ಕಥೆ – ಮಾಲತಿ ಮೂರ್ತಿ 

“ನೀವು ನಿಮ್ಮ ನಿಮ್ಮ ಸೀಟ್‌ ಬೆಲ್ಟ್ ಗಳನ್ನು ಕಟ್ಟಿಕೊಳ್ಳಿರಿ. ವಿಮಾನ ಇನ್ನೇನು ಹೊರಡಲು ಸಿದ್ಧವಾಗಿದೆ,” ಬೆಂಗಳೂರಿನಿಂದ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಹೊರಟಿದ್ದ ಏರ್‌ ಇಂಡಿಗೋ ವಿಮಾನದಲ್ಲಿದ್ದ ಪರಿಚಾರಕಿ ಮೈಕ್‌ನಲ್ಲಿ ಅನೌನ್ಸ್ ಮೆಂಟ್‌ ಮಾಡಿದಳು.

ಸಂಜನಾ ಏಕೋ ಮಂಕಾಗಿದದ್ದನ್ನು ಗಮನಿಸಿದ ಗೌರವ್, “ನಿನಗೇಕೋ ಆಯಾಸವಾದಂತೆ ಕಾಣುತ್ತಿದೆ. ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೋ, ಇಳಿಯಬೇಕಾದರೆ ನಾನೇ ಎಬ್ಬಿಸುವೆ,” ಎಂದಾಗ ಸಂಜನಾ ಕಣ್ಣನ್ನೇನೋ ಮುಚ್ಚಿದಳು. ಆದರೆ ಅವಳಿಗೆ ಗೌರವ್ ಮತ್ತು ಅವರ ಮನೆಯವರ ಮುಖಗಳೇ ಎದುರು ಬಂದವು. ಸುರೇಶ್‌ ಮತ್ತು ಸುಲೋಚನಾ ಕುಟುಂಬಕ್ಕೆ ಸೇರಿದ ತಾನೇ ಧನ್ಯಳೆಂಬ ಭಾವನೆ ಅವಳಲ್ಲಿ ಮೂಡಿತ್ತು. ಸಂಜನಾ ತನ್ನಲ್ಲಿಯೇ ಆಲೋಚಿಸುತ್ತಿದ್ದಳು, ತಾನು ಇಂತಹ ಕುಟುಂಬಕ್ಕೆ ಸದಸ್ಯೆಯಾಗಿ ಬಂದದ್ದೇ ನನ್ನ ಪುಣ್ಯ. ನಾನು ಚಿಕ್ಕವಳಿದ್ದಾಗ ನನ್ನನ್ನು ಅವರ ಸಂಬಂಧಿಯೊಬ್ಬರಿಂದ ದತ್ತು ತೆಗೆದುಕೊಂಡಿದ್ದ ರಂತೆ. ಆದರೆ ನನ್ನ ಅಜ್ಜ, ಅಜ್ಜಿಯಾದಿಯಾಗಿ ಯಾರೂ ನನ್ನನ್ನು ಹೊರಗಿನವಳೆನ್ನುವಂತೆ ಕಂಡದ್ದೇ ಇಲ್ಲ. ಬದಲಾಗಿ ಎಲ್ಲರಿಗಿಂತ ತುಸು ಹೆಚ್ಚೇ ಎನ್ನಬಹುದಾದ ಪ್ರೀತಿಯನ್ನು ಈ ಕುಟುಂಬ ನನಗೆ ನೀಡಿದೆ.

ಸುರೇಶ್‌ ಮತ್ತು ಸುಲೋಚನಾ ದಂಪತಿಗಳಿಗೆ ನಾಲ್ವರು ಮಕ್ಕಳು. ಅವರಲ್ಲಿ ದೊಡ್ಡವಳಾದ ರೇಣುಕಾ ಮುಂಬೈನಲ್ಲಿದ್ದಳು. ಎರಡನೇ ಮಗಳು ಪ್ರಿಯಾಂಕಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ಅಲ್ಲದೆ ಇನ್ನಿಬ್ಬರು ಗಂಡು ಮಕ್ಕಳು ತಂದೆಯ ವ್ಯವಹಾರಕ್ಕೆ ಸಹಾಯಕರಾಗಿದ್ದರು. ಸಂಜನಾಳನ್ನು ಕಂಡರೆ ಅವರೆಲ್ಲರಿಗೂ ಅಕ್ಕರೆ. ಅದರಲ್ಲಿಯೂ ರೇಣುಕಾಗಂತೂ ತುಂಬಾ ಪ್ರೀತಿ. ಅವಳು ಮುಂಬೈನಿಂದಲೇ ದಿನ ಕರೆ ಮಾಡಿ ಸಂಜನಾಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಅವಳ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳುತ್ತಿದ್ದಳು.

