ಕಥೆ  – ಸಿ.ಕೆ. ಪವಿತ್ರಾ

ಮೊದಲ ಬಾರಿಗೆ ಗಿರೀಶ್‌ ಹಾಸ್ಟೆಲ್‌ ಸೇರಿದ್ದ. ಅವನ ಅನುಪಸ್ಥಿತಿಯಲ್ಲಿಯೇ ಅನುರಾಧಾಳಿಗೆ ಹಬ್ಬದ ಆಚರಣೆ ನಡೆಸುವುದು ಬಹಳವೇ ನೋವಾಗಿತ್ತು. ಇರುವ ಒಬ್ಬನೇ ಮಗ ಹಬ್ಬಕ್ಕೆ ಬರಲಾರೆ ಎಂದಾಗ ಯಾವ ತಾಯಿಗೆ ತಾನೆ ನೋವಾಗುವುದಿಲ್ಲ…?

ಕರುಣಾಕರ ಅನುರಾಧಾಳ ಪತಿ, ಗಿರೀಶನ ತಂದೆಗೂ ನೋವಾಗಿತ್ತು. ಪರೀಕ್ಷೆಗಳೇನೂ ಹತ್ತಿರದಲ್ಲಿಲ್ಲ….. ಅದಿರುವುದು ಮಾರ್ಚ್‌ನಲ್ಲಿ. ಆದರೆ ಅದೇಕೋ ಮಗನಿಗೆ ಮನೆಗೆ ಬರುವ ಮನಸ್ಸಿರಲಿಲ್ಲ. ಅಷ್ಟರಲ್ಲಿ ಅನುರಾಧಾಳ ಸೋದರ ದೂರದ ದೆಹಲಿಯಿಂದ ಹಬ್ಬಕ್ಕೆ ಬರತ್ತಿರುವುದಾಗಿ ಹೇಳಿದ್ದ. ಇದರಿಂದ ಅವಳಿಗೆ ತುಸು ಸಮಾಧಾನ, ಸಂತೋಷವಾಗಿತ್ತು.

ಹೀಗಿರುವಾಗ ಹಬ್ಬದ ದಿನ ಹತ್ತಿರವಾಗಿತ್ತು. ಅಕ್ಕಪಕ್ಕದ ಮನೆಯವರು, ಬೀದಿಯಲ್ಲಿ ಇರುವವರೆಲ್ಲರೂ ಹಬ್ಬದ ತಯಾರಿಯಲ್ಲಿದ್ದರು. ಅದರಂತೆಯೇ ಅನುರಾಧಾ ಸಹ ಹಬ್ಬಕ್ಕೆಂದು ಮನೆಯ ಅಲಂಕಾರದಲ್ಲಿ ತೊಡಗಿದ್ದಳು.

ಹೀಗಿರುವಾಗ ಹಬ್ಬ ಬಂದೇಬಿಟ್ಟಿತ್ತು. ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಅನುರಾಧಾಳ ಸೋದರ ಅವಿನಾಶ್‌ ತನ್ನ ಕುಟುಂಬದೊಂದಿಗೆ ಬಂದಿಳಿದಿದ್ದ. ಇದರಿಂದ ಮನೆಯಲ್ಲಿ ತುಸು ಗೆಲುವಿನ ವಾತಾವರಣ ಮೂಡಿತ್ತು.

ಅನುರಾಧಾ ಹಬ್ಬಕ್ಕಾಗಿ ತಾನೇ ಸಿಹಿ ತಿನಿಸುಗಳನ್ನೆಲ್ಲಾ ತಯಾರಿಸಲು ತೊಡಗಿದ್ದಳು. ಹೀಗಿರಲು ಬಾಗಿಲ ಕರೆಗಂಟೆ ಸದ್ದಾಗಿತ್ತು. ಬಾಗಿಲು ತೆರೆದಾಗ ಇಬ್ಬರು ಯುವಕರು ಒಂದು ಬಾಕ್ಸ್ ತುಂಬಾ ಚಾಕೋಲೇಟ್‌ ಹಿಡಿದು ನಿಂತಿದ್ದರು.

