ಕಥೆ - ಶುಭಾ ಶ್ರೀನಾಥ್
ಮಧ್ಯಮ ವರ್ಗದ ಗೃಹಿಣಿಗೆ ಮನೆಯಲ್ಲಿ ತುಸು ಏರುಪೇರಾದರೂ, ಬದುಕಿನ ಸಿಹಿ ಕಹಿ ಎಲ್ಲದರ ಬಗ್ಗೆ ಆತಂಕ ಶುರುವಾಗುತ್ತದೆ. ಇದನ್ನು ಸಹಜವಾಗಿ ಸ್ವೀಕರಿಸಿ ಮುಂದೆ ನಡೆಯಬೇಕಾದ್ದೇ ಜೀವನ ಅಲ್ಲವೇ.....?
ಯಾಕೋ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಜಲಬಾಧೆಗೆ ಅವಸರವಾಗಿತ್ತು, ಎದ್ದು ಬಚ್ಚಲಿಗೆ ಹೋಗಿ ಬಂದು ಮತ್ತೆ ಮಲಗಿದೆ. ಸಾಯಂಕಾಲ ಮಳೆ ಬಂದ ಕಾರಣ ಸ್ವಲ್ಪ ಚಳಿ ಇತ್ತು. ಹಾಗಾಗಿ ಹೊದಿಕೆಯನ್ನು ತುಂಬಾ ಹೊದ್ದು ಮಲಗಿದೆ. ಆದರೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಪಕ್ಕದಲ್ಲಿ ಮಲಗಿದ್ದ ಯಜಮಾನರು ಯಾವ ಯೋಚನೆ ತಾಪತ್ರಯ ಇಲ್ಲದೆ ಆರಾಮವಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದಾರೆ. ದಿನ ಅಷ್ಟೇ ಮಲಗಿದ ಕೂಡಲೇ ಎರಡೇ ನಿಮಿಷಕ್ಕೆ ಗೊರಕೆ ಹೊಡೆಯುತ್ತಾರೆ. ಇಷ್ಟು ವರ್ಷ ನಾನು ಹೀಗೆಯೇ ಮಲಗಿದ ಒಂದೈದು ನಿಮಿಷದಲ್ಲಿ ನಿದ್ದೆಗೆ ಜಾರುತ್ತಿದ್ದೆ. ಮತ್ತೆ ಏಳುತ್ತಿದ್ದುದು ಬೆಳಗ್ಗೆ ಐದೂವರೆಗೆ, ಒಳ್ಳೆಯ ನಿದ್ದೆ ಆಗುತ್ತಿತ್ತು. ಮಾರನೆಯ ದಿನ ಲವಲವಿಕೆಯಿಂದ ಕೂಡಿರುತ್ತಿದ್ದೆ. ಆದರೆ ಕಳೆದ ಒಂದು ವಾರದಿಂದ ಯಾಕೋ ಹೀಗೇ ಹೊತ್ತಲ್ಲದ ಹೊತ್ತಿನಲ್ಲಿ ಜಲಬಾಧೆ ಅಂತ ಎಚ್ಚರಾಗುತ್ತೆ. ಆಮೇಲೆ ನಿದ್ದೆ ಹತ್ತಿರ ಬರುವುದು ಕಷ್ಟ. ಮಗನ ರೂಮ್ ಲೈಟ್ ಉರಿಯುತ್ತಿತ್ತು, ಎದ್ದು ಹೋಗಿ, ``ಯಾಕೋ ಇನ್ನೂ ಮಲಗಿಲ್ಲ....? ಮಲಗಿಕೋ,'' ಎಂದು ಅವನ ಹಣೆಯ ಮೇಲೆ ಬಂದಿದ್ದ ಕೂದಲನ್ನು ಹಿಂದೆ ಸರಿಸಿ ಅಕ್ಕರೆಯಿಂದ ಹೇಳಿದೆ.