ಇನ್ನೂ ಅಜಯ್‌ ಮತ್ತು ಅತುಲ್ ಚಿಕ್ಕಪ್ಪಂದಿರಂತೂ ಸಂಜನಾಳನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಅವರಿಗೆ ಮಕ್ಕಳಿದ್ದರೂ ಕೂಡ ಸಾಧ್ಯವಾದಾಗೆಲ್ಲಾ ನನ್ನನ್ನು ಶಾಲೆಗೆ ಕಳಿಸುವುದು, ಕರೆತರುವುದು ಮಾಡುತ್ತಿದ್ದರು. ಅವರ ಮಕ್ಕಳಾದ ಮಾನಸಿ ಮತ್ತು ಮಂಜರಿ ಸಹ ನನ್ನ ಆತ್ಮೀಯ ಒಡನಾಡಿಗಳಾಗಿದ್ದರು.

ಸಂಜನಾಗೆ, ಶೈಲಜಾ ಚಿಕ್ಕಮ್ಮ ಎಂದರೆ ಬಲು ಪ್ರೀತಿ. ಅವಳು ಯಾವಾಗಲೂ ಶೈಲಜಾ ಮತ್ತು ಅವಳ ಮಕ್ಕಳೊಂದಿಗೆ ಶಾಪಿಂಗ್‌, ಪಿಕ್‌ನಿಕ್‌, ಈಟ್‌ಔಟ್‌ ಎಂದೆಲ್ಲ ಹೊರಟುಬಿಡುತ್ತಿದ್ದಳು. ಹೀಗಾಗಿ ಶೈಲಜಾ ಸಂಜನಾಳ ಬಾಲ್ಯವನ್ನು ಇನ್ನಷ್ಟು ವರ್ಣಮಯವಾಗಿಸಿದ್ದಳು.

ಇನ್ನು ಇವರೆಲ್ಲರಿಗಿಂತಲೂ ಅತ್ಯಂತ ಮುಖ್ಯವಾದವರೆಂದರೆ ಕಿರಣ್‌ ಅಂಕಲ್. ಇವರು ನನ್ನ ಕುಟುಂಬಕ್ಕೆ ಸೇರಿದವರಲ್ಲ. ಆದರೆ ಹಿಂದಿನಿಂದಲೂ ನಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ನಮ್ಮ ಅಜಯ್‌ ಚಿಕ್ಕಪ್ಪನ ಸ್ನೇಹಿತ. ಇವರು ನನ್ನನ್ನು ನೋಡಲು ಆಗಾಗ ಬರುತ್ತಿದ್ದರು. ನನ್ನ ವಿದ್ಯಾಭ್ಯಾಸ ಕುರಿತಂತೆ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾದಲ್ಲಿ ಇವರು ಪ್ರಮುಖ ಪಾತ್ರವಹಿಸುತ್ತಿದ್ದರು. ಮುಂದೆ ನಾನು ಮೈಕ್ರೋ ಬಯಾಲಜಿ ಬಗ್ಗೆ ವ್ಯಾಸಂಗ ಮಾಡಬೇಕೆನ್ನುವುದಕ್ಕೂ ಇವರೇ ಕಾರಣ. ಜೊತೆಗೆ ಗೌರವ್ ನನ್ನು ಮದುವೆಯಾಗಬೇಕೆಂದು ನಿರ್ಧರಿಸಿದಾಗಲೂ ನನಗೆ ಕಿರಣ್‌ ಅಂಕಲ್ ಫುಲ್ ಸಪೋರ್ಟ್‌ ಮಾಡಿದ್ದರು. ಆಗೆಲ್ಲ ನನಗೆ ನನ್ನ ತಂದೆ ಇದ್ದಿದ್ದರೆ ಇವರಂತೆ ಇರುತ್ತಿದ್ದರೇನೋ? ಎನಿಸುತ್ತಿತ್ತು ಜೊತೆಗೆ ಇವರೇಕೆ ಒಬ್ಬರೇ ಇದ್ದಾರೆಂದು ಕೇಳಬೇಕೆನಿಸುತ್ತಿತ್ತು. ಇಂತಹ ಪ್ರೀತಿ ತೋರಿಸುವವರನ್ನೆಲ್ಲ ಬಿಟ್ಟು ನಾನು ಗೌರವ್ ನೊಂದಿಗೆ ಅಮೆರಿಕಾಗೆ ಹೊರಟಿರುವುದು ನನಗೆ ಬಹಳ ಬೇಸರವೆನಿಸುತ್ತಿದೆ. ಇದುವರೆಗೂ ನನ್ನದಾಗಿದ್ದ ಅಜ್ಜ ಅಜ್ಜಿಯವರೊಂದಿಗಿನ ಬೆಳಗಿನ ವಾಕಿಂಗ್‌, ಸೋದರ, ಸೋದರಿಯರೊಡನೆ ಆಟ, ಜಗಳ, ಕಿರಣ್‌ ಅಂಕಲ್‌ರ ಭೇಟಿ ಎಲ್ಲವನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸಲಾರಂಭಿಸಿತು.

