ಕಥೆ - ಎಚ್. ಶೋಭಾ ಕಾಮತ್
ಆತ್ಮೀಯ ನೆರೆಹೊರೆಯವರಾಗಿ ಬಹು ಕಾಲದ ಗೆಳೆತನದ ನಂತರ, ಗಿಡಮರಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದರೂ, ಅವಕ್ಕೆ ಅನಾಹುತ ಎದುರಾದಾಗ ಗಾಬರಿಗೊಂಡ ಲೇಖಕಿ ಗಿಡಮರ ಸಂರಕ್ಷಿಸಿಕೊಂಡಿದ್ದು ಹೇಗೆ…….?
ನಾನು ಸೋದರತ್ತೆಯ ಮಗನನ್ನೇ ಮದುವೆಯಾಗಿದ್ದೆ. ನಲ್ವತ್ತು ವರ್ಷಗಳ ಹಿಂದೆ ಬಿ.ಕಾಂ ಪದವೀಧರೆಯಾಗಿದ್ದರೂ, ಉದ್ಯೋಗವನ್ನರಸದೆ ಪತಿಯ ಇಚ್ಛೆಯಂತೆ ಗೃಹಿಣಿ ಪಟ್ಟವನ್ನು ಮೆಚ್ಚಿಕೊಂಡಿದ್ದೆ. ಪತಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಯಾದ್ದರಿಂದ ವೈಭೋಗದ ಜೀವನ ಸಾಧ್ಯವಿಲ್ಲದಿದ್ದರೂ, ಉತ್ತಮ ಮಟ್ಟದಲ್ಲಿ ದಿನ ಕಳೆಯುತ್ತಿದ್ದೆ. ಹೆಚ್ಚಿನ ಉಳಿತಾಯಕ್ಕೆ ಸಾಧ್ಯವಿಲ್ಲದಿದ್ದರೂ ಯಾವುದಕ್ಕೂ ಕಡಿಮೆ ಮಾಡುತ್ತಿರಲಿಲ್ಲ ನನ್ನವರು.1988-89ರ ಕಾಲವದು. ಆರ್ಥಿಕ ಪ್ರಗತಿ ಇಲ್ಲದ್ದರಿಂದ ವೇತನ ಕಡಿಮೆ. ತಿಂಗಳ ಖರ್ಚು ಕೂಡ ಅತಿರೇಕವಾಗುತ್ತಿರಲಿಲ್ಲ. ಪತಿಯೊಂದಿಗೆ ಕೆಲಸ ಮಾಡುತ್ತಿದ್ದವರಲ್ಲಿ ಕಡಿಮೆ ಸಂಬಳ ಪಡೆಯುತ್ತಿದ್ದ ಸಿಬ್ಬಂದಿಗಳು ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಕಟ್ಟುತ್ತಿರುವಾಗ ಅಧಿಕಾರಿಯಾದ ತಾನೇಕೆ ಮನೆ ಕಟ್ಟಬಾರದೆಂಬ ಮನಸ್ಸಾಯ್ತು ನಮ್ಮವರಿಗೆ. ಇವರ ದೊಡ್ಡ ಅಣ್ಣ ಕೂಡ ಅದೇ ಆಲೋಚನೆಯಲ್ಲಿದ್ದರು. ಅಂತೂ ಆ ವರ್ಷದ ಮಳೆಗಾಲದ ಶುಭ ಮುಹೂರ್ತದಲ್ಲಿ ಇಬ್ಬರ ಮನೆಗಳಿಗೂ ಅಡಿಗಲ್ಲು ಇಟ್ಟು, ಗೃಹಸಾಲ, ಬಂಗಾರದ ಸಾಲ, ಸಂಬಳದ ಆಧಾರದಲ್ಲಿ ಹೆಚ್ಚು ಬಡ್ಡಿ ಸಾಲವೆಂದು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ 5 ಸೆಂಟ್ಸ್ ಜಾಗದಲ್ಲಿ ಮನೆ ಮಾಲೀಕರಾದೆವು.
