- ರಾಘವೇಂದ್ರ ಅಡಿಗ ಎಚ್ಚೆನ್.
"ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ." ಎಂದು ಕರ್ನಾಟಕ ರಾಜ್ಯದ ಉಪ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಖ್ಯಾತ ನಟ ದಿ.ಡಾ.ಪುನೀತ್ ರಾಜ್‍ಕುಮಾರ್ ಕುರಿತಂತೆ ಇರುವ ಎಐ(ಕೃತಕ ಬುದ್ಧಿಮತ್ತೆ) ಆಧಾರಿತ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಸಿದ್ಧವಾಗಿರುವ ಸ್ಟಾರ್ ಫ್ಯಾನ್ಡಮ್ ಆ್ಯಪ್ (ಕನ್ನಡದ ಅಪ್ಪು ಪಿಆರ್ಕೆ ಮೊಬೈಲ್ ಆ್ಯಪ್) ಅನ್ನು ಖಾಸಗಿ ಹೋಟೆಲ್ನಲ್ಲಿ ಲಾಂಚ್ ಮಾಡಿದ ನಂತರ ಅವರು ಮಾತನಾಡಿದರು.

"ನಾನು ಹಾಗೂ ಪುನೀತ್ ರಾಜಕುಮಾರ್ ನೆರೆಹೊರೆಯವರು. ಇಬ್ಬರೂ ಒಟ್ಟಿಗೆ ಒಂದೇ ಜಿಮ್ಗೆ ಕಸರತ್ತು ನಡೆಸಲು ಹೋಗುತ್ತಿದ್ದೆವು. ಕೊನೆ ಕ್ಷಣಗಳು ಅವರ ಕೈಯಲ್ಲೂ ಇರಲಿಲ್ಲ. ಅವರ ಜಿಮ್ ತರಬೇತುದಾರ ಹಾಗೂ ನನ್ನ ತರಬೇತುದಾರ ಕೊನೆ ಕ್ಷಣದಲ್ಲಿ ಒಟ್ಟಿಗೆ ಇದ್ದರು. ಅವರು ನನಗೆ ಈ ವಿಚಾರ ತಿಳಿಸಿದರು. ಸಾವು ಎಂಬುದು ಯಾರ ಕೈಯಲ್ಲೂ ಇಲ್ಲ." ಎಂದ ಶಿವಕುಮಾರ್ "ನಾನು ಈ ಮೊದಲು ಟೂರಿಂಗ್ ಟಾಕೀಸ್ಗಳನ್ನು ನಡೆಸುತ್ತಿದೆ. ನನಗೆ ಗೊತ್ತಿರುವ ಪ್ರಕಾರ ಅತಿ ಹೆಚ್ಚು ಓಡಿದ ಸಿನಿಮಾ ಎಂದರೆ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸದರಲ್ಲಿ ನನ್ನ ಹೆಂಡತಿಯನ್ನು ಮೈಸೂರಿಗೆ ಸತ್ಯ ಹರಿಶ್ಚಂದ್ರ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದೆ. ಒಂದು ಬಾರಿ ಸಿನಿಮಾ ಪ್ರದರ್ಶನ ಆರಂಭಿಸಿದರೆ, 15 ದಿನಗಳ ಕಾಲ ನಡೆಯುತ್ತಿತ್ತು. ರಾಜ್ಕುಮಾರ್ ಅವರ ಅಭಿನಯ ಅಷ್ಟು ತೀವ್ರವಾಗಿತ್ತು. ಈಗಲೂ ಸುಮಾರು 20ಕ್ಕೂ ಹೆಚ್ಚು ಚಲನಚಿತ್ರ ಪರದೆಗಳನ್ನು ಹೊಂದಿದ್ದೇನೆ. ನಾನು ಬಿಟ್ಟರು ಚಲನಚಿತ್ರ ರಂಗ ನಮ್ಮನ್ನು ಬಿಡುತ್ತಿಲ್ಲ" ಎಂದು ಹೇಳಿದರು.

"ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವರಲ್ಲಿ ಪುನೀತ್ ರಾಜಕುಮಾರ್ ಒಬ್ಬರು. ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳುತ್ತಾರೆ. ನಿಮ್ಮನ್ನು ನೀವು ನಿಯಂತ್ರಣ ಮಾಡಿಕೊಳ್ಳಬೇಕಾದರೆ ಮೆದುಳನ್ನು ಬಳಸಿ ಇತರರನ್ನು ನಿಯಂತ್ರಿಸಬೇಕಾದರೆ ಹೃದಯವನ್ನು ಬಳಸಿ. ಹೃದಯವಂತಿಕೆಯಿಂದ ಪುನೀತ್ ರಾಜಕುಮಾರ್ ಅವರು ಕೆಲಸ ಮಾಡಿದರು. ಇದನ್ನು ಮುಂದುವರೆಸಿಕೊಂಡು ಹೋಗಲು ಆ್ಯಪ್ ಮುಖಾಂತರ ಹೊಸ ಹೆಜ್ಜೆ ಇಡಲಾಗಿದೆ."
"ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ" ಎಂದು ತಿಳಿಸಿದರು.
"ಎಐ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ನಲ್ಲಿ ಬಾಲ್ಯಕಾಲದ ಪುನೀತ್ ಸೇರಿದಂತೆ ಇತ್ತೀಚಿನ ದಿನದವರೆಗಿನ ಪುನೀತ್ವರೆಗೆ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ" ಎಂದು ಹೇಳಿದರು.
"ನನಗೆ ಬಹಳಷ್ಟು ರಾಜ್ಯಗಳ ಸಿನಿಮಾ ಸ್ನೇಹಿತರು ಪರಿಚಯ ಇದ್ದಾರೆ. ಯಾರೂ ಕೂಡ ಈ ಆಲೋಚನೆ ಮಾಡಿಲ್ಲ. ನನ್ನ ಸ್ನೇಹಿತನ ಹೆಸರಿನಲ್ಲಿ ಇಂತಹ ಆ್ಯಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ನಾನು ಬಂದಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ" ಎಂದು ಖುಷಿ ವ್ಯಕ್ತಪಡಿಸಿದರು.