ಕೆಲವು ವರ್ಷಗಳ ಹಿಂದೆ ನಾನೊಮ್ಮೆ ಬಸ್‌ನಿಂದ ಬಿದ್ದು ಸ್ವಲ್ಪದರಲ್ಲಿ ದೊಡ್ಡ ಅಪಾಯದಿಂದ ಪಾರಾಗಿದ್ದೆ. ಅಷ್ಟೇನೂ ದೊಡ್ಡ ಅಪಾಯವಲ್ಲದಿದ್ದರೂ ರೇಣುಕಾ ಆಂಟಿ ಮುಂಬೈನಿಂದ ಬಂದು ನನ್ನನ್ನು ಕಂಡಿದ್ದಲ್ಲದೆ, ಕೆಲವು ದಿನ ನನ್ನೊಡನೆ ಇದ್ದರು. ಕಿರಣ್‌ ಅಂಕಲ್ ಸಹ ನನಗೆ ಪ್ರತಿನಿತ್ಯ ಬಂದು ಧೈರ್ಯ ಹೇಳಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರೇಣುಕಾ ಆಂಟಿಯೊಂದಿಗೆ ಅತ್ಯಂತ ನಿಕಟವಾಗಿ ಬೆರೆಯಲು ನನಗೆ ಅವಕಾಶ ಸಿಕ್ಕಿತ್ತು ತಾನು ಕಿರಣ್‌ ಅಂಕಲ್ ಮನೆಗೆ ಹೋಗುತ್ತಿದ್ದ ಕ್ಷಣಗಳನ್ನು ಸಂಜನಾ ನೆನಪಿಸಿಕೊಂಡಳು. ಕಿರಣ್‌ ಅಂಕಲ್ ಒಂಟಿಯಾಗಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅವರ ಮನೆಯ ಗೋಡೆಗಳ ಮೇಲಿನ ಹಳೆಯ ಬಾಲ್ಯದ ನೆನಪಿನ ಚಿತ್ರಗಳಿದ್ದವು. ನನಗೆ ಅವನ್ನು ಕಂಡು ಅತ್ಯಂತ ಅಚ್ಚರಿ ಮತ್ತು ಸಂತೋಷವಾಗುತ್ತಿತ್ತು.

ಒಮ್ಮೆ ಕಿರಣ್‌ ಅಂಕಲ್‌ಗೆ ಆರೋಗ್ಯ ಹದಗೆಟ್ಟ ಸಮಯದಲ್ಲಿ ನಾನು ಅವರನ್ನು ನೋಡಲು ಹೋಗಿದ್ದೆ. ಆಗ ಕೆಲವು ಪುಸ್ತಕಗಳನ್ನು ಓದಿ ಅವರ ಬೇಸರ ನಿವಾರಿಸಿದ್ದೆ. ಆಗೆಲ್ಲ ಇವರೇಕೆ ಒಂಟಿಯಾಗಿದ್ದಾರೆ? ಹೀಗೆ ಆರೋಗ್ಯ ಕೈಕೊಟ್ಟಾಗ ನಾವಿಲ್ಲದೆ ಹೋದಲ್ಲಿ ಇವರನ್ನು ಯಾರು ನೋಡಿಕೊಳ್ತುತ್ತಾರೆ ಎನಿಸುತ್ತಿತ್ತು.

