ಮಳೆಗಾಲದ ವಾತಾವರಣ ನಿಮಗೆ ಖುಷಿಯ ಸಿಂಚನ ಮಾಡಿರಬಹುದು. ಆದರೆ ಮಳೆಗಾಲದ ಬಳಿಕ ಮನೆಯ ಗೋಡೆಗಳಿಗೆ ಹೊಸತನದ ಸ್ಪರ್ಶ ಕೊಡಲೇಬೇಕಾಗುತ್ತದೆ. ಅಂದರೆ ಪುನಃ ಬಣ್ಣ ಹೊಡೆಸಬೇಕಾಗುತ್ತದೆ. ಜೊತೆಗೆ ಆಗ ಸಾಲುಸಾಲು ಹಬ್ಬಗಳು ಬೇರೆ ಬರುತ್ತಿರುತ್ತವೆ. ಹೀಗಾಗಿ ಹಬ್ಬಕ್ಕೆ ವಿಶೇಷ ಮೆರುಗು ಬರಲು ಗೋಡೆಗಳಿಗೆ ಬಣ್ಣಗಳ ಸೊಗಸನ್ನು ತುಂಬಬೇಕಾಗುತ್ತದೆ. ಮನೆಗೆ ಬಣ್ಣ ಹೊಡೆಸುವುದು ಒಂದು ವಿಶೇಷ ಕೆಲಸ. ಅದಕ್ಕಾಗಿ ನಿಮ್ಮ ಮೆಚ್ಚಿನ ಬಣ್ಣಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಇಷ್ಟದ ಬಣ್ಣಗಳನ್ನಷ್ಟೇ ಆಯ್ಕೆ ಮಾಡಿದರೆ ಸಾಲದು, ಬದಲಿಗೆ ವಿಭಿನ್ನ ಬಣ್ಣಗಳನ್ನು ಸಂಯೋಜನೆ ಮಾಡುವ ಕಲೆಯೂ ನಿಮಗೆ ತಿಳಿದಿರಬೇಕು. ಏಕೆಂದರೆ ಮನೆಯ ಅಂದಚೆಂದಕ್ಕೆ ಮತ್ತಷ್ಟು ಕಳೆ ಬರುತ್ತದೆ. ಮನೆಯ ಪೇಂಟ್ ಹೇಗೆ ಮಾಡಿಸಬೇಕು, ಅದರಲ್ಲಿ ಬಗೆಬಗೆಯ ಬಣ್ಣಗಳನ್ನು ಹೇಗೆ ಸಂಯೋಜನೆಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಬಣ್ಣಗಳಲ್ಲಿ ಇರಲಿ ಸಮತೋಲನ
ಬಣ್ಣಗಳಲ್ಲಿ ಹಲವು ಬಗೆ. ಆದರೆ ಎಲ್ಲಕ್ಕೂ ಮುಖ್ಯ ಸಂಗತಿಯೆಂದರೆ ಕೋಣೆಗಳಿಗೆ ಯಾವ ಬಗೆಯ ಬಣ್ಣ ಉಪಯೋಗಿಸಬೇಕು ಮತ್ತು ಅದರ ಗುಣಮಟ್ಟ ಹೇಗಿರಬೇಕು ಎಂಬುದು ಮುಖ್ಯವಾಗಿರುತ್ತದೆ. ಅಂದಹಾಗೆ ಕೋಣೆಗೆ ಯಾವ ಬಗೆಯ ಬಣ್ಣ ಮಾಡಿಸಬೇಕು ಎನ್ನುವುದು ವ್ಯಕ್ತಿಯೊಬ್ಬರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೂ ಡಿಸೈನರ್‌ಗಳ ಸಲಹೆ ಪಡೆಯುವುದು ಉಪಯುಕ್ತ ಆಗಿರುತ್ತದೆ. ನೀವು ನಿಮ್ಮ ಇಷ್ಟದ ಬಣ್ಣನ್ನು ಮನೆಯಲ್ಲಿ ಮಾಡಿಸಬೇಕೆಂದಿದ್ದರೆ, ಅದು ಯಾವ ಭಾಗದಲ್ಲಿ ಹೇಗೆ ಮಾಡಿಸಬೇಕು ಎನ್ನುವುದು ಮುಖ್ಯವಾಗಿರುತ್ತದೆ.
