ತನ್ನ ಕುಟುಂಬವೇ ಸರ್ವಸ್ವ ಎಂದು ಬದುಕುತ್ತಿದ್ದ ಮಧ್ಯಮ ವರ್ಗದ ಗೃಹಿಣಿ ಸರಳಾಳಿಗೆ ಇದ್ದಕ್ಕಿದ್ದಂತೆ ಕ್ಯಾನ್ಸರ್ ಕಾಣಿಸಿಕೊಂಡಿತು. ಮುಂದೆ ನಡೆದದ್ದೇನು…….?
ಸರಳಾ ಒಬ್ಬ ಮಧ್ಯ ವಯಸ್ಸಿನ ಗೃಹಿಣಿ. ಗಂಡ ರೋಷನ್ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ. ಮಗ-ಮಗಳು ಇಬ್ಬರೂ ಕಾಲೇಜ್ ನಲ್ಲಿ ಓದುತ್ತಿದ್ದರು. ಸುಖೀ ಸಂಸಾರ. ಬೆಳಗ್ಗೆಯೆಲ್ಲ ಸರಳವಾಗಿ ಮನೆ ಕೆಲಸದಲ್ಲಿ ಬಿಡುವೇ ಇರುತ್ತಿರಲಿಲ್ಲ. ಮಕ್ಕಳಿಬ್ಬರೂ ತಿಂಡಿ ತಿಂದು ಕಾಲೇಜಿಗೆ ಹೋಗಿ ಗಂಡನಿಗೆ ಊಟ ಕಟ್ಟಿಕೊಟ್ಟು ಕಳುಹಿಸುವಷ್ಟರಲ್ಲಿ ಸಮಯ ಕಳೆದು ಹೋಗುತ್ತಿತ್ತು.
ಆದರೂ ಸರಳ ಆಯಾಸ ತೋರಗೊಡದೆ ಮೆಲು ದನಿಯಲ್ಲಿ ಹಾಡು ಗುನುಗುತ್ತಾ ಮನೆಯನ್ನು ಓರಣಗೊಳಿಸಿ, ಮನೆಯವರೆಲ್ಲಾ ಸಂಜೆ ಬರುವಷ್ಟರಲ್ಲಿ ತಿಂಡಿ ಮಾಡಲು ತಯಾರಾಗುತ್ತಿದ್ದಳು. ಹೀಗೆ ಜೀವನ ಬಂಡಿ ಸಾಗುತ್ತಿತ್ತು.
ಇತ್ತೀಚೆಗೆ ಸರಳಾಗೆ ಮನೆಗೆಲಸ ಮಾಡುವಾಗ ವಿಪರೀತ ಆಯಾಸವಾಗುತ್ತಿತ್ತು. ತಲೆ ಸುತ್ತಿದ ಅನುಭವ ಹಾಗೂ ಕೆಲವೊಮ್ಮೆ ವಾಂತಿ ಆಗುತ್ತಿತ್ತು. ಪರಿಚಯವಿದ್ದ ವೈದ್ಯರಿಗೆ ತೋರಿಸಿ ಹಲವು ಪರೀಕ್ಷೆಗಳನ್ನು ಮಾಡಿ ಅದರ ಫಲಿತಾಂಶ ನೋಡಿದಾಗ ರೋಷನ್ ಹಾಗೂ ಮಕ್ಕಳಿಗೆ ಆಘಾತವಾಯಿತು.