ಎಷ್ಟೋ ಬಾರಿ ನನ್ನ ಅಜ್ಜಿಯ ಬಳಿ ನನ್ನ ನಿಜವಾದ ತಂದೆತಾಯಿ ಯಾರೆನ್ನುವುದನ್ನು ಕೇಳಬೇಕೆಂದುಕೊಂಡಿದ್ದೆ. ಆದರೆ ಹಾಗೆ ಕೇಳಬೇಕೆನ್ನುವ ಸಮಯದಲ್ಲಿ ಏಕೋ ಏನೋ ಇದು ತಕ್ಕ ಸಮಯವಲ್ಲ ಎನಿಸುತ್ತಿತ್ತು. ಅಲ್ಲದೆ, ನನಗೆ ನೀನು ಹೊರಗಿನವಳು ಎಂದು ಯಾರೂ ಒಮ್ಮೆಯೂ ಹೇಳಿರಲಿಲ್ಲ. ಹಾಗೆ ನಡೆದುಕೊಂಡಿರಲೂ ಇಲ್ಲ….

ಸಂಜನಾ ಗೌರವ್ ನನ್ನು ಮೊದಲು ನೋಡಿದ್ದು ಒಂದು ಮದುವೆ ಸಮಾರಂಭದಲ್ಲಿ. ಆಗಲೇ ಇಬ್ಬರಿಗೂ ಪರಿಯಚಯವಾಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಮುಂದೆ ಇಬ್ಬರೂ ಮದುವೆಯಾಗಬೇಕೆಂದು ತೀರ್ಮಾನಿಸಿದಾಗ ಇಬ್ಬರ ಜಾತಿ ಬೇರೆ ಬೇರೆ ಎನ್ನುವುದು ತಿಳಿಯಿತು. ನಂತರ ನಾನು ನನ್ನ ಮನೆಯಲ್ಲಿ ಗೌರವ್ ವಿಚಾರ ತಿಳಿಸಿದಾಗ ನನ್ನ ಕುಟುಂಬದವರು ತಕ್ಷಣಕ್ಕೆ ಒಪ್ಪಿಕೊಂಡರೂ ಅಲ್ಲಿ ಕಿರಣ್‌ ಅಂಕಲ್ ಪಾತ್ರ ಪ್ರಮುಖವಾಗಿತ್ತು. ಅವರು ಮನೆಯವರನ್ನೆಲ್ಲಾ ಒಪ್ಪಿಸಿ ಆ ಮೂಲಕ ನನ್ನ ಸಂತಸದಾಯಕ ಬದುಕಿಗೆ ಮುನ್ನುಡಿ ಬರೆದಿದ್ದರು.

ಅತ್ತ ಗೌರವ್ ಮನೆಯವರು ನಮ್ಮ ಮದುವೆಗೆ ಒಪ್ಪಲು ಕೆಲವು ದಿನಗಳನ್ನು ತೆಗೆದುಕೊಂಡರು. ಆದರೂ ಅಂತಿಮವಾಗಿ ಎಲ್ಲ ಸುಸೂತ್ರವಾಗಿ ಮುಗಿದು ನಾನೀಗ ಗೌರವ್ ನೊಂದಿಗೆ ಅಮೆರಿಕಾಗೆ ಹೊರಟಿದ್ದೇವೆ ಎನ್ನುವುದೇ ನನ್ನಲ್ಲಿ ಒಂದು ರೀತಿಯ ತೃಪ್ತಿ ತಂದಿದೆ.

ಸಂಜನಾ ಗೌರವ್ ನತ್ತ ತಿರುಗಿದಳು. ಅವನಾಗಲೇ ಕಣ್ಮುಚ್ಚಿ ನಿದ್ರಿಸುತ್ತಿದ್ದ. ಅವಳು ಓದಲೆಂದು ಪುಸ್ತಕವೊಂದನ್ನು ತನ್ನ ಬ್ಯಾಗ್‌ನಿಂದ ತೆರೆಯುವಾಗ ಅವಳ ಗಮನ ಅದರಲ್ಲಿದ್ದ ಒಂದು ಎನ್ವಲಪ್‌ ಕವರ್‌ ಮೇಲೆ ಹೋಯಿತು. ಹೊರಡುವ ಕಡೇ ಕ್ಷಣದಲ್ಲಿ ಅಜ್ಜಿ ಕೊಟ್ಟಿದ್ದ ಈ ಕವರ್‌ನ್ನು ನೋಡಿದ ಸಂಜನಾ ಅದನ್ನು ಕೈಗೆತ್ತಿಕೊಂಡಳು.