ಒಂದು ವೇಳೆ ನೀವು ಯಾವುದಾದರೂ ಪ್ರಖರ ಬಣ್ಣವನ್ನು ಬಳಸುವ ಯೋಚನೆ ಮಾಡುತ್ತಿದ್ದರೆ, ಅದರ ತೀವ್ರತೆ ಕಡಿಮೆ ಮಾಡಲು ಅದರಲ್ಲಿ ಕಂಟ್ರಾಸ್ಟ್ ಉಪಯೋಗ ಮಾಡಬೇಕು. ಏಕೆಂದರೆ ಆ ಬಣ್ಣ ಕಣ್ಣಿಗೆ ರಾಚದಂತಿರಬೇಕು. ಒಂದು ಮಹತ್ವದ ಸಂಗತಿಯೆಂದರೆ, ಬಣ್ಣ ಒಂದು ಸ್ಥಳದ ಮಹತ್ವವನ್ನು ಹೆಚ್ಚಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ ಎನ್ನುವುದಾದರೆ, ಅದೇ ಬಣ್ಣ ಆ ಸ್ಥಳದ ಅಂದ ಹಾಳುಗೆಡಹುವ ಅಪಾಯ ಇರುತ್ತದೆ. ಅದರ ಸಂಯೋಜನೆ ಸಮರ್ಪಕ ಆಗಿರದೇ ಇದ್ದಾಗ ಈ ಸ್ಥಿತಿ ಉತ್ಪನ್ನ ವಾಗುತ್ತದೆ. ನೀವು ಕೋಣೆಗೆ ಗಾಢ ವರ್ಣದಿಂದ ಪೇಂಟ್ ಮಾಡಿಸಿದ್ದರೆ, ಕೋಣೆಯ ಗಾತ್ರವೇ ಚಿಕ್ಕದೆಂಬಂತೆ ಭಾಸವಾಗಬಹುದು, ಇಲ್ಲಿ ಅತ್ಯಂತ ತಿಳಿವರ್ಣದಿಂದ ಪೇಂಟ್ ಮಾಡಿಸಿದ್ದರೆ, ಅದು ಪ್ಲೇನ್ ಎಂಬಂತೆ ಭಾಸ ಆಗಬಹುದು. ಹೀಗಾಗಿ ವರ್ಣ ಸಂಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕು. ನೀವು ಡಾರ್ಕ್ ಹಾಗೂ ಲೈಟ್ ಕಲರ್ ಬಳಸುವುದಾದರೆ ಅದರ ಅನುಪಾತ 30:70 ಆಗಿರಬೇಕು. ಒಂದು ವೇಳೆ ನೀವು ಯಾವುದಾದರೊಂದು ವಿಶೇಷ ವರ್ಣವನ್ನು ಆಯ್ಕೆ ಮಾಡಿಕೊಂಡಿದ್ದರೆ, ನಿಮಗೆ ಕೊಡಬಹುದಾದ ಒಂದು ಸಲಹೆಯೆಂದರೆ, ಇಡೀ ಮನೆಗೆ ಒಂದೇ ಬಣ್ಣ ಬಳಿಯಬೇಡಿ. ಒಂದು ವೇಳೆ ನೀವು ಬಿಳಿ ಬಣ್ಣ ಹೊಡೆಸಿದ್ದರೆ ಆ ಮಾತು ಬೇರೆ. ನೀವು ಯಾವುದಾದರೂ ಬಣ್ಣ ಆಯ್ಕೆ ಮಾಡುವ ಸಂದರ್ಭ ಬಂದಾಗ, ನೀವು ಅದನ್ನು ವಾಲ್‌ಪೇಪರ್ಸ್ ರೂಪದಲ್ಲಿ ಲಗತ್ತಿಸಬೇಕೆಂದಿದ್ದರೆ, ಮನೆಯಲ್ಲಿ ಎಲ್ಲಕ್ಕೂ ಹೆಚ್ಚು ಎದ್ದು ಕಾಣುವ ಗೋಡೆಗೆ ಅಂದರೆ ಫೀಚರ್ ವಾಲ್‌ಗೆ ನಿಮ್ಮ ಇಷ್ಟದ ಬಣ್ಣವನ್ನು ಸೇರ್ಪಡೆ ಮಾಡಬಹುದು.
