ಕಥೆ - ಕಲಾವತಿ ಪ್ರಕಾಶ್
ಮನೆಯವರ ವಿರೋಧ ಗಮನಿಸದೇ, ಪ್ರೇಮಿಸಿ ಮದುವೆಯಾದ ಶಾಲಿನಿ ಶ್ಯಾಮ್ ತರಾತುರಿಯಲ್ಲಿ ಸದಾ ಯಾಂತ್ರಿಕ ಜೀವನದಲ್ಲಿ ತಮ್ಮ ಇಡೀ ಜೀವನ ಕಳೆದುಬಿಟ್ಟರು. ಕೊನೆಗಾದರೂ ಅವರು ತಮ್ಮ ಸುಖವನ್ನು ತಾವು ಕಂಡುಕೊಂಡರೇ.....?
``ಶಾಲಿನಿ ನನಗೆ ರಾತ್ರಿ 11 ಗಂಟೆಗೆ ಯುಎಸ್ ಮೆನೇಜರ್ ಕಾಲ್ ಇದೆ. ಎಷ್ಟು ಗಂಟೆಗೆ ಮುಗಿಯುವುದೋ ಗೊತ್ತಿಲ್ಲ. ಸಂಜೆ ಬೇಗ ಅಡುಗೆ ಮಾಡು. ನಾನು ಮಕ್ಕಳಿಗೆ ಸ್ಕೂಲ್ ಹೋಂವರ್ಕ್ ಮಾಡಿಸಿ, ಬೆಳಗ್ಗೆಗೆ ಬೇಕಾದ ಅವರ ಯೂನಿಫಾರ್ಮ್ ಇಸ್ತ್ರೀ ಮಾಡಿ ಇಡ್ತೀನಿ. ಎಲ್ಲರೂ ಒಟ್ಟಿಗೆ ಊಟ ಮಾಡೋಣ,'' ಎಂದು ಶ್ಯಾಮ್ ಹೆಂಡತಿಗೆ ಹೇಳಿದ.
``ನನಗೂ ಎಂಟು ಗಂಟೆಗೆ ಮೀಟಿಂಗ್ ಇದೆ ಶ್ಯಾಮ್. ಆಫೀಸ್ ಕೆಲಸ ಬೇರೆ ಸಿಕ್ಕಾಪಟ್ಟೆ ಇದೆ. ಆಮೇಲೆ ನನಗೆ ಎಷ್ಟು ಸಾಧ್ಯವೋ ಅಷ್ಟು ಮಾಡ್ತೀನಿ. ಕೊನೆಗೆ ಅನ್ನಕ್ಕೆ ನೀನೇ ಇಟ್ಟು, ಮಕ್ಕಳಿಗೆ ಊಟ ಮಾಡಿಸಿ, ನೀನೂ ಮಾಡು. ಸಾಕಾಗಿದೆ ಈ ಮನೆ, ಆಫೀಸ್ ಕೆಲಸ, ಜೊತೆಗೆ ತಪ್ಪದ ರಾತ್ರಿ ಮೀಟಿಂಗ್ ಗಳು.....'' ಎಂದು ಗೊಣಗಿದಳು ಶಾಲಿನಿ.
ಪ್ರೀತಿಸಿ ಮದುವೆಯಾದ ಶ್ಯಾಮ್ ಮತ್ತು ಶಾಲಿನಿ ಇಬ್ಬರಿಗೂ ಎಂಎನ್‌ಸಿಯಲ್ಲಿ ಉದ್ಯೋಗ. ಹೆಸರಿಗೆ ಮಾತ್ರ ವರ್ಕ್ ಫ್ರಂ ಹೋಮ್. ಸಮಯದ ನಿರ್ಬಂಧವೇ ಇಲ್ಲ. ಆದರೂ ದುಡಿಯಲೇಬೇಕು. ದುಬಾರಿ ದುನಿಯಾ, ಆಧುನಿಕ ಜೀವನ ಶೈಲಿಗೆ ಆಡಂಬರದ ಬದುಕಿಗೆ ಖರ್ಚಿಗೆ ಬೇಕಲ್ಲ ಲಕ್ಷ..... ಲಕ್ಷ....