ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಏಕಕಾಲಕ್ಕೆ ನಟಿಸುತ್ತಾ, ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿರುವ ವೈಷ್ಣವಿ ಇಲ್ಲಿ ತನ್ನ ಕುರಿತು ಹೇಳಿರುವುದೇನು…..?
ವೈಷ್ಣವಿ ಪಟವರ್ಧನ್ 2016ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿದ್ದೇ ಅಲ್ಲದೆ, ಕ್ರಮೇಣ ತೆಲುಗು ಚಿತ್ರಗಳಲ್ಲಿ ಉತ್ತಮ ಪಾತ್ರಗಳನ್ನು ಪಡೆದುಕೊಂಡಳು. ಜೊತೆಗೆ ಕನ್ನಡದ `ಶ್ರೀಮಂತ’ ಚಿತ್ರದಲ್ಲೂ ಮಿಂಚಿದ್ದಾಳೆ. ಇದೀಗ ಮತ್ತೊಂದು ಹೆಜ್ಜೆ ಮುಂದುವರಿದು `ವಾಟ್ ಎ ಕಿಸ್ಮತ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಂಡು ಬಹು ಚರ್ಚೆಯಲ್ಲಿದ್ದಾಳೆ. ಇದೊಂದು ಕಾಮಿಡಿ ಚಿತ್ರವಾಗಿದ್ದು ಪ್ರಸ್ತುತ ಆಧುನಿಕ ಜೀವನಶೈಲಿಯ ಆಗುಹೋಗುಗಳ ಕಥಾಹಂದರ ಹೊಂದಿದೆ. ವೈಷ್ಣವಿ ಈ ಚಿತ್ರದ ನಾಯಕಿಯಾಗಿ ಬಾಲಿವುಡ್ ನಲ್ಲಿ ಉತ್ತಮ ಹೆಸರು ಗಳಿಸಿದ್ದಾಳೆ.
ತೆಲುಗು, ಹಿಂದಿ ಚಿತ್ರಗಳು ಮಾತ್ರವಲ್ಲದೆ ಈಕೆ ತನ್ನದೇ ಆದ ಒಂದು ಯೂಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಇದರಲ್ಲಿ ಈಕೆ ಫ್ಯಾಷನ್, ಲೈಫ್ ಸ್ಟೈಲ್ ಕುರಿತು ಬ್ಲಾಗ್ ಬರೆಯುತ್ತಿರುತ್ತಾಳೆ.
`ವಾಟ್ ಎ ಕಿಸ್ಮತ್’ ಚಿತ್ರದಲ್ಲಿ ಇವಳದು ಎಂಥ ಪಾತ್ರ? ಬಾಲಿವುಡ್ ನಲ್ಲಿ ಕೆಲಸ ಮಾಡಿದ ಅನುಭವ ದಕ್ಷಿಣಕ್ಕಿಂತ ಹೇಗೆ ವಿಭಿನ್ನ…. ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೂ ವೈಷ್ಣವಿ ಇಲ್ಲಿ ಉತ್ತರಿಸಿದ್ದಾಳೆ :
`ವಾಟ್ ಎ ಕಿಸ್ಮತ್’ ಚಿತ್ರದ ಬಗ್ಗೆ ನಿನಗೆ ಹೆಚ್ಚಿನ ಭರವಸೆ ಉಂಟೆ?
ಇದರ ಕುರಿತಾಗಿ ಭರವಸೆಗಳೇನೋ ಬಹಳ ಇವೆ. ಇದೊಂದು ಲೈಟ್ ಹಾರ್ಟೆಡ್ ಕಾಮಿಡಿ ಚಿತ್ರವಾಗಿದ್ದು, ಜೀವನದ ವಾಸ್ತವಿಕತೆಯನ್ನು ಇಲ್ಲಿ ತೋರಿಸಲಾಗಿದೆ. ಅದರಲ್ಲೂ ನಮ್ಮ ಎಂದಿನ ಜೀವನಶೈಲಿ ಬಲು ಅಸ್ತವ್ಯಸ್ತವಾದಾಗ ಏನಾಗುತ್ತದೆ, ಅದರ ಪರಿಣಾಮಗಳು ಏನಾಗುತ್ತವೆ ಎಂದು ವಿವರವಾಗಿ ತೋರಿಸಲಾಗಿದೆ. ಈ ಚಿತ್ರ ನಮ್ಮ ಪ್ರೇಕ್ಷಕರಿಗೆ ಇಷ್ಟವಾಗಬಹುದು, ಬಾಲಿವುಡ್ ನಲ್ಲಿ ನನ್ನ ಜೀವನ ಮೇಲೇರಬಹುದು ಎಂದೇ ಭಾವಿಸುತ್ತೇನೆ.
