ಕಥೆ – ಸಿ. ವಿನುತಾ 

`ನಾನು ನಿನಗೆ ಐ ಫೋನ್‌ ಕೊಡಿಸುತ್ತೇನೆ. ಆದರೆ ಕಳೆದ ಬಾರಿಯಂತೆ ನೀನೇನಾದರೂ ಕಳೆದುಕೊಂಡರೆ ಮತ್ತೆಂದೂ ನಾನು ಐ ಫೋನ್‌ ಕೊಡಿಸಲಾರೆ…..’ ಉಷಾ ಭರವಸೆಯೊಂದಿಗೆ ಮಗಳಿಗೆ ಎಚ್ಚರಿಕೆ ನೀಡಿದ್ದಳು.

“ಅಮ್ಮಾ ನನಗೆ ಐ ಫೋನ್‌ ಬೇಕು. ನಾನೀಗ ಕಾಲೇಜು ಸೇರಿದ್ದೇನೆ. ನಾನು ಚಿಕ್ಕ ಹುಡುಗಿಯಲ್ಲ,” ಎನ್ನುತ್ತಾ ಪಂಕಜಾ ತನ್ನ ತಾಯಿ ಉಷಾಳ ಬೆನ್ನು ಬಿದ್ದಿದ್ದಳು. “ನನ್ನ ಕ್ಲಾಸಿನಲ್ಲಿ ಎಲ್ಲರೂ ದುಬಾರಿ ಫೋನ್‌ ಬಳಸುತ್ತಿದ್ದಾರೆ. ನಾನು ಮಾತ್ರ ಈ ಚೀಪ್‌ ಮೊಬೈಲ್‌ ಹೇಗೆ ಒಯ್ಯಲಿ?” ಎನ್ನುತ್ತಿದ್ದಳು.

ಆದರೆ ಉಷಾ ಇದಕ್ಕೆಲ್ಲ ಬಗ್ಗುತ್ತಿರಲಿಲ್ಲ. “ನಿನಗೆ ಐ ಫೋನ್‌ ಕೊಳ್ಳಲು ನನ್ನ ಬಳಿ 20,000 ರೂ. ಇಲ್ಲ. ಈಗಿರುವ ಫೋನ್‌ನಲ್ಲೇ ನಿನಗೆ ಬೇಕಾದ ಎಲ್ಲಾ ಅನುಕೂಲಗಳೂ ಇವೆ. ಮೇಲಾಗಿ ನಮ್ಮ ಮನೆಯಲ್ಲಿ ಲ್ಯಾಪ್‌ಟಾಪ್‌, ಡೆಸ್ಕ್ ಟಾಪ್‌ಗಳೂ ಇವೆ. ಇಮೇಲ್‌, ಇಂಟರ್‌ನೆಟ್‌ಗಾಗಿ ಅವನ್ನು ಬಳಸಿಕೊ,” ಎನ್ನುತ್ತಿದ್ದಳು.

“ಅಯ್ಯೋ ಅಮ್ಮಾ, ನನಗೆ ಅದೆಲ್ಲಾ ತಿಳಿದಿದೆ.”

“ನಾನು ಕಾಲೇಜು ದಿನಗಳಲ್ಲಿದ್ದಾಗ ನಮಗ್ಯಾವ ಫೋನುಗಳಿದ್ದವು?’

‘“ಅಮ್ಮಾ, ನಿನ್ನ ಕಾಲೇಜು ದಿನಗಳನ್ನು ಇಂದಿನ ದಿನಗಳಿಗೆ ಹೋಲಿಸಬೇಡ, ಇದು ತಾಂತ್ರಿಕ ಯುಗ…!” ಅದಕ್ಕೆ ಉಷಾಳಿಂದ ಯಾವ ಉತ್ತರ ಬರಲಿಲ್ಲ. ಪಂಕಜಾ ನೇರವಾಗಿ ಹೈಕೋರ್ಟ್‌ ಮೊರೆಹೊಕ್ಕಳು, “ಅಪ್ಪಾಜಿ, ಅಮ್ಮಂಗೆ ಎಷ್ಟು ಕೇಳಿದರೂ ನನಗೆ ಐ ಫೋನ್‌ ಕೊಡಿಸಲು ಒಪ್ಪುತ್ತಿಲ್ಲ.”

