರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನುಭವವನ್ನು ಸ್ಮರಿಸಿದರು. ಶಿವಣ್ಣರ ಜೊತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಇತರ ಇಂಡಸ್ಟ್ರಿಯ ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡಿದರೂ, ಶಿವಣ್ಣರೇ ಬೆಸ್ಟ್ ಎಂದು ಶ್ಲಾಘಿಸಿದರು. ಶಿಪ್‌ನಲ್ಲಿ ಚಿತ್ರೀಕರಿಸಿದ ಡ್ಯಾನ್ಸ್ ದೃಶ್ಯವು ಚಿತ್ರದ ಅತ್ಯಂತ ಸವಾಲಿನ ಭಾಗವಾಗಿತ್ತು ಎಂದು ಆಶಿಕಾ ಹೇಳಿದರು. ನಿರ್ದೇಶಕ ಸುನಿಯವರಿಗೆ ಸೀ ಸಿಕ್‌ನೆಸ್ ಇದ್ದರೂ, ಚಿತ್ರೀಕರಣದ ಸಮಯದಲ್ಲಿ ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಿದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನೃತ್ಯ ಸಂಯೋಜಕ ಭೂಷಣ್ ಮಾಸ್ಟರ್, ಶಿವರಾಜ್ ಕುಮಾರ್‌ಗೆ ಡ್ಯಾನ್ಸ್ ಹೇಳಿಕೊಟ್ಟ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ಶಿವಣ್ಣ ಜೊತೆಗೆ ‘ಗತವೈಭವ’ ತಂಡದ ಎನರ್ಜಿಟಿಕ್ ಡ್ಯಾನ್ಸ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
‘ಗತವೈಭವ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಪ್ರಯತ್ನವಾಗಿದ್ದು, ಈ ಲಾಂಚ್ ಇವೆಂಟ್ ಚಿತ್ರದ ಬಗ್ಗೆ ಕುತೂಹಲವನ್ನು ಮೂಡಿಸಿದೆ. ಶಿವರಾಜ್ ಕುಮಾರ್‌ರ ಶುಭಾಶಯ ಮತ್ತು ತಂಡದ ಉತ್ಸಾಹದಿಂದ ಈ ಚಿತ್ರವು ಪ್ರೇಕ್ಷಕರ ಮನಗೆಲ್ಲುವ ಭರವಸೆಯನ್ನು ನೀಡಿದೆ.





