ಕಥೆ – ಎಂ. ಸಂಧ್ಯಾ ಮೂರ್ತಿ
ಅತಿಯಾದ ಪ್ರೀತಿ ಬೇರೆಲ್ಲವನ್ನೂ ಗೌಣವಾಗಿಸುತ್ತದಂತೆ! ಅದಿತಿಗೆ ಆದದ್ದೂ ಹೀಗೇ…. ತನ್ನ ಪ್ರೇಮಿ ಮೂರು ದಿನಗಳ ನಂತರ ಕಾಣಿಸಿಕೊಂಡ ಸಂಭ್ರಮದಲ್ಲಿ, ಅವನೊಂದಿಗೆ ಮತ್ತೊಬ್ಬ ಹೆಣ್ಣು ಇದ್ದದ್ದು ದೊಡ್ಡ ಅಪಾರ್ಥಕ್ಕೆ ದಾರಿಯಾಯ್ತು. ಅದು ಸರಿಹೋದದ್ದು ಹೇಗೆ….?
ಅದಿತಿ ಮತ್ತು ರಾಹುಲ್ ಕೆಲವು ತಿಂಗಳಿನಿಂದಲೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಇಬ್ಬರೂ ಪ್ರೀತಿಯಲ್ಲಿ ಸಿಲುಕಿ ಪ್ರತಿಯೊಂದು ಕ್ಷಣವನ್ನೂ ಒಟ್ಟಾಗಿ ಕಳೆಯಬೇಕೆಂದು ಅಪೇಕ್ಷಿಸುತ್ತಿದ್ದರು.
ಈ ಮಧ್ಯೆ ರಾಹುಲ್ ಆಫೀಸ್ ಕೆಲಸದ ನಿಮಿತ್ತ ಮೂರು ದಿನಗಳ ಕಾಲ ದೂರ ಪ್ರಯಾಣ ಕೈಗೊಂಡಿದ್ದ. ಇದರಿಂದ ಅದಿತಿಗೆ ಅತ್ಯಂತ ಬೇಸರವಾಗಿ ದಿನ ಕಳೆಯುವುದೇ ಬಹಳ ಕಷ್ಟವೆನಿಸತೊಡಗಿತು. ಶಾಪಿಂಗ್‌ಗೆ, ಕಾಫಿ ಡೇಗೆ ಹೋಗುವಾಗೆಲ್ಲಾ ಮತ್ತೆ ಮತ್ತೆ ರಾಹುಲ್ ನೆನಪಾಗುತ್ತಿದ್ದ. ಇಬ್ಬರೂ ಜೊತೆಯಲ್ಲಿದ್ದಾಗ ಕೆಲವೊಮ್ಮೆ ಜಗಳವಾಡಿ ಕೋಪಿಸಿಕೊಂಡು ಮಾತನಾಡದಿರುವುದೂ ಇತ್ತು. ಆದರೆ ಎಂದೂ ಒಬ್ಬರನ್ನೊಬ್ಬರೂ ಭೇಟಿ ಆಗದೆ ಇರುತ್ತಿರಲಿಲ್ಲ.
ಅದಿತಿ ಒಮ್ಮೆ ತನ್ನ ಕೈಗಡಿಯಾರದತ್ತ ನೋಡಿಕೊಂಡಳು. ಅದು ಮಧ್ಯಾಹ್ನ ಮೂರು ಗಂಟೆ ತೋರಿಸುತ್ತಿತ್ತು. ಏರ್‌ಪೋರ್ಟ್ ಹೊರಗೆ ಕಾರು ನಿಲ್ಲಿಸಿ ಕಾಯುತ್ತಿದ್ದ ಅದಿತಿಗೆ ಬಿಟ್ಟುಬಿಡದೆ ರಾಹುಲ್ ನೆನಪಾಗುತ್ತಿದ್ದ.