ಇದೊಂದು ನಾಯಕ ಪ್ರಧಾನ ಚಿತ್ರ. ಹೀಗಿರುವಾಗ ನಿನಗೆ ಇಲ್ಲಿ ಪವರ್ ಫುಲ್ ಪಾತ್ರ ಸಿಕ್ಕಿದೆಯೇ?
ಈ ಚಿತ್ರದಲ್ಲಿ ನನ್ನ ಪಾತ್ರ ಬಲು ಮಹತ್ವಪೂರ್ಣವಾದುದು. ನಾನು ಈ ಚಿತ್ರದ ನಾಯಕ ಚಂದುವಿನ ಪತ್ನಿ ಆರತಿಯ ಪಾತ್ರದಲ್ಲಿದ್ದೇನೆ. ಅವಳಿಗೆ ತನ್ನದೇ ಆದ ಅನೇಕ ಕನಸುಗಳಿವೆ. ಜೀವನದ ಸಂಘರ್ಷ ಎದುರಿಸಲು ಸಿದ್ಧಳಾಗುತ್ತಾಳೆ, ತನ್ನ ಪತಿಯ ಬಗ್ಗೆ ಅನೇಕ ಭರವಸೆ ಹೊಂದಿರುತ್ತಾಳೆ. ಆದರೆ ಅವನು ಅವಳ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ. ಆಗ ಅವರಿಬ್ಬರ ನಡುವೆ ಕೋಪ, ಜಗಳ ಹೆಚ್ಚುತ್ತದೆ. ಆ ದೃಷ್ಟಿಯಿಂದ, ನಾಯಕಿ ಇಲ್ಲಿ ಅವನೊಂದಿಗೆ ಜಗಳ ಆಡದಿದ್ದರೆ, ಅವನ ಪಾತ್ರಕ್ಕೆ ಹೇಗೆ ಮಹತ್ವ ಬರಲು ಸಾಧ್ಯ? ಯಾವ ರೀತಿ ಸಂಸಾರದಲ್ಲಿ ಪತಿ ಪತ್ನಿ ಇಬ್ಬರಲ್ಲಿ ಒಬ್ಬರು ಇಲ್ಲದಿದ್ದರೆ ಅದು ಅಪೂರ್ಣವೋ, ಹಾಗೆಯೇ ಸಿನಿಮಾದಲ್ಲಿ ನಾಯಕ ನಾಯಕಿಯರಲ್ಲಿ ಒಬ್ಬರು ಮಿಸ್ ಆದರೂ ಅದು ನಿರರ್ಥಕ ಎನಿಸುತ್ತದೆ. ಇಲ್ಲಿ ನಾಯಕನಿಗೆ ಇರುವಷ್ಟೇ ಪ್ರಾಮುಖ್ಯತೆ ನಾಯಕಿಗೂ ಇದೆ!

ಇದು ನಿನ್ನ ಮೊದಲನೇ ಹಿಂದಿ ಚಿತ್ರವೋ ಅಥವಾ ಇದಕ್ಕೆ ಮೊದಲು ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದುಂಟೇ?
