ಬಾಲ್ಯದಿಂದಲೂ ಅಪ್ಪಟ ಕನ್ನಡಾಭಿಮಾನಿಯಾದ ಕಸ್ತೂರಿ, ಕನ್ನಡ ನೆಲದಿಂದ ದೂರವಾಗಿ ಅಮೆರಿಕಾದಲ್ಲಿದ್ದರೂ, ಕನ್ನಡವನ್ನು ಎಂದೂ ಮರೆತಿರಲಿಲ್ಲ. ಅದೇ ಅಭಿಮಾನವನ್ನು ಅರಸಿ, ಅವನು ತನ್ನೂರಿಗೆ ಹೋದಾಗ ಅಲ್ಲಿ ನಡೆದದ್ದು ಏನು.......?
ಅಜಿತ್ ತೋಟದಿಂದ ಬಂದಾಗ ಅವನ ಅಮ್ಮ, ``ನಿನ್ನ ಫೋನ್ 2-3 ಸಲ ರಿಂಗಾಯಿತು ಕಣೋ.....ಮಹಡಿಯ ಮೇಲೆ ಇಟ್ಟಿದ್ದೀಯಾ.... ನನಗೆ ಮೆಟ್ಟಿಲು ಹತ್ತಲು ಆಗಲಿಲ್ಲ,'' ಎಂದರು.
``ನೋಡ್ತೀನಿ ಬಿಡಮ್ಮಾ.... ಕೆಳಗಡೆ ನೆಟ್ ವರ್ಕ್ ಸಿಗುವುದಿಲ್ಲ ಎಂದು ಅಲ್ಲಿ ಚಾರ್ಜ್ ಗೆ ಹಾಕಿಟ್ಟಿದ್ದೆ,'' ಎನ್ನುತ್ತಾ ಕೈ ಕಾಲು ತೊಳೆದು ಮಹಡಿಗೆ ಹೋಗಿ ನೋಡಿದ.
ಫೋನ್ ಕರೆ ಕಸ್ತೂರಿಯದಾಗಿತ್ತು `ಓ....' ಅಜಿತನಿಗೆ ಖುಷಿಯಾಯಿತು.
ಸುಮಾರು ತಿಂಗಳಿನಿಂದ ಮಹರಾಯನದು ಫೋನೇ ಇರಲಿಲ್ಲ. ಬಡ ಸ್ನೇಹಿತನ ಮರೆತುಬಿಟ್ಟ ಅಂದುಕೊಂಡಿದ್ದೆ. ಕಸ್ತೂರಿಯ ನೆನಪಿನಿಂದ ಮನ ಹೂವಾಯಿತು. ಅಜಿತನ ಬಾಲ್ಯ ಸ್ನೇಹಿತ ಕಸ್ತೂರಿ, ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದನು. ಜೀವನದಲ್ಲಿ ಎಷ್ಟು ಎತ್ತರಕ್ಕೆ ಏರಿದರೂ ಅಜಿತನ ಜೊತೆಗೆ ಅದೇ ಹಳೆಯ ಗೆಳೆಯನಾಗಿದ್ದ. ನಮ್ಮ ಕಸ್ತೂರಿ ಅಮೆರಿಕಾದಲ್ಲಿ ಇದ್ದರೂ ಕನ್ನಡದ ಬಗ್ಗೆ ತುಂಬಾ ಅಭಿಮಾನ, ಪ್ರೀತಿ. ಮತ್ತೆ ಯಾಕೆ ಅಮೆರಿಕಾಗೆ ಹೋಗಿದ್ದು ಇಲ್ಲೇ ಕೆಲಸಕ್ಕೆ ಸೇರಬೇಕಿತ್ತು ಅನ್ನಿತ್ತೀರೇನೋ ಅಲ್ವಾ....?