ಇದೆಲ್ಲಾ ಎಲ್ಲಿಂದ ಪ್ರಾರಂಭವಾಗಿದ್ದು? ಅವಳೇ ಒಂದು ಕ್ಷಣ ಗೊಂದಲಕ್ಕೀಡಾದಳು. ಕಳೆದ ವರ್ಷ ಒಂದು ಲೇಟ್ ನೈಟ್ ಪಾರ್ಟಿಯಲ್ಲಿ ರಾಹುಲ್ ಆಕಸ್ಮಿಕ ಭೇಟಿಯಾಗಿದ್ದ ಪರಸ್ಪರರಲ್ಲಿ ಅದೆಷ್ಟು ಶೀಘ್ರವಾಗಿ ಸ್ನೇಹ ಮೂಡಿತ್ತು! ಹಾಗೆ ಸ್ನೇಹ ಪ್ರಾರಂಭವಾಗಿ ಬಲು ಬೇಗನೇ ಪ್ರೇಮಕ್ಕೆ ತಿರುಗಿತ್ತು. ಪ್ರೇಮ ಪಯಣದಲ್ಲಿ ಒಬ್ಬರಿಗೊಬ್ಬರು ಕೈಹಿಡಿದು ಹೋದದ್ದು ಎಲ್ಲಿಗೆ? ಯಾವ ಸ್ಥಳಕ್ಕೆ ಎಂದು ಅವಳಿಗೇ ನೆನಪಿಲ್ಲ. ಹಾಗೆ ಸುತ್ತುವಾಗೆಲ್ಲಾ ಇಬ್ಬರ ಕಣ್ಣುಗಳಲ್ಲಿ ಕಾಣುತ್ತಿದ್ದ ಆ ಸಂತಸ, ತೃಪ್ತಿ ಅದು ಯಾವ ಸಿರಿಸಂಪತ್ತಿಗಿಂತಲೂ ಕಡಿಮೆ ಇರಲಿಲ್ಲ. ಹೀಗೆ ಯೋಚಿಸುತ್ತಲೇ ಕಾರಿನ ಸೀಟಿಗೆ ಹಾಗೆ ಒರಗಿ ಕುಳಿತಳು.
ಪ್ರಾರಂಭದಲ್ಲಿ ಅದಿತಿಗೆ ಅರಿವಿರಲಿಲ್ಲ. ತಾನು ಇಷ್ಟರಮಟ್ಟಿಗೆ ರಾಹುಲ್‌ಗೆ ಮನಸೋತಿದ್ದೇನೆ, ಅವನಿಲ್ಲದ ತನ್ನ ಜೀವನ ಕಲ್ಪನೆಗೂ ಸಾಧ್ಯವಿಲ್ಲ ಎನ್ನುವುದು ತಿಳಿದದ್ದೇ. ಹಿಂದೊಮ್ಮೆ ಇದೇ ರೀತಿ ಅವನು ಬಿಸ್‌ನೆಸ್ ಟೂರ್‌ಗೆಂದು ಹೋದಾಗ. ಇಡೀ ವಾರ ಅವಳಿಗೆ ತಲೆಯೆಲ್ಲಾ ಖಾಲಿಯಾದಂತಾಗಿ ಏನು ಮಾಡಬೇಕೆಂದೇ ತಿಳಿಯದಾಯಿತು.
ಈ ಬಾರಿಯೂ ಹಾಗೇ ಆಗಿದೆ. ಈ ಬಾರಿ ರಾಹುಲ್ ತನಗೇನೂ ತಿಳಿಸದೆ ಹೊರಟುಹೋಗಿದ್ದ. ಮರುದಿನ ಫೋನ್ ಮಾಡಿ ನಾನು ಈ ಸಂಡೇ ವಾಪಸ್ಸಾಗುತ್ತಿದ್ದೇನೆ ಎಂದಾಗಲೇ ಅವನು ಮತ್ತೆ ಪ್ರವಾಸ ತೆರಳಿದ್ದಾನೆಂದು ತಿಳಿದದ್ದು. ಈಗ ಬರಲಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಕಾರಿನಲ್ಲಿ ಕುಳಿತೇ ನಿರ್ಧರಿಸಿದಳು.