ಇದಕ್ಕೆ ಮೊದಲು ನಾನು ಪೋಷಕ ಪಾತ್ರದಲ್ಲಿ ನಟಿಸಿದ್ದ ಹಿಂದಿ ಚಿತ್ರ ಪಂಜಾಬಿ ಭಾಷೆಯಲ್ಲೂ ಏಕಕಾಲಕ್ಕೆ ತಯಾರಾಗಿತ್ತು. ಆದರೆ ಪೂರ್ಣ ಪ್ರಮಾಣದ ನಾಯಕಿಗಾಗಿ ಈ ಚಿತ್ರವೇ ನನ್ನ ಮೊದಲ ಹಿಂದಿ ಚಿತ್ರ. ಇದರಲ್ಲಿ ನನ್ನ ಕೆಲಸದ ಅನುಭವ ಬಹಳ ಉತ್ತಮವಾಗಿ ಮೂಡಿಬಂದಿದೆ. ಶೂಟಿಂಗ್ ನ ಕೊನೆಯ ದಿನ ನಾವೆಲ್ಲ ಬಹಳ ಭಾವುಕರಾಗಿ, ದುಃಖಿತರಾದೆವು. ಇಂಥ ಫ್ಯಾಮಿಲಿಯಂಥ ಯೂನಿಟ್ ಮತ್ತೆ ನಮಗೆ ಸಿಗುವುದೇ ಎಂದು ಕಂಬನಿ ಮಿಡಿದೆ. ಇಡೀ ತಂಡದ ಪರದೆಯ ಮೇಲಿನ, ಹಿಂದಿನವರೆಲ್ಲ ನನಗೆ ಬಹಳ ಸಪೋರ್ಟ್ ಮಾಡಿದರು.
ನೀನು ಹಿಂದಿಗೆ ಮುಂಚೆ ತೆಲುಗು ಚಿತ್ರಗಳಲ್ಲಿ ನಟಿಸಿದ್ದೆ ಅಲ್ಲಿ, ಅಲ್ಲಿ ನಾಯಕಿಯನ್ನು ಸರಿಯಾಗಿ ಟ್ರೀಟ್ ಮಾಡಲ್ಲ ಅಂತಾರೆ. ತೆಲುಗು ಇಂಡಸ್ಟ್ರಿ ಬಲು ಮೇಲ್ ಡಾಮಿನೇಟೆಡ್ ಅಂತೆ. ಇದರ ಕುರಿತಾಗಿ ಏನು ಹೇಳ ಬಯಸುತ್ತೀಯಾ?
ಹ್ಞಾಂ, ಇಂಥ ಮಾತುಗಳನ್ನು ನಾನೂ ಸಾಕಷ್ಟು ಕೇಳಿದ್ದೀನಿ. ಇಲ್ಲಿ ಹೀರೋನೇ ಮುಖ್ಯ ಅಂತ ಹೇಳ್ತಿರ್ತಾರೆ. ಆದರೆ….. ನನ್ನ ವಿಷಯದಲ್ಲಿ ಹಾಗೇನೂ ಭೇದಭಾವ ಕಾಣಿಸಲಿಲ್ಲ. ನಾನು ನಟಿಸಿದ ತೆಲುಗು ಚಿತ್ರಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರಗಳೂ ಹಿಟ್ ಎನಿಸಿವೆ. `ಸದಾ ನನ್ನು ನಡಿಪೆ’ ಕಾಮಿಡಿ ಚಿತ್ರ ಸಾಕಷ್ಟು ಯಶಸ್ವಿಯಾಗಿ, ನನಗೆ ಒಳ್ಳೆಯ ಹೆಸರು ಬಂತು. ಅದೇ ತರಹ ಕನ್ನಡದ `ಶ್ರೀಮಂತ’ ಚಿತ್ರದಲ್ಲಿ ನಟಿಸಿದಾಗಲೂ ನನಗೆ ಇಂಥ ಭೇದಭಾವದ ಅರಿವು ಕಾಡಲಿಲ್ಲ. ಕನ್ನಡದಲ್ಲಿಯೂ ನನಗೆ ವಿಶೇಷ ಗೌರವಾದರಗಳು ಸಿಕ್ಕಿದವು.
ನಟನೆ ಮಾತ್ರವಲ್ಲದೆ ನೀನು ಫ್ಯಾಷನ್ ಲೈಫ್ ಸ್ಟೈಲ್ ನಲ್ಲೂ ಬಹಳ ಆಸಕ್ತಿ ಇರಿಸಿಕೊಂಡು, ಒಂದು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಿ ಅಲ್ಲವೇ?
