ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎಂಬುದು ಸರಿಯೇ? ಮಗಳು ಮಾಡಿದ್ದೆಲ್ಲಾ ಸರಿ ಎನಿಸಿದಾಗ, ಸೊಸೆ ಮಾಡಿದ್ದು ಮಾತ್ರ ಯಾಕೆ ತಪ್ಪು? ಇದನ್ನು ಅರಿತ ಜೀವಗಳು ಸರಿದಾರಿಗೆ ಬಂದವೇ.....?
ಎಲ್ಲ ಮಕ್ಕಳ ಮನೆಯ ತಾಯಿ ತಂದೆಯರಂತೆ ಆ ತಾಯಿ ತಂದೆಯರು ಸಹ ತಮ್ಮ ಮುದ್ದಿನ ಮಗಳಿಗೆ, ತಮ್ಮದೇ ಆದ ಬೇಕು ಬೇಡಗಳ ಮಾನದಂಡಗಳನ್ನು ಇಟ್ಟುಕೊಂಡು, ಮಗಳಿಗೆ ವರಾನ್ವೇಷಣೆಯಲ್ಲಿ ತೊಡಗಿದ್ದರು.
ತಮ್ಮ ಮಗಳಿಗೆ ಗಂಡು ಹುಡುಕುತ್ತಿದ್ದು, ಅಂದ ಚೆಂದದ ವಿದ್ಯಾವಂತ, ಒಳ್ಳೆಯ ನೌಕರಿಯಲ್ಲಿ ಇರುವ ವರನಿಗೆ, ಹಿಂದೆ ಮುಂದೆ ಯಾರೂ ಇಲ್ಲದೆ ಒಬ್ಬನೇ ಮಗನಾದರೆ ಒಳ್ಳೆಯದು ಎಂದು ಮಹದಾಸೆ ಇಟ್ಟುಕೊಂಡಿದ್ದರು. ಜಗತ್ತಿನಲ್ಲಿನ ಸ್ವಾರ್ಥಿ ತಂದೆ ತಾಯಿಯರಂತೆ. ಅವರ ಬಯಕೆ ಸಹಜವಾದದ್ದು ಮತ್ತು ಪ್ರಸ್ತುತ ಜಗತ್ತಿಗೆ ಹಿಡಿದ ಜ್ವಲಂತ ಕನ್ನಡಿಯಾಗಿತ್ತು.
ಮನದಾಸೆ ಹಾಗಿದ್ದರೂ ಬಾಯಲ್ಲಿ ಮಾತ್ರ ಆದರ್ಶದ ಮಾತು ಮುತ್ತುಗಳಾಗಿ ಉದುರುತ್ತಿದ್ದವು. `ಒಳ್ಳೆಯ ಕುಟುಂಬದ ಹುಡುಗ ಬೇಕು,' ಎಂದು ತಮ್ಮ ಮುದ್ದಿನ ಮಗಳಿಗೆ ವರ ಹುಡುಕುತ್ತಾ ಅಳೆದು ತೂಗಿ ತಮ್ಮ ಒಳ ಮನದ ಆಸೆಗೆ ಒತ್ತು ಕೊಟ್ಟು ಒಬ್ಬ ಹುಡುಗನನ್ನು ನಿರ್ಧರಿಸಿದರು.
ಆ ಹುಡುಗ ಬಡ ತಾಯಿ ತಂದೆಯರ ಮಗನಾಗಿದ್ದು, ಹಳ್ಳಿಯ ಮನೆಯಲ್ಲಿ ಬಾಲ್ಯ ಕಳೆಯುತ್ತಾ ಬೆಳೆದು ವಿದ್ಯಾವಂತ ಬುದ್ಧಿವಂತನಾದನು. ಜೊತೆಗೆ ಅವನು ಪಟ್ಟಣದಿಂದ ಬಹುದೂರದ ಹಳ್ಳಿಯವನು. ಓದಲೆಂದು ಕೆಲವು ವರ್ಷಗಳ ಹಿಂದೆ ಪಟ್ಟಣಕ್ಕೆ ಬಂದನು, ಪಾರ್ಟ್ ಟೈಮ್ ಕೆಲಸ ಮಾಡುತ್ತಾ, ತನ್ನ ಓದಿಗೆ ಸ್ವಸಹಾಯ ಮಾಡಿಕೊಂಡನು. ಅವನಿಗೆ ಪಟ್ಟಣದಲ್ಲಿ ನೌಕರಿ, ಅಲ್ಲಿ ಅವನೊಬ್ಬನೇ ವಾಸಿಸುತ್ತಿದ್ದ. ಹೊಟ್ಟೆ ಬಟ್ಟೆ ಕಟ್ಟಿ, ಒಂದು ಹೊತ್ತು ಉಪವಾಸ ಇದ್ದು ಓದಿಕೊಂಡು ನೌಕರಿ ಗಿಟ್ಟಿಸಿಕೊಂಡನು, ಈಗ ಕೈ ತುಂಬಾ ಸಂಬಳ ಪಡೆಯುತ್ತಿದ್ದ.