“ನೀನು ವಿಮಾನದಲ್ಲಿ ಕುಳಿತ ನಂತರ ಇದನ್ನು ಓದು. ಓದಿದ ಬಳಿಕ ಯಾವ ಕಾರಣಕ್ಕೂ ಭಾವಾವೇಶಕ್ಕೆ ಒಳಗಾಗಬೇಡ. ಗೌರವ್ ಗೆ ಈ ಬಗ್ಗೆ ಏನೂ ತಿಳಿಸಬೇಡ,” ಎಂದು ಹೇಳಿ ಕವರ್‌ ಕೊಟ್ಟಿದ್ದರು ಅಜ್ಜಿ.

ಅಂತಹದು ಏನಿದೆ ಈ ಕವರ್‌ನಲ್ಲಿ? ಗೌರವ್ ಗೆ ಹೇಳಬಾರದ ವಿಚಾರಗಳು ಏನಿದೆ? ಸಂಜನಾಗೆ ಕುತೂಹಲ ಉಂಟಾಯಿತು. ಅವಳು ಪತ್ರವನ್ನು ಬಿಡಿಸಿ ಓದತೊಡಗಿದಳು.

“ಸಂಜನಾ, ನೀನಿದನ್ನು ಓದಿ ಯಾವುದೇ ಭಾವೋದ್ವೇಗಕ್ಕೆ ಒಳಗಾಗಬೇಡ ಮತ್ತು ಯಾರ ಬಗ್ಗೆಯೂ ಕೆಟ್ಟ ಅಭಿಪ್ರಾಯಕ್ಕೆ ಬರಬೇಡ. ಹಲವು ವರ್ಷಗಳ ಹಿಂದೆ ನಾವು ದಾವಣಗೆರೆಯಲ್ಲಿ ನೆಲೆಸಿದ್ದೆವು. ನನ್ನ ದೊಡ್ಡ ಮಗಳು ರೇಣುಕಾ ಹುಟ್ಟಿದ್ದು ಅಲ್ಲಿಯೇ. ಆಗ ಅವಳು ಎಲ್ಲರ ಪಾಲಿನ ಕಣ್ಮಣಿಯಾಗಿದ್ದಳು. ಅವಳ ಆಟ, ಪಾಠಗಳನ್ನು ನೋಡುವುದೇ ಒಂದು ಸುಂದರ ಅನುಭವ. ಶಾಲೆಯಲ್ಲಿಯೂ ಸಹ ಆಕೆ ಜಾಣೆ. ಟೀಚರ್‌ಗಳೆಲ್ಲರೂ ಅವಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದರು. ಇದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿತ್ತು. ಹೀಗೆ ಶಾಲಾ ವಿದ್ಯಾಭ್ಯಾಸ ಮುಗಿಸಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಪದವಿ ವ್ಯಾಸಂಗಕ್ಕೆ ಅವಳನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿದೆ. ಎರಡು ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದಳು. ಅಲ್ಲಿಯೂ ಅವಳು ಉತ್ತಮ ಅಂಕ ಗಳಿಸಿ ಉತ್ತೀರ್ಣಳಾಗಿ ನಮಗೆಲ್ಲ ಸಂತಸ ನೀಡಿದ್ದಳು.