ಹೌದು, ನಾನು ಕಾಲೇಜಿನ ದಿನಗಳಿಂದಲೇ ಈ ಆಧುನಿಕ ಫ್ಯಾಷನ್, ಗ್ಲಾಮರ್, ಮೇಕಪ್, ಲೈಫ್ ಸ್ಟೈಲ್ ಕುರಿತಾಗಿ ಬಹಳ ಆಸಕ್ತಿ ವಹಿಸಿ ರೀಲ್ಸ್ ಮಾಡುತ್ತಿದ್ದೆ. ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಈ ವಿಷಯಗಳಲ್ಲಿ ಬಹಳಷ್ಟನ್ನು ಕಲಿತೆ, ಸುಧಾರಿಸಿಕೊಂಡೆ. ಹೀಗಾಗಿ 2016ರಲ್ಲಿ ಈ ಸ್ಪರ್ಧೆಯಲ್ಲಿ ಫೈನಲ್ಸ್ ಹಂತದವರೆಗೂ ತಲುಪುವಂತಾಯಿತು. ಹೀಗಾಗಿ ನನ್ನ ಹೆಸರಿನಲ್ಲೇ ನನ್ನದೇ ಆದ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದೆ. ಈ ಎಲ್ಲಾ ವಿಷಯಗಳ ಕುರಿತಾಗಿ ಬಹಳಷ್ಟು ಬ್ಲಾಗ್ಸ್ ಮಾಡಿದ್ದೀನಿ. ಸದ್ಯ ನನ್ನ ಬಳಿ 10 ಸಾವಿರಕ್ಕೂ ಹೆಚ್ಚಿನ ಫಾಲೋಯರ್ಸ್ ಇದ್ದಾರೆ. ನಟನೆ ಹಾಗೂ ಚಾನೆಲ್ ಎರಡರಲ್ಲೂ ವೀಕ್ಷಕರು ಬಹಳ ಸಪೋರ್ಟ್ ಮಾಡ್ತಿದ್ದಾರೆ ಅಂತ ಬಹಳ ಖುಷಿ ಇದೆ!
`ವಾಟ್ ಎ ಕಿಸ್ಮತ್’ ಚಿತ್ರದ ಆರತಿ ಪಾತ್ರಧಾರಿಗೂ ನಿನಗೂ ಸಾಮ್ಯತೆ ಇದೆಯೇ?
ಹೌದು, ಆ ಪಾತ್ರಕ್ಕೂ ನನಗೂ ಬಹಳ ಸಾಮ್ಯತೆಗಳಿವೆ. ನಾವಿಬ್ಬರೂ ಸ್ವಾವಲಂಬಿಗಳು, ನಮ್ಮ ಲೆಕ್ಕಾಚಾರದಂತೆಯೇ ಜೀವನ ನಡೆಸುತ್ತೇವೆ. ಅಷ್ಟು ಮಾತ್ರವಲ್ಲದೆ, ಆರತಿಯ ಜೀವನದಲ್ಲಿನ ಸಂಘರ್ಷಕ್ಕೂ ನನ್ನ ಜೀವನದ ಸಂಘರ್ಷಕ್ಕೂ ಬಹಳಷ್ಟು ಹೋಲಿಕೆಗಳಿವೆ. ನಾವಿಬ್ಬರೂ ಬಹಳ ಶ್ರಮಜೀವಿಗಳು, ಕಷ್ಟಸಹಿಷ್ಣುಗಳು, ಸುಲಭವಾಗಿ ಸೋಲು ಒಪ್ಪುವವರಲ್ಲ.
ಇತ್ತೀಚೆಗೆ ಬಾಲಿವುಡ್ ನ ಎಷ್ಟೋ ತಾರೆಯರು ತೆಲುಗು ಸಿನಿಮಾರಂಗಕ್ಕೆ ವಲಸೆ ಹೊರಟಿದ್ದಾರೆ.
ನೀನು ಅಲ್ಲಿಂದ ಇಲ್ಲಿಗೆ ಬಂದಿದ್ದೀಯ. ಬಾಲಿವುಡ್ ನಲ್ಲಿ ಗಟ್ಟಿಯಾಗಿ ತಳವೂರುವ ಐಡಿಯಾ ಇದೆಯೇ?
ನನ್ನ ಪ್ರಕಾರ ದಕ್ಷಿಣದ ಯಾವುದೇ ಚಿತ್ರರಂಗ ಅಥವಾ ಬಾಲಿವುಡ್ ಇರಲಿ, ನಟನೆಗೆ ಭಾಷೆಯ ಹಂಗಿಲ್ಲ! ನನಗೆ ಎಲ್ಲಿ ಉತ್ತಮ ಅವಕಾಶ ಸಿಗುತ್ತದೋ ಅಲ್ಲಿ ನಾನು ನನ್ನ ಪ್ರತಿಭೆ ಪ್ರದರ್ಶಿಸಲು ಬಯಸುತ್ತೇನೆ.