ಲಕ್ಷ ದುಡಿಯಬೇಕೆಂದರೆ, ತಮಗೆ ತಾವು ಲಕ್ಷ್ಯ ಕೊಟ್ಟುಕೊಳ್ಳಲು ಎಲ್ಲಿಂದ ಸಾಧ್ಯ? ಬೆಳಗ್ಗೆ ಐದು ಗಂಟೆಗೆ ಎದ್ದು ಅಡುಗೆ, ತಿಂಡಿ, ಮನೆ ಕೆಲಸ, ಮಕ್ಕಳನ್ನು ರೆಡಿ ಮಾಡಿ, ಅವರಿಗೆ ಡಬ್ಬಿ ಕಟ್ಟುವುದು, ಶಾಲೆಗೆ ಬಿಟ್ಟು ಬರುವುದು ಹೀಗೆ ಒಂದೇ ಎರಡೇ.....? ಅಷ್ಟರಲ್ಲಿ ಆಫೀಸ್ ಸಮಯ ಆಗುತ್ತೆ ಲಾಗಿನ್ ಆಗಿ ಕೆಲಸಕ್ಕೆ ಕೂತರೆ ಇನ್ಯಾವಾಗೋ ತಿಂಡಿ ತಿನ್ನೋದು.... ಮತ್ಯಾವಾಗೋ ಊಟ.... ಅಮ್ಮನ ಮನೆಯಲ್ಲಿದ್ದಾಗ ಜೀವನ ಎಂಥ ಸೊಗಸಾಗಿತ್ತು. ಬೆಳಗ್ಗೆ ಎದ್ದು ಸ್ನಾನ ಮಾಡಿ, ಚಂದದ ಅಲಂಕಾರ ಮಾಡಿಕೊಂಡು, ನೆಮ್ಮದಿಯಾಗಿ ತಿಂಡಿ ತಿಂದು ಆಫೀಸಿಗೆ ಹೋಗಿ ಬರ್ತಿದ್ದೆ, ಸಾಯಂಕಾಲ ಅಮ್ಮ ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಎಲ್ಲರ ಜೊತೆ ಹರಟೆ ಹೊಡಿತಾ ರಿಲ್ಯಾಕ್ಸ್ ಆಗ್ತಿದ್ದೆ.
ಮದುವೆ ಆದ ನಂತರ ಮನೆ, ಮಕ್ಕಳು ಸಂಸಾರದ ಜವಾಬ್ದಾರಿ ಹೆಚ್ಚಾಗಿದ್ದರಿಂದ, ಸಂಬಳ ಸಾಕಾಗೋದಿಲ್ಲ ಅಂತ ಕಂಪನಿ ಚೇಂಜ್ ಮಾಡಿದ್ದಾಯ್ತು. ಆಫೀಸಿಗೆ ಹೋಗಿ ಬರುವ ಅಷ್ಟೂ ಸಮಯ ಉಳಿಸಲು ವರ್ಕ್ ಫ್ರಂ ಹೋಮ್ ಆಯ್ಕೆ ಮಾಡಿಕೊಂಡು ಕೆಲಸ ಕೆಲಸ ಅಂತ ನೆಟ್ಟಗೆ ತಲೆ ಬಾಚೋಲ್ಲ, ಒಳ್ಳೆ ಬಟ್ಟೆ ಹಾಕೋಲ್ಲ, ಮನೆಯಲ್ಲೇ ಇದ್ದರೂ ಮಾಡಿದ ಅಡುಗೆ ಬಿಸಿ ಇರುವಾಗಲೇ ಗಂಡ ಹೆಂಡತಿ ಒಟ್ಟಿಗೆ ಕೂತು ಖುಷಿಯಾಗಿ ಊಟ ಮಾಡಲೂ ಆಗೋದಿಲ್ಲ. ಅವನಿಗೆ ಆಫೀಸ್ ಕಾಲ್, ನನಗೊಮ್ಮೆ ಮೀಟಿಂಗ್ ಹೀಗೆ ಒತ್ತಡದಿಂದ ಕೂಡಿದ ಇದು ಒಂದು ಜೀವನವೇ ಅನಿಸಿಬಿಟ್ಟಿತ್ತು ಶಾಲಿನಿ ದಂಪತಿಗೆ. ಹೀಗೇ ಸಂಸಾರ ಸಾಗುತ್ತಿತ್ತು. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾದರು. ಒಬ್ಬ ಮಗ ಕೆಲಸ ಸಿಕ್ಕಿತೆಂದು ವಿದೇಶಕ್ಕೆ ಹೋದ, ಇನ್ನೊಬ್ಬ ಮಗನೂ ಹೆಚ್ಚಿನ ಓದಿಗೆಂದು ಅವನೂ ಅಮೆರಿಕಾಕ್ಕೆ ಹಾರಿದ್ದ. ಇಷ್ಟು ವರ್ಷಗಳ ಹೊತ್ತಿಗೆ ಇಬ್ಬರಿಗೂ ಪ್ರಮೋಷನ್ ಸಿಕ್ಕಿ ಒಳ್ಳೆಯ ಪೊಜಿಷನ್ ನಲ್ಲಿ ಇದ್ದರು.