“ಹೀಗಿರುವಾಗ ಒಮ್ಮೆ ಅವಳು ಊರಿಗೆ ಬಂದಾಗ ಮುಖ ಕಳೆಗುಂದಿತ್ತು. ಅವಳು ಹೇಳಿದ ವಿಚಾರ ಕೇಳಿ ನಮಗೆಲ್ಲಾ ಶಾಕ್‌ ಆಯಿತು. ಕಾಲೇಜಿನಲ್ಲಿ ಅವಳು ಒಬ್ಬನನ್ನು ಪ್ರೀತಿಸಿದ್ದಳು. ಅನ್ಯಜಾತಿಯವನಾಗಿದ್ದ ಅವನಿಂದ ಇವಳು ಗರ್ಭಿಣಿಯಾಗಿದ್ದಳು. ನಮ್ಮ ಮನೆಯಲ್ಲಿ ಆ ದಿನವೆಲ್ಲಾ ಗಂಭೀರ ಮೌನದ ವಾತಾವರಣ ನಿರ್ಮಾಣವಾಗಿತ್ತು. ನನಗಾಗಲೇ ಇನ್ನೊಬ್ಬ ಮಗಳಿದ್ದಳು. ಊರಿನಲ್ಲಿ ನಮ್ಮ ಕುಟುಂಬಕ್ಕೆ ಇದ್ದ ಗೌರವವೆಲ್ಲಾ ಇವಳ ಕಾರಣದಿಂದ ಮಣ್ಣುಗೂಡುವಂತಾಗಿತ್ತು. ಹೀಗಾಗಿ ನಾವು ಇವಳನ್ನು ಆ ಹುಡುಗನೊಂದಿಗೆ ಮದುವೆ ಮಾಡಿಸಲು ನಿರಾಕರಿಸಿದ್ದಲ್ಲದೆ, ನನ್ನ ತಾಯಿಯ ಮನೆಯಿದ್ದ ಹಳ್ಳಿಗೆ ಬಿಟ್ಟು ಬಂದೆವು. ಹುಡುಗನ ಮನೆಗೆ ಹೋಗಿ ಅವನನ್ನು ಪ್ರತ್ಯೇಕವಾಗಿ ಕರೆದು ನಮ್ಮ ಸಂಬಂಧ ಸಮಸ್ಯೆಗಳನ್ನೆಲ್ಲಾ ಅವನಿಗೆ ತಿಳಿಸಿ ಅವನನ್ನು ಒಪ್ಪಿಸಿದೆವು.

“ಇದಾದ ಕೆಲವು ತಿಂಗಳಿನಲ್ಲಿ ರೇಣುಕಾ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮುಂದೆ ರೇಣುಕಾ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಅವಳಿಗೆ ನಮ್ಮ ಜಾತಿಯ ಒಳ್ಳೆಯ ಹುಡುಗನೊಂದಿಗೆ ಮದುವೆ ಮಾಡಿ ಮುಂಬೈಗೆ ಕಳುಹಿಸಿದೆವು. ಇಷ್ಟಾದ ನಂತರ ನಾವು ದಾವಣಗೆರೆಯಿಂದ ಬೆಂಗಳೂರಿಗೆ ನಮ್ಮ ವಾಸ್ತವ್ಯವನ್ನು ಬದಲಾಯಿಸಿದೆವು.

“ಸಂಜನಾ, ಇನ್ನು ಮುಂದಿನದನ್ನು ಓದಿ ನಿನಗ್ಯಾವ ಭಾವನೆ ಬರುವುದೋ ನಾನು ಅರಿಯಲಾರೆ. ನಾವು ಕೆಲವೇ ದಿನಗಳ ನಂತರ ಆ ಪುಟ್ಟ ಹುಡುಗಿ, ರೇಣುಕಾಳ ಮಗುವನ್ನು ನಮ್ಮ ಮನೆಗೆ ತಂದೆವು. ಅವಳನ್ನು ನಮ್ಮ ಮನೆ ಮಗಳಂತೆಯೇ ಸಾಕಿ ಬೆಳೆಸಿದೆವು. ನಾವಷ್ಟೇ ಅಲ್ಲ ಮನೆಯವರೆಲ್ಲರೂ ಆ ಪುಟ್ಟ ಹುಡುಗಿಯನ್ನು ತಮ್ಮ ಮಗಳೆಂದೇ ಕಂಡರು. ಈಗ ನಿನಗೆ ಸ್ಪಷ್ಟ ಕಲ್ಪನೆ ಬಂದಿರಬಹುದು. ಆ ಪುಟ್ಟ ಹುಡುಗಿ ನೀನೇ! ನಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಈ ಸತ್ಯ ತಿಳಿದಿದೆ. ಅವರೆಲ್ಲರೂ ನಿನ್ನನ್ನು ಒಪ್ಪಿಕೊಂಡು ಪ್ರೀತಿಯಿಂದ ಕಂಡರು, ಕಾಣುತ್ತಿದ್ದಾರೆ.