ಅನಿವಾರ್ಯ ಕಾರಣದಿಂದ ಅವನು ಅಲ್ಲಿ ಕೆಲಸಕ್ಕೆ ಸೇರಿದ. ಅವನು ಅಮೆರಿಕಾದಲ್ಲಿ ಇದ್ದರೂ ಕನ್ನಡ ಅವನ ಉಸಿರಾಗಿತ್ತು. ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದ. ಕನ್ನಡದಲ್ಲಿ ಎರಡು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದ. ಅಲ್ಲಿಯೂ ಕನ್ನಡದವರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತಿದ್ದ. ಅಮೆರಿಕಾ ವಾಸಿ ಕನ್ನಡದ ಮಕ್ಕಳಿಗೆ ಕನ್ನಡದ ಕಾಮಿಕ್ಸ್, ಕಥೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿದ್ದ. ಮದುವೆಯಾದ ಮೇಲೆ ಹೆಂಡತಿಯು ಅವನಿಗೆ ಎಲ್ಲದರಲ್ಲೂ ಪ್ರೋತ್ಸಾಹ ನೀಡುತ್ತಿದ್ದಳು.
ಕಸ್ತೂರಿ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ, ಇಪ್ಪತ್ತು ಮನೆಗಳಿರುವ ಶುದ್ಧ ಕನ್ನಡ ಮಾತನಾಡುವ ಹಳ್ಳಿ. ಎಲ್ಲಾ ಮನೆಯವರಿಗೂ ತಲತಾಂತರದಿಂದ ಬಂದ ತೋಟ, ಗದ್ದೆಗಳು ಇದ್ದ. ಕಸ್ತೂರಿಯ ಅಪ್ಪನಿಗೆ ಮಾತ್ರ ಒಂದು ಮನೆ, ಸುತ್ತಲೂ ಸ್ವಲ್ಪ ಜಾಗ ಬಿಟ್ಟು ಇನ್ನೇನು ಇರಲಿಲ್ಲ. ತಾತನ ಕಾಲದಿಂದ ಅವರದು ಪೌರೋಹಿತ್ಯದ ಮನೆತನ, ಪೌರೋಹಿತ್ಯದಿಂದಲೇ ಜೀವನ ಸಾಗಬೇಕಿತ್ತು.
ಆ ಹಳ್ಳಿಯಲ್ಲಿ ಪೌರೋಹಿತ್ಯದಲ್ಲಿ ಅಂಥ ವರಮಾನವಿರಲಿಲ್ಲ. ಕಸ್ತೂರಿಯ ದೊಡ್ಡಪ್ಪ ಹಾಗೂ ಚಿಕ್ಕಪ್ಪಂದಿರು ಪೌರೋಹಿತ್ಯ ನಂಬಿಕೊಂಡೆ ಜೀವನ ನಡೆಸುವ ಕಾರಣ ಮೂವರಿಗೂ ಹಂಚಿಹೋಗುತ್ತಿತ್ತು. ಅದಕ್ಕೆ ಚಿಕ್ಕ ವಯಸ್ಸಿನಿಂದಲೂ ಕಸ್ತೂರಿಗೆ ಚೆನ್ನಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಬೇಕು, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಮೂಡಿತ್ತು.
ದೊಡ್ಡ ಮಗನಾದ ಕಸ್ತೂರಿ ತುಂಬಾ ಚೆನ್ನಾಗಿ ಓದುತ್ತಿದ್ದ. ಮೆರಿಟ್ ನಲ್ಲಿ ಓದಿ ಕಷ್ಟಪಟ್ಟು ಎಂಜಿನಿಯರಿಂಗ್ ಮುಗಿಸಿದ. ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ. ಆದರೆ ಅಮೆರಿಕಾಗೆ ಹೋದರೆ ತುಂಬಾ ದುಡ್ಡು ಸಂಪಾದಿಸಬಹುದು, ಇಲ್ಲಿಗೆ ಬಂದು ಬಿಡು ಎಂದು ಅಮೆರಿಕಾಗೆ ಮೊದಲೇ ಹೋಗಿದ್ದ ಗೆಳೆಯರೆಲ್ಲ ಬಲವಂತ ಮಾಡಿದ ಕಾರಣ, ತಾನು ಅಲ್ಲಿಯ ಕೆಲಸಕ್ಕೆ ಅಪ್ಲೈ ಮಾಡಿದ. ಮೆರಿಟ್ ಇರುವ ಅವನಿಗೆ ಅಲ್ಲಿ ಸುಲಭವಾಗಿ ಕೆಲಸ ಸಿಕ್ಕಿತ್ತು.