``ಸ್ವಲ್ಪ ಕೆಲಸ ಇತ್ತು, ಮಾಡುತ್ತಿದ್ದೆ. ಇನ್ನೂ ಸ್ವಲ್ಪ ಹೊತ್ತು ಅಷ್ಟೇ. ಮುಗಿಸಿ ಮಲಗಿಕೊಳ್ತೀನಿ,'' ಎಂದು ಲ್ಯಾಪ್ ಟಾಪ್ ನಿಂದ ತಲೆಯೆತ್ತಿ ನನ್ನನ್ನು ನೋಡಿ ಹೇಳಿ, ಮತ್ತೆ ಅದರಲ್ಲಿಯೇ ಹುದುಗಿಕೊಂಡ.
ನಾನಿನ್ನೂ ಅಲ್ಲೇ ಕುಳಿತಿದ್ದನ್ನು ಕಂಡು, ``ಅಮ್ಮಾ.... ನೀನು ಯಾಕೆ ಎದ್ದೀದಿಯಾ....? ಮಲಕ್ಕೋ ಹೋಗು,'' ಎಂದ.
``ಆಯ್ತು ಮಲಕ್ಕೊಳ್ತೀನಿ. ನೀನು ಮಲಕ್ಕೋ ಕಂದ. ನಿದ್ದೆಗೆಡಬೇಡ, ಆರೋಗ್ಯ ಹಾಳಾಗುತ್ತೆ.''
``ಇನ್ನೊಂದು ಅರ್ಧ ಗಂಟೆ ಅಷ್ಟೇ ಮಲಗಿಕೊಳ್ತೀನಿ,'' ಎಂದು ಅವನ ಕೈ ನನ್ನ ಕೈಯಲ್ಲಿಟ್ಟು ಹೇಳಿದ. ಮೆಲ್ಲನೆ ಅವನ ಕೈ ಅದುಮಿ, ಒಮ್ಮೆ ಅವನ ಬೆನ್ನು ಸರಿ, ಗುಡ್ ನೈಟ್ ಹೇಳಿ ಬಂದು ಹಾಸಿಗೆಗೆ ಉರುಳಿದೆ. ನನ್ನ ಈ ಅಶಾಂತಿಗೆ ಮತ್ತು ನಿದ್ದೆ ಬಾರದೇ ಇರುವಿಕೆಗೆ ಕಾರಣ ಇಲ್ಲದೇ ಇಲ್ಲ. ಒಂದು ವಾರದ ಕೆಳಗೆ ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಹಲವಾರು ಪ್ರತಿಷ್ಠಿತ ಖಾಸಗಿ ಕಂಪನಿಗಳು ತಮಗೆ ಅಷ್ಟೊಂದು ವರ್ಕರ್ಸ್ ಅಗತ್ಯವಿಲ್ಲವೆಂದು ಅನೇಕರನ್ನು ಮನೆಗೆ ಕಳುಹಿಸುತ್ತಿದ್ದೇವೆ, ಎಂದು ಹೇಳಿದ್ದರು. ಯಾಕೋ ಭಯವಾಯಿತು. ನಿದ್ದೆ ಹತ್ತಿರ ಸುಳಿಯದಾಯಿತು. ಆಮೇಲೆ ಎಷ್ಟು ಹೊತ್ತಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ. ಬೆಳಗ್ಗೆ ಎದ್ದಾಗ ಆಗಲೇ ಆರು ಗಂಟೆ. `ಅಯ್ಯೋ ತಡವಾಯಿತು,' ಎಂದು ಗಡಬಡಿಸಿ ಎದ್ದೆವು. ಯಜಮಾನರು ಎದ್ದು ಕಾಫಿ ಮಾಡಿಕೊಳ್ಳುತ್ತಿದ್ದರು.
``ನೀವೇ ಯಾಕೆ ಕಾಫಿ ಮಾಡಿಕೊಳ್ಳೋಕೆ ಹೋದ್ರಿ......? ನನ್ನನ್ನು ಎಬ್ಬಿಸಬಾರದಿತ್ತೆ...?''
``ಏನೋ ಇವತ್ತು ಮಲಗಿಕೊಂಡಿದ್ದೀಯ. ಮಲಗಿಕೊಳ್ಳಲಿ ಅಂತ ನಾನೇ ಎದ್ದು ಕಾಫಿ ಮಾಡಿಕೊಂಡೆ. ತಗೋ ನೀನು ಕಾಫಿ ಕುಡಿ. ಆಮೇಲೆ ಮುಂದಿನ ಕೆಲಸ ನೋಡುವೆಯಂತೆ.....``