ಹಾಗೆಯೇ ಇಂದು ಕಿರುತೆರೆ ತನ್ನ ಗಾತ್ರದ ಕಾರಣ ಖಂಡಿತಾ ಕಿರಿಯದಲ್ಲ! ಟಿವಿಯಲ್ಲಿ ಹಿರಿತೆರೆಯ ಎಷ್ಟೋ ಕಲಾವಿದರಿಗೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿನ ಹೆಸರು ಸಿಗುತ್ತಿದೆ. ಅದರಲ್ಲೂ ಕಲರ್ಸ್ ಚಾನೆಲ್ ನ `ಬಿಗ್ ಬಾಸ್’ ರಿಯಾಲಿಟಿ ಶೋ ಎಷ್ಟೋ ಕಲಾವಿದರಿಗೆ ಹೆಸರು, ಹಣ, ಪ್ರತಿಷ್ಠೆ ಗಳಿಸಿಕೊಟ್ಟಿದೆ.
ನಿನಗೆ ಹಿಂದಿಯ `ಬಿಗ್ ಬಾಸ್’ಗೆ ಹೋಗಲು ಆಹ್ವಾನ ಬಂದರೆ ಒಪ್ಪಿಕೊಳ್ತೀಯಾ?
ನಿಜ ಹೇಳಬೇಕು ಅಂದ್ರೆ, ಇದರ ಬಗ್ಗೆ ನಾನು ಇದುವರೆಗೂ ಯೋಚಿಸಿಯೇ ಇಲ್ಲ. ಆದರೆ ಕಿರುತೆರೆ ಹಿರಿತೆರೆಗಿಂತಲೂ ಹೆಚ್ಚು ಪವರ್ ಫುಲ್ ಅಂತ ಖಂಡಿತಾ ನಂಬುತ್ತೇನೆ. ನಾನು ಚಿಕ್ಕಂದಿನಿಂದಲೂ ಕಲರ್ ಟಿವಿಯ ಗ್ಲಾಮರ್, ಅದರ ಬೆಳವಣಿಗೆ ನೋಡಿ ಬಲ್ಲೆ. ಇದು ನಗರ ಮಾತ್ರವಲ್ಲದೆ, ಹಳ್ಳಿ ಹಳ್ಳಿಯ ಜನರನ್ನೂ ಸುಲಭವಾಗಿ ತಲುಪುತ್ತದೆ. ಹೀಗಿರುವಾಗ ಬಿಗ್ ಬಾಸ್ ನ ಅವಕಾಶ ಸಿಕ್ಕರೆ ಬಿಟ್ಟೋರುಂಟೇ?
`ವಾಟ್ ಎ ಕಿಸ್ಮತ್’ ಚಿತ್ರದ ಹೆಸರಿಗೆ ತಕ್ಕಂತೆ ನಿನಗೆ ಅದೃಷ್ಟದಲ್ಲಿ ಹೆಚ್ಚಿನ ನಂಬಿಕೆ ಇದೆಯೇ?
ನೀವು ಕೇವಲ ಅದೃಷ್ಟ ಒಂದನ್ನೇ ನಂಬಿಕೊಂಡು, ಅವಕಾಶ ತಾನಾಗಿಯೇ ಸಿಗುತ್ತದೆ ಎಂದು ಕಾಲು ಮೇಲೆ ಕಾಲು ಹಾಕಿಕೊಂಡು ಮನೆಯ ಸೋಫಾದಲ್ಲಿ ಕುಳಿತು, ಏನೂ ಶ್ರಮ ಪಡದಿದ್ದರೆ, ನಿಮಗೆ ಎಂಥ ಪ್ರತಿಭೆ ಇದ್ದರೂ ಅದು ಈ ನಟನೆಯ ಸಿನಿಮಾರಂಗದಲ್ಲಿ ನಡೆಯುವುದಿಲ್ಲ. ನಿಮ್ಮ ಸ್ವಂತ ಪರಿಶ್ರಮದಿಂದ ಮಾತ್ರವೇ ನೀವು ಮೇಲೇರಿ ಬರಬಲ್ಲಿರಿ!
– ಪ್ರತಿನಿಧಿ