“ಉಷಾ, ಅವಳು ಬಹಳ ದಿನಗಳಿಂದ ಐ ಫೋನ್‌ ಕೇಳುತ್ತಿದ್ದಾಳೆ ಕೊಡಿಸಬಾರದೆ? ಸುಮ್ಮನೆ ಅವಳನ್ನೇಕೆ ಬೇಸರಪಡಿಸುವೆ….?” ಎಂದರು ಮೂರ್ತಿ.

“ಹೌದು ನಿಮಗೆ ಯಾವತ್ತೂ ಅವಳ ಪರವಹಿಸಿ ಮಾತನಾಡಿಯೇ ಅಭ್ಯಾಸವಲ್ಲವೇ? ಇಲ್ಲಿ ನಾನೊಬ್ಬಳೇ ಕೆಟ್ಟವಳು….”

“ಕಾಲೇಜ್‌ನಲ್ಲಿ ಎಲ್ಲರೂ ಒಳ್ಳೆಯ ಮೊಬೈಲ್ ತರುತ್ತಾರಂತೆ. ಅವಳೂ ಕೇಳುವುದು ಸರಿ ತಾನೇ?”

“ಸರಿ…ಸರಿ… ನೀವು ಅವಳನ್ನೇ ವಹಿಸಿಕೊಂಡು ಮಾತನಾಡಿ. ನಾಳೆ ಅವಳ ಮದುವೆಗೆ ವರ ಹೇಗೆ ಸಿಗುತ್ತಾನೆ? ಆ ಮನೆಯಲ್ಲಿ ಇವಳು ಹೇಗೆ ಬದುಕುತ್ತಾಳೆ…?”

“ಅಪ್ಪಾಜಿ ಪ್ಲೀಸ್‌…. ಅಮ್ಮನಿಗೆ ಸುಮ್ಮನಿರಲು ಹೇಳಿ. ನನಗಿನ್ನೂ ಮದುವೆಗೆ ಸಮಯವಿದೆ. ಈಗಲೇ ಈ ಆಲೋಚನೆಗಳೆಲ್ಲಾ ಬೇಡ ಪ್ಲೀಸ್‌….”

“ನಾವೀಗಾಗಲೇ ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಏಕೆ ನೀನಿನ್ನೂ ಹತ್ತೊಂಬತ್ತನೆ ಶತಮಾನದಲ್ಲಿರುವವಳಂತೆ ಮಾತನಾಡುತ್ತೀ….?”

“ನನಗೂ ನನ್ನದೇ ಆದ ಆಸೆ, ಕನಸುಗಳಿವೆ. ನನ್ನ ಹುಡುಗ ಹೇಗಿರಬೇಕು ಎನ್ನುವುದು ನನ್ನದೇ ಆಯ್ಕೆ ಆಗಿದೆ.”

“ಸರಿ…ಸರಿ… ನೀನು ಹೇಗೆ ಬಯಸುತ್ತಿಯೋ ಹಾಗೇ ಇರು. ನಾನು ನಿನಗೆ  ಐ ಫೋನ್‌ ಕೊಡಿಸುತ್ತೇನೆ. ಆದರೆ ಕಳೆದ ಬಾರಿಯಂತೆ ಈ ಹೊಸ ಮೊಬೈಲ್ ಕಳೆದುಕೊಂಡರೆ ಮತ್ತೆ ನಾನೆಂದಿಗೂ ಹೊಸ ಫೋನ್‌ ಕೊಡಿಸಲ್ಲ…” ಉಷಾ ಭರವಸೆ ಜೊತೆಗೆ ಮಗಳಿಗೆ ಎಚ್ಚರಿಕೆ ನೀಡಿದಳು.