ನಾವು ಬೇರೆ ಊರಿನಲ್ಲಿರುವುದರಿಂದ ಮನೆಯ ಉಸ್ತುವಾರಿ, ತೆರಿಗೆ ಪಾವತಿ, ಬಾಡಿಗೆದಾರರನ್ನು ಹುಡುಕುವುದು, ಬಾಡಿಗೆ ವಸೂಲಿ, ಹೂಗಿಡಗಳ ನೆಡುವಿಕೆ, ಪೋಷಣೆ, ಆರೈಕೆ ಎಲ್ಲವನ್ನೂ ಇವರ ಅಣ್ಣನೇ ನೋಡಿಕೊಳ್ಳುತ್ತಿದ್ದರು. ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದಾಗಿ ಸ್ವಂತ ಮನೆಯಲ್ಲಿ ನಿಂತು ಕಾಲ ಕಳೆಯಬೇಕೆಂಬ ಭಾವನೆ ನಮ್ಮಿಬ್ಬರಿಗೂ ಬರಲೇ ಇಲ್ಲ. ವರ್ಗಾವಣೆಯ ನಿಮಿತ್ತ ಊರೂರು ಸುತ್ತತೊಡಗಿದೆವು. ಆ ಕಾಲದಲ್ಲಿ ವೇತನ ಕಡಿಮೆ. ಹಲವು ಸಾಲಗಳಿಗೆ ಕಂತಿನಂತೆ ಹಣ ಪಾವತಿ ಮಾಡುತ್ತಿದ್ದುದರಿಂದ ತಿಂಗಳ ಮನೆ ಬಾಡಿಗೆ ಹಣ ಅತ್ಯವಶ್ಯಕವಾಗಿತ್ತು. ಬಾಡಿಗೆ ಬರುವುದು ತಡವಾದರೆ ನಮ್ಮವರ ದಿನಚರಿಯಲ್ಲಿ ಅಲ್ಲೊಲಕಲ್ಲೋಲವಾಗುತ್ತಿತ್ತು.
ಸಿರ್ಸಿ, ಯಲ್ಲಾಪುರಗಳಂತಹ ತಕ್ಕಮಟ್ಟಿಗೆ ದೊಡ್ಡ ಊರು, ಮುಂಡಗೋಡುದಂತಹ ಸಾಮಾನ್ಯ ಊರುಗಳನ್ನೂ ಸುತ್ತಾಡಿದೆವು. ಎಲ್ಲಾ ಕಡೆಯೂ ಅನುಕೂಲವಾದ ಒಳ್ಳೆಯ ಬಾಡಿಗೆ ಮನೆಗಳು ಸಿಗುತ್ತಿದ್ದವು. ಮಾಲೀಕರು ಒಳ್ಳೆಯವರೇ ಆಗಿರುತ್ತಿದ್ದರು. ಅವರೊಂದಿಗೆ ನಮ್ಮ ಬಾಂಧವ್ಯ ಹೇಗಿರುತ್ತಿತ್ತೆಂದರೆ ಈಗಲೂ ದೂರವಾಣಿ ಮುಖಾಂತರ ಮಾತಾಡುತ್ತಿರುತ್ತೇವೆ. ನಾನು ಬಾಡಿಗೆ ಮನೆಯಲ್ಲಿದ್ದರೂ, ಮನೆಯನ್ನು ಚೆನ್ನಾಗಿ ಚೊಕ್ಕವಾಗಿ ಇಟ್ಟುಕೊಳ್ಳುತ್ತಿದ್ದೆ. ಬಾಡಿಗೆ ಮನೆಯಾದರೂ ನಮಗೆ ನಮ್ಮದೇ ಮನೆ ಎಂಬ ಭಾವನೆ ಇತ್ತು. ಎಲ್ಲಾ ಕಡೆ ಮನೆ ಮಾಲೀಕರು ನಾವು ಮನೆ ಇಟ್ಟುಕೊಳ್ಳುವ ರೀತಿ ಮೆಚ್ಚಿಕೊಳ್ಳುತ್ತಿದ್ದರು, ಜೊತೆಗೆ ನಮ್ಮೆದುರೇ ಇತರರನ್ನು ಹಳಿಯುತ್ತಿದ್ದರು.
ನಮ್ಮವರ ನಿವೃತ್ತಿ ಸಮೀಪವಾಗುತ್ತಿದ್ದಂತೆ ಮಂಗಳೂರಿಂದ 70 ಕಿ.ಮೀ. ದೂರದ ಹಳ್ಳಿಗೆ ಬಂದೆವು. ಅನುಕೂಲದ ದೃಷ್ಟಿಯಿಂದ ಉಡುಪಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡೆವು. ವಯಸ್ಸಿನ ನಿಮಿತ್ತ ಕಾಲು ಗಂಟಿನ ನೋವು ಆರಂಭವಾಗಿ ಮೊದಲಿನ ತರಹ ಮನೆ ಕೆಲಸ ಮಾಡಲಾಗುತ್ತಿರಲಿಲ್ಲ. ಮೊದಲಿನಂತೆ ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಲು ಕಷ್ಟವಾಗುತ್ತಿತ್ತು. ಕೆಲಸದವಳು ಚೆನ್ನಾಗಿದ್ದರೆ ಬಚಾವ್.