ಸೀಲಿಂಗ್ ಪ್ಲೇನ್ ಆಗಿರಲಿ
ಸೀಲಿಂಗ್‌ನ್ನು ಪ್ಲೇನ್ ಆಗಿ ಇಡುವುದೇ ಸೂಕ್ತ. ಅದಕ್ಕೆ ಗಾಢ ವರ್ಣದ ಲೇಪನ ಬೇಡ. ತಿಳಿ ವರ್ಣದ ಲೇಪನ ಇದ್ದರೆ, ಅದರ ಅಂದ ಇನ್ನೂ ಹೆಚ್ಚುತ್ತದೆ. ಬಿಳಿ ನಮ್ಮ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಹಸಿರು ವರ್ಣ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನೀಲಿ ವರ್ಣ ಕೂಡ ಒತ್ತಡವನ್ನು ಕುಗ್ಗಿಸುವ ಕೆಲಸ ಮಾಡುತ್ತದೆ.
ಪೇಕ್ ಪಾಯಿಂಟ್‌ಗಾಗಿ ಟೆಕ್ಸ್ಚರ್
ಪೇಕ್ ಪಾಯಿಂಟ್ ಟೆಕ್ಸ್ಚರ್ ಪೇಂಟ್‌ನಿಂದ ಬಗೆಬಗೆಯ ಪ್ಯಾಟರ್ನ್‌ನ್ನು ಬಳಸಿಕೊಳ್ಳಬಹುದು. ಇದರಿಂದ ಟೆಕ್ಸ್ಚರ್ ಮಾಡಿಕೊಳ್ಳಬಹುದು. ವಾಲ್ ಪೇಪರ್‌ನ ಪ್ರಯೋಗ ಮಾಡಬಹುದು. ಸ್ಟೆನ್‌ಸಿಲ್ ಉಪಯೋಗ ಮಾಡಿಕೊಳ್ಳಬಹುದು. ವೈಬ್ರೆಂಟ್ ಲುಕ್‌ಗಾಗಿ ನೀವು ಪೇಂಟ್ ಬಗ್ಗೆ ವಿಚಾರಿಸುತ್ತಿದ್ದೀರಿ ಎಂದರೆ, ವೈಬ್ರೆಂಟ್ ಕಲರ್ಸ್‌ನಲ್ಲಿ ಪರಿಪೂರ್ಣ ಸ್ಕೀಮ್ ನೊಂದಿಗೆ ಬ್ಯಾಲೆನ್ಸ್ ಮಾಡುವುದು ಅತ್ಯವಶ್ಯ. ಅದರ ಅನುಪಾತ 30:70 ಮೀರಬಾರದು. ಇಲ್ಲದಿದ್ದರೆ ಅದು ಸ್ಪೇಸ್‌ನ್ನು ಓವರ್ ಪವರ್ ಮಾಡಲು ಆರಂಭಿಸುತ್ತದೆ. ಟೆಕ್ಸ್ಚರ್‌ನಲ್ಲೂ ಅದು 50:50 ಅನುಪಾತದಿಂದ ಇರಬಹುದಾಗಿದೆ. ಒಂದು ಬಗೆಯ ಕಲರ್‌ನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಹಚ್ಚುತ್ತೀರೆಂದರೆ, ಅದು ನಿಮ್ಮ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅದರಲ್ಲಿ ನೀವು ಯಾವುದೇ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಸ್ಥಳ ಚಿಕ್ಕದಾಗಿದ್ದರೆ, ಅಲ್ಲಿ ಟೆಕ್ಸ್ಚರ್ ಮಾಡಿಸುತ್ತಿದ್ದರೆ, ಅಲ್ಲಿ ವೈಬ್ರೆಂಟ್ ಕಲರ್‌ನ ರೇಖೆಗಳನ್ನು ಕಡಿಮೆ ಮಾಡಿಸುತ್ತಿದ್ದರೆ ಅಲ್ಲಿ ವೈಬ್ರೆಂಟ್ ಕಲರ್‌ನ ರೇಖೆಗಳನ್ನು ಕಡಿಮೆ ಇಡಿ. ಟೆಕ್ಸ್ಚರ್ ಪೇಂಟ್ ಅಥವಾ ಸಾಮಾನ್ಯ ಪೇಂಟ್ ಮಾಡುವ ಮೊದಲು ಗೋಡೆಯ ಮೇಲೆ ಪ್ಲಾಸ್ಟರ್ ಅಥವಾ ಪಿಓಪಿಯದಾಗಿದ್ದರೆ ಅದು ಒಳ್ಳೆಯದು. ಇಲ್ಲದಿದ್ದರೆ ವಾಲ್‌ಪುಟ್ಟಿ ಮಾಡುವುದು ಅತ್ಯವಶ್ಯ. ಪೇಂಟ್ ಮಾಡಿಸುವುದಿದ್ದರೆ 3-4 ಪದರಗಳಲ್ಲಿ ಮಾಡಿ. ಒಂದು ಪದರ ಒಣಗಿದ ಬಳಿಕವೇ ಇನ್ನೊಂದು ಪದರ ಹಚ್ಚಿ. ನೀವು ಬೇಗ ಬೇಗನೇ ಬಣ್ಣ ಸವರುತ್ತ ಹೋದರೆ ಗೋಡೆಗಳ ಮೇಲೆ ಅಲ್ಲಲ್ಲಿ ಹೊಪ್ಪಳೆ ತರಹ ಕಾಣಿಸುತ್ತದೆ.
ಯಾವ ಬಣ್ಣ ಉತ್ತಮ?
ಮನೆಗೆ ಪ್ಲಾಸ್ಟಿಕ್ ಪೇಂಟ್ ಸೂಕ್ತವಾಗಿರುತ್ತದೆ. ಅದನ್ನು ನೀರಿನಿಂದ ತೊಳೆಯಲೂಬಹುದು. ಇದಕ್ಕೂ ಅಪ್ಪರ್ ಗ್ರೇಡ್‌ನಲ್ಲಿ ಹೋದರೆ ಸಾಟನ್ ಫಿನಿಶ್ ಮತ್ತು ರಾಯಲ್ ಪೇಂಟ್ ಸಿಗುತ್ತವೆ.
ಎಚ್ಚರಿಕೆ ಅಗತ್ಯ
ನಿಮಗೆ ಪೇಂಟ್ ಮಾಡಿಸಬೇಕಿದ್ದು, ನೀವು ಯಾರಿಗಾದರೂ ವಿತ್ ಮೆಟೀರಿಯಲ್ ಗುತ್ತಿಗೆ ಕೊಡುತ್ತಿದ್ದರೆ, ಪ್ಯಾಕೆಟ್ ಅಥವಾ ಡಬ್ಬವನ್ನು ನಿಮ್ಮ ಎದುರಿನಲ್ಲಿಯೇ ತೆರೆಯಲು ಹೇಳಿ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಪೇಂಟ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದು ಬಹು ಬೇಗ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಅಲ್ಲಲ್ಲಿ ಗುಳ್ಳೆಗಳ ರೀತಿಯಲ್ಲಿ ಹೊಪ್ಪಳೆಯ ಹಾಗೆ ಮೇಲೇಳುತ್ತದೆ. ಹೀಗಾಗಿ ಪೇಂಟ್ ಮಾಡುವಾಗ ಪರಿಪೂರ್ಣ ಎಚ್ಚರಿಕೆ ವಹಿಸಿ.
– ಪಿ. ಸರಳಾ ಭಟ್