ಕಾರಿನಲ್ಲಿ ಏಕೋ ಸೆಖೆ ಹೆಚ್ಚಾಗುತ್ತಿರುವಂತೆ ಅನಿಸಿತು. ಎ.ಸಿ. ಆನ್ ಆಗಿದ್ದರೂ ಇಲ್ಲದಂತಿದೆ ಎಂದು ಅದಿತಿ ಕಾರಿನ ಡೋರ್ ತೆರೆದು ಹೊರಗೆ ಬಂದು ನಿಂತಳು. ಅಕ್ಕಪಕ್ಕದಲ್ಲಿ ಬಹಳಷ್ಟು ಜನರು ಕೆಲವು ಮಕ್ಕಳೂ ಕಾರಿನಲ್ಲಿ ಕುಳಿತು, ನಿಂತು ಕಾಯುತ್ತಿದ್ದಾರೆ. ಬಹುತೇಕರಿಗೆ ತಮ್ಮ ಬಂಧುಗಳು, ಸ್ನೇಹಿತರು ಇದೀಗ ಬರುವವರೆನ್ನುವ ಕಾತುರದ ನಿರೀಕ್ಷೆಯಿಂದಿದ್ದರು. ಅದಿತಿ ತನ್ನಷ್ಟಕ್ಕೆ ತಾನೇ, ಇಲ್ಲಿ ನಾನೊಬ್ಬಳೇ ಇಲ್ಲವಲ್ಲ ಎಂದುಕೊಂಡಳು. ಮತ್ತೆ ರಸ್ತೆಯ ಉದ್ದಕ್ಕೂ ನಡೆದು ಹೊರಟಳು. ಅಲ್ಲಿ ಕೇವಲ ಒಂದೇ ಒಂದು ಪ್ರಾವಿಷನ್ ಸ್ಟೋರ್ ಇತ್ತು. ಅದಿತಿ ಅಲ್ಲಿ ಹೋಗಿ ಒಂದು ಮಿನರಲ್ ವಾಟರ್ ಬಾಟಲ್ ಖರೀದಿಸಿ ಪುನಃ ಕಾರಿನ ಬಳಿ ಬಂದು ನಿಂತಳು.
ಅಷ್ಟರಲ್ಲಿ ಏರ್‌ಪೋರ್ಟ್‌ನ ಎಗ್ಸಿಟ್‌ನಲ್ಲಿ ರಾಹುಲ್‌ನ ಆಕೃತಿ ಕಂಡಿತು. ಆದರೆ ರಾಹುಲ್ ಅದಿತಿಯನ್ನು ಗಮನಿಸಿರಲಿಲ್ಲ. ಅವನ ಪಕ್ಕದಲ್ಲಿ ಇನ್ನೊಬ್ಬ ಮಹಿಳೆ ಇದ್ದು ರಾಹುಲ್ ಅವಳ ತೋಳನ್ನು ಬಳಸಿ ನಡೆದು ಬರುತ್ತಿದ್ದ. ಕಡೆಗೆ ಇಬ್ಬರೂ ಆಲಿಂಗಿಸಿಕೊಂಡು ಶುಭ ವಿದಾಯ ಹೇಳುವಂತೆ ಪರಸ್ಪರರು ಕೈಕುಲಕಿ ತೆರಳುವವರಿದ್ದರು. ಇದನ್ನು ಗಮನಿಸಿದ ಅದಿತಿಗೆ ರಾಹುಲ್ ಬಗೆಗೆ ಅಪಾರ ಕೋಪ ಉಕ್ಕಿತು.
ರಾಹುಲ್ ಅವಳನ್ನು ಅತ್ತ ಕಳಿಸಿ ಅದಿತಿ ಇದ್ದ ಕಾರ್‌ನತ್ತ ಬಂದ. ಕಾರ್‌ನ ಡೋರ್ ತೆರೆದು ಒಳಗೆ ಕುಳಿತನೋ ಇಲ್ಲವೋ ಅಷ್ಟರಲ್ಲಿ ಅದಿತಿ ಕಾರ್‌ನ ಆ್ಯಗ್ಸಿಲೇಟರ್ ಒತ್ತಿ ಕಾರನ್ನು ಒಂದು ಸುತ್ತು ಭರ್ರನೆ ತಿರುಗಿಸಿದಳು. ರಾಹುಲ್ ಇನ್ನೂ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಿದ್ದವನು ಮುಂದಕ್ಕೆ ಮುಗ್ಗರಿಸಿ ಬೀಳುವಂತಾದ. ಮತ್ತೆ ಹೇಗೋ ಸಾವರಿಸಿ ಕುಳಿತುಕೊಂಡ. ನಂತರ ಅದಿತಿ ಕಾರ್ ಚಲಾಯಿಸುತ್ತಾ ಮುಂದೆ ಸಾಗುತ್ತಿದ್ದಳು. ಆದರೆ ಏನೊಂದೂ ಮಾತನಾಡಲಿಲ್ಲ. ಮುಖಕ್ಕೆ ಮುಖ ಕೊಡಲಿಲ್ಲ. “ಓಹೋ! ಏಕೋ ಸ್ವಲ್ಪ ಕೋಪ ಇದ್ದಂತಿದೆ,” ರಾಹುಲ್ ತನ್ನಷ್ಟಕ್ಕೆ ಎನ್ನುವಂತೆ ಹೇಳಿಕೊಂಡ. ನಂತರ, “ನನ್ನ ಟೂರ್‌ನ ಬಗ್ಗೆ ಏನೂ ಕೇಳಲೇ ಇಲ್ಲ?” ಎಂದು ಪ್ರಶ್ನಿಸಿದ.
ಅದಕ್ಕೆ ಅದಿತಿ `ಇದರಲ್ಲಿ ಕೇಳೋದಕ್ಕೇನಿದೆ? ನಿನ್ನಿಷ್ಟ ಬಂದ ಕಡೆ ಇಷ್ಟಪಟ್ಟವರ ಜೊತೆಯಲ್ಲಿ ಅಲೆಯೋಕೆ ಹೋಗಿದ್ದೆ. ನಾನೇ ನೋಡಲಿಲ್ವಾ…?’ ಮನದಲ್ಲಿಯೇ ಅಂದುಕೊಂಡಳು.
ಅವನ ಕಡೆ ತಿರುಗಿ ನೋಡದೆ ನೇರವಾಗಿ ರಸ್ತೆ ನೋಡಿಕೊಂಡು ಕಾರ್ ಡ್ರೈವ್ ಮಾಡುತ್ತಿದ್ದಳು. ಹೀಗಾಗಿ ಇಬ್ಬರಿಗೂ ಮುಖದ ಭಾವನೆ ಪರಸ್ಪರ ತಿಳಿಯಲಿಲ್ಲ.
“ಸರಿ, ನೀನು ಹೇಗಿದ್ದೀಯಾ?” ರಾಹುಲ್ ಕೇಳುತ್ತಲೇ ಕಾರು ಓಡಿಸುತ್ತಿದ್ದ ಅದಿತಿ ಒಮ್ಮೆ ತಿರುಗಿ ನೋಡಿದಳು. ಅವನ ಮುಖದಲ್ಲಿ ದೊಡ್ಡ ನಗುವಿತ್ತು. ಅವಳು ಮತ್ತೆ ತುಸು ದೂರ ಕಾರು ಚಲಾಯಿಸಿದ ನಂತರ ಬ್ರೇಕ್‌ನ್ನು ಬಲವಾಗಿ ಒತ್ತಿ ಕಾರನ್ನು ರಸ್ತೆ ಬದಿಗೆ ತಳ್ಳಿ ನಿಲ್ಲಿಸಿದಳು. ಇದರಿಂದ ಪುನಃ ರಾಹುಲ್‌ಗೆ ಕುಳಿತಲ್ಲೇ ಮುಗ್ಗರಿಸಿ ಬೀಳುವಂತಾಗಿತ್ತು. ಮತ್ತೆ ಡೋರ್ ತೆಗೆದು ಹೊರಗಿಳಿದ ಅದಿತಿ ರಾಹುಲ್‌ಗೂ ಇಳಿಯುವಂತೆ ಸೂಚಿಸಿದಳು.
“ಏನಾಗಿದೆ ನಿನಗೆ? ಮೂರು ದಿನಗಳ ನಂತರ ನಾವಿಬ್ಬರೂ ಭೇಟಿ ಆಗುತ್ತಿದ್ದೇವೆ. ಆ ಸಂತೋಷ ನಿನ್ನಲ್ಲಿ ಕಾಣುತ್ತಲೇ ಇಲ್ಲ….? ನಿನ್ನ ತಂದೆತಾಯಿ ಏನಾದರೂ ಹೇಳಿದರೆ?” ರಾಹುಲ್ ಕೇಳಿದ.
“ನಿನ್ನೊಂದಿಗಿದ್ದರಲ್ಲ ಆ ಹೆಂಗಸು…. ಆಕೆ ಯಾರು…..?” ಅದಿತಿ ತಾನು ಕೇಳಬಹುದೆ ಎಂದು ಯೋಚಿಸುವುದಕ್ಕೂ ಮುನ್ನವೇ ಪ್ರಶ್ನೆ ಹೊರಬಿದ್ದಿತ್ತು. ರಾಹುಲ್ ಅದಿತಿಯಿಂದ ಈ ಪ್ರಶ್ನೆ ನಿರೀಕ್ಷಿಸಿಯೇ ಇರಲಿಲ್ಲ.
`ನಾನು ಇವನಲ್ಲಿಟ್ಟ ನಂಬಿಕೆ ಸುಳ್ಳಾಗಲಿದೆಯೇ? ರಾಹುಲ್ ಏಕೆ ಆ ಮಹಿಳೆಯೊಂದಿಗೆ ಹಾಗೆ ವರ್ತಿಸಿದ?’ ಅದಿತಿ ತನ್ನಷ್ಟಕ್ಕೆ ಎಂದುಕೊಂಡಳು.