“ಹಬ್ಬದ ಶುಭಾಶಯಗಳು ಆಂಟಿ! ನಾನು ರಾಕೇಶ್‌, ಇವನು ನನ್ನ ಕೊಲೀಗ್‌ ನರೇಶ್‌. ನಾವಿಬ್ಬರೂ ಇದೇ ಬೀದಿಯಲ್ಲಿರೋ ಕೃಷ್ಣಮೂರ್ತಿಯವರ ಮನೆಯಲ್ಲಿ ಬಾಡಿಗೆಗೆ ಇದ್ದೇವೆ. ಇಂದು ಹಬ್ಬವಲ್ಲವೇ, ನಮ್ಮ ಬೀದಿಯ ಎಲ್ಲಾ ಮನೆಯವರಿಗೂ ಚಾಕೋಲೇಟ್‌ ನೀಡುತ್ತಿದ್ದೇವೆ. ಹೀಗೆ ಡಿಫರೆಂಟಾಗಿ ಹಬ್ಬ ಆಚರಿಸುತ್ತಿದ್ದೇವೆ. ನೀವೂ ತೆಗೆದುಕೊಳ್ಳಿ….”

ಅನುರಾಧಾ ತುಸು ಮುಂದೆ ಬಂದು ಬಾಕ್ಸ್ ನಲ್ಲಿದ್ದ ಚಾಕೋಲೇಟ್‌ಗಳನ್ನು ಸ್ಪರ್ಶಿಸುತ್ತಾ, “ಇಲ್ಲಿ ಬೇಡ…. ಮನೆಯೊಳಗೆ ಬನ್ನಿ,” ಎಂದು ಆಹ್ವಾನಿಸಿದಳು.

“ಏಕಾಗಬಾರದು…?” ಇಬ್ಬರೂ ಒಳಬಂದರು. ಮನೆಯ ಅಲಂಕಾರ, ಓರಣವಾಗಿರುವ ರೀತಿಯನ್ನು ಕಂಡು ರಾಕೇಶ್‌ ಬಹಳವೇ ಸಂತಸಪಟ್ಟ.

“ಆಂಟಿ, ನಿಮ್ಮ ಮನೆಯ ವಾತಾರಣ ಬಹಳ ಪ್ರಿಯವಾಗಿದೆ. ನಾನು ನನ್ನ ಮನೆಗೆ ಬಂದಂತೆ ಅನಿಸುತ್ತಿದೆ….”

“ಹೌದು ರಾಕೇಶ್‌, ನೀನು ಹೇಳುತ್ತಿರುವುದು ನಿಜ….” ನರೇಶ್‌ ಸಹ ತನ್ನ ಸ್ನೇಹಿತನ ಮಾತಿಗೆ ಸಮ್ಮತಿಸಿದನು.

“ಅಂದರೆ… ನೀವು ಇದುವರೆಗೆ ನೋಡಿದ ಯಾವ ಮನೆಯೂ ಈ ಮನೆಯಂತಿರಲಿಲ್ಲವೇ? ಅಥವಾ ನನ್ನಂತಹ ಹೆಂಗಸು ಆ ಮನೆಯಲ್ಲಿ ಇರಲಿಲ್ಲ ಎಂದು ಸೂಚಿಸುತ್ತಿದ್ದೀರಾ?”

“ನಾವು ನಮ್ಮ ಸಹೋದ್ಯೋಗಿಗಳ ಮನೆಗೂ ಹೋಗಿದ್ದೆವು. ಆದರೆ ಅಲ್ಲೆಲ್ಲಿಯೂ ಈ ಮನೆಯಲ್ಲಿದ್ದ ರೀತಿ ಹಬ್ಬದ ವಾತಾವರಣವೇ ಇರಲಿಲ್ಲ. ಅವರೆಲ್ಲರೂ ತಿಳಿದಂತೆ ಹಬ್ಬ ಎಂದರೆ ಅದು ಒಣ ಆಡಂಬರ ಮತ್ತು ತೋರಿಕೆ ಮಾತ್ರವೇ….”

