ಮಿನಿ ಕಥೆ –  ಕೆ. ಜಲಜಾಕ್ಷಿ  

ಮೊಬೈಲ್ ಬ್ಯಾಟರಿ ಚಾರ್ಜ್‌ ಆಗಿದೆಯೋ ಇಲ್ಲವೋ ಎನ್ನುವುದನ್ನು ಎರಡೆರಡು ಬಾರಿ ಚೆಕ್‌ ಮಾಡಿಕೊಳ್ಳುವ ನನ್ನ ತಾಯಿ ಕೆಲವೊಮ್ಮೆ ನಾನು ಹಸಿದಿದ್ದರೂ ನನ್ನತ್ತ ಗಮನಹರಿಸುವುದಿಲ್ಲ…….

ಸುಪ್ರಿಯಾ ಮತ್ತು ಸುರೇಶ್‌ ದಂಪತಿಗಳ ಒಬ್ಬನೇ ಮಗ ಆದಿತ್ಯ. ಎಂಟು ವರ್ಷದ ಅವನಿನ್ನು ಮಲಗಿ ನಿದ್ರಿಸುತ್ತಿದ್ದ. ಸುಪ್ರಿಯಾ ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕಿ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದುವುದರಲ್ಲಿ ನಿರತಳಾಗಿದ್ದಳು. ಅವಳು ಬಹಳ ದಣಿದಂತೆ ಕಾಣುತ್ತಿದ್ದರೂ ಇನ್ನೂ ಸಾಕಷ್ಟು ಕೆಲಸ ಬಾಕಿ ಇದ್ದುದ್ದರಿಂದ ನಿರ್ವಾಹವಿಲ್ಲದೆ ಪತ್ರಿಕೆ ತಿದ್ದುವುದರಲ್ಲಿ ನಿರತಳಾಗಿದ್ದಳು. ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ಸುರೇಶ್‌ ಮೊಬೈಲ್‌ನನಲ್ಲಿ ಆನ್‌ಲೈನ್‌ ಗೇಮ್ ಆಡುತ್ತಿದ್ದ.

“ಇನ್ನೂ ಎಷ್ಟು ಹೊತ್ತಾಗುತ್ತೆ?” ಸುರೇಶ್‌ ಕೇಳಿದ….. ಸುಪ್ರಿಯಾಳಿಂದ ಯಾವುದೇ ಉತ್ತರ ಬರಲಿಲ್ಲ.

ಸ್ವಲ್ಪ ಸಮಯದ ಬಳಿಕ, “ಇವತ್ತಿಗೆ ಇಷ್ಟು ಸಾಕಲ್ವಾ…? ಎಷೊಂದು ಕೆಲಸ ಮಾಡ್ತೀಯಾ….? ಈಗಾಗಲೇ ಗಂಟೆ ಎರಡಾಯಿತು,” ಎಂದ ಸುರೇಶ್‌.

“ಇನ್ನೂ ಕೆಲಸವಿದೆ. ಸುಮತಿ ಮೇಡಂ ರಜೆಯಲ್ಲಿದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲದಿರುವುದರಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ಅವರ ತರಗತಿಯನ್ನೂ ನಾನೇ ಗಮನಿಸಬೇಕಿರುವುದರಿಂದ ಆ ಸಬ್ಜೆಕ್ಟ್ ನ್ನೂ ನಾನೇ ತಿದ್ದಬೇಕು. ಹೀಗಾಗಿ ಇನ್ನಷ್ಟು ಹೊತ್ತಾಗುತ್ತದೆ….”

ಸುರೇಶ್‌ ಒಮ್ಮೆ ಆದಿತ್ಯನನ್ನು ನೋಡಿದ. ಮಲಗಿದ್ದ ಆದಿ ಮುಖದಲ್ಲಿಯೂ ಸಹ ದಣಿವಿತ್ತು. ಅವನು ಮತ್ತೆ ತನ್ನ ಮೊಬೈಲ್‌ನಲ್ಲಿ ಗೇಮ್ ಆಡುವುದನ್ನು ಮುಂದುವರಿಸಿದ.

ಸ್ವಲ್ಪ ಸಮಯದ ನಂತರ ಉತ್ತರ ಪತ್ರಿಕೆಗಳನ್ನು ತಿದ್ದುತ್ತಿದ್ದ ಸುಪ್ರಿಯಾ ಗಾಬರಿಯಿಂದ ಕೂಗಿದಳು. ಸುರೇಶ್‌ ಏನಾಯ್ತೆಂದು ಕೇಳಲು ಅವಳ ಬಳಿ ಬಂದ.