ಇದಾದ ಮರು ಭಾನುವಾರ ಪಂಕಜಾ ನೂತನ ಐ ಫೋನ್‌ಗೆ ಒಡತಿಯಾದಳು. ಅದು ಅವಳಿಗೆ ಇನ್ನಿಲ್ಲದ ಸಂಭ್ರಮಕ್ಕೆ ಕಾರಣವಾಗಿತ್ತು. ಕಾಲೇಜಿನಲ್ಲಿ ತನ್ನ ಆತ್ಮೀಯ ಗೆಳೆಯನಾಗಿದ್ದ ಪ್ರಕಾಶ್‌ ಸೇರಿದಂತೆ ಎಲ್ಲಾ ಸ್ನೇಹಿತರಿಗೂ ಮೆಸೇಜ್‌ ಮೂಲಕ ತನ್ನ ಸಂತಸನ್ನು ಹಂಚಿಕೊಂಡಿದ್ದಳು.

“ಥ್ಯಾಂಕ್ಯೂ ಅಮ್ಮಾ….. ಥ್ಯಾಂಕ್ಯೂ ಅಪ್ಪಾಜಿ….,” ಎನ್ನುತ್ತಾ ತನ್ನ ಸಂತಸದ ನಡುವೆ ಪಂಕಜಾ ತಂದೆ ತಾಯಿಗಳಿಗೂ ಧನ್ಯವಾದ ತಿಳಿಸಿದಳು.

“ಇರಲಿ…. ಇರಲಿ…. ಆದರೆ ಫೋನ್‌ ಕಳೆದುಕೊಳ್ಳಬೇಡ. ಹಾಗೇನಾದರೂ ಆದಲ್ಲಿ ಮತ್ತೆ ಐ ಫೋನ್‌ ಇರುವುದಿಲ್ಲ…..” ಉಷಾ ಇನ್ನೊಮ್ಮೆ  ಎಚ್ಚರಿಸಿದಳು.

ಇದಾಗಿ ಕೆಲವು ದಿನಗಳು ಕಳೆದ ನಂತರ ಮದರ್ಸ್ ಡೇ ಬಂದಿತು. ಆ ದಿನ ಪಂಕಜಾ ತನ್ನ ತಾಯಿ ತಂದೆಯರನ್ನು ಗ್ರಾಂಡ್‌ ರೆಸ್ಟೋರೆಂಟ್‌ ಒಂದಕ್ಕೆ ಕರೆದೊಯ್ದು, ಒಳ್ಳೆಯ ಊಟ ಕೊಡಿಸಿದಳು.

ಅದೊಂದು ದಿನ ಪಂಕಜಾ ಎಂದಿನಂತೆ ಕಾಲೇಜಿಗೆ ಹೋದಳು. ಕಾಲೇಜಿನಲ್ಲಿ ತನ್ನ ಪ್ಯಾಂಟ್‌ ಚೆಕ್‌ ಮಾಡಿಕೊಂಡಾಗ ಅಲ್ಲಿ ಐ ಫೋನ್‌ ಇಲ್ಲದಿರುವುದು ತಿಳಿಯಿತು. ತಕ್ಷಣ ಏನು ಮಾಡಬೇಕೆನ್ನುವುದೇ ತೋಚಲಿಲ್ಲ. ಯಾರ ಬಳಿಯಾದರೂ ತನ್ನ ಮೊಬೈಲ್ಗೆ ಕಾಲ್ ಮಾಡಲು ಹೇಳಿದರೆ ಅವರಿಗೂ ತಾನು ಫೋನ್‌ ಕಳೆದುಕೊಂಡಿರುವುದು ತಿಳಿಯುತ್ತದೆ, ಏನು ಮಾಡುವುದು….? ಆದರೆ… ಬೇರೆ ದಾರಿಯೇ ಇಲ್ಲ…. ಎಂದು ಯೋಚಿಸುತ್ತಿದ್ದಾಗ ಎದುರಿಗೆ ಪ್ರಕಾಶ್‌ ಸಿಕ್ಕಿದ.