`ಓ….. ಅದಿತಿ ಏಕೆ ಈ ರೀತಿ ಬದಲಾದಳು? ನಾನು ನನ್ನ ಬಾಳಲ್ಲಿ ಒಟ್ಟಾಗಿ ಇರಬೇಕೆಂದು ಬಯಸಿದ ಅದಿತಿಯಿಂದ ಇಂತಹ ಪ್ರಶ್ನೆಯೇ? ಇಷ್ಟೇನಾ ಅವಳಿಗೆ ನನ್ನ ಮೇಲಿದ್ದ ನಂಬಿಕೆ?’ ರಾಹುಲ್ ತನ್ನ ಮನದಲ್ಲಿಯೇ ಯೋಚಿಸುತ್ತಿದ್ದ. ಆದರೆ ಇಬ್ಬರೂ ಏನೊಂದೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.
ಕಡೆಗೂ ರಾಹುಲ್ ಮೌನ ಮುರಿದು, “ಅದಿತಿ ನಿನಗೆ ನನ್ನ ಬಗ್ಗೆ ಇಷ್ಟು ಸಂದೇಹವೇ? ಅವಳು ನನ್ನ ಸಹೋದ್ಯೋಗಿ ರೀಮಾ. ನಮ್ಮ ಸಂಸ್ಥೆಯಲ್ಲಿ ಅಡ್ವರ್‌ಟೈಸಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಇದ್ದಾಳೆ. ಈ ಪ್ರವಾಸಕ್ಕೆ ಕಾರಣವೇ ಅವಳಿಂದ ಅಪ್ರೂವ್ ಆಗಿದ್ದ ಪ್ರಾಜೆಕ್ಟ್. ವಿಮಾನದಲ್ಲಿ ಇಳಿದದ್ದೇ ನಾನು ನಿನ್ನನ್ನು ಗಮನಿಸಿದೆ. ರೀಮಾಗೂ ನಿನ್ನನ್ನು ತೋರಿಸಿ, `ಅವಳೇ ನಾನು ಪ್ರೀತಿಸುತ್ತಿರುವ ಹುಡುಗಿ ಅದಿತಿ,’ ಎಂದಾಗ ನಿಮ್ಮ ಜೀವನ ಉತ್ತಮವಾಗಿರಲಿ ಎಂದು ಶುಭ ಕೋರಿ ನನ್ನನ್ನೊಮ್ಮೆ ಆಲಿಂಗಿಸಿದಳು. ಇದನ್ನು ಕಂಡು ನೀನು ನನ್ನನ್ನು ಈ ಪ್ರಶ್ನೆ ಕೇಳಿದೆಯಾ….?” ಎಂದ.
ಈಗ ಅದಿತಿ ಮುಖದಲ್ಲಿ ಮಂದಹಾಸ ಮೂಡಿತು, “ಇಲ್ಲ. ನಾನೂ ಈ ಪ್ರಶ್ನೆ ಕೇಳಬಾರದಿತ್ತು. ನನಗೂ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆದರೆ ನಾನು ತಡೆಯಲಾರದೆ ಕೇಳಿದೆ. ಬೇಸರವಾಗಿದ್ದರೆ ಕ್ಷಮಿಸು….” ಎಂದು ಅದಿತಿ ತಾನಾಗಿ ರಾಹುಲ್ ಬಳಿ ಬಂದು ಅವನ ಎದೆಗೆ ತನ್ನ ಮುಖ ಹುದುಗಿಸಿಕೊಂಡಳು. ರಾಹುಲ್ ಸಹ ಪ್ರೀತಿಯಿಂದ ಅವಳನ್ನು ನೇವರಿಸಿ, “ಐ ಲವ್ ಯೂ…..” ಎಂದ.
ಅದಿತಿ “ಐ ಲವ್ ಯೂ ಮೋರ್!” ಎಂದಳು.
ಇಬ್ಬರಿಗೂ ಒಬ್ಬರನ್ನೊಬ್ಬರು ಎಂದೂ ಅಗಲು ಸಾಧ್ಯವಿಲ್ಲ ಎನ್ನುವ ಅನುಭವವಾಗಿತ್ತು. ತಮ್ಮದು ಎಂದಿಗೂ ಬಿಡಿಸಲಾರದ ಬಂಧನ ಎಂದು ಇನ್ನೊಮ್ಮೆ ಅರಿವಾಗಿತ್ತು.