ತಾನಾಗಿ ಅನಿರುದ್ಧ್ ಪ್ರೇಮಿಸಿ ಬಯಸಿದ ಹುಡುಗಿಯರು ಅವನ ಕೈಗೆಟುಕದ ಗಗನಕುಸುಮಗಳಾಗಿದ್ದರು. ಕೊನೆಗೆ ಅವನು ಯಾರನ್ನು ಕೈಹಿಡಿಯುವಂತಾಯಿತು.....?
ಅನಿರುದ್ಧ್ ಸಾನ್ವಿ ಹೋದ ದಾರಿಯನ್ನೇ ನೋಡುತ್ತಾ ಕುಳಿತ. `ಇದೇನು ಹೇಳಿ ಹೋದಳು....? ಅವಳು ತನ್ನ ಪ್ರೀತಿ ಬಾಲಿಶ ಎಂದುಬಿಟ್ಟಳಲ್ಲ. ನನಗಿಂತ ಇವಳ್ಯಾವ ಮಹಾ ದೊಡ್ಡವಳು...? ಇವಳನ್ನು ಒಲಿಸಿಕೊಳ್ಳಲು ನಾನು ಕಡಿಮೆ ಪ್ರಯತ್ನ ಪಟ್ಟಿದ್ದೇನೆಯೇ...? ಇಷ್ಟು ದಿನ ಇಲ್ಲದ್ದು ಈಗೇಕೆ ಅನಿಸಿತು?' ಎಂಬ ಯೋಚನೆಯಲ್ಲಿಯೇ ಮುಳುಗಿದ್ದ.
ಸಾನ್ವಿ, ಅನಿರುದ್ಧ್ ಹೈಸ್ಕೂಲ್ ನಿಂದಲೂ ಸ್ನೇಹಿತರು. ಊರ್ವಶಿಯ ಬೆನ್ನ ಹಿಂದೆ ಬಿದ್ದಿದ್ದ ಅನಿರುದ್ಧ್ ಗೆ ಸಾನ್ವಿ ಎಂದರೆ ಅಷ್ಟಕ್ಕಷ್ಟೇ. ಯಾವಾಗಲೂ ಅವಳು ಓದುವುದರಲ್ಲಿಯೂ ಮುಂದು. ಅನಿರುದ್ಧ್ ಗೆ ಓದುವುದಕ್ಕಿಂತ ಮಿಕ್ಕೆಲ್ಲ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ.
ಊರ್ವಶಿ ಒಳ್ಳೆಯ ನೃತ್ಯಗಾರ್ತಿ. ಹಾಗಾಗಿ ಆಗಾಗ ಅವರಿಬ್ಬರ ಭೇಟಿ ಅನಿವಾರ್ಯವಾಗುತ್ತಿತ್ತು. ಗೆಳೆಯ ಶ್ರೀಕರನೊಂದಿಗೆ ಊರ್ವಶಿಯ ಓಡಾಟ ಹೆಚ್ಚಾಗುತ್ತಾ ಇಬ್ಬರೂ ಪ್ರೇಮದಲ್ಲಿ ಸಿಲುಕ್ಕಿದ್ದರು. ಆದರೆ ಅನಿರುದ್ಧ್ ಮನದಲ್ಲಿಯೇ ಊರ್ವಶಿಯ ಧ್ಯಾನ ಮಾಡುತ್ತಾ ಅವಳನ್ನು ಆರಾಧಿಸುತ್ತಿದ್ದ.
ಊರ್ವಶಿ ಅನಿರುದ್ಧ್ ನೊಂದಿಗೆ ಸಹ ಚೆನ್ನಾಗಿಯೇ ಇರುತ್ತಿದ್ದುದರಿಂದ ಅವನಿಗೆ ಅವಳ ಪ್ರೇಮದ ಬಗ್ಗೆ ಎಂದೂ ಅಪನಂಬಿಕೆ ಉಂಟಾಗಿರಲಿಲ್ಲ. ಅವರ 12ನೇ ತರಗತಿಯ ಪರೀಕ್ಷೆ ಮುಗಿದು ಹೋಗಿತ್ತು.
ಶ್ರೀಕರ್ ಹಾಗೂ ಊರ್ವಶಿ ಇಬ್ಬರೂ ಎಂಜಿನಿಯರಿಂಗ್ ಸೇರಲು ನಿರ್ಧರಿಸಿದ್ದರು. ಅನಿರುದ್ಧ್ ಮೆಡಿಕಲ್ ಎಂದು ಎಂಟ್ರೆನ್ಸ್ ಎಗ್ಸಾಮ್ ಬರೆದಿದ್ದ. ಊರ್ವಶಿ ತನ್ನನ್ನೇ ಅನುಸರಿಸುತ್ತಾಳೆ, ತನ್ನ ಪ್ರೀತಿ ಅವಳು ಎಂದು ನಂಬಿದ್ದ ಅವನಿಗೆ ಸೋಮೇಶ್ ಹೇಳುವವರೆಗೂ ಗೊತ್ತೇ ಆಗಿರಲಿಲ್ಲ.