“ಏನು ಪಂಕಜಾ ಮೇಡಂ ಇಷ್ಟು ಬೇಗ ಕಾಲೇಜಿಗೆ ಬಂದಿದ್ದೀರಿ? ಮನೆಯಲ್ಲಿರಲು ಬೇಸರವಾಯಿತೆ? ಇಲ್ಲ ಈ ಬಡವನ ನೆನಪಾಗಿ…..” ಎನ್ನುತ್ತಾ ಮುಗುಳ್ನಕ್ಕ. ಆದರೆ ಪ್ರತಿಯಾಗಿ ಅವಳು ನಗಲಿಲ್ಲ. ಆದರೂ ಪ್ರಕಾಶ್‌ ಮತ್ತೂ ಕೀಟಲೆಯಾಗಿ, “ಓಹೋ… ನಾನು ಇಂದು ಬೆಳಗ್ಗೆ ನಿನಗೆ ಮೆಸೇಜ್‌ ಕಳುಹಿಸಿದ್ದನ್ನು ನೋಡಿರಬೇಕು. ಹೀಗಾಗಿ ಬೇಗ ಬಂದಿದ್ದೀಯ ಸರಿ ತಾನೆ….? ಎಲ್ಲಿ ನಿನ್ನ ಐ ಫೋನ್‌ ಕೊಡಿಲ್ಲಿ…..” ಎಂದಾಗ ಪಂಕಜಾಳಿಗೆ ಏನು ಹೇಳಬೇಕೆಂದು ತಿಳಿಯದೆ ಮುಖನ್ನು ಮುದುಡಿದ ತಾವರೆಯಂತೆ ಮಾಡಿಕೊಂಡಳು.

“ಏಕೆ… ನಿನ್ನ ಐ ಫೋನ್‌ ಎಲ್ಲಿ? ಮತ್ತೆ ಕಳೆದುಕೊಂಡೆಯೇನು?” ಪ್ರಕಾಶ್‌ ಮತ್ತೆ ಒತ್ತಿ ಕೇಳಿದ.

“ಹ್ಞೂಂ! ಬೆಳಗ್ಗೆಯಿಂದ ಮೊಬೈಲ್‌ ಕಾಣಿಸುತ್ತಿಲ್ಲ. ಎಲ್ಲಾ ಕಡೆ ಹುಡುಕಿದ್ದಾಗಿದೆ. ಸಿಕ್ಕಲಿಲ್ಲ. ಇನ್ನು ಮನೆಯಲ್ಲಿ ಹೇಳಿದರೆ, ಪುನಃ ಮೊಬೈಲ್‌ ಕೊಡಿಸಲ್ಲ,” ಎನ್ನುತ್ತಾ ಕಣ್ಣಂಚಿನ ನೀರನ್ನು ಒರೆಸಿಕೊಂಡ ಪಂಕಜಾಳನ್ನು ಸಮಾಧಾನಪಡಿಸುವಂತೆ ಅವಳ ಕೈಯನ್ನೊಮ್ಮೆ ಮೃದುವಾಗಿ ಒತ್ತಿದ.

“ಕಾಫಿಗೆ ಹೋಗೋಣವೇ? ಅಲ್ಲೇ ವಿವರವಾಗಿ ಮಾತನಾಡೋಣ….?” ಎಂದಾಗ ಪಂಕಜಾ ಮರು ಮಾತನಾಡದೆ ಅವನ ಹಿಂದೆ ನಡೆದಳು.