ಅಷ್ಟರಲ್ಲಿ ಅನುರಾಧಾ ಹಬ್ಬಕ್ಕೆಂದು ಮಾಡಿದ್ದ ಸಿಹಿ ತಿನಿಸನ್ನು ಅವರಿಗೆ ನೀಡಿದಳು.  ಅವರು ಸಂತಸದಿಂದ ಅದನ್ನು ಸವಿದರು. ಬಳಿಕ ಸ್ವಲ್ಪ ಹೊತ್ತು ಕುಳಿತಿದ್ದು ಹೊರಡಲು ಅನುವಾದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕರುಣಾಕರ್‌, “ನೀವು ಇಂದು ನಮ್ಮೊಟ್ಟಿಗೆ ಊಟ ಮುಗಿಸಿಕೊಂಡೇ ಹೋಗಬೇಕು,” ಎಂದು ಒತ್ತಾಯಿಸಿದರು.

“ಅಂಕಲ್, ನಾವೀಗಾಗಲೇ ಸಾಕಷ್ಟು ತಿಂಡಿ ತಿಂದಿದ್ದೇವೆ. ನಾವು ಇನ್ನೂ ಕೆಲವು ಮನೆಗಳಿಗೆ ಹೋಗಬೇಕು. ಹೀಗಾಗಿ ನಾವೀಗಲೇ ಹೊರಡುತ್ತೇವೆ.”

“ಇರಲಿ. ನಿಮ್ಮ ಸ್ನೇಹಿತರ ಮನೆಗಳಿಗೆಲ್ಲ ಹೋಗಿ ಬನ್ನಿರಿ. ಆದರೆ ಊಟಕ್ಕೆ ಮಾತ್ರ ತಪ್ಪಿಸಬಾರದು,” ಎಂದರು.

“ಹಾಗೆಯೇ, ನಿಮ್ಮ ಲೇಡಿ ಕೊಲೀಗ್ಸ್ ನ್ನು ಸಹ ಕರೆದು ತನ್ನಿ,” ಅನುರಾಧಾ ನಗುತ್ತಾ ನುಡಿದಳು.

ಕೊನೆಗೂ ಅವರ ಒತ್ತಡಕ್ಕೆ ಮಣಿದು ಊಟಕ್ಕೆ ಬರುವುದಾಗಿ ಒಪ್ಪಿಕೊಂಡರು.

ಅವರು ಅತ್ತ ಹೊರಡುತ್ತಲೇ ಕರುಣಾಕರ್‌ ಅನುರಾಧಾಳತ್ತ ತಿರುಗಿ, “ಊಟಕ್ಕೆ ಸಾಕಾಗುವಷ್ಟು ಅಡುಗೆ ತಯಾರಿದೆಯಲ್ಲವೇ? ಇನ್ನೇನಾದರೂ ಮಾಡುವುದಿದೆಯಾ?” ಎಂದು ಕೇಳಿದರು.

“ಈಗಲೇ ಸಾಕಷ್ಟು ತಿಂಡಿಗಳು ತಯಾರಿದೆ. ಇನ್ನು ಕೆಲವನ್ನು ನಾನೀಗ ತಯಾರಿಸುತ್ತೇನೆ,” ಎಂದಳು ಅನುರಾಧಾ.

“ಸರಿ, ನಾನು ಸಹ ನಿನ್ನೊಂದಿಗೆ ಅಡಗೆ ಮಾಡಲು ಸಹಕರಿಸುತ್ತೇನೆ,” ಕರುಣಾಕರ ಬಹಳ ದಿನಗಳ ನಂತರ ಅಡುಗೆ ಮನೆಯತ್ತ ಬಂದಿದ್ದರು.