ಸರಳಾಗೆ ರಕ್ತದ ಕ್ಯಾನ್ಸರ್ 3ನೇ ಹಂತಕ್ಕೆ ಕಾಲಿಟ್ಟಿದೆ. ಹೆಚ್ಚು ದಿನ ಬದುಕುವ ಸಂಭವವಿಲ್ಲ ಎಂದು ಡಾಕ್ಟರ್ ಹೇಳಿದರು. ಆದರೆ ರೋಷನ್ ಹಾಗೂ ಮಕ್ಕಳಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದು ಸರಳಾಳಿಗೆ ಸತ್ಯ ಹೇಳದೆ ವಿಷಯವನ್ನು ಮರೆಮಾಚಿದರು. ಜೊತೆಗೆ ಆಕೆಗೆ ಮನೋಧೈರ್ಯ ತುಂಬುತ್ತಾ ಔಷಧೋಪಚಾರ ಮಾಡುತ್ತಾ, ಯಾವ ದೊಡ್ಡ ಖಾಯಿಲೆಯೂ ಇಲ್ಲ, ವೈದ್ಯರ ಸಲಹೆಯಂತೆ ನಡೆದುಕೊಂಡು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡರೆ, ಎಲ್ಲವೂ ಸರಿಹೋಗುತ್ತದೆ. ಭಯಪಡುವ ಅಗತ್ಯವೇ ಇಲ್ಲ ಎಂದು ಸುಳ್ಳು ಹೇಳಿದರು. ಹಲವು ಉದಾಹರಣೆಗಳನ್ನು ಕೊಟ್ಟು ಮಾರಣಾಂತಿಕ ಖಾಯಿಲೆಗಳಿಂದ ಎದುರಿಸಿ ಬಂದವರ ಕಥೆಗಳನ್ನು ಹೇಳುತ್ತಾ, ಅವೆಲ್ಲದರ ಮುಂದೆ ನಿನಗೆ ಬಂದಿರುವ ಖಾಯಿಲೆ ಏನೇನೂ ಅಲ್ಲ, ತಲೆಕೆಡಿಸಿಕೊಳ್ಳುವ ಆಗತ್ಯವೇ ಇಲ್ಲ, ಆದರೆ ಚಿಕಿತ್ಸೆ ಮಾತ್ರ ವೈದ್ಯರು ಹೇಳಿದ್ದರಿಂದ ಮಾಡಲೇ ಬೇಕು ಎಂದೆಲ್ಲಾ ಹೇಳಿ ತಮ್ಮ ಪಾಲಿನ ಎಲ್ಲಾ ಕೆಲಸಗಳನ್ನೂ ತಾವೇ ಮಾಡಿಕೊಳ್ಳುತ್ತಿದ್ದರು. ತಮ್ಮ ಮೂಲಕ ಸರಳಾಳನ್ನು ಸದಾ ಖುಷಿಯಾಗಿ ಆತಂಕಕ್ಕೆ ಈಡಾಗದೆ ಇರುವಂತೆ ನೋಡಿಕೊಳ್ಳುತ್ತಿದ್ದರು.
ಇದರಿಂದ ಸರಳಾ ತನ್ನ ಖಾಯಿಲೆಯ ಬಗ್ಗೆ ಅರಿವೇ ಇಲ್ಲದೆ, ಮಾನಸಿಕವಾಗಿ ಕುಗ್ಗದೆ ಚಿಕಿತ್ಸೆ ತೆಗೆದುಕೊಳ್ಳುತ್ತಾ ಎಂದಿನಂತೆ ಸಹಜ ಜೀವನವನ್ನು ನಡೆಸುತ್ತಿದ್ದಳು. ಯಾವ ಧಾವಂತ ಇಲ್ಲದಿರುವುದರಿಂದ ಅವಳ ದೇಹ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿತ್ತು. ಕೊನೆ ಕೊನೆಗೆ ನಾನು ಚೆನ್ನಾಗಿದ್ದೇನೆ, ವೈದ್ಯರ ಬಳಿ ಪರೀಕ್ಷಿಸುವ ಅಗತ್ಯ ಇಲ್ಲ ಎಂದು ತನ್ನ ಗಂಡನ ಬಳಿ ಮನವಿ ಮಾಡತೊಡಗಿದಳು.
ಆದರೆ ಸರಳಾಳ ಖಾಯಿಲೆಯ ಬಗ್ಗೆ ಅರಿವಿದ್ದ ಅವಳ ಗಂಡ ಸ್ವಲ್ಪ ದಿನದ ಮಟ್ಟಿಗೆ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ಒಪ್ಪಿಸಿದನು. ಸುಳ್ಳಿಗೆ ಆಯುಸ್ಸು ಕಮ್ಮಿ ಅಲ್ಲವೇ….? ಒಂದಲ್ಲ ಒಂದು ದಿನ ಸತ್ಯ ಹೊರಬಂದೇ ಬರುತ್ತದೆ. ಅದರಲ್ಲಂತೂ ರೋಗಿಗಳ ಬಳಿ ಅವರಿಗೆ ಬಂದಿರುವ ರೋಗವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಾಗುವುದಿಲ್ಲ.
ಹೀಗಿರಲು ಒಂದು ದಿನ ಪರೀಕ್ಷೆಗೆಂದು ಹೋದಾಗ, ಒಬ್ಬ ದಾದಿ ಮಾತನಾಡುತ್ತಾ, ನಿಮ್ಮದು ತುಂಬು ಕುಟುಂಬ, ಬೇಗ ಮಕ್ಕಳ ಮದುವೆ ಮಾಡಿಬಿಡಿ, ಮೊಮ್ಮಕ್ಕಳನ್ನು ನೋಡುವ ಭಾಗ್ಯ ಇದೆಯೋ ಇಲ್ಲವೋ ಎಂದು ಮಾತನಾಡಿದಳು. ನಿಜ ವಿಷಯವನ್ನು ಕೇಳಿದಾಗ ತನ್ನ ಕ್ಯಾನ್ಸರ್ ರೋಗ ಅಂತಿಮ ಹಂತದಲ್ಲಿರುವ ವಿಷಯ ಸರಳಾಗೆ ಗೊತ್ತಾಯಿತು.