“ಏಕೆ ನನಗೇ ಪದೇ ಪದೇ… ಹೀಗೇಗಾಗುತ್ತಿದೆ ಪ್ರಕಾಶ್‌? ಮೊಬೈಲ್‌ ಕಳೆದುಕೊಳ್ಳುವುದು ಇದು ನಾಲ್ಕನೇ ಬಾರಿ….!” ಎಂದು ಮತ್ತೆ ಕಣ್ಣೀರು ಸುರಿಸತೊಡಗಿದಳು. ಅವಳನ್ನು ಸಮಾಧಾನಪಡಿಸುವಷ್ಟರಲ್ಲಿ ಪ್ರಕಾಶ್‌ಗೆ ಸಾಕಾಗಿ  ಹೋಗಿತ್ತು.

ಹೀಗೆ ಇಬ್ಬರೂ ಮಾತನಾಡುತ್ತಾ ಕಾಫಿ ಹೀರುತ್ತಿದ್ದಾಗಲೇ ಉಷಾ ತನ್ನ ಗೆಳತಿಯೊಂದಿಗೆ ಅದೇ ರೆಸ್ಟೋರೆಂಟ್‌ಗೆ ಬಂದಿದ್ದಳು. ಹಾಗೆ ಬಂದವಳಿಗೆ ಅಲ್ಲಿ ತನ್ನ ಮಗಳು ಇನ್ನೊಬ್ಬ ಗೆಳೆಯನೊಂದಿಗೆ ಕುಳಿತಿದ್ದು ಕಂಡಿತು. ತಕ್ಷಣ ಅವಳತ್ತ ಧಾವಿಸಿದ್ದ ಉಷಾ, “ಹಾಯ್‌…. ಪಂಕಜಾ ನಿನ್ನ ಮೊಬೈಲ್‌ನ್ನು ಬಾಲ್ಕನಿಯಲ್ಲಿ ಬಿಟ್ಟು ಬಂದಿದ್ದಿ…..?”

“ಓಹ್‌ ಮಮ್ಮಿ……?!” ಪಂಕಜಾ ಕಣ್ಣಿನಲ್ಲಿ ಗಾಬರಿ ಕಾಣಿಸಿತು.

“ನಿನ್ನ ಮೊಬೈಲ್‌…..” ಉಷಾ ಪುನಃ ಹೇಳಿದಾಗ ಪಂಕಜಾ ಮುಖ ಅರಳಿತ್ತು.

“ಸಾರಿ…. ನಿನ್ನೆ ಏನೋ ಕೆಲಸದಲ್ಲಿ ಮರೆತುಹೋಗಿತ್ತು…”

“ಅದಿರಲಿ, ನೀನು ಮನೆಯಲ್ಲೇ ಮರೆತಿದ್ದಕ್ಕೆ ಆಗಿದೆ. ಬೇರೆ ಎಲ್ಲಾದರೂ ಬಿಟ್ಟು ಬಂದಿದ್ದರೆ ಮತ್ತೆ ನಿನಗೆ ಐ ಫೋನ್‌ ಇರುತ್ತಿರಲಿಲ್ಲ. ಅಷ್ಟಲ್ಲದೆ ಪ್ರಕಾಶ್‌, ನಿನ್ನ ನಂಬರ್‌ಗೆ ಕಾಲ್ ಕೊಟ್ಟಿದ್ದಕ್ಕೆ ಫೋನ್‌ ಮನೆಯಲ್ಲಿರುವುದು ನನ್ನ ಗಮನಕ್ಕೆ ಬಂದಿತು,” ಎಂದಾಗ ಪಂಕಜಾ ಒಮ್ಮೆ ಪ್ರಕಾಶ್‌ನತ್ತ ನೋಡಿದಳು. ಅವನ ಕಣ್ಣಲ್ಲಿ ಅದೇ ತುಂಟತನ ಇಣುಕುತ್ತಿತ್ತು.

Tags:
COMMENT