ಕೆಲವು ಗಂಟೆಗಳು ಕಳೆದವು. ರಾಕೇಶ್‌ ಮತ್ತು ನರೇಶ್‌ ಮೊದಲೇ ತಿಳಿಸಿದಂತೆ ಊಟಕ್ಕೆ ಅನುರಾಧಾಳ ಮನೆಗೆ ಬಂದಿದ್ದರು. ಅವರೊಂದಿಗೆ ಕವಿತಾ, ಕಾರುಣ್ಯಾ ಮತ್ತು ಶ್ರೇಯಾ ಸಹ ಆಗಮಿಸಿದ್ದರು. ಅನುರಾಧಾ ತಾನು ತಯಾರಿಸಿದ್ದ ವಿಶೇಷ ತಿನಿಸು, ಊಟವನ್ನು ಎಲ್ಲರಿಗೂ ಬಡಿಸಿದಳು. ಅವರೆಲ್ಲರೂ ಅದನ್ನು ಅಷ್ಟೇ ಸಂಭ್ರಮದಿಂದ ಊಟ ಮಾಡಿದ್ದಲ್ಲದೆ, ಸಡಗರ, ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಂಡರು. ಇವರ ಆಗಮನದ ಸಡಗರಗಳಿಂದ ಕರುಣಾಕರ್‌ ಮನೆ ಹಬ್ಬದ ವೈಭದಿಂದ ತುಂಬಿತು.

ಹಬ್ಬದ ಪಟಾಕಿ, ಸಿಡಿಮದ್ದುಗಳನ್ನು ಹಾರಿಸುವುದರಲ್ಲಿ ತಲ್ಲೀನರಾಗಿದ್ದ ರಾಕೇಶ್‌ ಮತ್ತು ಸ್ನೇಹಿತರಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ರಾತ್ರಿ ಹತ್ತೂರೆಯಾಗಿದ್ದಾಗ ಕಾರುಣ್ಯಾ, “ನಾವಿನ್ನು ಹೊರಡೋಣವೇ?” ಎಂದಳು.

ರಾಕೇಶ್‌ ಸಹ ಕರುಣಾಕರ್‌ಗೆ ನಾವಿನ್ನು ಹೊರಡುತ್ತೇವೆ ಎನ್ನುವುದಾಗಿ ತಿಳಿಸಿ ಅವರ ಅನುಮತಿ ಕೇಳಿದ. ಕರುಣಾಕರ್‌ ಮತ್ತು ಅನುರಾಧಾ ಇಬ್ಬರೂ ಸಂತಸದಿಂದಲೇ ಅವರನ್ನು ಮನೆಗೆ ತೆರಳಲು ಅನುಮತಿಸಿದ್ದರು. ಮತ್ತೊಮ್ಮೆ ಬಿಡುವು ಮಾಡಿಕೊಂಡು ಬನ್ನಿ ಎನ್ನುವುದಕ್ಕೆ ಮರೆಯಲಿಲ್ಲ.

ಹೀಗೆ ರಾಕೇಶ್‌ ಮತ್ತು ಸ್ನೇಹಿತರೆಲ್ಲರೂ ಅತ್ತ ತೆರಳಿದ ಮೇಲೆ ಕರುಣಾಕರ್‌ ಮತ್ತು ಅನುರಾಧಾ ತಮ್ಮ ಮೊಬೈಲ್‌ನತ್ತ ಗಮನಹರಿಸಿದರು.ಅಷ್ಟರಲ್ಲಿ ಗಿರೀಶ್‌ ಕಡೆಯಿಂದ ಐದು ಮಿಸ್ಡ್ ಕಾಲ್‌ ಬಂದಿರುವುದು ಕಂಡಿತ್ತು.

Tags:
COMMENT