“ಇನ್ನೂ ಕಿರಣ್‌ ಅಂಕಲ್. ಅವನೇ ನಿನ್ನ ತಂದೆ! ಅವನಿಂದಿಗೂ ರೇಣುಕಾಳನ್ನು ಮರೆತಿಲ್ಲ. ಇದೇ ಕಾರಣಕ್ಕೆ ಅವನು ಬೇರೆ ಮದುವೆಯಾಗದೆ ಉಳಿದಿದ್ದಾನೆ!

“ಸಂಜನಾ, ದಯವಿಟ್ಟು ಯಾರನ್ನೂ ತಪ್ಪಾಗಿ ಭಾವಿಸಬೇಡ. ಯಾರ ಬಗೆಗೂ ಸಿಟ್ಟಾಗಬೇಡ. ರೇಣುಕಾ ಮತ್ತು ಕಿರಣ್‌ ಇಬ್ಬರೂ ನಿನ್ನ ಶಾಲಾ ವಿದ್ಯಾಭ್ಯಾಸದಿಂದ ಹಿಡಿದು ಮದುವೆಯವರೆಗೂ ಪ್ರತಿಯೊಂದರ ಬಗ್ಗೆಯೂ ಅತ್ಯಂತ ಮುತುವರ್ಜಿ ವಹಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ರೇಣುಕಾಳಿಗಿಂತ ಕಿರಣ್‌ ನಿನ್ನನ್ನು ಬಹಳವೇ ಮಿಸ್‌ ಮಾಡಿಕೊಳ್ಳುತ್ತಿದ್ದಾನೆ. ಅವನು ಒಂಟಿಯಾಗಿರುವ ಕಾರಣ ನಿನ್ನ ನೆನಪು ಅವನಿಗೆ ಸದಾ ಕಾಡುತ್ತಿರುತ್ತದೆ. ಹೀಗಾಗಿ ನೀನು ಅಲ್ಲಿಂದ ಆಗಾಗ ಅವನಿಗೆ ಪತ್ರ ಬರೆಯುತ್ತಿರು, ಕಾಲ್ ಮಾಡುತ್ತಿರು.

“ಇನ್ನೊಂದು ವಿಚಾರವೆಂದರೆ ಈ ವಿಷಯಗಳನ್ನು ಯಾವ ಕಾರಣಕ್ಕೂ ಈಗಲೇ ಗೌರವ್ ಗೆ ಹೇಳಬೇಡ. ಮುಂದೆ ನಿಧಾನವಾಗಿ ತಿಳಿಯಲಿ.”

ಸಂಜನಾಳ ಕಣ್ಣುಗಳಿಂದ ನೀರು ಧಾರೆಯಾಗಿ ಇಳಿದು ಕೆನ್ನೆಗಳು ತೊಯ್ದುಹೋಗಿದ್ದವು. ಇದು ದುಃಖದ ಕಣ್ಣೀರಲ್ಲ ಬದಲಾಗಿ ಆನಂದಬಾಷ್ಪ! ರೇಣುಕಾ ಆಂಟಿ, ಕಿರಣ್‌ ಅಂಕಲ್ ತನ್ನ ತಂದೆತಾಯಿ ಎಂದು ತಿಳಿದ ಸಂಜನಾಗೆ ಸಂತಸ ತಾಳಲಾಗಲಿಲ್ಲ.

ಅಜ್ಜಿಯ ಇಚ್ಛೆಯಂತೆ ಈ ವಿಷಯವನ್ನು ಈಗಲೇ ಗೌರವ್ ಗೆ ತಿಳಿಸುವ ಅಗತ್ಯವಿಲ್ಲ. ಬಹುಶಃ ಮುಂದೊಂದು ದಿನ ಅವರೇ ಎಲ್ಲ ವಿಚಾರಗಳನ್ನು ಹೇಳಬಹುದು ಎಂದುಕೊಂಡ ಸಂಜನಾ ಕಣ್ಣುಗಳನ್ನು ಮುಚ್ಚಿಕೊಂಡಳು. ಗಾಢವಾಗಿ ಉಸಿರೆಳೆದುಕೊಳ್ಳುತ್ತಾ ಮನದಾಳದ ನೆನಪುಗಳತ್ತ ಹೊರಳಿದಳು.

Tags:
COMMENT