“ಪರೀಕ್ಷೆಯಲ್ಲಿ ಮಕ್ಕಳಿಗೆ, `ಮುಂದೆ ನೀವೇನು ಆಗಬಯಸುತ್ತೀರಿ?’ ಎಂಬ ವಿಷಯದ ಕುರಿತು ಪ್ರಬಂಧ ಬರೆಯಲು ಕೇಳಿದ್ದೆ. ಒಬ್ಬ ವಿದ್ಯಾರ್ಥಿ ತಾನು ಮುಂದೆ ಸ್ಮಾರ್ಟ್‌ ಫೋನ್‌ ಆಗಬೇಕು ಎಂದು ಬರೆದಿದ್ದಾನೆ,” ಎಂದಳು.

“ಸ್ಮಾರ್ಟ್‌ಫೋನ್‌….?”

“ಹೌದು. ಅವನು ಸ್ಮಾರ್ಟ್‌ಫೋನ್‌ ಆಗುತ್ತಾನಂತೆ….”

“ಏನೆಂದು ಬರೆದಿದ್ದಾನೆ…. ಓದು….” ಎಂದ.ಹುಡುಗನ ಉತ್ತರ ಪತ್ರಿಕೆಯನ್ನು ಓದುತ್ತಾ ಓದುತ್ತಾ ಸುಪ್ರಿಯಾಳ ದನಿ ಗದ್ಗದಿತವಾಯಿತು. ಅವಳು ಓದಿದ ಉತ್ತರ ಪತ್ರಿಕೆಯ ಸಾರಾಂಶ ಈ ರೀತಿ ಇತ್ತು.

`ನನ್ನ ತಂದೆತಾಯಿಗೆ ನಾನೊಬ್ಬನೇ ಮಗ. ನಾನು ಶಾಲೆಗೆ ಹೋಗಿ ಬರುವಂತೆಯೇ ಅವರಿಬ್ಬರೂ ಕೆಲಸಕ್ಕೆ ಹೋಗುತ್ತಾರೆ.. ಸಂಜೆ ಮನೆಗೆ ಬಂದವರೇ ಇಬ್ಬರೂ ಅವರವರ ಮೊಬೈಲ್ ಹಿಡಿದು ಆನ್‌ಲೈನ್‌ ಗೇಮ್, ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕೂರುತ್ತಾರೆ. ಫೋನ್‌ ಏನಾದರೂ ಕೆಟ್ಟು ಹೋದರೆ ದುಬಾರಿ ಹಣ ಕೊಟ್ಟು ಅದನ್ನು ಸರಿ ಮಾಡಿಸುತ್ತಾರೆ. `ಆದರೆ ನಾನು ಅಕಸ್ಮಾತ್‌ ಬಿದ್ದು ಕಾಲು ಗಾಯ ಮಾಡಿಕೊಂಡರೂ ಅವರಿಗೆ ನನ್ನನ್ನು ಗಮನಿಸಿ ಶುಶ್ರೂಷೆ ಮಾಡಲು ಸಮಯವಿಲ್ಲ. ನಾನೇನಾದರೂ ಅವರನ್ನು ಆಟವಾಡಲು ಕರೆದರೆ, `ಪ್ಲೀಸ್‌ ಗೋ ಔಟ್‌ ಆಂಡ್‌ ಪ್ಲೇ ವಿತ್‌ ಯುವರ್‌ ಫ್ರೆಂಡ್ಸ್,’ ಎನ್ನುತ್ತಾರೆ. ಮೊಬೈಲ್‌ನ ಬ್ಯಾಟರಿ ಚಾರ್ಜ್‌ ಆಗಿದೆಯೋ ಇಲ್ಲವೋ ಎನ್ನುವುದನ್ನು ದಿನಕ್ಕೆ ಎರಡೆರಡು ಬಾರಿ ಚೆಕ್‌ ಮಾಡಿಕೊಳ್ಳುವ ನನ್ನ ತಾಯಿ ಕೆಲವೊಮ್ಮೆ ನಾನು ಹಸಿದಿದ್ದರೂ ನನ್ನತ್ತ ಗಮನ ಹರಿಸುವುದಿಲ್ಲ.` ಪ್ರತಿ ದಿನ ಮನೆಗೆ ಬಂದ ನನ್ನ ತಂದೆ ಸೋಫಾದ ಮೇಲೆ ಕುಳಿತುಕೊಳ್ಳುತ್ತಲೇ ಮೊಬೈಲ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಚೆಕ್‌ ಮಾಡಲು ತೊಡಗುತ್ತಾರೆ. ನಾನು ಎಷ್ಟು ಕುತೂಹಲದಿಂದ ಅವರನ್ನು ಮಾತನಾಡಿಸಲು ಕಾಯುತ್ತಿರುತ್ತೇನೆ. ಅವರಿಗೆ ಮಾತ್ರ ನನ್ನ ಮೇಲೆ ಗಮನವೇ ಇರಲ್ಲ. ಇನ್ನೂ ಅಮ್ಮ… ನಾನು ಸ್ಕೂಲ್‌‌ಗೆ ಹೋದೆನೋ, ಹೋಂವರ್ಕ್‌ ಮಾಡಿದೆನೋ ಇಲ್ಲವೋ ಎಂದು ಕೇಳುತ್ತಾಳೆಯೇ ಹೊರತು  ಯಾವತ್ತೂ ನನ್ನ ಪಕ್ಕ ಕುಳಿತು ಹೋಂವರ್ಕ್‌ ಮಾಡಿಸುವುದಿಲ್ಲ. ಪ್ರೀತಿಯಿಂದ ಮಾತನಾಡಿಸುವುದಿಲ್ಲ….` ಈ ಎಲ್ಲಾ ಕಾರಣಗಳಿಂದ ನನಗೇನಾದರೂ ಬದಲಾಗುವ ಅವಕಾಶ ಸಿಕ್ಕರೆ ನಾನು ಖಂಡಿತವಾಗಿ ಸ್ಮಾರ್ಟ್‌ಫೋನ್‌ ಆಗಿ ಬದಲಾಗಬೇಕೆಂದು ಆಶಿಸುತ್ತೇನೆ. ಆಗಲಾದರೂ ಅಪ್ಪ ಅಮ್ಮನ ಸನಿಹ, ಪ್ರೀತಿಯ ಸ್ಪರ್ಶ ಅನುಭವಿಸಬಹುದು……’