ಅವನಿಗೆ ಮೊದಲ ಬಾರಿ ಪ್ರೀತಿಯಲ್ಲಿ ಪರಾಭಾವವಾಗಿತ್ತು. ಅವಳನ್ನು ಜಬ್ಬರಿಸಿ ಕೇಳಬೇಕು ಎಂದುಕೊಂಡಿದ್ದವನಿಗೆ ಏನು ಕೇಳಲು ಮನಸ್ಸಾಗದೆ ತನ್ನ ನೋವನ್ನು ನುಂಗಿಕೊಂಡು ತನ್ನೆಲ್ಲ ಆಸಕ್ತಿಯನ್ನು ಓದಿನಲ್ಲಿ ಕೇಂದ್ರೀಕರಿಸಿದ್ದ.
ಮೆಡಿಕಲ್ ನಲ್ಲಿ ಸೀಟು ಸಿಕ್ಕಿ ಅವನು ಕಿಮ್ಸ್ ನಲ್ಲಿ ಪ್ರವೇಶ ಪಡೆದಾಗ ಮನೆಯವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನೂ ಬಹಳ ಖುಷಿಯಾಗಿದ್ದ. ಮೊದಲ ದಿನವೇ ಕಾಲೇಜಿನಲ್ಲಿ ಸಾನ್ವಿಯ ಭೇಟಿಯಾಗಿತ್ತು. ಸಾನ್ವಿಯನ್ನು ನೋಡಿ ಅವನಿಗೆ ಬಹಳ ಸಂತೋಷವಾಗಿತ್ತು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಸ್ನೇಹ ಯಾವಾಗ ಪ್ರೀತಿಗೆ ತಿರುಗಿತ್ತೋ ಇಬ್ಬರಿಗೂ ಗೊತ್ತಾಗಲಿಲ್ಲ.
ಓದು ಮುಗಿದು ಹೌಸ್ಮನ್ ಶಿಪ್ ಮಾಡುವಾಗ ಅನಿರುದ್ಧನಿಗೆ ಸಾನ್ವಿಯನ್ನು ಒಂದು ದಿನ ನೋಡದೆ ಇರುವುದೂ ಕಷ್ಟವಾಗುತ್ತಿತ್ತು. ಇಬ್ಬರ ಭಾವನೆಗಳು ಆಸೆಗಳು ಹೆಚ್ಚು ಕಮ್ಮಿ ಒಂದೇ ರೀತಿ ಇರುತ್ತಿದ್ದವು. ಹಾಗಾಗಿ ಸಹಜವಾಗಿ ಅನಿರುದ್ಧ್ ಅವಳ ಪ್ರೇಮದಲ್ಲಿ ಬಂಧಿಯಾಗತೊಡಗಿದ್ದ.
ಮದುವೆಯಾದರೆ ಸಾನ್ವಿಯನ್ನೇ ಎನಿಸಿ, ತನ್ನ ಮನದಾಸೆಯನ್ನು ಗೆಳೆಯನಲ್ಲಿ ಹೇಳಿಕೊಂಡಿದ್ದ.
``ನಿನಗೆ ಅವಳ ಮೇಲೆ ಅಷ್ಟು ಆಸೆ ಪ್ರೀತಿ ಇದ್ದರೆ ಪ್ರಪೋಸ್ ಮಾಡು,'' ಎಂದು ಗೆಳೆಯ ಸನ್ನಿ ಹೇಳಿದ.
ಸಮಯ ಹೀಗೆ ಇರುವಾಗ ಇಬ್ಬರೂ ಡಾಕ್ಟರ್ಸ್ ಆಗಿದ್ದರು. ಅನಿರುದ್ಧ್ ಗೆ ಅವಳನ್ನು ನೋಡುವುದರಲ್ಲಿಯೇ ಏನೋ ಪ್ರೀತಿ. ಅವನ ಕಣ್ಣುಗಳಿಗೆ ಅವಳು ಸದಾ ದೇವಲೋಕದಿಂದ ಇಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು.
ಅನಿರುದ್ಧ್ ನನ್ನು ಅದೆಷ್ಟೋ ಹುಡುಗಿಯರು ಪ್ರೀತಿಸಲು ಸಿದ್ಧರಿದ್ದರೂ, ಅವನಿಗೆ ಸಾನ್ವಿಯ ವಿನಾ ಬೇರಾರು ಕಾಣುತ್ತಿರಲಿಲ್ಲ. ಅವಳು ಕಾಲೇಜಿಗೆ ಬರುವುದು ಬಹಳ ಕಡಿಮೆಯಾಗಿತ್ತು. ಕಾಲ್ ಮಾಡಿದರೂ ಸಿಗುತ್ತಿರಲಿಲ್ಲ. ತನ್ನ ಕಾಲ್ ಕಂಡಕೂಡಲೇ ಉತ್ತರಿಸುತ್ತಾ, ಆಕ್ಷೇಪಿಸುತ್ತಾ ಇರುತ್ತಿದ್ದವಳಿಗೆ ಇದೇನಾಯಿತು? ಎಂದು ಮನದಲ್ಲಿಯೇ ಅನಿರುದ್ಧ್ ಕೊರಗುತ್ತಿದ್ದ.