ಮನೆಯರೆಲ್ಲಾ ತನಗಿರುವ ಖಾಯಿಲೆ ಬಗ್ಗೆ ಸುಳ್ಳು ಹೇಳಿ ಈ ವಿಷಯ ಮುಚ್ಚಿಟ್ಟು ನಾಟಕವಾಡಿದ್ದಕ್ಕೆ ಕೋಪ ಬಂದು ಮಕ್ಕಳ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಬಿಡದೆ ಕಾಯುತ್ತಿರುವ ವಿಧಿಯನ್ನು ಹಳಿದಳು.
ವಿಷಯ ತಿಳಿದ ರೋಷನ್ ಮತ್ತು ಮಕ್ಕಳು ಕೊಂಚ ಧೈರ್ಯಗೆಡದೆ ಕ್ಯಾನ್ಸರ್ ರೋಗವನ್ನು ಗೆದ್ದು ಬಂದ ವ್ಯಕ್ತಿಗಳ ಬಗ್ಗೆ ಹೇಳಿದರು. ಹಾಗೆಯೇ ವೈದ್ಯ ಮಿತ್ರರಿಂದ ನೆರವು ತೆಗೆದುಕೊಳ್ಳುತ್ತಾ ಕ್ಯಾನ್ಸರ್ ಗೆದ್ದು ಬರುವ ಬಗೆಗೆ ಚರ್ಚಿಸುತ್ತಿದ್ದರು. ಯೋಗ ಧ್ಯಾನ ಮಂತ್ರಗಳ ಮುಖಾಂತರ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆ ತುಂಬಿರುವ ಹಾಗೆ ನೋಡಿಕೊಳ್ಳುತ್ತಿದ್ದರು.
ಮನೆಯವರೆಲ್ಲರ ಈ ನೆರವು ಸಹಕಾರದಿಂದ ಸರಳಾಗೂ ತಾನು ಕ್ಯಾನ್ಸರ್ ಗೆಲ್ಲಬಲ್ಲನೆಂಬ ವಿಶ್ವಾಸ ಮೂಡಿತು. ಕೆಲವು ತಿಂಗಳ ಬಳಿಕ, ಸರಳಾಳನ್ನು ಪರೀಕ್ಷೀಸಿದ ವೈದ್ಯರಿಗೆ ಅಚ್ಚರಿಯಾಗುವಂತೆ, ಅವಳ ಕ್ಯಾನ್ಸರ್ ಗುಣಮುಖವಾಗ ತೊಡಗಿತು! ಇದರಿಂದ ಮತ್ತೂ ಉತ್ಸಾಹಗೊಂಡ ಸರಳಾ, ತನ್ನ ಉದಾಹರಣೆಯನ್ನೇ ಹೇಳುತ್ತಾ, ಕ್ಯಾನ್ಸರ್ ರೋಗಿಗಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸಕ್ಕೆ ತೊಡಗಿದಳು. ಹೀಗೆ ಕ್ರಮೇಣ ಕ್ಯಾನ್ಸರ್ ನಿಂದ ಪೂರ್ಣ ಗುಣಮುಖಳಾಗಿ ಈಗ ನಗರದಲ್ಲಿ ಪ್ರಖ್ಯಾತ ಕ್ಯಾನ್ಸರ್ ಸಹಾಯ ಕೇಂದ್ರವನ್ನು ನಡೆಸಲು ಮುಂದಾದಳು.
ಹೀಗೆ ಮನೆಯವರು ಮುಚ್ಚಿಟ್ಟ ಸತ್ಯ ಹಾಗೂ ಸಿಹಿಯಾದ ಮಿಥ್ಯ ಸರಳಾಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಲ್ಲದೆ, ತನ್ನಂತೆ ನೂರಾರು ಜನರನ್ನು ಪಾರು ಮಾಡುವ ಪುಣ್ಯ ಕಾರ್ಯಕ್ಕೂ ಪ್ರೇರೇಪಣೆ ನೀಡಿತ್ತು. ಸರಳಾ ತರಹ ಮನೋಸ್ಥೈರ್ಯದಿಂದ ಮಾರಣಾಂತಿಕ ಖಾಯಿಲೆಗಳನ್ನು ಗೆದ್ದು ಬಂದ ಜೀವಂತ ನಿದರ್ಶನಗಳು ನಮ್ಮ ನಡುವೆ ಬೇಕಾದಷ್ಟು
ಇವೆ.