ಪ್ರಬಂಧ ಓದಿದ ಇಬ್ಬರ ಮನಸ್ಸುಗಳೂ ಮಮ್ಮಲ ಮರುಗಿತು. “ಛೇ…! ಅವರೆಂತಹ ತಂದೆತಾಯಿ? ಮಗುವಿನ  ಯೋಗಕ್ಷೇಮಕ್ಕಿಂತಲೂ ಮೊಬೈಲ್‌ನ ಆಟವೇ ಹೆಚ್ಚೇನು?” ಎಂದಳು ಸುಪ್ರಿಯಾ ಆತಂಕದ ದನಿಯಲ್ಲಿ.

“ಹೌದು ಅವರ ಈ ಅಭ್ಯಾಸ ಮಗುವಿನ ಮನಸ್ಸಿನ ಮೇಲೆ ಎಂತಹ ಪರಿಣಾಮ ಉಂಟು ಮಾಡಿದೆ ನೋಡು….?” ಸುರೇಶ್‌ ಸಹ ಸುಪ್ರಿಯಾಳ ತರ್ಕವನ್ನು ಅನುಮೋದಿಸಿದ.

ತುಸು ಹೊತ್ತಾದ ನಂತರ ಸುರೇಶ್‌, “ಇಷ್ಟಕ್ಕೂ ಆ ಪ್ರಬಂಧ ಬರೆದ ಮಗುವಿನ ಹೆಸರೇನು…..?”

ಸುಪ್ರಿಯಾ ತಕ್ಷಣ ಆ ಪೇಪರ್‌ ತೆರೆದು ಮಗುವಿನ ಹೆಸರನ್ನು ನೋಡಿದಳು. ಒಮ್ಮೆಲೆ ಗರಬಡಿದವಳಂತೆ ಅವಳ ಕೈಯಿಂದ ಪೇಪರ್‌ ಜಾರಿ ಕೆಳಗೆ ಬಿತ್ತು. ಪ್ರಬಂಧ ಬರೆದ ಆ ಮಗುವಿನ ಹೆಸರು ಆದಿತ್ಯ, ಮೂರನೇ ತರಗತಿ ಎಂದಿತ್ತು. ಕೆಳಗೆ ಬಿದ್ದ ಪೇಪರ್‌ ಕೈಗೆತ್ತಿಕೊಂಡ ಸುರೇಶ್‌ಗೆ ಸಹ ಒಮ್ಮೆಲೆ ತಲೆ ಗಿರ್ರನೆ ತಿರುಗಿದಂತಾಯಿತು.

ಪ್ರಬಂಧ ಬರೆದ ಮಗು ಬೇರಾರು ಆಗಿರದೆ ಸುರೇಶ್‌-ಸುಪ್ರಿಯಾರ ಮಗನೇ ಆಗಿದ್ದ.

ಅದೇ ಸಮಯಕ್ಕೆ ಮಂಚದ ಮೇಲಿದ್ದ ಮೊಬೈಲ್‌ನಿಂದ ಗೇಮ್ ಕಂಟಿನ್ಯೂ ಮಾಡುವಂತೆ ಲೈಟ್‌ ಬ್ಲಿಂಕ್‌ ಆಗುತ್ತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