ಅದೊಂದು ಕುಗ್ರಾಸ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಅವನಿಗೆ, ಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೆಂದು ಅವನ ತಾಯಿ ತಂದಿ, ``ನಮ್ಮ ಕಾಲದಲ್ಲೇ ಮಳೆ ಬೆಳೆ ಮಕಾಡೆ ಮಡಿಚಿಕೊಂಡಿರುವಾಗ, ನೀನು ವಯಸ್ಸಿಗೆ ಬಂದಾಗ ಏನು ಪರಿಸ್ಥಿತಿಯೋ ಕಂಡವರಾರು...? ಮಗನೇ, ನೀನು ಓದಿ ಪಟ್ಟಣದಲ್ಲಿ ನೌಕರಿ ಹಿಡಿದು ಅಲ್ಲಿ ಬದುಕು ಕಟ್ಟಿಕೋ. ಎರಡು ಹೊತ್ತಿನ ಗಂಜಿಗಾದರೂ ದಾರಿಯಾದೀತು. ಗ್ರಾಮೀಣ ಬದುಕು ಗಂಜಿಗೂ ಗತಿ ಇಲ್ಲದ್ದು,'' ಎಂದು ಬಹಳ ಹಿಂದೆಯೇ ಅವನು ಸಣ್ಣವನಾಗಿದ್ದಾಗ ಕಣ್ಣೀರಿಟ್ಟಿದ್ದರು.
ಅವರದ್ದೊ ಎಲ್ಲಾ ಬಡ ತಂದೆ ತಾಯಿಯರ ಮಗನ ಬಗೆಗಿನ ಕಾಳಜಿಯ ಹಳೇ ಕಹಾನಿ. ಇಲ್ಲೂ ಒಂದು ಒಳ ಸುಳಿವಿದೆ. ಅದೇನೆಂದರೆ ದೊಡ್ಡವನಾದಗ ಮಗ ತಮ್ಮನ್ನು ಕಡೆಗಣಿಸಲಾರ, ತಮ್ಮನ್ನು ನೋಡಿಕೊಳ್ಳಬಹುದು ಎಂಬುದೇ ಆ ಒಳ ಸುಳಿವು.
ತಾಯಿ ತಂದೆಯರು ಹೇಳಿದ್ದು ಯಾಕೋ ಸರಿ ಅನಿಸದೆ, ``ಇಲ್ಲೇ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ದುಡಿದು ನಿಮ್ಮನ್ನು ಸಾಕುತ್ತೇನೆ,'' ಎಂದ ಮಗ. ಎಷ್ಟೇ ಆಗಲಿ ಕರುಳ ಕುಡಿಯಲ್ಲವೇ? ತಾಯಿ ತಂದೆಯರನ್ನು ತೊರೆದು ಹೋಗಲು ಇಷ್ಟಪಡಲಿಲ್ಲ. ``ನೀನು ಕ್ಷಣ ಕ್ಷಣ ಬಿಸಿಲಲ್ಲಿ ಬೆವರಿಳಿಸಿ ಬವಣೆ ಪಡುವುದು ಬೇಡ. ಈ ಹಳ್ಳಿ, ಬಡತನ ನಮ್ಮ ಪಾಲಿಗೆ ಬಂದದ್ದು, ನಮ್ಮ ಜೊತೆಯಲ್ಲೇ ಸಾಯಲಿ. ನೀನು ಉತ್ತಮ ಬದುಕು ಕಟ್ಟಿಕೊ, ಮುಂದೆ ನಿನ್ನ ಮಕ್ಕಳು ಸುಖವಾಗಿ ಬೆಳೆಯಲು ದಾರಿ ಮಾಡಿಕೋ,'' ಭವಿಷ್ಯದ ಬಗ್ಗೆ ಕಳಕಳಿ ಮತ್ತು ಮಗನಿಗೆ ಮುಂದಾಗಬಹುದಾದ ಮಕ್ಕಳ ಹಾಗೂ ತಮ್ಮ ಮೊಮ್ಮಕ್ಕಳ ಬಗ್ಗೆ ಅವರ ಮಾತಿನಲ್ಲಿ ಕಾಳಜಿಯ ಮಹಾಪೂರವೇ ಹರಿದಿತ್ತು .ಆಗ ಅವನಿಗೆ ಅಪ್ಪ ಅಮ್ಮ ತನ್ನನ್ನು ಅವರಿಂದ ದೂರ ಮಾಡುತ್ತಿದ್ದಾರೆ ಎಂದೆನಿಸಿ ಖೇದವಾಯಿತು. ಅವರು ಹೇಳಿದ ಮಾತುಗಳನ್ನು ಅಳೆದು ತೂಗಿ ನೋಡಿದಾಗ ತಾಯಿ ತಂದೆಯರು ತನ್ನ ಒಳ್ಳೆಯದಕ್ಕೇ ಮುಂದಾಲೋಚನೆಯಿಂದ ಹೀಗೆ ಹೇಳುತ್ತಿದ್ದಾರೆ ಎನಿಸಿತು ಒಳ ಮನಸ್ಸಿಗೆ. ಸರಿ ಎಂದು ಒಲ್ಲದ ಮನಸ್ಸಿನಿಂದಲೇ ಪಟ್ಟಣ ಸೇರಿದ್ದ.





